ಕಥೆ ‍= ಪಾವನಿ (ಮರೆಯಲಾಗದ ನೆನಪುಗಳು) ಭಾಗ 12

ಕಥೆ ‍= ಪಾವನಿ (ಮರೆಯಲಾಗದ ನೆನಪುಗಳು) ಭಾಗ 12

ಪಾವನಿ ಏನೋ ಮಾತಾಡಿಕೊಂಡು ಮುಂದೆ ಹೋಗುತ್ತಿದ್ದಳು. ಆದರೆ ನನಗೆ ಏನೂ ಕೇಳಿಸುತ್ತಿಲ್ಲ. ಎದೆಯಲ್ಲ ಭಾರವಾಗುತ್ತಿದೆ. ಕೈಕಾಲುಗಳಲ್ಲಿದ್ದ ಶಕ್ತಿಯೆಲ್ಲ ಉಡುಗಿ ಕುಸಿದು ಬೀಳುವಂತಾಗುತ್ತಿದೆ. ಸುತ್ತಲೂ ತಿರುಗಿದಂತೆ ಆಗುತ್ತಿದೆ. ಅಷ್ಟರಲ್ಲಿ ಪಾವನಿ ಹಿಂತಿರುಗಿ ನನ್ನ ಬಳಿ ಭಗತ್, ಭಗತ್.....ಏನೋ ಆಯಿತು, ಭಗತ್ ಎಂದು ಮೂರನೇ ಬಾರಿ ಕೇಳಿದಾಗ ಮತ್ತೆ ವಾಸ್ತವಕ್ಕೆ ಬಂದೆ. ಯಾಕೋ ಏನಾಯಿತು ಇದ್ದಕ್ಕಿದ್ದಂತೆ ನಿಂತು ಬಿಟ್ಟೆ. ಪಾವಿ ದಯವಿಟ್ಟು ತಮಾಷೆ ಮಾಡಬೇಡ ನನ್ನ ಕೈಲಿ ತಡೆಯಕ್ಕೆ ಆಗಲ್ಲ. ನಿಜ ಹೇಳು ನನ್ನ ಮದುವೆ ಆಗಲು ನಿನಗೆ ಇಷ್ಟ ಇದೆಯೋ ಇಲ್ಲವೋ? ಭಗತ್ ನನಗೆ ಗೊತ್ತು ನೀನು ನಂಬುವುದಿಲ್ಲ. ಆದರೆ ಅದೇ ನಿಜ.

ನನಗೆ ಇಪ್ಪತ್ತು ವರ್ಷಕ್ಕೆ ಮದುವೆ ಮಾಡಿಬಿಟ್ಟರು ನಮ್ಮ ಮನೆಯಲ್ಲಿ. ನಾನು ಎಷ್ಟು ಬೇಡ ಎಂದು ಬೇಡಿಕೊಂಡರೂ ಕೇಳಲಿಲ್ಲ. ಅಪ್ಪನ ಕೋಪ ಎದುರಿಸುವ ಶಕ್ತಿ ಅಮ್ಮನಿಗಿರಲಿಲ್ಲ. ಹಾಗಾಗಿ ಅಮ್ಮ ನಿಸ್ಸಹಾಯಕಳಾಗಿದ್ದಳು. ನಮ್ಮ ಅತ್ತೆಗೆ ಅಂದರೆ ಅಪ್ಪನ ತಂಗಿಗೆ ಹುಷಾರಿಲ್ಲ ಅವರು ಜಾಸ್ತಿ ದಿನ ಇರುವುದಿಲ್ಲ ಅವರು ಇರುವಾಗಲೇ ಮಗನ ಮದುವೆ ನೋಡಬೇಕು ಎಂದು ಬಲವಂತವಾಗಿ ಅವನನ್ನು ಮದುವೆ ಮಾಡಿಬಿಟ್ಟರು. ನಂತರ ಗೊತ್ತಾಯಿತು ಅವನಿಗೂ ಈ ಮದುವೆ ಇಷ್ಟವಿರಲಿಲ್ಲ ಅಂತ. ಅದೂ ಅಲ್ಲದೆ ನನಗೆ ಅವನಿಗೆ ಎಂಟು ವರ್ಷ ವ್ಯತ್ಯಾಸ ಇತ್ತು. ಅವನೂ ಬೇರೆ ಒಂದು ಹುಡುಗಿಯನ್ನು ಇಷ್ಟ ಪಡುತ್ತಿದ್ದನಂತೆ ಆದರೆ ಆ ಹುಡುಗಿ ಬೇರೆ ಜಾತಿಯವಳೆಂದು ಅವನ ಅಪ್ಪ ಆ ಮದುವೆಗೆ ಒಪ್ಪಲಿಲ್ಲ. ಕೊನೆಗೆ ಅವನನ್ನು ಸೆಂಟಿಮೆಂಟ್ ಗೆ ಬಲಿ ಮಾಡಿ ನನಗೆ ಕಟ್ಟು ಬಿಟ್ಟರು. ಮದುವೆಯಾದ ಮರುದಿನವೇ ಅವನ ಅಮ್ಮ ಅಂದರೆ ನನ್ನ ಅತ್ತೆ ಹೋಗಿಬಿಟ್ಟರು. ಆ ಮನೆಯಲ್ಲಿ ನನ್ನ ಕಷ್ಟ ಕೇಳುವವರು ಯಾರೂ ಇರಲಿಲ್ಲ. ನನ್ನ ಮಾವನವರಿಗೆ ವಯಸ್ಸಾಗಿತ್ತು. ಅವರ ಬಳಿ ಹೇಳಿಯೂ ಪ್ರಯೋಜನವಿರಲಿಲ್ಲ. ಎರಡು ಮೂರು ಬಾರಿ ಅಮ್ಮನ ಬಳಿ ನನ್ನ ಕಷ್ಟ ಹೇಳಿಕೊಂಡೆ. ಆದರೆ ಅಮ್ಮನ ಉತ್ತರ ಒಂದೇ ಆಗಿತ್ತು. ಪಾವಿ ಈಗ ಎಲ್ಲ ಕೈ ಮೀರಿ ಹೋಯಿತು. ಇನ್ನು ಕಷ್ಟನೋ ಸುಖಾನೋ ಹೊಂದಿಕೊಂಡು ಹೋಗಬೇಕಮ್ಮ ಎಂದು ಕಣ್ಣೀರಿಡುತ್ತಿದ್ದರು.

ಮದುವೆಯಾಗಿ ಒಂದು ತಿಂಗಳಾದರೂ ಅವನು ಸರಿಯಾಗಿ ನನ್ನೊಂದಿಗೆ ಮಾತಾಡಿರಲಿಲ್ಲ. ಮನೆಗೂ ಸರಿಯಾಗಿ ಬರುತ್ತಿರಲಿಲ್ಲ. ಬೆಳಿಗ್ಗೆ ನಾನು ಏಳುವ ಮುಂಚೆಯೇ ಮನೆ ಬಿಡುತ್ತಿದ್ದ ಮತ್ತೆ ರಾತ್ರಿ ಯಾವಾಗಲೋ ಬರುತ್ತಿದ್ದ. ಒಂದರೆಡು ಬಾರಿ ಅವರ ಅಪ್ಪ ಬುದ್ಧಿ ಹೇಳಲು ಹೋಗಿದ್ದಕ್ಕೆ ಅವರಿಗೆ ಬೈದು ಹೋಗಿ ಬಿಡುತ್ತಿದ್ದ. ಒಂದು ದಿನ ಇದ್ದಕ್ಕಿದ್ದಂತೆ ಒಂದು ಹುಡುಗಿಯನ್ನು ಕರೆದುಕೊಂಡು ಬಂದು ನೋಡು ಇವಳೇ ನಾನು ಪ್ರೀತಿಸಿದ ಹುಡುಗಿ ಹಾಗೂ ಇವಳನ್ನೇ ಮದುವೆ ಕೂಡ ಆಗುತ್ತೇನೆ ನೀನು ಇನ್ನು ನಿಮ್ಮ ಮನೆಗೆ ಹೊರಟು ಹೋಗು ಒಂದು ವರ್ಷದ ನಂತರ ವಿಚ್ಚೇದನ ಪತ್ರ ಕಳಿಸಿಕೊಡುತ್ತೇನೆ ಸಹಿ ಹಾಕಿ ಕಳಿಸು ಎಂದ. ನನಗೆ ಸಿಕ್ಕಾಪಟ್ಟೆ ಮಾತಾಡಬೇಕು ಎನಿಸಿದರೂ ಏನೂ ಮಾತಾಡದೆ ಮೌನವಾಗಿದ್ದೆ. ಅವನು ಹೋದ ಮೇಲೆ ಮನೆಗೆ ಫೋನ್ ಮಾಡಿದೆ. ಅಪ್ಪನೇ ಫೋನ್ ಎತ್ತಿದರು. ನಡೆದ ವಿಷಯವನ್ನೆಲ್ಲ ಅವರಿಗೆ ತಿಳಿಸಿ ಗಳ ಗಳನೆ ಅತ್ತು ಬಿಟ್ಟೆ.

ಮರುದಿನ ಅಪ್ಪ ಅಮ್ಮ ಇಬ್ಬರೂ ಮನೆಗೆ ಬಂದು ನಮ್ಮ ಮಾವನವರ ಜೊತೆ ಮಾತಾಡಿದರು. ಅವರು, ನಾನು ಎಷ್ಟು ಹೇಳಿದರೂ ಅವನು ಹಠ ಬಿಡುತ್ತಿಲ್ಲ. ಬೇಕಾದರೆ ಮನೆ ಬಿಟ್ಟು ಹೋಗುತ್ತೇನೆ ಎನ್ನುತ್ತಿದ್ದಾನೆ. ದಯವಿಟ್ಟು ನನ್ನನ್ನು ಕ್ಷಮಿಸಿಬಿಡಿ ಎಂದರು. ಅಪ್ಪ ಅಲ್ಲಿಂದಲೇ ನನ್ನ ಗಂಡನಿಗೆ ಫೋನ್ ಮಾಡಿದರೆ ಅಪ್ಪನ ಜೊತೆ ಸರಿಯಾಗಿ ಮಾತು ಕೂಡ ಆಡದೆ ನಿಮ್ಮ ಮಗಳನ್ನು ಕರೆದುಕೊಂಡು ಹೋಗಿ ಎಂದು ಫೋನ್ ಇಟ್ಟು ಬಿಟ್ಟ. ಮೊಟ್ಟ ಮೊದಲ ಬಾರಿ ಅಪ್ಪನ ಕಣ್ಣಲ್ಲಿ ನೀರನ್ನು ಕಂಡಿದ್ದೆ. ಅಪ್ಪ ನನ್ನ ಬಳಿ ಬಂದು ಪಾವಿ ದಯವಿಟ್ಟು ನನ್ನನ್ನು ಕ್ಷಮಿಸು ಅನ್ಯಾಯವಾಗಿ ನಿನ್ನ ಬಾಳನ್ನು ಹಾಳು ಮಾಡಿಬಿಟ್ಟೆ ಎಂದು ಕೈ ಮುಗಿದರು. ನನ್ನಲ್ಲಿ ಮಾತುಗಳು ಹಾಗೂ ಕಣ್ಣೀರು ಎರಡು ಖಾಲಿ ಆಗಿಬಿಟ್ಟಿದ್ದವು. ಅಂದೇ ಅಲ್ಲಿಂದ ಹೊರಟು ನನ್ನ ಮನೆಗೆ ಬಂದು ಬಿಟ್ಟೆ.

ಆಮೇಲೆ ನಾನು ಅಪ್ಪ ಅಮ್ಮ ಅನುಭವಿಸಿದ ನರಕ ಯಾತನೆ ಯಾರಿಗೂ ಬೇಡವಾಗಿತ್ತು. ಪ್ರತಿಯೊಬ್ಬರ ಪ್ರಶ್ನೆಗಳಿಗೂ ಉತ್ತರ ಕೊಟ್ಟೂ ಕೊಟ್ಟೂ ಹೈರಾಣಾಗಿಬಿಟ್ಟಿದ್ದೆವು. ಸುಮ್ಮನೆ ಮನೆಯಲ್ಲಿ ಕುಳಿತರೆ ಇನ್ನೂ ತಲೆ ಕೆಡುತ್ತದೆ ಎಂದು ಮತ್ತೆ ಕಾಲೇಜ್ ಗೆ ಸೇರಿ ಬಿ.ಇ ಮುಗಿಸಿಕೊಂಡೆ. ಮದುವೆಯಾಗಿ ಒಂದು ವರ್ಷದ ನಂತರ ವಿಚ್ಚೇದನ ಪತ್ರ ಕಳಿಸಿಕೊಟ್ಟ ಅವನು. ನಂತರ ಕೋರ್ಟು ಕಚೇರಿ ಅಂತೆಲ್ಲ ಅಲೆದಾಡಿ ಕೊನೆಗೂ ಅವನಿಂದ ಮುಕ್ತಿ ಪಡೆದುಕೊಂಡೆ. ಅದಾದ ಆರು ತಿಂಗಳಲ್ಲೇ ಅವನು ಮತ್ತೆ ಮದುವೆ ಮಾಡಿಕೊಂಡ ಎಂದು ಕೇಳ್ಪಟ್ಟೆ. ನಂತರ ನನಗೆ ಮನೆಯಲ್ಲಿ ಅಪ್ಪ ಅಮ್ಮ ಕೂಡ ಎರಡು ಮೂರು ಬಾರಿ ಇನ್ನೊಂದು ಮದುವೆ ಮಾಡಿಕೊ ನಿನಗೇನೂ ವಯಸ್ಸಾಗಿಲ್ಲ ಎಂದು ಹೇಳಿದರು. ಆದರೆ ನನಗೆ ಒಂದು ಸಲ ಅನುಭವಿಸಿದ ನೋವೆ ಸಾಕಾಗಿತ್ತು. ಮತ್ತೆ ಇನ್ನೊಮ್ಮೆ ನೋವು ಅನುಭವಿಸಲು ಸಾಧ್ಯವಿಲ್ಲ ಎಂದು ಹೇಳಿಬಿಟ್ಟಿದ್ದೆ. 

ಈಗ ಒಂದು ವರ್ಷದಿಂದ ಅದೆಲ್ಲವನ್ನು ಮರೆತು ಆರಾಮಾಗಿ ಎಲ್ಲೋ ಒಂದು ಕಡೆ ಕೆಲಸ ಮಾಡಿಕೊಂಡಿದ್ದೆ. ಆದರೆ ಯಾಕೋ ನನಗೆ ಕೆಲಸ ತೃಪ್ತಿ ಕೊಡಲಿಲ್ಲ. ಹಾಗಾಗಿ ಅದನ್ನು ಬಿಟ್ಟು ಈಗಿರುವ ಕಂಪನಿ ಗೆ ಅಪ್ಲೈ ಮಾಡಿದ್ದೆ. ಇಂಟರ್ವ್ಯೂ ಸಹ ಆಗಿತ್ತು. ಆಫರ್ ಲೆಟರ್ ಬಂದ ಮೇಲೆ ನಾವು ಧರ್ಮಸ್ಥಳಕ್ಕೆ ಬಂದದ್ದು, ಅಲ್ಲಿ ನಿನ್ನ ಭೇಟಿ ಆಗಿದ್ದು ಎಂದು ನನ್ನ ನೋಡಿ ನಕ್ಕಳು.

Rating
No votes yet

Comments