ಕಥೆ ‍= ಪಾವನಿ (ಮರೆಯಲಾಗದ ನೆನಪುಗಳು) ಭಾಗ 14

ಕಥೆ ‍= ಪಾವನಿ (ಮರೆಯಲಾಗದ ನೆನಪುಗಳು) ಭಾಗ 14

ಮನೆಗೆ ಬಂದ ತಕ್ಷಣ ಪೂಜಾ ನಿನಗೆ ಕೊಬ್ಬು ಜಾಸ್ತಿ ಕಣೋ ಅಲ್ಲಿ ಹೋಗಿ ಫೋನ್ ಮಾಡು, ಪಾವನಿಗೆ ಬರ್ತ್ ಡೇ ವಿಶ್ ಮಾಡ್ಬೇಕು ಅಂತ ಹೇಳಿದ್ನಲ್ಲ ಯಾಕೋ ಮಾಡ್ಲಿಲ್ಲ. ಈಗಲೇ ಹೀಗಾದ್ರೆ ಇನ್ನು ಮದ್ವೆ ಅದಮೇಲೆ ಏನ್ ಕಥೆನೋ ನಿಂದು ಎಂದು ಏನೇನೋ ಮಾತಾಡುತ್ತಿದ್ದಳು. ನಾನೂ ಏನೂ ಉತ್ತರಿಸದೆ ಇದ್ದದ್ದನ್ನು ನೋಡಿ ಪಕ್ಕದಲ್ಲಿ ಬಂದು ಕುಳಿತು ಯಾಕೋ ಏನಾಯ್ತೋ ಡಲ್ಲಾಗಿದ್ಯ ಏನು ವಿಷಯ ಪಾವನಿ ಒಪ್ಪಲಿಲ್ವಾ ಎಂದಳು. ನನಗೆ ಏನು ಉತ್ತರಿಸಬೇಕೋ ಗೊತ್ತಾಗದೆ ಅವಳ ಮಡಿಲಿನಲ್ಲಿ ತಲೆ ಇಟ್ಟು ಬಿಕ್ಕತೊಡಗಿದೆ. ಲೇ ಯಾಕೋ ಏನಾಯ್ತೋ ಪ್ಲೀಸ್ ಹೇಳೋ ಎಂದಳು. ನಾನು ತಲೆ ಎತ್ತಿ ಕಣ್ಣೊರೆಸಿಕೊಂಡು ನಡೆದ ವಿಷಯವೆಲ್ಲ ಅವಳಿಗೆ ಹೇಳಿದೆ. ಪೂಜಾ ಪಾವಿ ಒಪ್ತಾಳ ನನ್ನ? ನೋಡೋ ನಮ್ಮಣ್ಣ ಎಂಥವನು ಅಂತ ನನಗೆ ಗೊತ್ತು ನಿನ್ನನ್ನು ಮದುವೆ ಆಗಕ್ಕೆ ಯಾರೇ ಆಗಲಿ ಅದೃಷ್ಟ ಮಾಡಿರಬೇಕು. ಅವಳು ಖಂಡಿತ ಒಪ್ಪೇ ಒಪ್ಪುತ್ತಾಳೆ ಆದರೆ ಸಮಸ್ಯೆ ಅದಲ್ಲ. ಇನ್ಯಾವುದು ಎಂದೆ

ಅಷ್ಟರಲ್ಲಿ ಅಮ್ಮ ಲೋ ಏನೋ ಬಂದ ತಕ್ಷಣ ಇಬ್ರೂ ರೂಮಿನಲ್ಲಿ ಸೇರ್ಕೊಂಡು ಹರಟೆ ಹೊಡಿತಿದೀರ ಕಾಫಿ ತಿಂಡಿ ಏನೂ ಬೇಡ್ವ. ನಿಮ್ಮನ್ನು ಅರ್ಥ ಮಾಡ್ಕೊಳಕ್ಕೆ ಆಗಲ್ಲ ಯಾವಾಗ್ ಕಿತ್ತಾಡ್ತೀರೋ ಯಾವಾಗ್ ನಗ್ತೀರೋ ಒಂದು ಗೊತ್ತಾಗಲ್ಲ ಎಂದರು. ನಾವಿಬ್ಬರು ಒಬ್ಬರ ಮುಖ ಒಬ್ಬರು ನೋಡಿಕೊಂಡು ನಕ್ಕೆವು. ಪೂಜಾ ಎದ್ದು ಆಚೆ ಹೋಗುತ್ತಾ ಮುಖ ತೊಳ್ಕೊಂಡು ಬಾ ಇಲ್ಲಾಂದ್ರೆ ನಿನ್ನ ಅಳುಮುಖ ಎಲ್ರೂ ನೋಡಬೇಕಾಗುತ್ತೆ ಎಂದು ಬಾಗಿಲು ಹಾಕಿಕೊಂಡು ಆಚೆ ಹೋದಳು. ನಾನು ಪಾವನಿಯನ್ನೇ ನೆನೆಸಿಕೊಂಡು ಪಾವಿ ಪ್ಲೀಸ್ ಒಪ್ಪಿಕೊಂಡು ಬಿಡು ನಿನ್ನನ್ನು ದೇವತೆಯ ಹಾಗೆ ನೋಡಿಕೊಳ್ಳುತ್ತೇನೆ ಎಂದುಕೊಂಡು ಮುಖ ತೊಳೆದು ಆಚೆ ಬಂದು ಕಾಫಿ ಕುಡಿಯುತ್ತ ಕುಳಿತೆ. ಎದುರಿಗೆ ಟಿ ವಿ ಓಡುತ್ತಿದ್ದರೂ ಮನಸೆಲ್ಲ ಪಾವನಿಯ ಮೇಲೆ ಇತ್ತು. ಅಷ್ಟರಲ್ಲಿ ಅಮ್ಮ ಬಂದು ಎದುರಿಗೆ ಕೂತು ನೋಡೋ ನಾಳೆ ಹೇಗಿದ್ರೂ ಭಾನುವಾರ, ಸ್ಟುಡಿಯೋ ಗೆ ಹೋಗಿ ಫೋಟೋ ತೆಗೆಸಿಕೊಂಡು ಬಾ. ಮನೇಲಿ ಇದ್ದ ಫೋಟೋ ಎಲ್ಲ ಖಾಲಿ ಆಯ್ತು. ದಿನ ಒಬ್ರಿಗಾದರೂ ಫೋಟೋ ಕೊಡಬೇಕು ನಾಳೆ ಮರೀ ಬೇಡ ಎಂದರು. ಯಾಕಮ್ಮ ಫೋಟೋ ಅಂದೇ. ಇನ್ಯಾಕಪ್ಪ ನಿನ್ನ ಮದುವೆಗೆ ಹುಡುಗಿನ ಹುಡುಕಕ್ಕೆ. ಅಮ್ಮ, ನಾನು ಅವತ್ತೇ ಹೇಳಿದ್ದೀನಿ ನನಗೆ ಸಧ್ಯಕ್ಕೆ ಮದುವೆ ಬೇಡ ಅಂತ. ಅಪ್ಪನ ಹತ್ತಿರಾನೂ ಹೇಳಿದ್ದೀನಿ ಯಾಕೆ ಸುಮ್ಮನೆ ಬಲವಂತ ಮಾಡ್ತೀರ ನಂಗೆ. ನಾನು ಯಾವ ಫೋಟೋ ನು ತೆಗಿಸಲ್ಲ. ನೀವು ಅಷ್ಟೇ ಯಾರಿಗೂ ನನ್ನ ಜಾತಕ ಫೋಟೋ ಕೊಡಕ್ಕೆ ಹೋಗಬೇಡಿ.

ಹೌದು ಕಣೋ ನೀನು ಹೇಳಿದ್ದಕ್ಕೆಲ್ಲ ತಾಳ ಹಾಕಿಕೊಂಡು ಕೂರಕ್ಕಾಗಲ್ಲ. ಈಗಲೇ ತಡ ಮಾಡಿದ್ದೇವೆ. ನಿಮ್ಮಪ್ಪನಿಗೇನು ಗೊತ್ತು ಕಷ್ಟ, ಎಲ್ಲರೂ ಕೇಳುವುದು ನನ್ನನ್ನು. ನೀನು ಆಡಿದ ಹಾಗೆಲ್ಲ ಬಿಡಲು ಆಗಲ್ಲಪ್ಪ. ನಮ್ಮದು ಮಧ್ಯಮ ಕುಟುಂಬ ನಿಂದಾದ ಮೇಲೆ ನಿನ್ನ ತಂಗಿ ಬೇರೆ ಇದ್ದಾಳೆ ಮದುವೆಗೆ ನಾಳೆ ಅವಳ ಮದುವೆಗೆ ತೊಂದರೆ ಆಗಬಾರದು. ಆಗಲೇ ಒಂದಿಬ್ಬರು ಅವಳನ್ನು ಕೇಳಿದರು. ನಾವೇ ಸಧ್ಯಕ್ಕೆ ಆ ಯೋಚನೆ ಇಲ್ಲ ಅಂತ ಹೇಳಿದ್ದೀವಿ. ಪರಿಸ್ಥಿತಿ ಹೀಗೆಲ್ಲ ಇರಬೇಕಾದರೆ ನೀನು ಸುಮ್ಮನೆ ಆಟ ಆಡಬೇಡ. ಅದೂ ಏನೂ ನಾವು ನೋಡಿದ ತಕ್ಷಣ ಹುಡುಗಿರು ಸಿಕ್ಕಿ ಬಿಡುತ್ತಾರ? ಮದುವೆ ಆಗಿಬಿಡುತ್ತದ? ಈಗ ನೋಡಲು ಶುರು ಮಾಡಿದರೆ ಇನ್ನೊಂದು ಆರು ತಿಂಗಳು ಬೇಕಾಗುತ್ತದೆ. ಸುಮ್ಮನೆ ನಾಳೆ ಹೋಗಿ ಫೋಟೋ ತೆಗೆಸಿಕೊಂಡು ಬಾ ಎಂದರು. ನಾನು ಕೋಪದಿಂದ ಕಾಫಿ ಲೋಟವನ್ನು ಟೇಬಲ್ ಮೇಲೆ ಕುಕ್ಕಿ ಅಮ್ಮ, ಸುಮ್ಮನೆ ನನ್ನ ಬಲವಂತ ಮಾಡಬೇಡ ಎಂದು ರೂಮಿಗೆ ಹೋಗಿ ಬಾಗಿಲನ್ನು ಜೋರಾಗಿ ಹಾಕಿದೆ.

ರೂಮಿಗೆ ಬಂದು ಪಾವಿಗೆ ಫೋನ್ ಮಾಡಿದೆ. ಪಾವಿ ಎತ್ತಲಿಲ್ಲ. ಸರಿ ಸ್ನೇಹಿತರಿಗೆ ಮಾಡಿದರೆ ಒಂದಿಬ್ಬರು ಫೋನ್ ಎತ್ತಲಿಲ್ಲ. ಥೂ ಏನಾಗಿದೆ ಇವರಿಗೆಲ್ಲ ಬೇಕೆಂದಾಗ ಒಬ್ಬರೂ ಫೋನ್ ಎತ್ತುವುದಿಲ್ಲ, ಬೇಡದಿದ್ದಾಗ ಪದೇ ಪದೇ ಮಾಡಿ ತಲೆ ತಿನ್ನುತ್ತಾರೆ ಎಂದುಕೊಂಡು ಇನ್ನೊಬ್ಬನಿಗೆ ಫೋನ್ ಮಾಡಿದಾಗ ಅವನು ಎತ್ತಿದ. ಎಲ್ರೋ ಎಲ್ಲಿ ಹಾಳಾಗಿ ಹೋಗಿದ್ದೀರೋ ಒಬ್ರೂ ಫೋನ್ ಎತ್ತುವುದಿಲ್ಲ ಎಂದೆ. ಲೋ ಮಗನೆ ಇದೊಳ್ಳೆ ಆಯ್ತಲ್ಲ ನಾವು ಮಾಡಿದಾಗ ನೀನು ಎತ್ತುವುದಿಲ್ಲ, ಇವಾಗ ನಮಗೆ ಬೈತೀಯ. ಎಷ್ಟು ದಿನ ಆಯ್ತಪ್ಪ ನೀನು ನಮಗೆ ಸರಿಯಾಗಿ ಸಿಕ್ಕು. ವೀಕೆಂಡ್ ಗಳಲ್ಲೂ ಸರಿಯಾಗಿ ಸಿಗಲ್ಲ. ಸಿಕ್ಕಿದರೂ ಏನೋ ನೆವ ಹೇಳಿ ಬೇಗ ಹೊರಟು ಹೋಗುತ್ತೀಯ. ಹೋಗಲಿ ಏನು ವಿಷಯ ಹೇಳು. ಎಲ್ಲಿದ್ಯ ಎಂದು ಕೇಳಿದೆ. ಈಗ ಒಂದು ರಿಸೆಪ್ಶನ್ ಗೆ ಹೋಗ್ತಾ ಇದ್ದೀನಿ ನಾಳೆ ಸಿಕ್ತೀನಿ ಎಂದು ಫೋನ್ ಇಟ್ಟ. ಪಾವನಿ ಆದರೂ ಮಿಸ್ಡ್ ಕಾಲ್ ನೋಡಿ ಫೋನ್ ಮಾಡಬಾರದ?

ಅಷ್ಟರಲ್ಲಿ ಬಾಗಿಲು ತಟ್ಟುವ ಸದ್ದಾಯಿತು. ಲೋ ನಾನು ಪೂಜಾ ಬಾಗಿಲು ತೆಗೆಯೋ ಎಂದಳು. ನಾನು ಬಾಗಿಲು ತೆಗೆದು ಏನು ಅಂದೇ. ಅಮ್ಮ ಊಟಕ್ಕೆ ಕರೀತಿದಾರೆ ಬಾ ಎಂದಳು. ನನಗೆ ಊಟ ಬೇಡ ಅಂತ ಹೇಳು ಅಂದೇ. ಲೋ ಸುಮ್ಮನೆ ಕೋಪ ಮಾಡಿಕೊಳ್ಳಬೇಡ ಅಮ್ಮನ ಹತ್ತಿರ ಟೈಮ್ ನೋಡಿಕೊಂಡು ನಿಧಾನವಾಗಿ ವಿಷ್ಯ ಹೇಳು ಈಗ ಊಟಕ್ಕೆ ಬಾ ಎಂದಳು. ಪೂಜಾ ಸುಮ್ಮನೆ ನನಗೆ ತಲೆ ಕೆಡಿಸಬೇಡ ಪ್ಲೀಸ್. ನನಗೆ ಊಟ ಮಾಡುವ ಮೂಡ್ ಇಲ್ಲ ಎಂದು ಆಚೆ ಕಳಿಸಿ ಬಾಗಿಲು ಹಾಕಿಕೊಂಡೆ. ಆಚೆಯಿಂದ ಅಮ್ಮ ಅಪ್ಪನ ಜೊತೆ ಜೋರಾಗಿ ಮಾತಾಡುತ್ತಿರುವುದು ಕೇಳುತ್ತಿತ್ತು. ನಾನು ತಲೆಯ ಮೇಲೆ ದಿಂಬನ್ನು ಇಟ್ಟುಕೊಂಡು ಮಲಗಿಬಿಟ್ಟೆ.

Rating
No votes yet