ಕಥೆ = ಪಾವನಿ (ಮರೆಯಲಾಗದ ನೆನಪುಗಳು) ಭಾಗ 2
ಅವಳಿಗೂ ಹೀಗೆ ಆಗುತ್ತಿರುತ್ತದ? ಅವಳಿಗೂ ನಾನೆಂದರೆ ಇಷ್ಟವ? ಇಷ್ಟ ಇಲ್ಲದಿದ್ದರೆ ಅವಳಾಗೇ ಯಾಕೆ ನನ್ನ ನಂಬರ್ ತೆಗೆದುಕೊಳ್ಳುತ್ತಾಳೆ ಅಥವಾ ಅವಳ ಮನಸಲ್ಲಿ ಬರೀ ಸ್ನೇಹವಿದೆಯೇ ಅಥವಾ ಪ್ರೇಮವಿದೆಯೇ? ಒಂದು ವೇಳೆ ಅದು ಪ್ರೇಮವೇ ಆಗಿದ್ದರೆ ಅವರ ಮನೆಯವರು ಒಪ್ಪುತ್ತಾರೆಯೇ? ನಮ್ಮ ಮನೆಯವರು ಒಪ್ಪುತ್ತಾರೆಯೇ? ಅವಳದು ಯಾವ ಜಾತಿಯೋ? ಎಲ್ಲಕ್ಕಿಂತ ಮಿಗಿಲಾಗಿ ಅವಳಿಗೂ ನನಗೂ ಆರು ವರ್ಷ ವ್ಯತ್ಯಾಸ. ಅವಳು ನನಗಿಂತ ಆರು ವರ್ಷ ಚಿಕ್ಕವಳು. ಒಂದು ವೇಳೆ ನಮ್ಮ ಮನೆಯಲ್ಲಿ ಒಪ್ಪಿದರೂ ಅವಳ ಮನೆಯಲ್ಲಿ ಒಪ್ಪುತ್ತಾರ? ಒಂದು ವೇಳೆ ಎರಡೂ ಕುಟುಂಬದವರು ಒಪ್ಪದಿದ್ದರೆ ಏನು ಮಾಡುವುದು? ಓಡಿ ಹೋಗುವುದೇ?
ಹೋಗೋ ಓಡಿ ಹೋಗು ಬೇಗ .....
ಇದೇನಿದು ನಮ್ಮಪ್ಪನ ಧ್ವನಿ ಕೇಳುತ್ತಿದೆ....
ಲೇ ನಿನಗೆ ಹೇಳುತ್ತಿರುವುದು ಓಡಿ ಹೋಗು....ಮತ್ತೊಮ್ಮೆ ನಮ್ಮಪ್ಪನ ಧ್ವನಿ ಕೇಳಿ ನನ್ನ ಯೋಚನೆಗಳಿಗೆ ಬ್ರೇಕ್ ಹಾಕಿ ನೋಡಿದೆ.
ಕಾರಿಗೆ ಅಡ್ಡ ಬಂದ ಹುಡುಗನೊಬ್ಬನಿಗೆ ಅಪ್ಪ ಹೇಳುತ್ತಿದ್ದರು ಓಡಿ ಹೋಗು ಎಂದು.
ಮನೆಗೆ ಬಂದು ಸ್ನಾನ ಮಾಡಿ ತಿಂಡಿ ತಿಂದು ಆಫೀಸಿಗೆ ಹೊರಡಲು ಅಮ್ಮನಿಗೆ ಡಬ್ಬಿ ರೆಡಿ ಮಾಡಲು ಹೇಳಿದೆ. ಯಾಕೋ ಇವತ್ತು ಭಾನುವಾರ ಅಂತ ಮರೆತು ಹೋದೆಯ ಎಲ್ಲಿದೆ ನಿನ್ನ ತಲೆ ಎಂದು ನಕ್ಕು ಒಳ ಹೋದರು. ನಾನು ಓಹ್ ತಲೆಯಲ್ಲ ಪಾವನಿಯೇ ತುಂಬಿದ್ದಾಳೆ ಎಂದು ಹೇಳೋಣ ಅಂದುಕೊಂಡು ಸುಮ್ಮನಾದೆ. ಪಾವನಿಗೆ ಫೋನ್ ಮಾಡಲ? ಬೇಡ ಅವಳಾಗಿಯೇ ಮಾಡಲಿ ನಾನು ಮಾಡಿದರೆ ಅಪಾರ್ಥ ಆಗುತ್ತೆ ಎಂದು ಪದೇ ಪದೇ ಫೋನ್ ನೋಡುತ್ತಾ ಟಿ ವಿ ನೋಡುತ್ತಿದ್ದೆ. ಪಕ್ಕದಲ್ಲಿ ತಿಂಡಿಯ ತಟ್ಟೆ ಹಿಡಿದುಕೊಂಡು ಬಂದ ತಂಗಿ ಲೋ ಫೋನ್ ರಿಂಗಿಂಗ್ ಅಲ್ಲೇ ಇದೆ ಕಣೋ ಯಾರಾದ್ರು ಫೋನ್ ಮಾಡಿದ್ರೆ ಗೊತ್ತಾಗತ್ತೆ ಯಾಕೆ ಒಳ್ಳೆ ಫೋನ್ ಸೈಲೆಂಟ್ ಅಲ್ಲಿ ಹಾಕಿರೋ ಹಾಗೆ ಇಪ್ಪತ್ತು ಸಲ ನೋಡುತ್ತೀಯ ಎಂದು ಅಮ್ಮನಿಗೆ ಕೇಳುವ ಹಾಗೆ ಜೋರಾಗಿ ಹೇಳಿ ತುಂಟ ನಗೆ ಬೀರಿದಳು. ಲೇ ಸುಮ್ನಿರೆ ಪೂಜಾ ಅಮ್ಮ ನೋಡಮ್ಮ ಇವಳಿಗೆ ಸುಮ್ನೆ ಇರಕ್ಕೆ ಹೇಳಮ್ಮ ಎಂದೆ. ಶುರು ಆಯ್ತಾ ನಿಮ್ಮಿಬ್ರುದು, ಲೇ ಭಗತ್ ನಿಮ್ಮಪ್ಪ ನಿಂಗೆ ಮದುವೆ ಮಾಡಬೇಕು ಅಂತ ಹುಡುಗಿ ಹುಡುಕ್ತಾ ಇದಾರೆ ನೀನು ನೋಡಿದ್ರೆ ಅವಳ ಜೊತೆ ಜಗಳ ಆಡ್ಕೊಂಡು ಇರು. ಪೂಜಾ ನೀನ್ಯಾಕಮ್ಮ ಅವನನ್ನ ರೇಗಿಸ್ತ್ಯ ಸುಮ್ನೆ ಇರಿ ಎಂದರು.
ಅಮ್ಮ ಅಣ್ಣಂಗೆ ಹುಡುಗಿನಾ ಎಂದು ಅಡಿಗೆ ಮನೆಗೆ ಹೋದಳು. ಎಲ್ಲಿ ಪಾವನಿಯ ವಿಷಯ ಹೇಳಿ ಬಿಡುತ್ತಾಳೋ ಎಂದು ನಾನೂ ಹಿಂದೆಯೇ ಹೋದೆ. ಪುಣ್ಯ ಬಾಯಿ ಬಿಡಲಿಲ್ಲ. ಅವಳಿಗೆ ಕಣ್ಸನ್ನೆಯಲ್ಲೇ ಆಚೆ ಬಾ ಎಂದು ಹೇಳಿ ಆಚೆ ಕರೆದುಕೊಂಡು ಬಂದು ಪೂಜಾ ಪ್ಲೀಸ್ ಪಾವನಿ ವಿಷಯ ಏನೂ ಹೇಳಬೇಡ ಕಣೆ ಎಂದೆ. ಹಾಗಿದ್ದರೆ ಒಂದು ಡೈರಿ ಮಿಲ್ಕ್ ಸಿಲ್ಕ್ ಚಾಕಲೇಟ್ ಕೊಡಿಸಬೇಕು ಎಂದಳು. ನಾನು ಆಯ್ತಮ್ಮ ಎಂದು ಅಮ್ಮ ನಾನು ಸ್ವಲ್ಪ ಹೊತ್ತು ಮಲಗುತ್ತೇನೆ ಎಂದು ಫೋನ್ ತೆಗೆದುಕೊಂಡು ರೂಮಿಗೆ ಹೋದೆ.
ಮಲಗಿಕೊಂಡು ಎರಡು ಮೂರು ಬಾರಿ ಪಾವನಿಯ ನಂಬರ್ ತೆರೆದು ಕಾಲ್ ಬಟನ್ ಒತ್ತಿ ಮತ್ತೆ ಆಫ್ ಮಾಡಿದೆ. ನಾನೇ ಆತುರ ಪಡುತ್ತಿದ್ದೇನೆ ಪಾಪ ಅವಳೂ ನೆನ್ನೆ ರಾತ್ರಿ ಎಲ್ಲ ಜರ್ನಿ ಮಾಡಿ ಸುಸ್ತಾಗಿರುತ್ತಾಳೆ. ಬಹುಶಃ ಮಲಗಿರಬಹುದೇನೋ ನಾನು ಸ್ವಲ್ಪ ನಿದ್ದೆ ಮಾಡೋಣ ಎಂದುಕೊಂಡು ಮಲಗಿದೆ. ಯಾವಾಗಲೂ ಮಲಗಬೇಕಾದರೆ ಫೋನ್ ಸೈಲೆಂಟ್ ಹಾಕಿ ಮಲಗುವ ನಾನು ಮೊದಲ ಬಾರಿಗೆ ಸೈಲೆಂಟ್ ಹಾಕದೆ ಮಲಗಿದೆ.
ರಾತ್ರಿ ಪೂರ ನಿದ್ದೆ ಇಲ್ಲದಿದ್ದರಿಂದ ಏನೋ, ಊರಲ್ಲಿ ಸುತ್ತಾಡಿದ ದಣಿವೇನೋ ಮಲಗಿದ ಒಂದೈದು ನಿಮಿಷದಲ್ಲಿ ಸೊಂಪಾದ ನಿದ್ದೆ ಹತ್ತಿಬಿಟ್ಟಿತು. ಸುಮಾರು ಮೂರು ಗಂಟೆಗಳ ಕಾಲ ಮಲಗಿಬಿಟ್ಟಿದ್ದೆ. ಅಮ್ಮ ಬಂದು ಊಟಕ್ಕೆ ಬಾ ಎಂದು ಬಾಗಿಲು ತಟ್ಟಿದಾಗಲೇ ಎಚ್ಚರವಾದದ್ದು. ಎದ್ದು ತಕ್ಷಣ ಫೋನ್ ನೋಡಿದೆ ಯಾವುದೇ ಕರೆ ಬಂದಿರಲಿಲ್ಲ. ಬಾಗಿಲು ತೆರೆದೆ. ಅರ್ಧ ಗಂಟೆಯಿಂದ ಕರೆಯುತ್ತಿದ್ದೇನೆ ಎಂದರು ಅಮ್ಮ. ಗೊತ್ತಿಲ್ಲಮ್ಮ ಒಳ್ಳೆ ನಿದ್ದೆ ಬಂದಿತ್ತು ಎಂದೆ. ಸರಿ ಮುಖ ತೊಳಿದು ಬಾ ಊಟಕ್ಕೆ ಹಾಕುತ್ತೇನೆ ಎಂದರು. ಮುಖ ತೊಳೆದುಕೊಂಡು ಬಂದು ಊಟಕ್ಕೆ ಕೂತೆ. ಊಟಕ್ಕೆ ಕುಳಿತಾಗಲು ಪದೇ ಪದೇ ಮೊಬೈಲ್ ನೋಡುತ್ತಿದ್ದೆ. ಯಾಕೋ ನಿನಗೇನಾಗಿದೆ ಬೆಳಗ್ಗಿಂದ ನಾನು ನೋಡ್ತಾನೆ ಇದ್ದೀನಿ ಅದೇನು ಪದೇ ಪದೇ ಮೊಬೈಲ್ ನೋಡ್ತಾನೆ ಇದ್ದೀಯ. ಇವತ್ತು ಭಾನುವಾರ ಆಫೀಸಿಲ್ಲ ಏನಿಲ್ಲ, ಇನ್ನು ನಿನ್ನ ಸ್ನೇಹಿತರು ಅವರು ಭಾನುವಾರ ಸಂಜೆ ತಾನೇ ಕರೆ ಮಾಡುವುದು. ಏನು ಕಥೆ ನಿಂದು ಎಂದರು ಅಮ್ಮ.
ಅಯ್ಯೋ ಅದೇನಿಲ್ಲಮ್ಮ ನೆನ್ನೆ ಊರಿಗೆ ಹೋಗಿದ್ದಾಗ ನದಿಯ ಬಳಿ ಹೋಗಿದ್ದೆನಲ್ಲ ಅಲ್ಲಿ ಸ್ವಲ್ಪ ನೀರು ಬಿತ್ತು ಮೊಬೈಲ್ ಗೆ. ಅವಾಗಿಂದ ಪದೇ ಪದೇ ಆಫ್ ಆಗ್ತಾ ಇತ್ತು. ಅದಕ್ಕೆ ನೋಡ್ತಾ ಇದ್ದೆ ಅಷ್ಟೇ. ನಾಳೆ ಆಫೀಸಿಗೆ ಹೋಗ್ತಾ ಸರ್ವಿಸ್ ಗೆ ಕೊಟ್ಟು ಹೋಗು. ಈಗ ನೆಮ್ಮದಿಯಾಗಿ ಊಟ ಮಾಡು ಎಂದರು.
ಒಂದೇ ದಿನದಲ್ಲಿ ನಾನೇಕೆ ಇಷ್ಟು ಅಧೀರನಾಗಿದ್ದೇನೆ?