ಕಥೆ = ಪಾವನಿ (ಮರೆಯಲಾಗದ ನೆನಪುಗಳು) ಭಾಗ 23
ಡಾಕ್ಟರ್ ಬಂದು ಮತ್ತೆ ಇಂಜೆಕ್ಷನ್ ಕೊಟ್ಟರು. ಸ್ವಲ್ಪ ಹೊತ್ತಿನಲ್ಲೇ ಮತ್ತೆ ಕಣ್ಣು ಮುಚ್ಚಿ ಮಲಗಿಬಿಟ್ಟೆ. ಮತ್ತೆ ಎಚ್ಚರವಾದಾಗ ಪಾವನಿಯ ಅಪ್ಪ ಪಕ್ಕದಲ್ಲೇ ಇದ್ದರು. ಅವರನ್ನು ನೋಡಿ ಮತ್ತೆ ಅಳಲು ಶುರುಮಾಡಿದೆ. ನೋಡಪ್ಪ ದಯವಿಟ್ಟು ಅಳಬೇಡ. ನಿನ್ನ ದುಃಖ ನನಗೆ ಅರ್ಥ ಆಗತ್ತೆ. ಪಾವನಿಯನ್ನು ನೀನೆಷ್ಟು ಪ್ರೀತಿಸುತ್ತಿದ್ದೆ ಎಂದು ಅರ್ಥವಾಗತ್ತೆ. ಆದರೆ ಏನೂ ಮಾಡಕ್ಕಾಗಲ್ಲ. ದೇವರು ಅವರ ಬಾಳಿನಲ್ಲಿ ಮದುವೆಯ ಜೀವನ ಅನುಭವಿಸುವ ಯೋಗ ಬರೆದಿಲ್ಲ ಅನಿಸತ್ತೆ. ನೋಡಪ್ಪ ನನಗಿದ್ದ ಒಂದೇ ಆಸೆ ಪಾವನಿ. ಈಗ ಆ ಆಸೆಯೇ ಸತ್ತು ಹೋಗಿದೆ. ನೋಡು ಭಗತ್ ಮಕ್ಕಳು ಕಳೆದುಕೊಳ್ಳುವ ದುಃಖ ಹೇಗೆ ಎಂದು ನಾವು ಅನುಭವಿಸುತ್ತಿದ್ದೇವೆ. ನಿಮ್ಮಪ್ಪ ಅಮ್ಮ ನಿನ್ನನ್ನೇ ನಂಬಿಕೊಂಡಿದ್ದಾರೆ. ದಯವಿಟ್ಟು ದುಡುಕಿ ತಪ್ಪು ನಿರ್ಧಾರ ತೆಗೆದು ಕೊಳ್ಳಬೇಡ. ಪಾವನಿಯೂ ಸದಾ ನೀನು ಚೆನ್ನಾಗಿರಬೇಕೆಂದು ಬಯಸುತ್ತಿದ್ದಳು. ನಾನು ಇದಕ್ಕಿಂತ ಹೆಚ್ಚು ಹೇಳುವ ಪರಿಸ್ಥಿತಿಯಲ್ಲಿಲ್ಲ. ಅರ್ಥ ಮಾಡಿಕೊ ನಿಮ್ಮಪ್ಪ ಅಮ್ಮ ಈಗಾಗಲೇ ಬಹಳ ನೊಂದಿದ್ದಾರೆ. ವಯಸ್ಸಾದ ಕಾಲದಲ್ಲಿ ಅವರಿಗೆ ನಿನ್ನ ಅವಶ್ಯಕತೆ ಇದೆ ಎಂದು ಹೊರಟು ಹೋದರು.
ಪಾವನಿ ಇಲ್ಲದ ಬದುಕು ಕಲ್ಪಿಸಿಕೊಳ್ಳಲೂ ನನ್ನ ಕೈಲಿ ಆಗುತ್ತಿಲ್ಲ. ಕಣ್ಣು ಮುಚ್ಚಿದರೂ, ಕಣ್ಣು ಬಿಟ್ಟರೂ ಪಾವನಿಯೇ ಕಾಣುತ್ತಿದ್ದಾಳೆ, ಮಲಗಿದರೆ ಕನಸಿನಲ್ಲೂ ಪಾವನಿಯೇ ಬರುತ್ತಿದ್ದಾಳೆ. ಇದೊಂಥರ ನರಕ ಯಾತನೆ ಆಗುತ್ತಿದೆ. ಇದಕ್ಕಿಂತ ಸಾಯುವುದೇ ಲೇಸು, ಆದರೆ ಮರುಕ್ಷಣದಲ್ಲೇ ಅಪ್ಪ ಅಮ್ಮ ಕಣ್ಣ ಮುಂದೆ ಬರುತ್ತಿದ್ದಾರೆ. ಊಟ ತಿಂಡಿ ಏನೂ ಬೇಡ ಅನಿಸುತ್ತಿದೆ. ಅಮ್ಮ ದಿನ ಪೂರ್ತಿ ಪಕ್ಕದಲ್ಲಿ ಕೂತು ಅಳುತ್ತಿರುತ್ತಾರೆ. ನಾನು ಯಾರೊಡನೆಯೂ ಮಾತಾಡದೆ ಎರಡು ದಿನ ಆಗಿದೆ. ಪೂಜಾ ಬಂದು ಏನೇನೋ ಹೇಳಿದಳು, ಅಪ್ಪ ಬಂದರು, ಪಾವನಿಯ ಅಪ್ಪ ಅಮ್ಮ ಯಾರು ಬಂದು ಏನು ಹೇಳಿದರು ನನ್ನ ಉತ್ತರ ಬರೀ ಕಣ್ಣೀರು ಆಗಿತ್ತು.
ಮೂರನೆಯ ದಿನ ಆಸ್ಪತ್ರೆಯಲ್ಲಿ ಮಲಗಿದ್ದೇನೆ. ಆಗಷ್ಟೇ ಡಾಕ್ಟರ್ ಬಂದು ಚೆಕ್ ಮಾಡಿ ಅಪ್ಪ ಅಮ್ಮನಿಗೆ ಅವರಿಗೆ ರೆಸ್ಟ್ ಕೊಡಿ ಎಂದು ಹೇಳಿ ಹೋಗಿದ್ದರು. ಸ್ವಲ್ಪ ಹೊತ್ತಿನಲ್ಲಿ ಭಗತ್ ಎಂದು ಯಾರೋ ಕರೆದಂತಾಯಿತು. ನೋಡಿದರೆ ಅರೆ ಪಾವನಿ ನಿಂತಿದ್ದಾಳೆ. ಬಂದು ನನ್ನ ಪಕ್ಕ ಕೂತಳು. ನನ್ನ ತಲೆಯ ಮೇಲೆ ಕೈ ಹಾಕಿ ಹೇಗಿದ್ಯೋ ತುಂಬಾ ನೋವಾಗುತ್ತಿದೆಯ ಎಂದಳು. ಪಾವಿ ನನ್ನದು ಬಿಡು ನಿನಗೇನಾಗಿದೆ ಎಲ್ಲರೂ ನೀನು ಸತ್ತು ಹೋಗಿದ್ದೀಯ ಎನ್ನುತ್ತಿದ್ದಾರೆ ಅದು ಸುಳ್ಳು ಅಂತ ಅವರಿಗೆ ಹೇಳು ಪಾವಿ, ನಿನಗೆ ಯಾವತ್ತೂ ಏನೂ ಆಗಲ್ಲ ನನಗೆ ಗೊತ್ತು. ಎಂದು ಅವಳ ಮಡಿಲಲ್ಲಿ ತಲೆ ಇಟ್ಟು ಅಳುತ್ತಿದ್ದೆ. ಅವಳು ನನ್ನ ತಲೆ ನೇವರಿಸಿ ಭಗತ್ ನಾನು ಎಲ್ಲೂ ಹೋಗಿಲ್ಲ ನಿನ್ನ ಸುತ್ತಲೇ ಇರುತ್ತೇನೆ. ಆದರೆ ಅಪ್ಪಿ ತಪ್ಪಿ ನೀನು ದುಡುಕಿ ಕೆಟ್ಟ ನಿರ್ಧಾರ ತೆಗೆದುಕೊಳ್ಳಬಾರದು. ನೀನು ಹಾಗೇನಾದರೂ ಮಾಡಿದರೆ ನಾನು ನಿನ್ನನ್ನು ಕ್ಷಮಿಸುವುದಿಲ್ಲ ಎಂದು ಮಾಯವಾಗಿಬಿಟ್ಟಳು. ನಾನು ಪಾವಿ ಪಾವಿ ಎಂದು ಕಿರುಚುತ್ತಿದ್ದೆ ಅಷ್ಟರಲ್ಲಿ ಆಚೆ ಇಂದ ಅಮ್ಮ ಪೂಜಾ ಒಳಗೆ ಬಂದರು. ಅಮ್ಮ ಪಾವಿ ಬಂದಿದ್ಲು ನೀನು ನೋಡಿದ್ಯ ಎಂದೆ...ಅಮ್ಮ ಸುಮ್ಮನೆ ನನ್ನನ್ನು ನೋಡುತ್ತಾ ಕಣ್ಣಲ್ಲಿ ನೀರು ತುಂಬಿಕೊಂಡರು. ಪೂಜಾ ನಿಜವಾಗಿಯೂ ಪಾವಿ ಬಂದಿದ್ಲು ಕಣೆ ನನ್ನ ಜೊತೆ ಮಾತಾಡಿದಳು ಕಣೆ. ನೀನೇನು ಮಾಡಿಕೊಳ್ಳಬಾರದು ಹಾಗೇನಾದರೂ ಮಾಡಿಕೊಂಡರೆ ನಾನು ನಿನ್ನನ್ನು ಕ್ಷಮಿಸುವುದಿಲ್ಲ ಎಂದು ಹೇಳಿದಳು ಕಣೆ ಎಂದೆ.
ಒಂದು ವಾರದ ನಂತರ ಡಿಸ್ಚಾರ್ಜ್ ಮಾಡಿ ಮನೆಗೆ ಕರೆದುಕೊಂಡು ಬಂದರು. ಮನೆಗೆ ಬಂದ ಮೇಲೆ ಮಗ ಸುಧಾರಿಸುತ್ತಾನೆ ಎಂದುಕೊಂಡಿದ್ದ ಅಪ್ಪ ಅಮ್ಮನಿಗೆ ನಿರಾಸೆ ಆಗಿತ್ತು. ಯಾಕೆಂದರೆ ನಾನು ಇನ್ನಷ್ಟು ತಲೆ ಕೆಡಿಸಿಕೊಂಡಿದ್ದೆ. ಪ್ರತಿಯೊಂದು ಕ್ಷಣವೂ ಪಾವಿಯ ನೆನಪಾಗಿ ಸುಮ್ಮನೆ ಅಳುತ್ತಾ ಕುಳಿತು ಬಿಡುತ್ತಿದ್ದೆ. ರೂಮನ್ನು ಬಿಟ್ಟು ಆಚೆಯೇ ಹೋಗುತ್ತಿರಲಿಲ್ಲ. ಅಮ್ಮ ಊಟ ತಿಂಡಿ ರೂಮಿಗೆ ತಂದು ಇಡುತ್ತಿದ್ದರು. ಆದರೆ ಅವರು ವಾಪಸ್ ಬಂದಾಗಲೂ ಅದು ಹಾಗೆ ಇದ್ದದ್ದನ್ನು ಕಂಡು ಅಳುತ್ತಿದ್ದರು. ಎಲ್ಲಿ ನೋಡಿದರೂ ಪಾವಿಯೇ ಕಾಣುತ್ತಿದ್ದಳು. ಎರಡು ಮೂರು ಬಾರಿ ಪಾವಿಯ ಅಪ್ಪ ಅಮ್ಮ ಮನೆಗೆ ಬಂದು ನನ್ನನ್ನು ಸಮಾಧಾನ ಪಡಿಸಲು ವಿಫಲ ಪ್ರಯತ್ನ ಪಟ್ಟರು. ಅಪ್ಪ ಬಂದು ಭಗತ್ ಹೀಗೆ ಮನೆಯಲ್ಲೇ ಇದ್ದರೆ ಪಾವನಿಯ ನೆನಪು ಹೆಚ್ಚಾಗುತ್ತದೆ. ಕೆಲಸಕ್ಕೆ ಹೋಗಲು ಶುರು ಮಾಡು ದಿನ ಕಳೆದಂತೆ ಎಲ್ಲ ಸರಿ ಹೋಗುತ್ತದೆ ಎಂದರು. ಇಲ್ಲಪ್ಪ ನನಗೆ ಎಲ್ಲೇ ಹೋದರು ಪಾವಿಯ ನೆನಪು ಬಿಡುವುದಿಲ್ಲ ಅದು ನನ್ನ ಸಾವೊಂದಿಗೆ ಮುಕ್ತಾಯವಾಗುವುದು ಎಂದೆ.
ಅವಾಗವಾಗ ಪಾವನಿಯು ಬಂದ ಹಾಗೆ, ಅವಳ ಜೊತೆ ಮಾತಾಡಿದ ಹಾಗೆ ಆಗುತ್ತಿತ್ತು. ನನಗೆ ಏನೂ ಗೊತ್ತಿರಲಿಲ್ಲ, ದಿನಾಂಕ ವಾರ ಒಂದೂ ನೋಡಿರಲಿಲ್ಲ. ಒಂದು ದಿನ ಪಾವಿ ಬಂದು ಭಗತ್ ನೀನು ಡಿಸ್ಚಾರ್ಜ್ ಆಗಿ ಒಂದೂವರೆ ತಿಂಗಳು ಆಯ್ತು. ಅಂದಿನಿಂದ ಆಚೆಯೇ ಬಂದಿಲ್ಲ. ಪ್ಲೀಸ್ ಕಣೋ ಆಚೆ ಬಾ. ನಿಮ್ಮ ಆಫೀಸಿನಿಂದ ಬಂದಿದ್ದಾರೆ ನಿನ್ನ ನೋಡಲು ಎಂದು ಕೈ ಹಿಡಿದು ಬಲವಂತವಾಗಿ ಕರೆದುಕೊಂಡು ಹೋದಳು. ಆಚೆ ನನ್ನ ಪ್ರಾಜೆಕ್ಟ್ ಮ್ಯಾನೇಜರ್ ಹಾಗೂ ನನ್ನ ಟೀಮ್ ಸಹೋದ್ಯೋಗಿಗಳು ಬಂದಿದ್ದರು. ನನ್ನ ಮ್ಯಾನೇಜರ್ ನನ್ನ ನೋಡಿ ಭಗತ್ ಏನಿದು ಹೀಗಾಗಿದ್ದೀರಿ ದಿಸ್ ಇಸ್ ನಾಟ್ ಗುಡ್. ನಿಮ್ಮ ನೋವು ನಮಗೆ ಅರ್ಥ ಆಗತ್ತೆ. ಆದರೆ ಜೀವನ ಇಷ್ಟಕ್ಕೆ ನಿಲ್ಲುವುದಿಲ್ಲವಲ್ಲ. ಮುಂದೆ ಸಾಗಬೇಕು ದಯವಿಟ್ಟು ಮೊದಲು ಶೇವ್ ಮಾಡಿ. ನೀವು ಹೀಗೆ ಇದ್ದರೆ ನಿಮ್ಮ ಅಪ್ಪ ಅಮ್ಮನ ಪರಿಸ್ಥಿತಿ ಏನಾಗಬೇಕು. ನಾನು ಹೀಗೆ ಹೇಳುತ್ತೀನಿ ಎಂದು ಬೇಸರ ಪಟ್ಟುಕೊಳ್ಳಬೇಡಿ. ಇರುವವರನ್ನು ನೋಯಿಸಿ ಇಲ್ಲದಿರುವವರಿಗಾಗಿ ಕೊರಗಿದರೆ ಏನು ಪ್ರಯೋಜನ ಹೇಳಿ. ಮುಂದಿನ ವಾರದಿಂದ ನಾನು ನಿಮ್ಮನ್ನು ಕೆಲಸದಲ್ಲಿ ಇರಲು ಇಷ್ಟ ಪಡುತ್ತೇನೆ ಎಂದು ಹೇಳಿ ಹೊರಟು ಹೋದರು