ಕಥೆ = ಪಾವನಿ (ಮರೆಯಲಾಗದ ನೆನಪುಗಳು) ಭಾಗ 3
ಸಂಜೆಯವರೆಗೂ ಅರೆಮನಸಿನಿಂದಲೇ ಒದ್ದಾಡುತ್ತಿದ್ದೆ. ಸಂಜೆ ಸ್ನೇಹಿತರು ಕರೆ ಮಾಡಿದ ಮೇಲೆ ಆಚೆ ಹೋದೆ. ಆಚೆ ಬರಬೇಕಾದರೆ ಅಮ್ಮ ಪ್ರಸಾದ ಕೊಟ್ಟು ಕಳುಸಿದ್ದರು. ಸ್ನೇಹಿತರೆಲ್ಲರಿಗೂ ಪ್ರಸಾದ ಕೊಟ್ಟು ಅವರ ಜೊತೆ ಹರಟುತ್ತಿದ್ದಷ್ಟು ಹೊತ್ತು ಪಾವನಿಯನ್ನು ಮರೆತು ಆರಾಮಾಗಿ ಇದ್ದೆ. ಹೆಚ್ಚುಕಮ್ಮಿ ಪ್ರತಿ ಭಾನುವಾರ ನಾವು ಸೆಕೆಂಡ್ ಶೋ ಸಿನೆಮಾಗೆ ಹೋಗುವ ಪರಿಪಾಟಲಿತ್ತು. ಅಂದೂ ಸಹ ಸ್ನೇಹಿತರು ಮುಂಚೆಯೇ ಯಾವುದೋ ಇಂಗ್ಲಿಷ್ ಸಿನೆಮಾಗೆ ಹೋಗಲೆಂದು ಪಿವಿಆರ್ ನಲ್ಲಿ ಟಿಕೆಟ್ ಕಾಯ್ದಿರಿಸಿದ್ದರು. ನಾನು ನನಗೆ ಸಿನೆಮಾ ನೋಡುವ ಮೂಡ್ ಇಲ್ಲ. ಇವತ್ತು ನೀವು ಹೋಗಿಬನ್ನಿ ಎಂದೆ. ಆದರೆ ನನ್ನ ಮಾತು ಕೇಳುವವರು ಯಾರೂ ಇರಲಿಲ್ಲ. ಅಮ್ಮನಿಗೆ ಫೋನ್ ಮಾಡಿ ಎಂದಿನಂತೆ ಅಮ್ಮ ಸಿನೆಮಾಗೆ ಹೋಗ್ತಾ ಇದ್ದೀನಿ ಊಟ ಬೇಡ ಎಂದು ಹೇಳಿ ಸಿನೆಮಾಗೆ ಹೋದೆವು.
ದಾರಿಯಲ್ಲಿ ಯಾವ ಹುಡುಗಿಯನ್ನು ನೋಡಿದರೂ ಪಾವನಿಯೇ ಕಣ್ಣ ಮುಂದೆ ಬರುತ್ತಿದ್ದಳು. ಇದ್ಯಾಕೆ ಈ ಪರಿ ಆವರಿಸಿಕೊಂದಿದ್ದಾಳೆ ಅವಳು ನನ್ನನ್ನು ಎಂದುಕೊಂಡೆ. ಬಲವಾಗಿ ಬೆನ್ನ ಮೇಲೆ ಗುದ್ದಿದ ಸ್ನೇಹಿತ ಏನೋ ಅವಾಗಿಂದ ಒಂಥರಾ ಇದ್ದೀಯ ಯಾಕೆ ಹುಷಾರಿಲ್ವಾ ಎಂದ. ಹಾಗೇನಿಲ್ಲ ರಾತ್ರಿ ಜರ್ನಿ ಮಾಡಿಕೊಂಡು ಬಂದಿದ್ದು ಸ್ವಲ್ಪ ಸುಸ್ತಾಗಿದೆ ಅಷ್ಟೇ ಎಂದೆ. ಮೊದಲೇ ಸಿನಿಮಾ ನೋಡುವ ಮೂಡ್ ಇಲ್ಲದ್ದರಿಂದ ನನಗೆ ಸಿನೆಮಾ ನೋಡುವ ಆಸಕ್ತಿ ಇರಲಿಲ್ಲ. ತೆರೆಯ ಮೇಲೆಲ್ಲಾ ಪಾವನಿಯೇ ಕಾಣುತ್ತಿದ್ದಳು. ಥೂ....ಇದೇನಿದು ನಾನ್ಯಾಕೆ ಹೀಗೆ ಆಡ್ತಾ ಇದ್ದೀನಿ ಎಂದು ಮತ್ತೆ ಸಿನಿಮಾ ನೋಡಲು ಪ್ರಯತ್ನ ಪಟ್ಟೆ ಉಹೂ....ಆಗಲೇ ಇಲ್ಲ. ಹಾಗೋ ಹೀಗೋ ಸಿನೆಮಾ ಮುಗಿದು ಮನೆಗೆ ಬಂದು ಮಲಗುವ ಹೊತ್ತಿಗೆ ೧ ಗಂಟೆ ಆಗಿತ್ತು. ಅದು ಭಾನುವಾರದ ನನ್ನ ಸಮಯವಾದ್ದರಿಂದ ಮನೆಯಲ್ಲಿ ಯಾರು ಕಾಯುವುದಿಲ್ಲ ಮುಂಬಾಗಿಲಿಗೆ ಬೀಗ ಹಾಕಿ ಕೀಯನ್ನು ಕಿಟಕಿಯಲ್ಲಿ ಇಟ್ಟಿರುತ್ತಾರೆ. ಕೀ ತೆಗೆದು ರೂಮಿಗೆ ಹೋಗಿ ಫೋನ್ ಸೈಲೆಂಟ್ ಗೆ ಹಾಕಿ ಮಲಗಿಬಿಟ್ಟೆ. ಮಧ್ಯಾಹ್ನ ಚೆನ್ನಾಗಿ ನಿದ್ದೆ ಮಾಡಿದ್ದರಿಂದ ಸ್ವಲ್ಪ ಹೊತ್ತು ನಿದ್ದೆ ಬರಲಿಲ್ಲ. ಆಮೇಲೆ ಮೆಲ್ಲಗೆ ನಿದ್ದೆ ಹತ್ತಿತು.
ಕೌಸಲ್ಯಾ ಸುಪ್ರಜಾ ರಾಮ ಎಂದು ಮೊಬೈಲ್ ನಲ್ಲಿ ಅಲಾರಂ ಹೊಡೆದುಕೊಂಡು ನಿದ್ದೆಯಿಂದ ಎಚ್ಚೆತ್ತುಗೊಂಡೆ. ಮುಖ ತೊಳೆದುಕೊಂಡು ಜಿಮ್ ಗೆ ಹೋಗಿ ಮನೆಗೆ ಬಂದು ಸ್ನಾನ ಮಾಡಿ ತಿಂಡಿ ತಿಂದು ಆಫೀಸಿಗೆ ಹೊರಟೆ. ಇದ್ಯಾವ ಸಮಯದಲ್ಲೂ ಪಾವನಿಯ ನೆನಪಾಗಲಿಲ್ಲ. ಆಫೀಸಿಗೆ ಹೋಗಿ ಸಿಸ್ಟಮ್ ಆನ್ ಮಾಡಿ ಮೇಲ್ ಚೆಕ್ ಮಾಡ್ತಾ ಇದ್ದಾಗ ಪವನ್ ಎಂಬ ಮೇಲ್ ನೋಡಿ, ಆಗ ನೆನಪಾಯಿತು. ನೆನ್ನೆ ಭಾನುವಾರ ಬಹುಶಃ ಅವಳು ಮನೆ ಬಿಟ್ಟು ಎಲ್ಲೂ ಹೋಗಿರುವುದಿಲ್ಲ. ಅದಕ್ಕಾಗಿ ಫೋನ್ ಮಾಡಿಲ್ಲ ಎನಿಸತ್ತೆ. ಇಂದು ಮಾಡಬಹುದೇನೋ ಎಂಬ ಆಲೋಚನೆಯಲ್ಲಿ ಮುಳುಗಿದ್ದೆ. ಶುಕ್ರವಾರ ರಜೆ ಹಾಕಿದ್ದರಿಂದ ಕೆಲಸ ಸ್ವಲ್ಪ ಜಾಸ್ತಿಯೇ ಇತ್ತು. ಹಾಗಾಗಿ ಕೆಲಸದಲ್ಲಿ ಮುಳುಗಿ ಅವಳ ಬಗ್ಗೆ ಯೋಚಿಸಲಿಲ್ಲ. ಮಧ್ಯದಲ್ಲಿ ಒಂದೆರೆಡು ಕರೆ ಬಂತಾದರೂ ಅದು ಅವಳದಾಗಿರಲಿಲ್ಲ. ಅಂದು ಎಂದಿಗಿಂತ ಸ್ವಲ್ಪ ಜಾಸ್ತಿ ಹೊತ್ತೇ ಆಫೀಸಿನಲ್ಲಿ ಇದ್ದೆ. ಮನೆಗೆ ಬರುವಷ್ಟರಲ್ಲಿ ಹತ್ತಾಗಿತ್ತು. ತುಂಬಾ ಸುಸ್ತಾಗಿದ್ದರಿಂದ ಊಟ ಮಾಡಿ ಮಲಗಿಬಿಟ್ಟೆ.
ಎರಡು ದಿನ, ಮೂರು ದಿನ, ನಾಲ್ಕು ದಿನ ಕಳೆಯಿತು ಪಾವನಿಯಿಂದ ಯಾವುದೇ ಫೋನ್ ಕರೆಯಾಗಲಿ, ಮೆಸೇಜ್ ಆಗಲಿ ಬರಲಿಲ್ಲ. ಬಹುಷಃ ಅವಳಿಗೆ ನಾನೆಂದರೆ ಇಷ್ಟವಿಲ್ಲವೇನೋ, ಸುಮ್ಮನೆ ಫೋನ್ ನಂಬರ್ ತೆಗೆದುಕೊಂಡಳು ಅನಿಸುತ್ತೆ. ಈ ಹುಡುಗೀರ ಹಣೆಬರಹವೇ ಇಷ್ಟು ಅನಿಸುತ್ತೆ. ತಮ್ಮ ಒಂದು ನಗುವಿನಿಂದಲೇ ಹುಡುಗರನ್ನು ಬೀಳಿಸಿ ಬಿಡುತ್ತಾರೆ. ನಾವು ಹುಡುಗರು ಹುಚ್ಚರ ಹಾಗೆ ಅವರ ಬಗ್ಗೆ ತಲೆ ಕೆಡಿಸಿಕೊಂಡು ಒದ್ದಾಡುತ್ತಿದ್ದರೆ ಅವರು ಮಾತ್ರ ಯಾವುದೇ ಯೋಚನೆ ಇಲ್ಲದೆ ಆರಾಮಾಗಿ ಇರುತ್ತಾರೆ. ಸುಮ್ಮನೆ ಅವಳ ಬಗ್ಗೆ ಯೋಚನೆ ಮಾಡಿಕೊಂಡು ಸರಿಯಾಗಿ ನಿದ್ದೆ ಸಹ ಮಾಡಲಿಲ್ಲ. ಇನ್ನಾದರೂ ಅವಳ ಬಗ್ಗೆ ಯೋಚನೆ ಮಾಡುವುದನ್ನು ಬಿಡಬೇಕು ಎಂದುಕೊಂಡು ವಾರಾಂತ್ಯಕ್ಕಾಗಿ ಎದುರು ನೋಡುತ್ತಿದ್ದೆ.
ಎರಡು ವಾರದಿಂದ ರೂಂ ಸ್ವಚ್ಛ ಮಾಡಿಕೊಂಡಿರಲಿಲ್ಲ. ಹಾಗಾಗಿ ಶನಿವಾರ ಸ್ವಚ್ಛ ಮಾಡಬೇಕು ಎಂದು ಮೊದಲೇ ನಿರ್ಧರಿಸಿಕೊಂಡಿದ್ದೆ. ಅದರಂತೆ ರೂಮೆಲ್ಲ ಗುಡಿಸಿ ಒರೆಸಿ, ಸ್ನಾನ ಮಾಡಿ ತಿನ್ನುವಷ್ಟರಲ್ಲಿ ಮಧ್ಯಾಹ್ನ ಆಗಿತ್ತು. ಅಷ್ಟರಲ್ಲಿ ಎಷ್ಟು ಬೇಡ ಅಂದುಕೊಂಡರೂ ಎರಡು ಸಲ ಪಾವನಿಯ ನೆನಪಾಗಿ ಫೋನ್ ನೋಡಿಕೊಂಡಿದ್ದೆ. ಆದರೆ ಏನೂ ಉಪಯೋಗವಿರಲಿಲ್ಲ. ಶನಿವಾರದ ಹೊತ್ತು ನಾನು ಊಟ ಮಾಡುತ್ತಿದ್ದದ್ದು ರಾತ್ರಿ ಮಾತ್ರ. ಹಾಗಾಗಿ ಮಧ್ಯಾಹ್ನ ಒಂದು ಸುತ್ತು ನಿದ್ದೆ ಆದಮೇಲೆ ಸಂಜೆ ಸ್ನೇಹಿತರ ಜೊತೆ ಆಚೆ ಹೋಗಿ ಮನೆಗೆ ಬಂದು ಊಟ ಮಾಡಿ ಮಲಗಿಬಿಟ್ಟೆ.
ಭಾನುವಾರವಾದ್ದರಿಂದ ಬೆಳಿಗ್ಗೆ ತಡವಾಗಿ ಎದ್ದು ಮೊಬೈಲ್ ನೋಡಿದರೆ ಪಾವನಿ ಇಂದ ಮೆಸೇಜ್ ಒಂದು ಬಂದಿತ್ತು