ಕಥೆ ಸಿದ್ದಜ್ಜನ ಕಥೆ
ಹಳ್ಳಿಯಿಂದ ಪಟ್ಟಣಕ್ಕೆ ಬಂದು ಸುಮಾರು ವರ್ಷಗಳು ಆಗಿಹೋಗಿತ್ತು. ಇಲ್ಲಿಯ ಕೆಲಸ ಒತ್ತಡಗಳ ನಡುವೆ ಹಳ್ಳಿಯ ಕಡೆ ಹೋಗುವುದಕ್ಕೆ ಆಗಿರಲಿಲ್ಲ. ಆಗಾಗ ಒಮ್ಮೊಮ್ಮೆ ಹೋಗಿ ನೋಡಿ ಬರಬೇಕು ಅನಿಸುತ್ತಿದ್ದರೂ ಆಗಿರಲಿಲ್ಲ. ಈ ಸಲದ ವರ್ಷಾಂತ್ಯದಲ್ಲಿ ಒಂದು ವಾರ ರಜಾ ಹಾಕಿ ಹಳ್ಳಿಗೆ ಹೋಗಿ ಬರಬೇಕೆಂದು ತೀರ್ಮಾನಿಸಿದ್ದೆ. ಅದೇ ರೀತಿ ನನ್ನ ದೊಡ್ಡಪ್ಪ ಚಿಕ್ಕಪ್ಪನ ಮಕ್ಕಳಿಗೂ ಹೇಳಿದ್ದೆ. ಅವರೂ ಒಪ್ಪಿಕೊಂಡಿದ್ದರು. ಡಿಸೆಂಬರ್ ಮೊದಲ ವಾರದಿಂದಲೇ ಮನಸು ಒಂದು ರೀತಿ ಉಲ್ಲಾಸದಾಯಕವಾಗಿತ್ತು. ಎಷ್ಟೋ ವರ್ಷಗಳ ನಂತರ ಹಳ್ಳಿಗೆ ಹೋಗುತ್ತಿರುವುದು. ಚಿಕ್ಕಂದಿನಲ್ಲಿ ಬೇಸಿಗೆ ರಜೆ ಬಂದರೆ ಸಾಕು ಹಳ್ಳಿಗೆ ಹೋಗಿ ೨ ತಿಂಗಳು ಸ್ವತಂತ್ರ ಹಕ್ಕಿಗಳಂತೆ ಹಾರಾಡಿ ಹಳ್ಳಿಯ ಎಲ್ಲ ಕೆರೆಗಳಲ್ಲಿ ಆಡುತ್ತಿದ್ದದ್ದು, ಬೇರೆ ತೋಟಗಳಿಗೆ ಹೋಗಿ ಮಾವಿನಕಾಯಿ, ಕಡಲೇಕಾಯಿ, ಕಬ್ಬನ್ನು ಕದ್ದು ತಿಂದದ್ದು, ಅಜ್ಜಿಯ ಕೈ ತುತ್ತು ಊಟ ಎಲ್ಲ ನೆನಪಿಗೆ ಬಂದು ಒಂದು ಕ್ಷಣ ಕಣ್ಣು ತೇವಗೊಂಡಿತು.
ಈಗ ಎಲ್ಲರೂ ಬೆಳೆದು ದೊಡ್ಡವರಾಗಿದ್ದೇವೆ. ಹಳ್ಳಿಯಲ್ಲಿ ಈಗ ಬರೀ ನಮ್ಮ ದೊಡ್ಡಪ್ಪ ಬಿಟ್ಟರೆ ಬೇರ್ಯಾರು ಇಲ್ಲ. ಅವರು ಸುಮಾರು ಸಲ ಕರೆದಿದ್ದರೂ ಹೋಗಲು ಆಗಿರಲಿಲ್ಲ. ಈಗ ಆ ಸಮಯ ಕೂಡಿ ಬಂದಿರುವುದು ನನ್ನ ಸಂತಸಕ್ಕೆ ಪಾರವೇ ಇರಲಿಲ್ಲ. ಮುಂಚಿನ ನೆನಪುಗಳನ್ನು ಹೊತ್ತುಕೊಂಡು ಹಳ್ಳಿಯ ಪಯಣಕ್ಕೆ ಸಿದ್ಧವಾಗುತ್ತಿದ್ದೆ. ಆ ದಿನ ಹತ್ತಿರ ಬಂದೆ ಬಿಟ್ಟಿತು. ಮೊದಲೇ ನಿರ್ಧರಿಸಿದಂತೆ ನಾನು ಸೇರಿದಂತೆ ಒಟ್ಟು ಆರು ಜನ ಶುಕ್ರವಾರ ಮಧ್ಯಾಹ್ನ ಬಸ್ಸಿಗೆ ಹೊರಡುವುದು ಎಂದು ಅಂದುಕೊಂಡಿದ್ದೆವು. ಆದರೆ ನನ್ನ ಮ್ಯಾನೇಜರ್ ಒಂದು ವಾರ ರಜಾ ಹಾಕುತ್ತಿರುವುದರಿಂದ ಇವತ್ತು ಸಂಜೆಯವರೆಗೂ ಕೆಲಸ ಮಾಡಿ ಹೊರಡಿ ಎಂದಿದ್ದ. ಒಲ್ಲದ ಮನಸಿನಿಂದಲೇ ಉಳಿದವರಿಗೆ ನೀವು ಹೊರಡಿ ನಾನು ಸಂಜೆಯ ಬಸ್ ಗೆ ಹೊರಟು ರಾತ್ರಿಯ ಹೊತ್ತಿಗೆ ಬಂದು ಬಿಡುತ್ತೇನೆ ಎಂದಿದ್ದೆ.
ಪದೇ ಪದೇ ಗಡಿಯಾರದ ಕಡೆ ನೋಡಿಕೊಂಡು ಚಕಚಕನೆ ಕೆಲಸ ಮುಗಿಸುತ್ತಿದ್ದೆ. ಎಷ್ಟು ಬೇಗ ಮಾಡಬೇಕು ಎಂದುಕೊಂಡರೂ ಕೆಲಸ ಮುಗಿಸಿ ಆಚೆ ಬರುವಷ್ಟರಲ್ಲಿ ಸಂಜೆ ಆರಾಗಿತ್ತು. ಅಲ್ಲಿಂದ ಸೀದಾ ಬಸ್ ಸ್ಟ್ಯಾಂಡ್ ಗೆ ಬಂದೆ. ಅಲ್ಲಿಂದ ನಮ್ಮ ಹಳ್ಳಿಗೆ ತಲುಪಲು ೩ ಗಂಟೆಯ ಪ್ರಯಾಣ. ಬಸ್ ನಲ್ಲಿ ಕುಳಿತು ಮೊದಲೇ ಹೊರಟಿದ್ದ ನಮ್ಮವರಿಗೆ ಫೋನ್ ಮಾಡಿದೆ. ಆದರೆ ಯಾರೊಬ್ಬರ ಫೋನ್ ಕೂಡ ರೀಚ್ ಆಗುತ್ತಿರಲಿಲ್ಲ. ಓಹ್ ಬಹುಶ ಅವರು ಹಳ್ಳಿಗೆ ಸೇರಿಬಿಟ್ಟಿದ್ದಾರೆ. ಯಾಕೆಂದರೆ ನಮ್ಮ ಹಳ್ಳಿಯಲ್ಲಿ ಕೆಲವೊಂದು ಜಾಗದಲ್ಲಿ ಮಾತ್ರ ನೆಟ್ವರ್ಕ್ ಬರುತ್ತಿತ್ತು.
ನನಗಿದ್ದ ಒಂದೇ ಒಂದು ಸಮಸ್ಯೆ ಎಂದರೆ ನಮ್ಮ ಹಳ್ಳಿಗೆ ನೇರ ಬಸ್ ವ್ಯವಸ್ಥೆ ಇಲ್ಲ. ಹೈವೇ ಇಂದ ಐದು ಕಿಲೋ ಮೀಟರ್ ಇದೆ ನಮ್ಮ ಹಳ್ಳಿ. ಬೆಳಗಿನ ಸಮಯದಲ್ಲಿ ಆದರೆ ಯಾವುದಾದರೂ ಆಟೋ ಅಥವಾ ಆ ದಾರಿಯಲ್ಲಿ ಹೋಗುವ ದ್ವಿಚಕ್ರ ವಾಹನದವರ ಹತ್ತಿರ ಡ್ರಾಪ್ ತೆಗೆದುಕೊಂಡು ಹೋಗ ಬಹುದು. ಆದರೆ ರಾತ್ರಿಯ ವೇಳೆ ಅದ್ಯಾವ ಸೌಲಭ್ಯವೂ ಇರುವುದಿಲ್ಲ. ನಮ್ಮ ಅದೃಷ್ಟ ಸರಿ ಇದ್ದರೆ ಯಾವುದಾದರೂ ಗಾಡಿ ಬರುತ್ತದೆ ಇಲ್ಲವಾದರೆ ಕಾಲ್ನಡಿಗೆಯೇ ಗತಿ. ಆಗಿದ್ದು ಆಗಲಿ ನೋಡೋಣ ಎಂದುಕೊಂಡು ಕಣ್ಮುಚ್ಚಿ ಹಳೆಯ ನೆನಪುಗಳನ್ನು ಮೆಲುಕು ಹಾಕಿಕೊಂಡು ಮಲಗಿದೆ.
ಸರಿಯಾಗಿ ೯ ಗಂಟೆಗೆ ಬಸ್ ನಮ್ಮ ಹಳ್ಳಿಗೆ ಹೋಗುವ ದಾರಿಯಲ್ಲಿ ನಿಲ್ಲಿಸಿದ. ಆ ಜಾಗದಲ್ಲಿ ಇಳಿಯುವವನು ನಾನೊಬ್ಬನೇ ಇದ್ದದ್ದು. ನಾನು ಇಳಿದ ತಕ್ಷಣ ಬಸ್ ಧೂಳೆಬ್ಬಿಸಿಕೊಂಡು ಹೊರಟು ಹೋಯಿತು. ಸುತ್ತಲೂ ಕಾರ್ಗತ್ತಲು, ಜೀರುಂಡೆಗಳ ಸದ್ದು ಕ್ರೀ..ಕ್ರೀ ಎನ್ನುತ್ತಿತ್ತು. ಅಲ್ಲೊಂದು ಇಲ್ಲೊಂದು ಮಿಂಚು ಹುಳಗಳು ಕಾಣುತ್ತಿದ್ದವು. ಆಗೊಂದು ಈಗೊಂದು ಗಾಡಿಗಳು ೧೦೦-೧೨೦ ವೇಗದಲ್ಲಿ ಹಾದು ಹೋಗುತ್ತಿದ್ದವು. ಡಿಸೆಂಬರ್ ತಿಂಗಳಾದ್ದರಿಂದ ಚಳಿ ಸ್ವಲ್ಪ ಹೆಚ್ಚಾಗಿಯೇ ಇತ್ತು. ಬ್ಯಾಗಿನಿಂದ ಸ್ವೆಟರ್ ತೆಗೆದು ಹಾಕಿಕೊಂಡು ಯಾವುದಾದರೂ ಗಾಡಿ ಈ ಕಡೆ ಬರಬಾರದೇ ಎಂದು ಕಾಯುತ್ತ ಅಲ್ಲೇ ನಮ್ಮ ಹಳ್ಳಿಯ ಹೆಸರಿದ್ದ ಸಿಮೆಂಟಿನ ಬೋರ್ಡ್ ಹತ್ತಿರ ಕುಳಿತಿದ್ದೆ.
ಇದ್ದಕ್ಕಿದ್ದಂತೆ ಪಕ್ಕದಲ್ಲಿ ಒಂದು ಧ್ವನಿ ಕೇಳಿ ಬಂತು. ಅಷ್ಟು ಹೊತ್ತು ಇಲ್ಲದ ಧ್ವನಿ ಇದ್ದಕ್ಕಿದ್ದಂತೆ ಎಲ್ಲಿಂದ ಬಂತು ಬೋರ್ಡ್ ನ ಈ ಬದಿಗೆ ಬಂದು ನೋಡಿದರೆ ಅಲ್ಲೊಬ್ಬ ವಯಸ್ಸಾದ ವ್ಯಕ್ತಿ ಜೊತೆಯಲ್ಲಿ ಮೂರು ಸಣ್ಣ ಮಕ್ಕಳು ಇದ್ದರು. ನಾನು ಸ್ವಲ್ಪ ಹತ್ತಿರದಿಂದ ನೋಡಿದಾಗ ಅರೇ ಈತ ನಮ್ಮ ಹಳ್ಳಿಯವನೆ ಅದ ಸಿದ್ದಜ್ಜ. ಚಿಕ್ಕ ವಯಸ್ಸಿನಲ್ಲಿ ನಮ್ಮನ್ನು ಎತ್ತಿ ಆಡಿಸಿದ ಅಜ್ಜ. ಸದ್ಯ ಹಳ್ಳಿಗೆ ಒಬ್ಬನೇ ಹೋಗಬೇಕೆಂದು ಕುಳಿತಿದ್ದವನಿಗೆ ಜೊತೆ ಒಬ್ಬರು ಸಿಕ್ಕಂತಾಯಿತು ಎಂದುಕೊಂಡು ಅಜ್ಜನನ್ನು ಸಿದ್ದಜ್ಜ ನನ್ನ ಗುರುತು ಸಿಕ್ಕಿತ? ಎಂದು ಕೇಳಿದೆ ಸಿದ್ದಜ್ಜ ಇಲ್ಲಪ್ಪ ನಂಗೆ ಒಂದು ತಿಂಗಳಿಂದ ನೆನಪಿನ ಶಕ್ತಿ ಕಡಿಮೆಯಾಗಿದೆ. ಗೊತ್ತಾಗುತ್ತಿಲ್ಲ ಯಾರು ಅಂತ ಯಾರಪ್ಪ ನೀನು ಅಂತ ಕೇಳಿದ. ಅದಕ್ಕೆ ನಾನು ಅಜ್ಜ ನಾನು ಪದ್ದಮ್ಮನ ಮೊಮ್ಮಗ ಎಂದೇ. ಓಹೋ ನೀನೆನಪ್ಪ ಏನು ಇಷ್ಟು ಹೊತ್ತಿನಲ್ಲಿ ಈ ಕಡೆ? ಅಜ್ಜ ಹಳ್ಳಿಗೆ ಹೊರಟಿದ್ದೆ, ಈಗ ಯಾವುದಾದರೂ ಗಾಡಿ ಬರುತ್ತದ ಹಳ್ಳಿಗೆ ಎಂದು ಕೇಳಿದ್ದಕ್ಕೆ ಸಿದ್ದಜ್ಜ ನಕ್ಕು ನನಗ್ಯಾಕಪ್ಪ ಗಾಡಿ ಎಂದು ಸುಮ್ಮನಾದ. ಯಾಕೋ ಸಿದ್ದಜ್ಜ ವಿಚಿತ್ರ ಎನಿಸಿ ಅಲ್ಲೇ ಪಕ್ಕದಲ್ಲೇ ಕುಳಿತೆ.
ಸ್ವಲ್ಪ ಹೊತ್ತಿನ ನಂತರ ಆ ಸಣ್ಣ ಮಕ್ಕಳು ತಾತ ತಾತ ಕಥೆ ಹೇಳು, ಕಥೆ ಹೇಳು ಎಂದು ಪೀಡಿಸಲು ಶುರು ಮಾಡಿದರು. ಸಿದ್ದಜ್ಜ ಮಕ್ಕಳಿಗೆ ಯಾವುದೋ ಭಯಾನಕ ಕಥೆಯನ್ನು ಹೇಳಲು ಶುರು ಮಾಡಿದ. ನನಗೆ ಆಗ ಕಥೆ ಕೇಳುವ ಮೂಡ ಇಲ್ಲದಿದ್ದರೂ ಇದೇನು ತಾತ ಮಕ್ಕಳಿಗೆ ಭಯಾನಕ ಕಥೆ ಹೇಳುತ್ತೀನಿ ಎನ್ನುತ್ತಾನಲ್ಲ ಎಂದುಕೊಂಡು ಸುಮ್ಮನಾದೆ.
ತಾತ ಕಥೆಯನ್ನು ಹೇಳುತ್ತಿದ್ದ ಅಷ್ಟರಲ್ಲಿ ನನಗೆ ಇದೆಂತ ವಿಚಿತ್ರ ಕಥೆ ಎಂದುಕೊಂಡು ತಾತ ಒಂದು ನಿಮಿಷ ಬ್ಯಾಗ್ ಇಲ್ಲೇ ಇರಲಿ ನಾನು ಆಕಡೆ ಹೋಗಿ ಮೂತ್ರ ವಿಸರ್ಜಿಸಿ ಬರುತ್ತೇನೆ ಎಂದು ಎದ್ದು ಬಂದೆ. ಅಷ್ಟರಲ್ಲಿ ಸುಮ್ಮನೆ ಹಿಂತಿರುಗಿ ನೋಡಿದೆ. ನಮ್ಮ ಹಳ್ಳಿಯ ಕಡೆ ಆಟೋ ಒಂದು ಹೋಗುತ್ತಿತ್ತು. ಅರ್ಜೆಂಟಾಗಿ ರಸ್ತೆ ದಾಟಿ ಓದಿ ಬಂದೆ ಅಷ್ಟರಲ್ಲಿ ಆಟೋ ಹೊರಟು ಹೋಗಿತ್ತು. ಸಿದ್ದಜ್ಜ ಮತ್ತೆ ಮಕ್ಕಳು ಯಾರೂ ಕಾಣಲಿಲ್ಲ. ನನ್ನ ಬ್ಯಾಗ್ ಮಾತ್ರ ಅಲ್ಲೇ ಇತ್ತು. ಬಹುಷಃ ಆಟೋದಲ್ಲಿ ಹೊರಟು ಹೋದರು ಅನಿಸುತ್ತೆ. ಛೆ ಆಟೋ ಮಿಸ್ ಆಯ್ತು. ಜೇಬಿನಿಂದ ಮೊಬೈಲ್ ತೆಗೆದು ನೋಡಿದೆ ಸಮಯ ೯.೩೦ ತೋರಿಸುತ್ತಿತ್ತು. ಇನ್ನೇನು ಕಾಯುವುದು ನಡೆದೇ ಹೋಗೋಣ ಎಂದು ಮೊಬೈಲ್ ಟಾರ್ಚ್ ಆನ್ ಮಾಡಿಕೊಂಡು ಹೆಜ್ಜೆ ಇಡಲು ಶುರು ಮಾಡಿದೆ.
ನಮ್ಮ ಹಳ್ಳಿ ರಸ್ತೆಯಲ್ಲಿ ದಾರಿ ದೀಪಗಳು ಇರಲಿಲ್ಲ. ಸುತ್ತಲ್ಲೂ ಕಾರ್ಗತ್ತಲು ಗುಯ್ ಗುಯ್ ಎನ್ನುವ ಏನೋ ಒಂದು ವಿಚಿತ್ರ ಸದ್ದು, ಸಿದ್ದಜ್ಜ ಹೇಳಿದ ವಿಚಿತ್ರ ಕಥೆ, ಆ ಆಕ್ಸಿಡೆಂಟ್ ನಲ್ಲಿ ಸತ್ತ ಮೂವರು ನನ್ನ ಹಿಂಬಾಲಿಸುತ್ತಿದ್ದಾರೆ ಎಂದು ಅನಿಸಿ ಒಮ್ಮೆ ಹಿಂತಿರುಗಿ ನೋಡಿದೆ ಯಾರೂ ಇರಲಿಲ್ಲ. ಯಾಕೋ ಭಯ ಆದಂತೆನಿಸಿ ಸ್ವಲ್ಪ ಬೇಗ ಬೇಗ ಹೆಜ್ಜೆ ಇಡಲು ಶುರು ಮಾಡಿದೆ. ಅಷ್ಟರಲ್ಲಿ ನನಗೆ ಎದುರಾಗಿ ದೂರದಲ್ಲಿ ಒಂದು ದೀಪ ಕಾಣಿಸಿತು. ಹೋಗುತ್ತಾ ಹೋಗುತ್ತಾ ಅದು ನನ್ನ ಹತ್ತಿರ ಬರುತ್ತಿರುವಂತೆ ಭಾಸವಾಯಿತು. ಇದೇನಪ್ಪ ಕೊಳ್ಳಿ ದೆವ್ವದ ಬಗ್ಗೆ ಓದಿದ್ದೆ. ಅದು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುತ್ತದೆ ಎಂದು. ಅದೆನ ಇದು ಎಂದು ಕೊಂಡು ಆ ಚಳಿಯಲ್ಲೂ ಮೈ ಬೆವರಲು ಶುರುವಾಯಿತು. ಇನ್ನಷ್ಟು ಹತ್ತಿರ ಬರುತ್ತಿದೆ ಆ ದೀಪ. ಈಗ ಆ ದೀಪದ ಜೊತೆ ಒಂದು ರೀತಿ ಶಭ್ದ ಬರುತ್ತಿದೆ. ಆಗ ಗೊತ್ತಾಯಿತು ಓಹ್ ಇದ್ಯಾವುದೋ ದ್ವಿಚಕ್ರ ವಾಹನವೆಂದು. ಸುಮ್ಮನೆ ಭಯ ಪಟ್ಟೆ ಎಂದು ಮುಂದೆ ಹೋಗುತ್ತಿದ್ದೆ. ಅಷ್ಟರಲ್ಲಿ ಆ ಗಾಡಿ ಹತ್ತಿರ ಬಂತು. ಅದರಲ್ಲಿ ಬಂದದ್ದು ನನ್ನ ದೊಡ್ಡಪ್ಪನ ಮಗ. ನಾನು ಅವನನ್ನು ಏನೋ ಇಷ್ಟು ಹೊತ್ತಿನಲ್ಲಿ ಈ ಕಡೆ ಅಂದಿದ್ದಕ್ಕೆ ತಮ್ಮ ಸಲುವಾಗೆ ಸ್ವಾಮಿ. ಇಷ್ಟು ಹೊತ್ತಾದರೂ ತಾವು ಬರಲಿಲ್ಲವಲ್ಲ ಅದಕ್ಕೆ ನೋಡೋಣ ಎಂದು ಅಪ್ಪನ ಗಾಡಿ ತೆಗೆದುಕೊಂಡು ಬಂದೆ ಎಂದ. ನನಗೆ ನೂರಾನೆ ಬಲ ಬಂದಂತಾಗಿ ಅವನೊಂದಿಗೆ ಹೋಗಿ ಊಟ ಮಾಡಿ ಮಲಗಿಬಿಟ್ಟೆ.
ಬೆಳಿಗ್ಗೆ ಎದ್ದು ಮುಖ ತೊಳೆಯಲು ಸೋಪ್ ಗಾಗಿ ಬ್ಯಾಗ್ ನಲ್ಲಿ ಹುಡುಕಾಡಿದೆ. ಬರುವ ಆತುರದಲ್ಲಿ ಸೋಪ್ ತರುವುದನ್ನು ಮರೆತುಬಿಟ್ಟಿದ್ದೆ. ನನಗೆ ಸೋಪ್ ಇಲ್ಲದೆ ಮುಖ ತೊಳೆದು ಅಭ್ಯಾಸ ಇಲ್ಲ, ಜೊತೆಗೆ ಬೇರೊಬ್ಬರ ಸೋಪ್ ಅನ್ನು ನಾನು ಬಳಸುವುದಿಲ್ಲ. ಸರಿ ದೊಡ್ಡಪ್ಪನ ಬಳಿ ಹೋಗಿ ದೊಡ್ಡಪ್ಪ ಇಲ್ಲಿ ಅಂಗಡಿ ಎಲ್ಲಿದೆ ಎಂದು ಕೇಳಿದ್ದಕ್ಕೆ ಇಲ್ಲಿ ಯಾವುದು ಅಂಗಡಿ ಇಲ್ಲ ನೀನು ಟೌನ್ ಗೆ ಹೋಗಬೇಕು ಎಂದರು. ಸರಿ ಗಾಡಿ ಕೀ ಕೊಡಿ ಎಂದು ಕೀ ತೆಗೆದುಕೊಂಡು ನಾನು ಮತ್ತೆ ದೊಡ್ಡಪ್ಪನ ಮಗ ಇಬ್ಬರೂ ಟೌನ್ ಕಡೆ ಹೊರಟೆವು. ಎಷ್ಟೋ ವರ್ಷಗಳ ಮೇಲೆ ಹಳ್ಳಿ ದಾರಿಯಲ್ಲಿ ಮುಂಜಾನೆ ಹೋಗುತ್ತಿದ್ದರೆ ಆ ಪ್ರಕೃತಿ ತೋಟಗಳು, ಕೆರೆ, ಸ್ವಚ್ಹ ಗಾಳಿ ಎಲ್ಲವೂ ಮೈ ಮನಸನ್ನು ತಂಪಾಗಿಸಿತ್ತು. ನಾನು ರಾತ್ರಿ ಬಂದದ್ದು ಇದೆ ದಾರೀನ ಎನ್ನುವಷ್ಟು ಸುಂದರವಾಗಿತ್ತು. ಹಾಗೆ ಮುಂದೆ ಬೋರ್ಡ್ ಬಳಿ ಬಂದೆವು. ನಾನು ರಾತ್ರಿ ಕುಳಿತಿದ್ದ ಅದೇ ಬೋರ್ಡ್. ಅಲ್ಲಿ ಬೋರ್ಡ್ ಪಕ್ಕದಲ್ಲೇ ಒಂದಷ್ಟು ಜನ ನಿಂತಿದ್ದರು. ಎಲ್ಲ ನಮ್ಮ ಹಳ್ಳಿಯವರ ಹಾಗೆ ಇದ್ದರು. ದೊಡ್ಡ ರಂಗೋಲಿ ಹಾಕಿ ಹೋಮ ಕುಂಡ ಎಲ್ಲ ಇಟ್ಟಿದ್ದರು. ಏನೋ ಪೂಜೆ ನಡೆಸುತ್ತಿದ್ದರು ಎಂದು ಗೊತ್ತಾಯಿತು. ಅಲ್ಲೇ ಗಾಡಿ ನಿಲ್ಲಿಸಿ ಏನೆಂದು ವಿಚಾರಿಸೋಣ ಎಂದು ಹೋದೆವು. ಬಹಳ ವರ್ಷಗಳ ನಂತರ ಹಳ್ಳಿಗೆ ಬಂದಿದ್ದರಿಂದ ಎಲ್ಲರೂ ಬಹಳ ವಿಚಾರಿಸಿದರು. ಕುಶಲೋಪರಿ ಮುಗಿದ ಮೇಲೆ ಏನಿದು ಪೂಜೆ ಎಲ್ಲ ಎಂದು ಕೇಳಿದ್ದಕ್ಕೆ, ಅವರು ಹೇಳಿದ ಉತ್ತರ ಕೇಳಿ ನನ್ನ ಮೈ ಥರಗುಟ್ಟಿ ಹೋಯಿತು.
ಏನಿಲ್ಲಪ್ಪ ನಿನಗೆ ನಮ್ಮೂರಿನ ಸಿದ್ದಜ್ಜ ಗೊತ್ತಲ್ಲ ಅದೇ ಚಿಕ್ಕ ವಯಸ್ಸಿನಲ್ಲಿ ನಿಮ್ಮ ಮನೆ ಪಕ್ಕದಲ್ಲಿ ಇದ್ದನಲ್ಲ ಅವನು ಅವನ ಮೊಮ್ಮಕ್ಕಳು ಹೋದ ತಿಂಗಳು ಜಾತ್ರೆ ಮುಗಿಸಿಕೊಂಡು ಬರುತ್ತಿದ್ದಾಗ ಇದೆ ಬೋರ್ಡ್ ಹತ್ತಿರ ಕುಳಿತಿದ್ದಾಗ ಲಾರಿ ಒಂದು ಬ್ರೇಕ್ ಫೈಲ್ ಆಗಿ ಬಂದು ಗುದ್ದಿ ನಾಲ್ಕೂ ಜನ ಸ್ಥಳದಲ್ಲೇ ಸತ್ತು ಹೋದರು. ಅಂದಿನಿಂದ ಪ್ರತಿ ದಿನ ರಾತ್ರಿ ಈ ದಾರಿಯಲ್ಲಿ ಬರುವವರಿಗೆ ಕಾಣಿಸಿಕೊಂಡು ಪ್ರತಿಯೊಬ್ಬರಿಗೂ ಹೆದರಿಕೆ ಉಂಟು ಮಾಡುತ್ತಿದ್ದರು. ಅದಕ್ಕೆ ಶಾಸ್ತ್ರದವರನ್ನ ಕೇಳಿದ್ದಕ್ಕೆ ಆ ಘಟನೆ ನಡೆದ ಸ್ಥಳದಲ್ಲಿ ಒಂದು ಶಾಂತಿ ಮಾಡಿದರೆ ಎಲ್ಲ ಸರಿ ಹೋಗುತ್ತದೆ ಎಂದು ಹೇಳಿದ್ದರು ಅದಕ್ಕೆ ಈ ಪೂಜೆ ಎಲ್ಲ ಎಂದರು.
ನಾವು ಏನೂ ಮಾತಾಡದೆ ಸರಿ ಬರುತ್ತೇವೆ ಎಂದು ಹೊರಟೆವು. ನನ್ನ ದೊಡ್ಡಪ್ಪನ ಮಗ ನನ್ನ ಕಡೆ ತಿರುಗಿ ಹೌದು ನೀನು ನೆನ್ನೆ ರಾತ್ರಿ ತಾನೇ ಬಂದದ್ದು. ನಿನಗೇನಾದರೂ ದರ್ಶನವಾಯ್ತ ಸ್ವಾಮಿ ಎಂದು ಕಿಚಾಯಿಸಿದ. ನಾನು ಹುಸಿ ನಗೆ ತೋರುತ್ತ ಅಯ್ಯೋ ಅದೆಲ್ಲ ಮೂಡ ನಂಬಿಕೆ ಅಷ್ಟೇ..ಈಗಲೂ ದೆವ್ವ ಭೂತ ಇದೆ ಅಂದರೆ ನಂಬಬೇಕಾ ಎಂದು ಸುಮ್ಮನಾದೆ...
Rating
Comments
ಉ: ಕಥೆ ಸಿದ್ದಜ್ಜನ ಕಥೆ
In reply to ಉ: ಕಥೆ ಸಿದ್ದಜ್ಜನ ಕಥೆ by sathishnasa
ಉ: ಕಥೆ ಸಿದ್ದಜ್ಜನ ಕಥೆ
ಉ: ಕಥೆ ಸಿದ್ದಜ್ಜನ ಕಥೆ
In reply to ಉ: ಕಥೆ ಸಿದ್ದಜ್ಜನ ಕಥೆ by makara
ಉ: ಕಥೆ ಸಿದ್ದಜ್ಜನ ಕಥೆ
In reply to ಉ: ಕಥೆ ಸಿದ್ದಜ್ಜನ ಕಥೆ by Jayanth Ramachar
ಉ: ಕಥೆ ಸಿದ್ದಜ್ಜನ ಕಥೆ
In reply to ಉ: ಕಥೆ ಸಿದ್ದಜ್ಜನ ಕಥೆ by ಗಣೇಶ
ಉ: ಕಥೆ ಸಿದ್ದಜ್ಜನ ಕಥೆ
In reply to ಉ: ಕಥೆ ಸಿದ್ದಜ್ಜನ ಕಥೆ by Jayanth Ramachar
ಉ: ಕಥೆ ಸಿದ್ದಜ್ಜನ ಕಥೆ
In reply to ಉ: ಕಥೆ ಸಿದ್ದಜ್ಜನ ಕಥೆ by ಗಣೇಶ
ಉ: ಕಥೆ ಸಿದ್ದಜ್ಜನ ಕಥೆ
ಉ: ಕಥೆ ಸಿದ್ದಜ್ಜನ ಕಥೆ
In reply to ಉ: ಕಥೆ ಸಿದ್ದಜ್ಜನ ಕಥೆ by partha1059
ಉ: ಕಥೆ ಸಿದ್ದಜ್ಜನ ಕಥೆ
In reply to ಉ: ಕಥೆ ಸಿದ್ದಜ್ಜನ ಕಥೆ by prasannakulkarni
ಉ: ಕಥೆ ಸಿದ್ದಜ್ಜನ ಕಥೆ
In reply to ಉ: ಕಥೆ ಸಿದ್ದಜ್ಜನ ಕಥೆ by partha1059
ಉ: ಕಥೆ ಸಿದ್ದಜ್ಜನ ಕಥೆ
ಉ: ಕಥೆ ಸಿದ್ದಜ್ಜನ ಕಥೆ
In reply to ಉ: ಕಥೆ ಸಿದ್ದಜ್ಜನ ಕಥೆ by kavinagaraj
ಉ: ಕಥೆ ಸಿದ್ದಜ್ಜನ ಕಥೆ
ಉ: ಕಥೆ ಸಿದ್ದಜ್ಜನ ಕಥೆ
In reply to ಉ: ಕಥೆ ಸಿದ್ದಜ್ಜನ ಕಥೆ by RAMAMOHANA
ಉ: ಕಥೆ ಸಿದ್ದಜ್ಜನ ಕಥೆ
In reply to ಉ: ಕಥೆ ಸಿದ್ದಜ್ಜನ ಕಥೆ by manju787
ಉ: ಕಥೆ ಸಿದ್ದಜ್ಜನ ಕಥೆ
In reply to ಉ: ಕಥೆ ಸಿದ್ದಜ್ಜನ ಕಥೆ by RAMAMOHANA
ಉ: ಕಥೆ ಸಿದ್ದಜ್ಜನ ಕಥೆ