ಕಥೆ
ಸರಳ ತದೇಕಚಿತ್ತದಿಂದ ತನ್ನ ಕೊಠಡಿಯಾಚೆಗೆ ಶೂನ್ಯದತ್ತ ದಿಟ್ಟಿಸುತ್ತ ಕುಳಿತಿದ್ದಾಳೆ. ಸರ್ವಾಲಂಕಾರಭೂಷಿತೆಯಾಗಿ ಯಾರನ್ನೋ ನಿರೀಕ್ಷಿಸುವಂತಿತ್ತು ಅವಳ ನೋಟ. ಮುಖದಲ್ಲಿ ಯಾವೊಂದು ಭಾವವು ಸ್ಪಷ್ಟವಾಗಿ ವ್ಯಕ್ತವಾಗುತ್ತಿಲ್ಲ . ರಾಹುಗ್ರಸ್ತ ಚಂದ್ರನಂತೆ ಕಳಾಹೀನವಾಗಿತ್ತು. ಇಹಲೋಕದ ಪರಿವೇ ಇಲ್ಲದಂತೆ ಕುಳಿತಿದ್ದಾಳೆ. ಅದೇ ವೇಳೆಗೆ ಅಲ್ಲಿಗೆ ಅವಳ ತಂದೆ ರಂಗನಾಥರು ಪ್ರವೇಶಿಸುತ್ತಾರೆ. ಮಗಳನ್ನು ಈ ಸ್ಥಿತಿಯಲ್ಲಿ ನೋಡಿ ದುಃಖ ಉಮ್ಮಳಿಸಿ ಬರುತ್ತದೆ. ಮನಸ್ಸನ್ನು ಸ್ಥಿಮಿತಕ್ಕೆ ತಂದುಕೊಂಡು ಮಗಳ ಬಳಿ ಸಾರಿ 'ಮಗು ಎಷ್ಟು ದಿನಾಂತ ಹೀಗೆ ಕೊರಗುತ್ತೀಯ, ಆದದ್ದನ್ನು ಮರೆಯಲು ಪ್ರಯತ್ನಿಸು' ಎಂದರು. ಆದರೆ ಮಗಳು ಯಾವುದೆ ಪ್ರತಿಕ್ರಿಯೆ ವ್ಯಕ್ತಪಡಿಸದಿದ್ದಾಗ ಸೋತು ಹೊರನಡೆಯುತ್ತಾರೆ. ಅವರಿಗೆ ಮಗಳ ನೋವಿನ ಅರಿವಿತ್ತು. ತಮ್ಮ ಮಾತುಗಳಿಂದ ಅವಳ ಬದುಕನ್ನು ಸರಿಪಡಿಸುವ ಶಕ್ತಿಯಿಲ್ಲವೆಂಬುದೂ ತಿಳಿದಿತ್ತು. ವರಾಂಡದಲ್ಲಿ ಕುಳಿತು ನಿಟ್ಟಿಸಿರು ಬಿಡುತ್ತಾ ಮನೆಯ ಅಂಗಳದಲ್ಲಿನ ಚಪ್ಪರವನ್ನೇ ದಿಟ್ಟಿಸುತ್ತಾರೆ. ಮನಸ್ಸು ಭಾರವಾಗುತ್ತದೆ. ತಾವು ನಿರೀಕ್ಷಿಸಿರದ ಆ ಕಹಿ ಘಟನೆಗಳು ಕಣ್ಣ ಮುಂದೆ ಹಾದುಹೋಗುತ್ತವೆ.
ರಂಗನಾಥರಿಗೆ ಸರಳ ಒಬ್ಬಳೇ ಮಗಳು. ಹೆಂಡತಿ ಸುಜಾತ. ಸ್ಥಿತಿವಂತರಲ್ಲದಿದ್ದರೂ ತಕ್ಕಮಟ್ಟಿಗೆ ಚೆನ್ನಾಗಿದ್ದಾರೆ. ಮೈಸೂರಿನಲ್ಲಿ ಸ್ವಂತ ಮನೆಯಿದೆ. ರಿಟೈರ್ಡ್ ಮಾಸ್ತರ್. ಮುದ್ದಿನ ಮಗಳು ಸರಳ. ಅವಳ ಓದು ಮುಗಿದು ಒಳ್ಳೆಯ ಕಡೆ ಸಂಬಂಧ ಕೂಡಿಬಂದಾಗ ನಿರಾಕರಿಸಲಾಗಲಿಲ್ಲ. ವರ ಸ್ಫುರದ್ರೂಪಿ. ಒಳ್ಳೆಯ ಉದ್ಯೋಗದಲ್ಲಿದ್ದ. ಬೆಂಗಳೂರಿನಲ್ಲಿ ವಾಸ. ಎರಡು ಮನೆಯವರ ಸಮ್ಮತಿಯೊಂದಿಗೆ ಮದುವೆ ಗೊತ್ತಾಯಿತು. ಮದುವೆ ಮನೆಗೆ ಕಳೆ ಬಂದಿತ್ತು. ವರನ ಕಡೆಯವರು ಬಂದಿಳಿದಾಗ ಎಲ್ಲರ ಮನಸ್ಸು ಸಂತೋಷದಿಂದ ತೇಲಾಡಿತು. ಹೆಂಡತಿ ಸುಜಾತ ಸಡಗರದಿಂದ ಓಡಾಡಿ ಎಲ್ಲರನ್ನು ವಿಚಾರಿಸಿಕೊಳ್ಳುತ್ತಾ ಯಾವ ಕೊರತೆಯಾಗದಂತೆ ನೋಡಿಕೊಂಡಿದ್ದರು. ಗೊತ್ತಾದ ಮಹೂರ್ತದಲ್ಲಿ ಮದುವೆಯೂ ನಿರ್ವಿಘ್ನವಾಗಿ ನೆರವೇರಿತು.ಎಲ್ಲರ ಮುಖದಲ್ಲಿ ಸಂತೃಪ್ತಿಯ ಕಳೆ. ಸತಿಪತಿಯರು ನೂರ್ಕಾಲ ಸುಖವಾಗಿ ಬಾಳಿರೆಂದು ಎಲ್ಲ ಆಶೀರ್ವದಿಸಿದರು. ಆದರೆ ....?
ವಿಧಿಯಾಟ ಬೇರೆಯೇ ಆಗಿತ್ತು. ಕ್ಷಣ ಮಾತ್ರದಲ್ಲಿ ಅನಾಹುತವೊಂದು ಘಟಿಸಿತ್ತು. ವರನ ಸಂಬಂಧಿಕರ ಮಗುವೊಂದು ತನ್ನ ಓರಗೆಯವರೊಂದಿಗೆ ಆಟವಾಡುತ್ತಾ ಸಮೀಪದಲ್ಲಿದ್ದ ಕಾಲುವೆಗೆ ಜಾರಿ ಬಿದ್ದಿತ್ತು. ರಕ್ಷಿಸಲು ಹೋದ ಆ ಮಗುವಿನ ತಾಯಿ ಜೊತೆಗೆ ಮದುವಣಿಗನೂ ಸಾವಿನ ದಾರಿ ಹಿಡಿದಿದ್ರು. ಒಂದೇ ಕ್ಷಣದಲ್ಲಿ ವಿಧಿಯು ರುದ್ರ ನರ್ತನವಾಡಿತ್ತು. ಪರಿಣಾಮವಾಗಿ ಎರಡು ಕುಟುಂಬಗಳ ಸರ್ವನಾಶವಾಗಿತ್ತು. ಈ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿತು. ವಿಷಯ ತಿಳಿದ ಎಲ್ಲಾ ಗರಬಡಿದವರಂತೆ ಕಲ್ಲಾದರು. ರಂಗನಾಥರಿಗೆ ಭೂಮಿಯೇ ಬಾಯ್ಬಿರಿದ ಅನುಭವವಾಯ್ತು. ಹೊಸ ಕನಸುಗಳ ನಿರೀಕ್ಷೆಯಲ್ಲಿರುವ ತಮ್ಮ ಮಗಳನ್ನು ಹೇಗೆ ಸಂತೈಸಲಿ ಎಂದುಕೊಳ್ಳುವಷ್ಟರಲ್ಲಿ ಮತ್ತೊಂದು ಆಘಾತ ಕಾದಿತ್ತು. ವಧುವಿನ ತಾಯಿ ನೇಣಿಗೆ ಶರಣಾಗಿದ್ದಳು ಎಲ್ಲದರಿಂದ ಮುಕ್ತಳಾಗುವ ಆತುರದಲ್ಲಿ....
ರಂಗನಾಥರಿಗೆ ಏನು ಮಾಡುವುದಕ್ಕೂ ತೋಚಲಿಲ್ಲ . "ಕಾಲವೇ ತಟಸ್ತವಾದಂತೆ" ಅನುಭವವಾಯ್ತು. ತಮ್ಮ ಮುದ್ದು ಮಗಳ ಬಾಳು ಅನ್ಯಾಯವಾಗಿ ಹಾಳಾಯ್ತಲ್ಲ ಎಂದು ಕಣ್ಣೀರಿಟ್ಟರು. ಹೃದಯದಲ್ಲಿ ನೋವು ಮಡುಗಟ್ಟಿತ್ತು. ತಮ್ಮನ್ನು ತಾವೇ ಸಂತೈಸಿಕೊಂಡು ಮನಸ್ಸನ್ನು ತಹಬಂದಿಗೆ ತಂದುಕೊಂಡು ಒಂದು ನಿರ್ಧಾರಕ್ಕೆ ಬಂದವರಂತೆ ಮಗಳ ಕೋಣೆಯತ್ತ ನಡೆದರು. ಅವರ ಕಣ್ಣಿನಲ್ಲಿ ಆತ್ಮವಿಶ್ವಾಸ ತುಂಬಿ ತುಳುಕುತ್ತಿತ್ತು. ಮಗಳ ಬದುಕಿನಲ್ಲಿ ಮತ್ತೆ ನಗುವನ್ನು ತರುವ ಧೃಡ ವಿಶ್ವಾಸ ಅವರ ಹೆಜ್ಜೆಗಳಲ್ಲಿತ್ತು.
ಕಮಲ ಬೆಲಗೂರ್.
Comments
ಉ: ಕಥೆ
In reply to ಉ: ಕಥೆ by makara
ಉ: ಕಥೆ
ಉ: ಕಥೆ
In reply to ಉ: ಕಥೆ by kamala belagur
ಉ: ಕಥೆ