ಕದನ ಸೋಲುತ್ತಿರುವ ಜವರಾಯ, ಯುದ್ಧ ಗೆಲ್ಲಲಾಗದ ನರ...

ಕದನ ಸೋಲುತ್ತಿರುವ ಜವರಾಯ, ಯುದ್ಧ ಗೆಲ್ಲಲಾಗದ ನರ...

ಪ್ರತಿದಿನದ ಸಕ್ರಿಯ ಸಮಯದ ಬಹುಪಾಲನ್ನು ಕಂಪ್ಯೂಟರ್‌ನ ಮುಂದೆ ಕಳೆಯುವುದರ ಜೊತೆಗೆ ನಿಯಮಿತವಾಗಿ ವ್ಯಾಯಾಮ ಮಾಡದ ಅಶಿಸ್ತಿನಿಂದಾಗಿ ಬಂದಿರುವ ಕುತ್ತಿಗೆ ನೋವಿಗೆ ಕಾರಣ ಹುಡುಕಲು ಅಂದು ನಾನು ಸಿಲಿಕಾನ್ ಕಣಿವೆಯ ಆಸ್ಪತ್ರೆಯಲ್ಲಿ ಕುಳಿತಿದ್ದೆ. ತಾನಿರಬೇಕಾದ ತೂಕಕ್ಕಿಂತ ಜಾಸ್ತಿಯಿದ್ದ ಅರವತ್ತರ ಆಜುಬಾಜಿನ ಬಿಳಿಯ ಧಢೂತಿ ಹೆಂಗಸು ಎಕ್ಸ್-ರೆ ತೆಗೆಯುತ್ತಿದ್ದಳು. ಅದು ಐದ್ಹತ್ತು ನಿಮಿಷಗಳ ಕೆಲಸ. ಅದು ಇದು ಲೋಕಾಭಿರಾಮವಾಗಿ ಮಾತನಾಡುತ್ತಿದ್ದೆವು. ಸುತ್ತಮುತ್ತಲೆಲ್ಲ ಆಧುನಿಕ ವೈದ್ಯಕೀಯ ಯಂತ್ರೋಪಕರಣಗಳು. ಎಕ್ಸ್-ರೆ ತೆಗೆದದ್ದು ಮುಗಿಯಿತು. ಕೈಯ್ಯಲ್ಲಿ ಒಂದು ಬಿಲ್ಲೆ ಗಾತ್ರದ ಕಪ್ಪು ಮೆಮೊರಿ ಸ್ಟಿಕ್ ಹಿಡಿದುಕೊಂಡು ಆಕೆ ಹೇಳಿದಳು: "ಒಂದೆರಡು ನಿಮಿಷ

ನೀವು ಕಾಯಬೇಕು. ಎಲ್ಲಾ ಎಕ್ಸ್-ರೇಗಳು ಸರಿಯಾಗಿ ಬಂದಿವೆಯಾ ಎಂದು ಪರೀಕ್ಷಿಸಿಕೊಂಡು ಬರುತ್ತೇನೆ. ನೋಡಿ, ನಿಮ್ಮ ಎಕ್ಸ್-ರೇ ಫೋಟೋಗಳೆಲ್ಲ ಈ ಚಿಕ್ಕ ವಸ್ತುವಿನಲ್ಲಿ ಇದ್ದಾವೆ. ಮೊದಲೆಲ್ಲ ಒಂದು ಎಕ್ಸ್-ರೇಗೆ ಒಂದೊಂದು ನೆಗೆಟಿವ್ ಬೇಕಾಗಿತ್ತು. ಅದನ್ನೆಲ್ಲ ಡೆವಲಪ್ ಮಾಡಿಸೋದಿಕ್ಕೆ ಗಂಟೆಗಟ್ಟಲೆ ಸಮಯ ತೆಗೆದುಕೊಳ್ತಿತ್ತು. ಈಗ ಎಲ್ಲಾ ನಿಮಿಷಾರ್ಧದಲ್ಲಿ ಆಗಿಬಿಡುತ್ತದೆ."

ಲೇಖನದ ವಿಡಿಯೊ ಪ್ರಸ್ತುತಿ: ಭಾಗ - 1

ನಾನೂ ಅದನ್ನೆ ಯೋಚಿಸುತ್ತ, "ಹೌದು, ತಂತ್ರಜ್ಞಾನ ಬಹಳ ಮುಂದುವರೆದಿದೆ. ಭಾರತದ ಉಪನಿಷತ್‌ಗಳಲ್ಲಿ ಒಂದು ಮಾತಿದೆ: 'ಮೃತ್ಯುವಿನಿಂದ ಅಮರತ್ವದೆಡೆಗೆ ಸಾಗೋಣ,' ಎಂದು. ಮನುಷ್ಯನ ಚಿರಂತನ ಹುಡುಕಾಟ ಅದು. ಮೊದಲೆಲ್ಲ ಕೋಮಾ ಬಂದರೆ ಆ ವ್ಯಕ್ತಿ ಸತ್ತೆ ಹೋದ ಎಂದು ತಿಳಿಯುತ್ತಿದ್ದರು. ಈಗ ನೋಡಿ, ಆಧುನಿಕ ತಂತ್ರಜ್ಞಾನಗಳಿಂದಾಗಿ ಕೋಮಾದಲ್ಲಿ ಹಲವಾರು ವರ್ಷ ಜೀವಂತ ಶವದಂತೆ ಇರುವವರು ಸಹ ಎಷ್ಟೋ ದಿನಗಳ ನಂತರ ಅದರಿಂದ ಹೊರಬಂದು ಬದುಕುತ್ತಿದ್ದಾರೆ," ಎಂದೆ.

ನಾವು ಮಾತನಾಡುತ್ತಿದ್ದದ್ದು ಲೋಕಾಭಿರೂಢಿಯ ಮಾತು. ನಮ್ಮಿಬ್ಬರ ಏಕಾಂತವನ್ನು ಮಾತುಗಳಿಂದ ತುಂಬಿಸುವುದಷ್ಟೆ ಅಲ್ಲಿದ್ದ ಗುರಿ. ಆದರೆ ನನ್ನ ಮಾತು ಮುಗಿಯುತ್ತಿದ್ದಂತೆ ಆಕೆ ಗಂಭೀರವಾಗಿಬಿಟ್ಟಳು. ನನ್ನ ಕಣ್ಣನ್ನೆ ನೇರವಾಗಿ ದಿಟ್ಟಿಸುತ್ತ ಹೇಳಿದಳು: "You know what, ನನ್ನ ಮಗ ಮೂರು ವರ್ಷ ಕೋಮಾದಲ್ಲಿದ್ದ. ಕೆಲವೆ ವರ್ಷಗಳ ಹಿಂದೆ ಅದರಿಂದ ಹೊರಬಂದ. ಈಗ ಚೆನ್ನಾಗಿದ್ದಾನೆ. ಈ ವೈದ್ಯಕೀಯ ವಿಜ್ಞಾನ, ತಂತ್ರಜ್ಞಾನ ಇಷ್ಟು ಮುಂದುವರಿಯದೆ ಇದ್ದಿದ್ದರೆ ಅವನು ಎಂದೋ ಸಾಯಬೇಕಿತ್ತು."

ಕಾಲ ಮುಂದುವರೆಯುತ್ತಿದೆ. ಜೊತೆಜೊತೆಗೆ ಅವಿಷ್ಕಾರಗಳು ಮತ್ತು ತಂತ್ರಜ್ಞಾನ ಸಹ. ಹುಟ್ಟುವವರು ಹುಟ್ಟುತ್ತಿದ್ದಾರೆ. ಸಾಯುವವರು ಸಾಯುತ್ತಿದ್ದಾರೆ. ಆದರೆ, ಹಿಂದೆ ಎಂದೂ ಸಾಧ್ಯವಾಗದ್ದು ಇಂದು ಸಾಧ್ಯವಾಗುತ್ತಿದೆ. ಹೌದು. ಸತ್ತೇ ಹೋದವರನ್ನು ಬದುಕಿಸಲಾಗುತ್ತಿದೆ...

ಹೃದಯಾಘಾತ ಯಾವಾಗ ಆಗುತ್ತೆ ಎಂದು ಹೇಳುವುದು ಕಷ್ಟ. ವಯಸ್ಸಾದವರು ಇದಕ್ಕೆ ಬಲಿಯಾಗುವ ಸಾಧ್ಯತೆ ಮತ್ತು ಪ್ರಮಾಣ ಜಾಸ್ತಿ ಇದ್ದರೂ, 20-30 ವರ್ಷ ವಯಸ್ಸಿನ ಜವ್ವನಿಗರೂ ಇದಕ್ಕೆ ಬಲಿಯಾಗಬಹುದು. ನಾನು ಇಂಜಿನಿಯರಿಂಗ್ ಓದುತ್ತಿದ್ದಾಗ ಬೆಳಿಗ್ಗೆಯೆ ಎದ್ದು ತನ್ನ ರೂಮ್‌ಮೇಟ್‌ನೊಂದಿಗೆ ಜಾಗಿಂಗ್ ಹೋಗಿದ್ದ ನನ್ನ ಸಹಪಾಠಿ ಇದ್ದಕ್ಕಿದ್ದಂತೆ ನಡುರಸ್ತೆಯಲ್ಲಿ ಕುಸಿದು ಬಿದ್ದು ಕ್ಷಣಾರ್ಧದಲ್ಲಿ ಸತ್ತಿದ್ದ. ಹೈದಾರಾಬಾದಿಗೆ ಸಂಸಾರ ಸಮೇತ ಪ್ರವಾಸ ಹೋಗಿದ್ದ ಪರಿಚಯಸ್ಥರೊಬ್ಬರು ಇನ್ನೂ ಶಾಲೆಗೆ ಹೋಗುತ್ತಿರುವ ತಮ್ಮ ಪುಟ್ಟಮಗಳ ಕಣ್ಮುಂದೆ ಬಸ್ಸಿನಲ್ಲಿ ಕುಳಿತ ಜಾಗದಲ್ಲಿಯೆ ಹೃದಯಾಘಾತವಾಗಿ ಸತ್ತು ಹೋದರು. ಅವರ ವಯಸ್ಸು 40-45 ರೊಳಗಿತ್ತು. ಹಾಗೆ ಆಗುವುದಕ್ಕೆ ಕೇವಲ ಒಂದು ತಿಂಗಳ ಹಿಂದೆಯಷ್ಟೆ ನನ್ನೂರಿನಲ್ಲಿರುವ ನಾರಾಯಣ ಹೃದಯಾಲಯದಲ್ಲಿ ಕಂಪ್ಲೀಟ್ ಚೆಕಪ್ ಮಾಡಿಸಿಕೊಂಡು ಅಲ್ಲಿನ ಡಾಕ್ಟರಿಂದ ಎಲ್ಲವೂ ಸರಿಯಾಗಿದೆ ಎಂಬ ಆಶ್ವಾಸನೆ ಪಡೆದುಕೊಂಡಿದ್ದರು ಅವರು. ಆದರೂ, ಜವರಾಯ ಬಂದರೆ ಬರಿಕೈಲಿ ಬರಲಿಲ್ಲ; ಕುಡುಗೋಲು ಕೊಡಲ್ಯೊಂದು ಹೆಗಲೇರಿ ಜವರಾಯ!

ಭಾರತದಲ್ಲಿ ಇನ್ನೂ ಎಷ್ಟೋ ಕಡೆ ಈಗ ಹುಟ್ಟುತ್ತಿರುವ ಮಕ್ಕಳದೇ ಜನನ ವಿವರಗಳು ಡೇಟಾಬೇಸ್‌ಗೆ ಹೋಗದೆ ಇರುವಾಗ ಇನ್ನು ಹೃದಯಾಘಾತಕ್ಕೆ ಒಳಗಾಗಿ ವರ್ಷಕ್ಕೆ ಎಷ್ಟು ಜನ ಸಾಯುತ್ತಾರೆ ಎಂಬ ವಿವರ ಪಡೆಯುವುದು ಅಸಾಧ್ಯವೆ. ಆದರೆ ಅಮೇರಿಕದಲ್ಲಿ ಆ ಸಮಸ್ಯೆ ಇಲ್ಲ. ಪ್ರತಿವರ್ಷ ಸುಮಾರು 2,50,000 ಜನ ಇಲ್ಲಿ ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆ ಸೇರುತ್ತಾರೆ. ಇದಕ್ಕೆ ಮುಖ್ಯಕಾರಣ, ಹೃದಯಕ್ಕೆ ರಕ್ತ ಒದಗಿಸುವ ರಕ್ತನಾಳಗಳು ಕೊಬ್ಬಿನಾಂಶದಿಂದಾಗಿ ಎಲ್ಲೊ ಒಂದು ಕಡೆ ಕಟ್ಟಿಕೊಂಡು ಬಿಡುವುದು. ಹೃದಯಾಘಾತಕ್ಕೆ ಒಳಗಾದವರಿಗೆ ಯಾರಾದರೂ ಆ ಕೂಡಲೆ ಎದೆ ಒತ್ತಿ, ಬಾಯಿಯಿಂದ ಉಸಿರು ತುಂಬಿ, ಐದು ನಿಮಿಷದೊಳಗೆ ಅವರನ್ನು ಎಮರ್ಜೆನ್ಸಿಗೆ ಕರೆದುಕೊಂಡು ಹೋಗುವಂತಾದರೆ, ರೋಗಿ ಬದುಕಿಕೊಳ್ಳಬಹುದು. ಈ ದೇಶದಲ್ಲಿ 911 ಫೋನ್ ಕರೆ ಮಾಡಿದರೆ ಮೂರ್ನಾಲ್ಕು ನಿಮಿಷಗಳಲ್ಲಿ ಮನೆ ಬಾಗಿಲ ಬಳಿ ಆಂಬುಲೆನ್ಸ್ ಬಂದಿರುತ್ತದೆ. ಹೆಚ್ಚೆಂದರೆ ಏಳೆಂಟು ನಿಮಿಷಗಳು. ಇಷ್ಟೆಲ್ಲ ಇದ್ದರೂ, ಹೃದಯಾಘಾತಕ್ಕೆ ಒಳಗಾದವರು ಸತ್ತೇ ಹೋಗುವ ಸಾಧ್ಯತೆ ಇಲ್ಲಿ ಶೇ. 95. ಇನ್ನು ಭಾರತದಲ್ಲಿ?

(ಮತ್ತೊಂದು ವರದಿಯ ಪ್ರಕಾರ ಪ್ರತಿವರ್ಷ ಅಮೇರಿಕದಲ್ಲಿ ಹೃದಯಾಘಾತಕ್ಕೊಳಗಾದ 3,25,000 ಜನ ಆಸ್ಪತ್ರೆಗೆ ಬರುವುದಕ್ಕಿಂತ ಮೊದಲೆ ಸತ್ತಿರುತ್ತಾರಂತೆ. (http://www.americanheart.org))

ಇಷ್ಟಕ್ಕೂ ಈ ಹೃದಯಾಘಾತದ ಸಾವು ಅಂದರೆ ಏನು? ಹೃದಯಸ್ತಂಭನವಾದಾಗ ಮನುಷ್ಯನ ಅಂಗಾಂಗಳಿಗೆ ಯಾವುದೆ ಗಾಯವಾಗಿಲ್ಲ. ಎಲ್ಲವೂ ಇದ್ದ ಹಾಗೆಯೆ ಇವೆ. ರೋಗಿ ರಕ್ತವನ್ನೂ ಕಳೆದುಕೊಂಡಿಲ್ಲ. ಆಗಿರುವುದೆಲ್ಲ "ಕ್ಲಿನಿಕಲ್ ಡೆತ್": ಅಂದರೆ ಆತನ ಹೃದಯ ಬಡಿಯುವುದನ್ನು ನಿಲ್ಲಿಸಿದೆ, ರಕ್ತಚಲನೆ ನಿಂತಿದೆ ಎಂದಷ್ಟೆ. ಆಗ ಮೆದುಳು ಏನು ಮಾಡುತ್ತಿದೆ? ಯಾವಾಗ ಹೃದಯದ ಬಡಿತ ನಿಲ್ಲುವುದೊ ಆ ಕೂಡಲೆ ಮೆದುಳು ದೇಹದಲ್ಲಿನ ಆಮ್ಲಜನಕವನ್ನು ಉಳಿತಾಯ ಮಾಡಲು ತನ್ನನ್ನೆ ತಾನು "ಸ್ಥಗಿತ" ಗೊಳಿಸಿಕೊಳ್ಳುತ್ತದೆ. ಅದು ಹೃದಯಕ್ಕಿಂತ ನಿಧಾನಕ್ಕೆ ಸಾಯುತ್ತದೆ. ಯಾವಾಗ ಮೆದುಳೂ ಸಾಯುತ್ತದೊ ಆಗ ವ್ಯಕ್ತಿ "ಕಾನೂನಿನ ಪ್ರಕಾರ ಮೃತ."

ಇಷ್ಟಕ್ಕೂ ವೈದ್ಯಕೀಯ ಪರಿಭಾಷೆಯಲ್ಲಿ ಸಾವು ಎಂದರೆ ಮನುಷ್ಯನ ಜೀವಕೋಶಗಳ ಸಾವು ಎಂದರ್ಥ. ಯಾವಾಗ ಆಮ್ಲಜನಕದ ಕೊರತೆಯಿಂದ ಹೃದಯ ಮತ್ತು ಮಿದುಳು ಪುನಶ್ಚೇತನಗೊಳಿಸಲಾಗದಷ್ಟು ಹಾನಿಗೊಳಗಾಗುತ್ತವೊ ಆಗ ಹೃದಯಾಘಾತಕ್ಕೊಳಗಾದ ಮನುಷ್ಯನನ್ನು ಮತ್ತೆ ಬದುಕಿಸಲು ಸಾಧ್ಯವಿಲ್ಲ. ಈ ಎರಡು ಪ್ರಮುಖ ಅಂಗಗಳನ್ನು ಪುನಶ್ಚೇತನಗೊಳಿಸಲಾಗದ ಪ್ರಕ್ರಿಯೆ ಆಘಾತಕ್ಕೊಳಗಾದ ನಾಲ್ಕೈದು ನಿಮಿಷಗಳಿಗೆ ಆರಂಭವಾಗುತ್ತದೆ. ಹಾಗಾಗಿಯೆ ಆ ಮೊದಲ ಐದು ನಿಮಿಷಗಳು ಜೀವನ್ಮರಣದ ನಡುವಿನ ಅವಧಿ. ಆ ಅವಧಿಯಲ್ಲಿ ಬಾಯಿಯಿಂದ ಉಸಿರು ತುಂಬಿ (CPR – Cardiopulmonary Resuscitation), ಹೃದಯದ ಪುನಶ್ಚೇತನದ ಚಿಕಿತ್ಸೆ ಕೊಡದಿದ್ದರೆ ಬದುಕುವ ಸಾಧ್ಯತೆ ಅತಿ ಕಡಿಮೆ.

ಹೌದಾ? ನಿಜವಾಗಲೂ? ಬೇರೆ ಯಾವ ಸಾಧ್ಯತೆಗಳೂ ಇಲ್ಲವೆ? ಖಂಡಿತವಾಗಿ? ಸರಿಯಾಗಿ ನೋಡೀಪ್ಪ? ನಿಮ್ಮ ಕೈಲಾದದ್ದನ್ನೆಲ್ಲ ಮಾಡಿದ್ದೀರಾ? ಪ್ಲೀಸ್, ಇನ್ನೊಂದು ಸಲ ನೋಡಿ, ಪ್ಲೀಸ್.... ಪ್ರಶ್ನೆಗಳು, ಪ್ರಶ್ನೆಗಳು, ಪ್ರಶ್ನೆಗಳು; ಜಿಜ್ಞಾಸೆ. ಪ್ರಕೃತಿ ಒಡ್ಡುತ್ತ ಬಂದಿರುವ ನಿರಂತರ ಸವಾಲಿಗೆ ಎದುರುತ್ತರ ಕೊಡಲು ಮಾನವನ ನಿರಂತರ ಅಭೀಪ್ಸೆ ಇದು.


ಸರಿ. ವಿಜ್ಞಾನಿಗಳು, ವೈದ್ಯರು ಮತ್ತೆ "ಸತ್ತ" ಮನುಷ್ಯನ ಜೀವಕೋಶಗಳನ್ನು ಗಮನಿಸಲು ಆರಂಭಿಸಿದರು. ಒಮ್ಮೆ ಅವರಿಗೆ ಆಘಾತವಾಯಿತು. ಸತ್ತು ಒಂದು ಗಂಟೆಗೂ ಮೇಲಾಗಿದ್ದ ಶವವೊಂದರ ಜೀವಕೋಶಗಳನ್ನು ಮೈಕ್ರೋಸ್ಕೋಪ್‌ನಲ್ಲಿ ನೋಡಿದ ಡಾ. ಲ್ಯಾನ್ಸ್ ಬೆಕರ್ ಎಂಬುವವರಿಗೆ ತಾವು ಕಂಡಿದ್ದನ್ನು ನಂಬಲಾಗಲಿಲ್ಲ. ಶವದ ಒಳಗಿನ ಜೀವಕೋಶಗಳು ಸತ್ತ ಹಾಗೆ ಕಾಣಿಸುತ್ತಿಲ್ಲ!!! ಡಾ. ಬೆಕರ್ ಅಂದುಕೊಂಡರು: 'ಓಹ್ ಹೊ, ಇಷ್ಟು ದಿನ ನಾವು ಏನೊ ಒಂದು ತಪ್ಪು ಮಾಡಿಬಿಟ್ಟೆವು.'

ಸರಿ ಮತ್ತೆ. ಜೀವಕೋಶಗಳು ಸತ್ತಿಲ್ಲ; ಶವವನ್ನು ಬದುಕಿಸಲು ಇನ್ನೇನು ಸಮಸ್ಯೆ? ಆಮ್ಲಜನಕ ಹರಿಸಿ ನೋಡಿ ಅಂದರು ಸಂಶೋಧಕರು. ಅಲ್ಲಿಯೇ ಮತ್ತೊಂದು ಸಮಸ್ಯೆ ಮತ್ತು ಪರಿಹಾರ ಒಟ್ಟೊಟ್ಟಿಗೆ ದೊರಕಿದವು. ಆಮ್ಲಜನಕದ ಸಪ್ಲೈ ನಿಂತ ಐದು ನಿಮಿಷಗಳ ಒಳಗೆ ಜೀವಕೋಶಗಳಿಗೆ ಮತ್ತೆ ಆಮ್ಲಜನಕ ದೊರಕಿದರೆ ಅವು ಬದುಕುತ್ತವೆ. ಐದು ನಿಮಿಷಗಳ ನಂತರ ದೊರಕಿದರೆ, ಇನ್ನೂ ಜೀವಂತ ಸ್ಥಿತಿಯಲ್ಲಿ ಇರುವ ಅವು ಆಮ್ಲಜನಕ ಸಿಕ್ಕ ತಕ್ಷಣ ಸಾಯುತ್ತವೆ! ಆಮ್ಲಜನಕವಿಲ್ಲದೆ ಅವು ಬದುಕುವುದಿಲ್ಲ; ಐದು ನಿಮಿಷಗಳ ನಂತರ ಕೊಡ ಹೋದರೆ ಒಂದೆ ಒಂದು ಉಸಿರೆಳೆದು ಸಾಯುತ್ತವೆ.

ಹೃದಯಾಘಾತಕ್ಕೊಳಗಾದವರನ್ನು ಎಮರ್ಜೆನ್ಸಿ ರೂಮಿಗೆ ತಂದ ತಕ್ಷಣ ಏನು ಮಾಡುತ್ತಾರೆ? ಬಾಯಿಗೆ ಆಕ್ಸಿಜನ್ ನಳಿಕೆ ಹಾಕುತ್ತಾರೆ; ಎದೆಯ ಮೇಲೆ ವಿದ್ಯುತ್ ಪ್ಯಾಡ್‌ಗಳನ್ನಿಟ್ಟು ಒಂದೆರಡು ಬಾರಿ ಕರೆಂಟ್ ಹರಿಸಿ ಹೃದಯಕ್ಕೆ ಝಳಕ್ ಕೊಡುತ್ತಾರೆ. ಹೃದಯ ಆದಷ್ಟೂ ಜಾಸ್ತಿ ಹೆಚ್ಚಿನ ಆಮ್ಲಜನಕ ತೆಗೆದುಕೊಳ್ಳುವಂತಾಗಲು ಅದಕ್ಕೆ ಅಡ್ರಿನಲಿನ್ ಇಂಜೆಕ್ಷನ್ ಚುಚ್ಚುತ್ತಾರೆ. ಕೆಲವೊಂದು ಸಮಯದಲ್ಲಿ ಹೃದಯ ಕೆಲಸ ಆರಂಭಿಸಿ ನಂತರ ಮೆದುಳೂ ಕೆಲಸ ಆರಂಭಿಸುತ್ತದೆ. ಆದರೆ, ಐದು ನಿಮಿಷಗಳ ನಂತರ ಇದು ಮಾಡಲ್ಪಟ್ಟರೆ ಯಾವ ಜೀವಕೋಶಕ್ಕೆ ಆಮ್ಲಜನಕ ಸಿಗುತ್ತದೊ ಅದು ಸಾಯುತ್ತ ಹೋಗುತ್ತದೆ. ಮೆದುಳಿನ ಜೀವಕೋಶಗಳು ಸಾಯುವ ತನಕ ಮನುಷ್ಯ ಕೋಮಾದಲ್ಲಿರುತ್ತಾನೆ (ಅಪ್ರಜ್ಞಾ ಸ್ಥಿತಿ). ಎಲ್ಲಾ ಸತ್ತ ಮೇಲೆ ಮನುಷ್ಯ both clinically and legally dead.

ಈ ಎಲ್ಲಾ ಹೊಸ ಜ್ಞಾನದಿಂದ ವೈದ್ಯರಿಗೆ ಗೊತ್ತಾಗಿದ್ದು ಏನೆಂದರೆ, ಆಮ್ಲಜನಕದ ಸಪ್ಲೈ ಇಲ್ಲದ ಜೀವಕೋಶದ ಸಾವು ಕ್ಷಣಮಾತ್ರದಲ್ಲಿ ಘಟಿಸುವ ಘಟನೆಯಲ್ಲ; ಅದೊಂದು ಪ್ರಕ್ರಿಯೆ. ಪ್ರಕ್ರಿಯೆಯ ಡೆಫಿನಿಷನ್ ಪ್ರಕಾರ ಯಾವುದೆ ಪ್ರಕ್ರಿಯೆಗೆ ಅಡ್ಡಿ ಉಂಟು ಮಾಡಬಹುದು. ಇದನ್ನೆ ಆಧಾರವಾಗಿ ಇಟ್ಟುಕೊಂಡು ಸಂಶೋಧಕರು ಅನೇಕ ವರ್ಷಗಳ ಕಾಲ ಅನೇಕ ತರಹದ ಪ್ರಯತ್ನಗಳನ್ನು ಪ್ರಯೋಗಗಳನ್ನು ಲಕ್ಷಕ್ಕೂ ಹೆಚ್ಚಿನ ರೋಗಿಗಳ ಮೇಲೆ ಪ್ರಯತ್ನಿಸುತ್ತ ಹೋದರು. ಆದರೆ ಯಾವುವೂ ಪರಿಪೂರ್ಣ ಉತ್ತರ ಕೊಡಲು ಸಾಧ್ಯವಾಗಲಿಲ್ಲ. ಈ ಎಲ್ಲದರ ಮಧ್ಯೆ ಒಂದು ಪ್ರಯತ್ನ ಮಾತ್ರ ಹೆಚ್ಚಿನ ಪ್ರಮಾಣದ ಯಶಸ್ಸನ್ನು ಪಡೆಯುತ್ತಿದ್ದರೂ ಅದು ಅಷ್ಟೇನೂ ಹೈಟೆಕ್ ಉತ್ತರ ಅಲ್ಲವಾದ್ದರಿಂದ ಡಾಕ್ಟರ್‌ಗಳಿಗೆ ಅದನ್ನು ಒಪ್ಪಿಕೊಳ್ಳಲೂ ಕಷ್ಟವಾಗುತ್ತಿತ್ತು. ಮರಣವನ್ನು ಇಷ್ಟು ಜುಜುಬಿ ಆಗಿ ಗೆಲ್ಲಲು ಸಾಧ್ಯವೆ ಎಂಬ ಉದಾಸೀನ ಬಹುಪಾಲು ವೈದ್ಯರುಗಳದು!

ಅದು ನಾವು ತಿಂಡಿ-ತರಕಾರಿಗಳನ್ನು ಫ್ರೆಷ್ ಆಗಿ ಇಡಲು, ಅವುಗಳಲ್ಲಿನ ಜೀವಕೋಶಗಳು ಸಾಯದಂತಿರಲು ರೆಫ್ರಿಜರೇಟರ್ ಬಳಸುತ್ತೀವಲ್ಲ, ಆ ತಿಳುವಳಿಕೆಯಿಂದ ಬಂದದ್ದಾಗಿತ್ತು! ಅದೆ Hypothermia, ಅಂದರೆ ದೇಹದ ಉಷ್ಣತೆ ಸಾಮಾನ್ಯ ಪ್ರಮಾಣಕ್ಕಿಂತ ಕಡಿಮೆ ಇರುವ ಲಘು ಉಷ್ಣತೆಯ ಚಿಕಿತ್ಸೆ. ಹೃದಯಾಘಾತಕ್ಕೊಳಗಾದ ಮನುಷ್ಯನ ದೇಹದ ಉಷ್ಣತೆಯನ್ನು ನಾಲ್ಕೈದು ಡಿಗ್ರಿ, ಅಂದರೆ 93 ಡಿಗ್ರಿ ಫ್ಯಾರೆನ್‍ಹೀಟ್‌ಗೆ ಇಳಿಸುವುದು. 2002 ರಲ್ಲಿ ಯೂರೋಪಿನ ಸಂಶೋಧಕರ ತಂಡವೊಂದು ಈ ತಂತ್ರದಿಂದ ಹೆಚ್ಚಿನ ಪ್ರಮಾಣದ ಯಶಸ್ಸು ಪಡೆದದ್ದನ್ನು ಆಧಾರ ಸಮೇತ ನಿರೂಪಿಸಿತು. ಅಲ್ಲಿಂದೀಚೆಗೆ ಕೆಲವು ಮನುಷ್ಯರು ಸಾವಿನ ದವಡೆಯಿಂದ ಬಿಡಿಸಿಕೊಂಡು ಬರುತ್ತಿದ್ದಾರೆ. ಮಾನವ ಜವರಾಯನ ಮೇಲೆ ಕನಿಷ್ಠ ಕೆಲವು ಕದನಗಳನ್ನಾದರೂ ಗೆಲ್ಲುತ್ತಿದ್ದಾನೆ.

ಈ ಕೋಲ್ಡ್ ಥೆರಪಿಯ ಪ್ರಕಾರ ಮೊದಲಿಗೆ ಈಗ ಮಾಡುತ್ತಿರುವ ಪ್ರಥಮ ಚಿಕಿತ್ಸೆಯನ್ನೆ ಮಾಡಿ ನಿಂತಿರುವ ಹೃದಯದ ಚಲನೆಯನ್ನು ಮತ್ತೆ ಆರಂಭಿಸುತ್ತಾರೆ. ಕೇವಲ ಒಂದು ಗಂಟೆ ಮಾತ್ರ ಆಮ್ಲಜನಕ ಕೊಡುತ್ತಾರೆ. ಆದರೆ ಎಲ್ಲಾ ಜೀವಕೋಶಗಳು ಆಮ್ಲಜನಕ ಸೇವಿಸಿ ಸಾಯದೆ ಇರುವಂತೆ ಮಾಡಲು ಕೂಡಲೆ ರೋಗಿಯ ರಕ್ತನಾಳಕ್ಕೆ ಎರಡು ಲೀಟರ್ ತಣ್ಣನೆಯ ಉಪ್ಪುನೀರನ್ನು ಹರಿಸುತ್ತಾರೆ. ನಂತರ ಎದೆ ಮತ್ತು ತೊಡೆಯ ಭಾಗಕ್ಕೆ ಪ್ಯಾಡ್‌ಗಳನ್ನು ಇಟ್ಟು ಅವಕ್ಕೆ ತಂಪು ನೀರನ್ನು ಹರಿಸುತ್ತಾರೆ. ಹೀಗೆ ಒಟ್ಟಾರೆ ದೇಹದ ಉಷ್ಣವನ್ನು 93 ಡಿಗ್ರಿ ಫ್ಯಾರೆನ್‍ಹೀಟ್‌ಗೆ 24 ಗಂಟೆಗಳ ಕಾಲ ಇಳಿಸುತ್ತಾರೆ. ನಂತರ ನಿಧಾನಕ್ಕೆ ದೇಹದ ಉಷ್ಣತೆಯನ್ನು ಸಾಮಾನ್ಯ ಮಟ್ಟಕ್ಕೆ ತರುತ್ತಾರೆ. ಈ ವಿಧದಲ್ಲಿ ಅನೇಕ ರೋಗಿಗಳನ್ನು ಅವರು ಸತ್ತ ಒಂದು ಗಂಟೆಯ ನಂತರವೂ, ಕೋಮಾದಲ್ಲಿದ್ದ ಹಲವಾರು ದಿನಗಳ ನಂತರವೂ ಬದುಕಿಸಲಾಗುತ್ತಿದೆ.

ಆದರೆ, ಈ ಚಿಕಿತ್ಸೆ ಎಲ್ಲಾ ಕಡೆಯೂ ಲಭ್ಯವಿಲ್ಲ. ಅಮೇರಿಕದಲ್ಲಿಯೂ ಕೇವಲ ಶೇ. 5 ರಷ್ಟು ಆಸ್ಪತ್ರೆಗಳಲ್ಲಿ ಮಾತ್ರ ಇದು ಲಭ್ಯವಿದೆ.

ಲೇಖನದ ವಿಡಿಯೊ ಪ್ರಸ್ತುತಿ: ಭಾಗ - 2

ಇದೇ ಸಮಯದಲ್ಲಿ ಈ ಚಿಕಿತ್ಸೆ ಮೂಲಕ ಬದುಕುಳಿದವರು, ಅಂದರೆ "ಸತ್ತು" ನಂತರ ಮತ್ತೆ ಬದುಕಿದವರು ಹೇಳುತ್ತಿರುವ ಮರಣೋತ್ತರ ಅನುಭವದ ಕತೆಗಳಿವೆಯಲ್ಲ, ಅವುಗಳದೇ ಒಂದು ದೊಡ್ಡ ಕತೆ. ಕೆಲವರು ಆ ಸಮಯದಲ್ಲಿ ತಾವು ಮೇಲಿನಿಂದ ತಮ್ಮ ದೇಹವಿದ್ದ ಕೋಣೆಯಲ್ಲಿ ನಡೆಯುತ್ತಿದ್ದದ್ದನ್ನು, ಅದರ ಪಕ್ಕದ ಕೋಣೆಯಲ್ಲಿ ನಡೆಯುತ್ತಿದ್ದನ್ನು ಕಂಡೆವು ಎನ್ನುತ್ತಿದ್ದಾರೆ; ಅದೊಂದು ಅಪೂರ್ವ ಅನುಭವ ಎನ್ನುತ್ತಿದ್ದಾರೆ. ಇನ್ನು ಕೆಲವರು ನನಗೇನೂ ಜ್ಞಾಪಕವಿಲ್ಲ ಎನ್ನುತ್ತಿದ್ದಾರೆ. ಬರಲಿರುವ ದಿನಗಳು ಸಾವಿನಾಚೆಗಿನ ವಿಶ್ವವನ್ನೆ (ಅದು ಇದ್ದರೆ) ನಮಗೆ ತೆರೆಯಬಹುದು. ಜೀವನದ ಅರ್ಥ ಅಥವ ನಿರರ್ಥಕತೆಯನ್ನು ಮನಗಾಣಿಸಬಹುದು.

ಆದರೆ, ಮುಪ್ಪು ಮತ್ತು ನೈಸರ್ಗಿಕ ಸಾವು ಎನ್ನುವುದೊಂದಿದೆಯಲ್ಲ? ಕದನ ಸೋಲುತ್ತಿರುವ ಜವರಾಯ ಯುದ್ಧ ಸೋಲುವ ಮನಸ್ಥಿತಿಯಲ್ಲಿರುವ ಹಾಗೆ ಕಾಣುತ್ತಿಲ್ಲ. ಅದನ್ನೂ ಗೆಲ್ಲುವ ಮನುಷ್ಯ ಪ್ರಯತ್ನವೂ ನಿಲ್ಲುವಂತೆ ಕಾಣುತ್ತಿಲ್ಲ. ಡಾ. ಬೆಕರ್ ಪ್ರಕಾರ, "ವೈದ್ಯದ ಮೂಲಭೂತವೆ ಮನುಷ್ಯನನ್ನು ಸಾವಿನ ದವಡೆಯಿಂದ ಪಾರು ಮಾಡುವುದು. ನಾನು ಜವರಾಯನೊಡನೆ 20 ವರ್ಷಗಳಿಂದ ಕಾದಾಡುತ್ತಿದ್ದೇನೆ. ಅವನನ್ನು ವ್ಯಕ್ತಿಗತವಾಗಿ ಭೇಟಿಯಾಗುವ ತನಕ ಅದನ್ನು ಮುಂದುವರೆಸುತ್ತೇನೆ."

ಅಲ್ಲಿಯವರೆಗೂ: "ಎಂತಹ ಹೂಳಿನ ಮೇಲೆಯೂ ಕಾಲಕ್ರಮೇಣ ಹುಲ್ಲು ಬೆಳೆಯುತ್ತದೆ; ಎಂತಹ ಸೂಡಿನ ಸುಟ್ಟುನೆಲವನ್ನಾದರೂ ಕಾಲಕ್ರಮೇಣ ಹಸುರು ತಬ್ಬುತ್ತದೆ. ಅಲ್ಲಿ ಹೆಣ ಹೂಳಿದ್ದಾರೆಂಬ ಚಿಹ್ನೆಯೆ ಮಾಸಿಹೋಗುತ್ತದೆ; ಅಲ್ಲಿ ಹೆಣ ಸುಟ್ಟಿದ್ದರು ಎಂಬ ಗುರುತೂ ಕಾಣದಂತೆ ಗರುಕೆ ತಬ್ಬಿ ನಳನಳಿಸಿ ಹಸುರು ನಗೆ ಬೀರುತ್ತದೆ. ಹಾಗೆಯೆ ಬದುಕಿನ ಇತರ ಸದ್ಯೋಮುಖ್ಯ ಸಂಗತಿಗಳು ಬರುಬರುತ್ತಾ ಜನಮನವನ್ನಾಕ್ರಮಿಸಿ,"... (ಕುವೆಂಪು - 'ಮಲೆಗಳಲ್ಲಿ ಮದುಮಗಳು')

(ವಿಕ್ರಾಂತ ಕರ್ನಾಟಕ - ಸೆಪ್ಟೆಂಬರ್ 14, 2007 ರ ಸಂಚಿಕೆಯಲ್ಲಿನ ಬರಹ)

Rating
No votes yet

Comments