ಕನಸುಗಳಿಗೆ ಸಾವಿಲ್ಲ...

ಕನಸುಗಳಿಗೆ ಸಾವಿಲ್ಲ...

ಹೀಗೊಬ್ಬ ಲೇಖಕಿ. ಮುಂಗುರಳಲ್ಲಾಡುವ ಬಿಳಿಗೂದಲ ಜೊಂಪೆಯ ಸರಿಪಡಿಸಿಕೊಂಡು, ನಲವತ್ತರ ನಂತರದ ಚಲೀಸು ಧರಿಸಿ, ಲೇಖನಿ ಹಿಡಿದು ಬರೆಯತೊಡಗಿದರು ತಾತ್ಪರ್ಯ; ಕಾಳಿದಾಸನ ಶಾಕುಂತಲೆಯ ಕಾವ್ಯಕ್ಕೆ.



 


ಶಾಕುಂತಲೆ... ನಯನ ಮನೋಹರ ಬೆಡಗಿ. ದೈವ ಸೃಷ್ಟಿಯೋ, ಪ್ರಕೃತಿಯ ರಕ್ಷೆಯೋ, ಮುನಿವರ್ಯರ ಕೃಪೆಯೋ, ಯಾವುದೆಂದು ಹೇಳಲಿ ಬೆಡಗಿಗೆ ಕಾರಣವ? ಚಂದನದ ಬೊಂಬೆಯೆಂದರೂ ಕಡಿಮೆ, ಹುಣ್ಣಿಮೆಯ ಚಂದ್ರನೆಂದರೂ ಕಡಿಮೆ. ಅಪ್ರತಿಮ ಚೆಲುವೆ... ಅನುರೂಪನಾರು ಎನ್ನುವಾಗಲೇ ದೊರಕಿದ್ದು ದುಶ್ಯಂತ. ಕಟ್ಟು ಮಸ್ತು ದೇಹ, ಪರಾಕ್ರಮ ಸೂಸುವ ಭಂಗಿ, ಜಗವ ಗೆಲ್ಲುವ ವಿಶ್ವಾಸ ಮುಖದಲ್ಲಿ. ಶಾಕುಂತಲೆ ದೃಷ್ಟಿ ಅವನತ್ತ ತಾಕಿದಾಗ ಅವಳಿಗೆ ಕಂಡದ್ದು ನಿಷ್ಕಲ್ಮಶ ಪ್ರೇಮ, ಹಿಡಿದಿಡಲಾಗದ ಮೆಚ್ಚುಗೆ, ತರುಣಿಯ ಬೆಡಗಿನ ಬಲೆಗೆ ಬಿದ್ದು ಬೆರಗುಗೊಂಡ ಭಾವ. ಗಡುಸಾದ ಬಾಹುಗಳಲ್ಲಿ ಬಂದಿಯಾಗೋಣವೆನ್ನಿಸಿದರೂ ಶಾಕುಂತಲೆ ದುಶ್ಯಂತನನು ಒಪ್ಪಲಿಲ್ಲ. ಮುಖ ತಿರುಗಿಸಿದಳು.


 



ಶ್ಯಂತನೆಂದ, "ಹೇಳು ಬೆಡಗಿ, ಏಕೀ ತಿರಸ್ಕಾರ?".


ಶಾಕುಂತಲೆಯೆಂದಳು, "ಹೇಗೆ ತಿಳಿಯಲಿ ನಿಮ್ಮ ಪ್ರೇಮ ಏಕೆಂದು? ನನ್ನ ಬಿಳುಪಿಗೋ? ಸೊಂಪಾದ ಕೇಶ ರಾಶಿಗೋ? ಕೆಂದುಟಿಗಳಿಗೋ? ನೀಳ ನಾಸಿಕಕ್ಕೋ? ಅಪ್ಸರೆಯು ನಾಚುವಂಥದೇಹಕ್ಕೋ?"


ದುಶ್ಯಂತನೆಂದ, "ಕೇವಲಮನಸಿಗೆ, ಈ ಮುಗ್ಧತೆಗೆ, ಈ ಸರಳತೆಗೆ, ಈ ಯೋಚನಾ ಲಹರಿಗೆ, ವಯಸ್ಸು, ಯೌವ್ವನ, ವೃದ್ಧಾಪ್ಯಗಳ ಮೀರುವ ನಿನ್ನಾತ್ಮಕ್ಕೆ. ನಾನಿನ್ನ ಆತ್ಮದ ಜೋಡಿಯಾಗುವೆ, ಮಾನಸಿಕ ಸೌಂದರ್ಯಕ್ಕೆ ಬೆಲೆ ನೀಡುವೆ".


ಶಾಕುಂತಲೆ ನಗುವರಳಿಸಿ ಕೇಳಿದಳು, "ಕನಸೇ?".



ದುಶ್ಯಂತನೆಂದ "ಕನಸುಗಳಿಗೆ ಸಾವಿಲ್ಲ, ನನಸಾಗಲೂಬಹುದು ಎಲ್ಲಾ"


 


ಲೇಖನಿಯ ಬದಿಗಿಟ್ಟು ಲೇಖಕಿ ಎದ್ದು ಅಡಿಗೆ ಮನೆಗೆ ನಡೆದರು. ಕೆಲ ಸಮಯದ ನಂತರ ಹೊಗೆಯಾಡುವ ಕಾಫ಼ಿಯೊಂದಿಗೆ ಪತಿಯ ಬಳಿ ಬಂದರು. ಅರ್ಧಶತಕದ ವಯಸ್ಸಿನ ಪತಿ ಬೊಕ್ಕ ತಲೆಯ ಹಿಂಭಾಗದ ಬೆಳ್ಳಿ ಕೂದಲುಗಳಿಗೆ ಬಣ್ಣ ಮೆತ್ತುತ್ತಿದ್ದರು.


ಲೇಖಕಿ ಕೇಳಿದರು, "ಇದೇನಿದು? ಎಂದೂ ಇಲ್ಲದ್ದು?".


ಪತಿ ಪತ್ನಿ ಬರೆದ ಲೇಖನ ತೋರಿಸುತ್ತ ಹೇಳಿದರು, "ಕನಸುಗಳಿಗೆ ಸಾವಿಲ್ಲ, ನನಸಾಗಲೇಬೇಕೆಲ್ಲ :-)".


ಅವರ ಬಿಳಿ ಮೀಸೆಯಡಿಯಲ್ಲಿ ಅರಳಿದ ನಗುವಿಗೆ ಲೇಖಕಿ ನಾಚಿ ನೀರಾದರು.

Rating
No votes yet

Comments