ಕನ್ನಡಕ್ಕಾಗಿ ಮತ್ತೊಂದು ದಿನ

ಕನ್ನಡಕ್ಕಾಗಿ ಮತ್ತೊಂದು ದಿನ

ಕೆಲವು ದಿನಗಳ ಹಿಂದೆ ಫೋನಾಯಿಸಿದ್ದ [:user/omshivaprakash|ಶಿವಪ್ರಕಾಶ್] ಮಾತಿನ ನಡುವೆ ಕನ್ನಡ ಹಾಗೂ ಲಿನಕ್ಸ್ ಮಟ್ಟಿಗೆ ನಾವುಗಳು ಮಾಡಬೇಕು ಎಂದುಕೊಂಡಿದ್ದ ಕೆಲಸಗಳು ಹಾಗೇ ಉಳಿದುಕೊಂಡದ್ದು ನೆನಪಿಸಿದ್ದ. "ಈ ವಾರ ಒಂದು ದಿನ ಸೀರಿಯಸ್ಸಾಗಿ ಕುಳಿತು ಅವುಗಳಲ್ಲಿ ಕೆಲವನ್ನು ಮಾಡಿ ಮುಗಿಸಬೇಕು ಕಣೋ ಹರಿ" ಎಂದಿದ್ದ. ಅವನು ಹಾಗೆ ಹೇಳಿದ್ದು ನನಗೆ ಎಂದಿನಂತೆಯೇ ಕೇಳಿ ಬಂದಿತ್ತು. ಇತ್ತೀಚೆಗಷ್ಟೆ ಸರಿಯಾದ ಇಂಟರ್ನೆಟ್ ಕನೆಕ್ಷನ್ ಬಂದದ್ದಾಗಿ ಕೆಲಸಗಳ ಬ್ಯಾಕ್ ಲಾಗ್ ಇದ್ದದ್ದರಿಂದ ನಾನೂ ಹೆಚ್ಚು ಏನೂ ಹೇಳದೆ ಸುಮ್ಮನಿದ್ದೆ.

ವಾರ ಬಹುತೇಕ ಕಳೆದು ವಾರಾಂತ್ಯ ಬರುತ್ತಲೇ ಮಧ್ಯಾಹ್ನ ಮತ್ತೆ ಅವ ಫೋನಾಯಿಸಿದಾಗ "ಈಗ ತಾನೆ ಇಂಟರ್ನೆಟ್ ಕನೆಕ್ಷನ್ ಸಿಕ್ತು - ಕೆಲಸವಿದೆ, ನೀನೆ ಮನೆಗೆ ಬಾ. ಇಲ್ಲೇ ಕುಳಿತು ಚರ್ಚೆ ಮಾಡೋಣ" ಎಂದೆ. ಆ ಟ್ರಾಫಿಕ್ ನಲ್ಲಿ ಇಷ್ಟು ದೂರ ಬರಲಿಕ್ಕಿಲ್ಲ ಎಂದು ಎಣಿಸಿದ್ದೆ. ಬೇಸರ ಮಾಡಿಕೊಳ್ಳದೆ, ಅರ್ಧ ಊರು ಹಾದು ನೇರ ಮನೆಗೇ ಬಂದುಬಿಟ್ಟ. ಲಿನಕ್ಸಿನ ಕುರಿತು, ಲಿನಕ್ಸಿನಲ್ಲಿ ಕನ್ನಡ ಉತ್ತಮಪಡಿಸುವ ಕುರಿತು ಅವನಿಗಿರುವ ಆಸಕ್ತಿ ನೋಡಿ ನನಗಾಶ್ಚರ್ಯವಾಯಿತು.

ನಾವುಗಳು ಮಾಡುತ್ತಿದ್ದ ಕೆಲಸಗಳಿಗೆ ನೆಲೆಯಾದ [:http://kannada.sampada.net/|ವೆಬ್ಸೈಟು], [:http://dev.sampada.net|ಹಾಗೂ ವಿಕಿ] ಎರಡೂ ಇತ್ತೀಚೆಗೆ ಹೆಚ್ಚು ಬಳಕೆಯಾಗದೆ ಹೋಗಿದ್ದರಿಂದ ಮೊದಲು ಅದನ್ನು ಸರಿಪಡಿಸಿ, ಚೊಕ್ಕಗೊಳಿಸಿ ಕೆಲವು ಚಿಕ್ಕ ಪುಟ್ಟ ಕೆಲಸಗಳನ್ನು ಮುಗಿಸಬೇಕು ಎಂದು ನಿರ್ಧರಿಸಿದೆವು. ಮಾಡಬೇಕಾದ ಕೆಲಸಗಳ ಒಂದು ದೊಡ್ಡ ಪಟ್ಟಿಯೇ ಇದೆ. ಆ ಪಟ್ಟಿಯನ್ನೂ ಸರಿಯಾಗಿ ಮಾಡದೇ ಹೋದರೆ?
ಏನೇನು ಮಾಡಬೇಕೆಂಬ ಪಟ್ಟಿ ಮಾಡಿಟ್ಟರಾಯಿತು ಎಂದಿನಷ್ಟೇ ಆಸಕ್ತಿಯಿಂದ ಕೆಲಸ ಕೈಗೆತ್ತಿಕೊಳ್ಳುವ [:user/shreekant_mishrikoti_0|ಮಿಶ್ರಿಕೋಟಿಯವರಂತಹ] ಹಲವರು ಲೋಕಲೈಸೇಶನ್ ಕಾರ್ಯ ಎಲ್ಲಿಯವರೆಗೂ ಬಂತು ಎಂದು ಮತ್ತೆ ಮತ್ತೆ ವಿಚಾರಿಸುತ್ತಿರುವಾಗ ಬೇರೆಯ ಎಷ್ಟೇ ಕೆಲಸವಿದ್ದರೂ ಇದನ್ನು ಪುನಶ್ಚೇತನಗೊಳಿಸುವ ಯಾವುದೂ ಕಾರ್ಯವಾಗದಿದ್ದರೆ?

ವಾರಾಂತ್ಯದ ಸಾಕಷ್ಟು ಸಮಯ ವ್ಯಯ ಮಾಡಿ ಹಳೆಯ ಅನುವಾದಗಳನ್ನು ಹಾರ್ಡ್ ಡಿಸ್ಕಿನಲ್ಲಿ ಹುಡುಕಿ ತೆಗೆದು ಡೇಟಬೇಸ್ ಒಂದಕ್ಕೆ ಹಾಕಿಕೊಂಡು "merge" ಮಾಡಿ ಅನುವಾದಗಳನ್ನು ಒಂದು ಹಂತಕ್ಕೆ ತಂದು ಇಟ್ಟದ್ದಾಯಿತು. ಲಿನಕ್ಸಿನಲ್ಲಿ ಕನ್ನಡ ತರುವಲ್ಲಿ ಕನ್ನಡ ಅನುವಾದ ಕಣ್ಣಿಗೆ ಕಾಣುವ ಮುಖ್ಯ ಅಂಶವಾದರೂ, ಸರಿಯಾದ ಲೊಕ್ಯಾಲೆ, ಫಾಂಟು, ನಿಘಂಟು, ಸ್ಪೆಲ್ ಚೆಕರ್ - ಇವೆಲ್ಲ ಬಹುಮುಖ್ಯ ಅಂಶಗಳು. ಅವಲ್ಲದೇ ಭಾಷೆಯನ್ನು ಕಂಪ್ಯೂಟರಿಗೆ ನಿಜವಾಗಿಯೂ ಅಳವಡಿಸುವ ಉಳಿದ advanced ತಂತ್ರಜ್ಞಾನಗಳು.

ಈ ಎಲ್ಲ ಕೆಲಸಗಳನ್ನು ಒಬ್ಬಿಬ್ಬರಿಂದ ಮಾಡಲಾಗದು. ಹಲವರು ಒಟ್ಟಾಗಿ ಯೋಜನೆ ಹಮ್ಮಿಕೊಂಡು ಅಷ್ಟಿಷ್ಟು ಕೆಲಸ ಆಗೀಗ ಮುಗಿಸುತ್ತ ಬಂದರೆ ಮಾತ್ರ ಇದು ಸರಿಯಾಗಿ ಮುಗಿದೀತು. ಇದರಲ್ಲಿ ಭಾಗವಹಿಸಲು ತಂತ್ರಜ್ಞಾನದ ಅರಿವು ಇರಲೇಬೇಕಿಲ್ಲ - ಕನ್ನಡ ತಿಳಿದಿದ್ದರಾಯಿತು. ಹೊಸತೊಂದನ್ನು ಕಲಿಯುವ ಆಸಕ್ತಿಯಿರಬೇಕು ಕನ್ನಡ ನೋಡಿ ನಲಿಯುವ ಮನಸ್ಸಿರಬೇಕು ಅಷ್ಟೆ. ಭಾಗವಹಿಸಲು ಬೇಕಾದ ಸರಕು ಭಾಗಶಃ ಇಲ್ಲಿದೆ:

ಉಳಿದದ್ದು ನಾವುಗಳೇ ಕೆಲಸ ಮಾಡುತ್ತ ತಿಳಿದುಕೊಂಡದ್ದನ್ನು ತುಂಬುತ್ತ ಹೋಗಬೇಕು. ಚಿಕ್ಕ ಪುಟ್ಟ ಕೆಲಸಗಳನ್ನು ಕೈಗೆತ್ತಿಕೊಂಡು ಮುಗಿಸುತ್ತ ಉಳಿದವುಗಳತ್ತ ನಡೆಯಬೇಕು.

ಆಸಕ್ತರೆಲ್ಲರೂ ಭಾಗವಹಿಸುತ್ತೀರ ತಾನೆ?

(ಗಮನಿಸಿ: ವಿಕಿಗೆ ಲಾಗಿನ್ ಬೇರೆ... ಸಂಪದದ ಐಡಿ ಅಲ್ಲಿ ಕೆಲಸ ಮಾಡುವುದಿಲ್ಲ. ಅಲ್ಲಿ ಸದ್ಯಕ್ಕೆ ಎಡಿಟ್ ಮಾಡಲು ಹೊಸತಾಗಿ ನೋಂದಾಯಿಸಿಕೊಳ್ಳಬೇಕಾಗುತ್ತದೆ).

Rating
No votes yet