ಕನ್ನಡದ ಅವಸಾನ, ಇದು ಭ್ರಮೆಯೇ?

ಕನ್ನಡದ ಅವಸಾನ, ಇದು ಭ್ರಮೆಯೇ?

ತನ್ನ ಅನುಪಮ ದ್ರಾವಿಡ ಭಾಷಾಶೈಲಿಯಿಂದ ನಾಡಿನವರಿಗೆ ಅತಿ ಪ್ರಿಯವಾಗಿ ಹತ್ತಿರವಾಗುವ ಕನ್ನಡ ಭಾಷೆಯ ಹುಟ್ಟು  ಚರಿತ್ರಾಕಾರರ ಬುದ್ಧಿಗೆ ನಿಲುಕದ ಕಗ್ಗಂಟು.  ಎಂದು ನಮ್ಮ ನೆಚ್ಚಿನ ಕನ್ನಡ ಹುಟ್ಟಿತು? ಎಂಬ ಪ್ರಶ್ನೆ ನಮ್ಮನ್ನು ಒಮ್ಮೆಯಾದರೂ ಕಾಡದೇ ಇಲ್ಲ. ಭಾಷೆಯೆಂಬ ನದಿಯ ಗತಿ ಬದಲಾವಣೆ ನಿರಂತರವಾದುದು. ಕೇವಲ ಕಯ್ಯಿಬಾಯಿ ಸಂಜ್ಞೆಯಿಂದ ಶುರುವಾದ ಸಂವಹನವು ಮೌಖಿಕವಾಗಿ ವಿವಿಧ ಪ್ರದೇಶಗಳಲ್ಲಿ ತನ್ನದೆ ಆದ ಸ್ವರೂಪವನ್ನು ಗಳಿಸಿಕೊಂಡದ್ದು ಅದ್ಭುತವೇ ಸರಿ. ಭಾಷೆಯೆಂಬುದು ನಾಗರೀಕತೆಗಿಂತಲೂ ಮುನ್ನವೇ ಮನುಷ್ಯನಿಂದಾದ ಅದ್ಭುತ ಆವಿಷ್ಕಾರವೆಂದರೂ ತಪ್ಪಾಗದು. ಆದರೂ ತನ್ನ ಭೌಗೋಳಿಕತೆಗನುಗುಣವಾಗಿ, ಜೀವನದ ಹೋರಾಟದ ಫಲವಾಗಿ, ಸಮುದಾಯವು ತನ್ನದೇ ಆದ ತನವನ್ನು ನಿರಂತರವಾಗಿ ಪೋಷಿಸಿದ್ದು ನಮ್ಮತನವನ್ನು ಸಮಗ್ರವಾಗಿ ಭಿನ್ನವಾಗಿರಿಸಿಕೊಳ್ಳಲು ಸಹಾಯಕವಾಗಿದೆ. ಇಂದಿಗೂ ಕನ್ನಡಿಗರೆಂದರೆ ಕೇವಲ ಕನ್ನಡ ಮಾತನಾಡುವವರಲ್ಲ. ಬದಲಾಗಿ ಕನ್ನಡತನವನ್ನು ಮೈಗೂಡಿಸಿಕೊಂಡವರೇ ನಿಜವಾದ ಕನ್ನಡಿಗರು.  'ಕನ್ನಡವೆನೆ ಕಿವಿ ನಿಮಿರುವುದು' ಎಂಬ ಕವಿವಾಣಿಯೇ ನಿಜವಾದ ಕನ್ನಡಿಗನ ಸ್ವಭಾವವನ್ನು  ಸ್ಪಷ್ಟಪಡಿಸುತ್ತದೆ. ನಾವು  ಪರನಾಡಿನಲ್ಲಿದ್ದಾಗ್ಯೂ ಈ ಅನುಭವ ನಮ್ಮಲ್ಲಾಗದಿದ್ದಲ್ಲಿ ನಾವು ಕನ್ನಡತನವನ್ನು ಮೈಗೂಡಿಸಿಕೊಂಡಿಲ್ಲವೆಂದೇ ಅರ್ಥ.  ಕನ್ನಡವನ್ನು ಏಕೆ ನಾವು ಇಷ್ಟಪಡಬೇಕು, ಅಂತಾದ್ದು ಅದರಲ್ಲೇನಿದೆ ? ಉತ್ತರವೂ ಸರಳವಾಗಿದೆ. ನಮಗಿರುವುದು ಒಂದೇ ಮಾತೃ ಭಾಷೆ, ಕನ್ನಡ ನಮ್ಮದು. ಮಾತೃಭಾಷೆಯ ಅರ್ಥ ಮನೆಯಲ್ಲಿ ಆಡುವ ನುಡಿಯೆಂದಲ್ಲ. ನಾವು ಮೆಚ್ಚಿ ನಮ್ಮ ಜನರೊಡನೆ ಆಡುವ ನುಡಿ, ನಮ್ಮನ್ನು ಭೌಗೋಳಿಕವಾಗಿ ಕಟ್ಟು ಹಾಕಿದ ನುಡಿ, ನಮ್ಮೆಲ್ಲಾ ಭಾವವನ್ನು ಸಮಗ್ರವಾಗಿ, ತೃಪ್ತಿಕರವಾಗಿ ಅಭಿವ್ಯಕ್ತಿಗೊಳಿಸಬಹುದಾದ ಭಾಷೆಯೆಂದರ್ಥ. ಕನ್ನಡದ ಪೋಷಣೆ ಕೇವಲ ಸ್ಥಳಿಕ ಜನಪದದಿಂದಾದುದಲ್ಲ. ಬದಲಾಗಿ ಅದಾಗಲೇ ಪ್ರವರ್ಧಮಾನಕ್ಕೆ ಬಂದು ಉಚ್ಛ್ರಾಯ ಸ್ಥಿತಿಯಲ್ಲಿದ್ದ  ಸಂಸ್ಕೃತವೂ ಕನ್ನಡವನ್ನು ಪೋಷಿಸಿದೆ, ಅಷ್ಟೇ ಅಲ್ಲದೆ ಒಂದೇ ಕವಲಿನ ತಮಿಳಿಗಿಂತಲೂ ಕೊಂಚ ಭಿನ್ನವಾಗಿಸಿದೆ. ನಮ್ಮ ಚರಿತ್ರೆಯ ಪುಟಗಳನ್ನು ಮೆಲುಕು ಹಾಕುತ್ತಾ ಸಾಗಿದಲ್ಲಿ,  ನಮಗೆ ಗಡಿಪ್ರಾಯವಾಗಿ ನಿಲ್ಲುವುದು ಹಲ್ಮಿಡಿ ಶಾಸನವಷ್ಟೇ(ಕ್ರಿ. ಶ. ೪೫೦), ಅದಕ್ಕಿಂತಲೂ ಹಿಂದಿನ ಕನ್ನಡದ ಬರವಣಿಗೆಗಳು ಕಾಣಿಸಿಕೊಳ್ಳುವುದಿಲ್ಲ. ಹಾಗೆಂದು ಕನ್ನಡವಿದ್ದಿರಲಾರದೇ?. ಅಥವಾ ಸಾಹಿತ್ಯಕ್ಕೆ ಹೇಳಿಮಾಡಿಸಿದ ಭಾಷೆ ಅದಾಗಿರಲಿಲ್ಲವೇ? ಎಂಬ ಪ್ರಶ್ನೆ ಮೂಡುವುದು ಸಹಜವೇ.  ಹಲ್ಮಿಡಿ ಶಾಸನವಾದರೂ ಸಂಸ್ಕೃತ ಭೂಯಿಷ್ಟ ಬರವಣಿಗೆಯುಳ್ಳದ್ದು. ಆದರೂ ಶಾಸನದ  ಕೊನೆಯ ಸಾಲುಗಳ ಶಬ್ದಗಳು ನಮಗೆ ನಮ್ಮ ಭಾಷೆಯ ಮೇಲೆ ಭರವಸೆಯನ್ನು ಮೂಡಿಸುತ್ತವೆ.

ಕ್ರಿ.ಪೂ. ೩೦೦ ರ ಅವಧಿಯ ಸಾಮ್ರಾಟ ಅಶೋಕನ ಶಾಸನವೊಂದರಲ್ಲಿ ಕಂಡು ಬರುವ 'ಇಸಿಲ' ಪದ ಕನ್ನಡದ್ದಿರಬಹುದೆಂದು ಡಿ. ಎಲ್ ನರಸಿಂಹಾಚಾರ್ ಅವರು ಅಭಿಪ್ರಾಯಪಡುತ್ತಾರೆ.  ಕ್ರಿ. ಶ.  ಐದನೇ ಶತಮಾನದಿಂದ ಸುಮಾರು ಹತ್ತನೆಯ ಶತಮಾನದವರೆಗೂ ಕಂಡು ಬರುವ ಶಾಸನಗಳು ಹಲವಿದ್ದರೂ, ಕನ್ನಡದ ಮೇಲಿನ ಸಂಸ್ಕೃತದ ಪ್ರಭಾವ ಎಷ್ಟು ಗಾಢವಾಗಿತ್ತೆಂದು ಊಹಿಸಬಹುದು.  ಸುಮಾರು ಏಳನೇ ಶತಮಾನದ ಕಪ್ಪೆ ಅರಭಟ್ಟನ ಶಾಸನವು ಮೊದಲ ಲಿಖಿತ ತ್ರಿಪದಿಯುಳ್ಳ ಶಾಸನವಾಗಿದೆ. ಸುಮಾರು ಒಂಭತ್ತನೇ ಶತಮಾನದಲ್ಲಿ ರಚಿತವಾದ 'ಕವಿರಾಜ ಮಾರ್ಗ' ದ ಗ್ರಂಥಕರ್ತೃವಿನ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಆದರೂ ಇದು ಅಂದಿನ ಕನ್ನಡನಾಡಿನ ಬಗ್ಗೆ ಸ್ವಲ್ಪಮಟ್ಟಿಗಿನ ಬೆಳಕುಚೆಲ್ಲುವ ಮೊದಲ ಗ್ರಂಥವಾಗಿದೆ. ಕನ್ನಡ ನಾಡಿನ ಭೌಗೋಳಿಕ ಪ್ರದೇಶವನ್ನು ಕುರಿತು  ಗ್ರಂಥಕರ್ತೃ  ಈ ಕೆಳಗಿನಂತೆ ಹೇಳಿದ್ದಾನೆ,

 "ಕಾವೇರಿಯಿಂದಮಾಗೋ-
ದಾವರಿವರಮಿರ್ಪ ನಾಡದಾ ಕನ್ನಡದೊಳ್
ಭಾವಿಸಿದ ಜನಪದ ವಸು-
ಧಾವಲಯ ವಿಲೀನ ವಿಶದ ವಿಷಯ ವಿಶೇಷಂ"

ಕಾವೇರಿಯಿಂದಂ ಆ ಗೋದಾವರಿವರಂ ಇರ್ಪ ನಾಡದು, ಆ ಕನ್ನಡದೊಳ್ ಭಾವಿಸಿದ ಜನಪದ, ವಸುಧಾವಲಯ ವಿಲೀನ ವಿಶದ ವಿಷಯ ವಿಶೇಷಂ.
ಇಲ್ಲಿ ಕನ್ನಡವೆಂಬುದು ಭಾಷೆಯಲ್ಲ,  ದಕ್ಷಿಣದ ಕಾವೇರಿ ನದಿಯಿಂದ ಉತ್ತರದ ಗೋದಾವರಿ ನದಿಯವರೆಗೂ ಹಬ್ಬಿದ್ದ  ನಾಡು.  ಅಂತಹ ನಾಡಿನಲ್ಲಿ ಗಮನಿಸ ಬಹುದಾದಂತಹ ಜನಪದವು, ಭೂಮಿಯಲ್ಲಿ ತಾನೊಂದಾಗಿದ್ದರೂ, ತನ್ನದೆ ಆದ ವಸ್ತು ವಿಷಯದಿಂದ ವಿಶೇಷವಾಗಿತ್ತು".

ಯಾವರೀತಿ ಅದು ವಿಶೇಷವಾಗಿತ್ತು ಎಂಬುದನ್ನು ಕವಿ ಮತ್ತಷ್ಟು ಮಾಹಿತಿಯೊಂದಿಗೆ ಕೊಂಚ ಅಭಿಮಾನದಿಂದಲೇ ಹೇಳುತ್ತಾನೆ.

"ಪದನಱಿದುನುಡಿಯಲುಂ ನುಡಿ
ದುದನರಿದಾರಯುಲುಮಾರ್ಪವರ್ ನಾಡವರ್ಗಳ್
ಚದುರರ್ ನಿಜದಿಂ ಕುರಿತೋ-
ದದೆಯುಂ ಕಾವ್ಯಪ್ರಯೋಗ ಪರಿಣತ ಮತಿಗಳ್"

ಪದನಱಿದು ನುಡಿಯಲುಂ  ನುಡಿದುದನ್ ಅರಿದು ಆರಯಲುಂ ಆರ್ಪರ್ ನಾಡವರ್ಗಳ್. ಚತುರರ್ ನಿಜದಿಂ ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತ ಮತಿಗಳ್

ಪದವನ್ನು ಅರಿತು ನುಡಿಯಲೂ, ನುಡಿದುದ್ದನ್ನು ಅರ್ಥಮಾಡಿಕೊಳ್ಳಲೂ, ಸಮರ್ಥರು(ಆರ್ಪರ್) ನಾಡಿನ ಜನರು.  ನಿಜವಾಗಿಯೂ ಚತುರರು, ಕುರಿತು ಓದದೆಯೂ ಕಾವ್ಯರಚನಾ ಸಾಮರ್ಥ್ಯವನ್ನುಳ್ಳವರು.

ಆದರೆ, ಇಲ್ಲಿ ಕವಿ ಕೇವಲ ಕನ್ನಡ ಭಾಷೆಯ ಬಗ್ಗೆಯಷ್ಟೇ ಹೇಳಿರುವನೇ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಅಂದಿನ ಕನ್ನಡವಾದರೂ ಹೇಗಿತ್ತು ಎಂದು ಅರ್ಥ ಮಾಡಿಕೊಳ್ಳಬೇಕು. ಕಾವೇರಿಯಿಂದ ಗೋದಾವರಿವರೆಗೆ ಹಬ್ಬಿದ್ದ ನಾಡಿನಲ್ಲಿ, ಭೌಗೋಳಿಕವಾಗಿ ಕನ್ನಡ ಭಾಷಾ ಸ್ವರೂಪವೂ ಭಿನ್ನವಾಗಿತ್ತು. ಈ ಪ್ರದೇಶದ ಮಧ್ಯ ಭಾಗದಲ್ಲಿ ತಿರುಳುಗನ್ನಡವೆಂದು ಕರೆಯಲ್ಪಡುವ ಅಚ್ಚಕನ್ನಡದ, ಜನಪದದ ಮೆರುಗಿನ ಭಾಷೆ ಬಳಕೆಯಲ್ಲಿತ್ತು ಎಂದು ಚರಿತ್ರಾಕಾರರು ಹೇಳುತ್ತಾರೆ. ಅಲ್ಲದೇ ರನ್ನ ಕವಿಯೂ ಈ ಬಗ್ಗೆ ಹೇಳಿದ್ದಾನೆ. ಹನ್ನೊಂದನೇ ಶತಮಾನದ ಜೇಡರದಾಸಿಮಯ್ಯನ ವಚನಗಳು ಇಂದೋ ನಿನ್ನೆಯೋ ಬರೆದ ಉಕ್ತಿಗಳಂತೆ ಕಾಣಿಸಿಕೊಳ್ಳುತ್ತವೆ. ಈತನ ತರುವಾಯದ ನಾನೂರುವರ್ಷ ಈಚೆಗಿನ ಕವಿಯಾದ ಲಕ್ಷ್ಮೀಶನ ಕಾವ್ಯ ಭಾಷೆಯು ಶತಶತಮಾನಗಳಷ್ಟು ಹಳೆಯದೆಂಬಂತೆ ಕಂಡು ಬರುತ್ತವೆ. ಅವರ ಭಾಷಾವಿಭಿನ್ನತೆಗೆ ಅವರು ಆಯ್ದುಕೊಂಡ ಭಿನ್ನವಾದ ಕನ್ನಡವೇ ಕಾರಣ. ತಿರುಳುಗನ್ನಡ ಎಂಬುದು ಜನಪದದ ಸೊಗಡಿರುವ ಕನ್ನಡವಾಗಿದ್ದು, ಕನ್ನಡದ ಮೂಲ ನಂಟನ್ನು ಬಹಳಕಾಲದವರೆಗೂ  ಉಳಿಸಿಕೊಂಡು ಬಂದ ಕನ್ನಡವೆಂದು ಪರಿಗಣಿಸಲಾಗಿದೆ.  ಕೇವಲ ತಿರುಳುಗನ್ನಡವಲ್ಲದೇ, ಇನ್ನೂ ಹಲವಾರು ಕನ್ನಡದ ಭಾಷಾ ಶಾಖೆಗಳು ಅಂದು ಪ್ರಚುರದಲ್ಲಿದ್ದಿರಬೇಕು.  ಆ ಕಾರಣಾಕ್ಕಾಗಿಯೇ ಕವಿರಾಜಮಾರ್ಗ ಕರ್ತೃ  ಈ ಕೆಳಗಿನಂತೆ ಹೇಳುತ್ತಾನೆ,

"ಕುರಿತವರಲ್ಲದೆ ಮತ್ತಂ-
ಪೆರರುಂ ತಂತಮ್ಮನುಡಿಯೊಳೆಲ್ಲರ್ ಜಾಣರ್"

ಕುರಿತವರಲ್ಲದೆ (ಅಭ್ಯಾಸ ಮಾಡಿದವರಲ್ಲದೆ) ಮತ್ತಂ(ಉಳಿದ) ಪೆರರುಂ(ಬೇರೆಯವರೂ) ತಮ್ಮ ತಮ್ಮ ನುಡಿಯೊಳ್, ಎಲ್ಲರ್ ಜಾಣರಾಗಿದ್ದರು.  ಇಲ್ಲಿ ನುಡಿಯೆಂಬುದನ್ನು ಭಾಷೆಯೆಂದೇ ಅರ್ಥೈಸಬೇಕಾಗಿಲ್ಲವಾದರೂ  ಬೇರೆಬೇರೆ ಕನ್ನಡದ ಶೈಲಿ ಎಂದು ಅರಿತುಕೊಳ್ಳಬಹುದು.

ರನ್ನನೂ ತನ್ನ (ಮಹಾ)ಕಾವ್ಯ ಗದಾಯುದ್ಧದಲ್ಲಿ  ತಾನು "ಎರಡರುನೂಱಱ" ತಿರುಳು ಕನ್ನಡವನ್ನು ಬಳಸುತ್ತಿದ್ದೇನೆಂದು ಹೇಳಿಕೊಂಡಿದ್ದಾನೆ. ತಿರುಳುಗನ್ನಡದ ಹರವು ಪುಲಿಗೆರೆ, ಕೋಪಣ(ಕೊಪ್ಪಳ), ಒಕ್ಕುಂದ ಹಾಗೂ ಕಿಸುವೊಳಲು(ಪಟ್ಟದಕಲ್ಲು)ಗಳೆಂಬ ವ್ಯಾಪ್ತಿಯಲ್ಲಿ ಹರಡಿತ್ತು ಎಂಬುದನ್ನು ಚರಿತ್ರಕಾರರು ಹೇಳುತ್ತಾರೆ. ಆ ಕನ್ನಡವು ಉತ್ಕೃಷ್ಟಕನ್ನಡವಾಗಿದ್ದು ತನ್ನ ಬಿಗಿತನದಿಂದ ಇತರೆ ದ್ರಾವಿಡ ಭಾಷೆಗಳಿಗೆ ಹತ್ತಿರವಾದ ಸಂಬಂಧವನ್ನು  ಹೊಂದಿತ್ತು ಎಂಬುದು ಹಳಗನ್ನಡದ ಕೃತಿಗಳಿಂದ ತಿಳಿದು ಬರುತ್ತದೆ.

ಕನ್ನಡಮೆರಡಱುನೂಱಱ
ಕನ್ನಡಮಾತಿರುಳ ಕನ್ನಡಂ ಮಧುರಮ್ಯೋ-
ತ್ಪನ್ನಂ ಸಂಸ್ಕೃತಮೆನೆ ಸಂ-
ಪನ್ನಂ ನೆಗೞ್ದುಭಯಕವಿತೆಯೊಳ್ ಕವಿ ರನ್ನಂ

ಕನ್ನಡಂ ಎರಡಱುನೂಱಱ ಕನ್ನಡಂ, ಆ ತಿರುಳ ಕನ್ನಡಂ, ಮಧು ರಮ್ಯೋತ್ಪನ್ನ ಸಂಸ್ಕೃತಂ ಎನೆ, ಸಂಪನ್ನಂ ನೆಗೞ್ದ ಉಭಯಕವಿತೆಯೊಳ್ ಕವಿ  ರನ್ನಂ.

ಬಹುಶಃ ಸಂಸ್ಕೃತದ ಛಂದೋಬಂಧಗಳಿಗೆ ಹೇಳಿಮಾಡಿಸಿದ ಕನ್ನಡದ ಶೈಲಿ ಅದಾಗಿರಬೇಕು. ಈ ಕಾರಣದಿಂದಲೇ ಹಳಗನ್ನಡದ ಬಹುತೇಕ ಕವಿಗಳು ಈ ತಿರುಳುಗನ್ನಡದಲ್ಲಿಯೇ ತಮ್ಮ ಕಾವ್ಯಪ್ರತಿಭೆಯನ್ನು ವ್ಯಕ್ತಪಡಿಸಿದ್ದಾರೆ. ಅದೂ ಅಲ್ಲದೇ ಕೇವಲ ದೇಸೀಯ ನುಡಿಗಳಲ್ಲಿ ಕಾವ್ಯರಚನೆಮಾಡಿ ವಿಬುಧಜನರನ್ನು  ಮೆಚ್ಚುಗೆ ಪಡಿಸಲಾಗದೇನೋ ಎಂಬ ಭ್ರಮೆಯಲ್ಲಿ, ಅಥವಾ ತಮ್ಮ ಸಂಸ್ಕೃತದ ಪಾಂಡಿತ್ಯವನ್ನೂ ಜೊತೆಗೆ ತೋರಿಸಿ ಉಭಯಕವಿಗಳೆಂಬ ಹೆಸರುಗಳಿಸಬೇಕೆಂಬ ಉದ್ದೇಶದಿಂದಲೋ ಈ ತಿರುಳುಗನ್ನಡ ಹಳಗನ್ನಡದ ಕವಿಗಳಲ್ಲಿ ವಿಶೇಷವಾಗಿ ಆಕರ್ಷಣೀಯವಾಗಿರಬಹುದು. ಆದರೂ ಅದರ ಸೊಭಗನ್ನು ತಳ್ಳಿಹಾಕುವ ಹಾಗಿಲ್ಲ. ರನ್ನ ಹೇಳಿದ 'ಎರಡಱುನೂಱಱ' ಕನ್ನಡಕ್ಕೆ ಆ ಹೆಸರು ಬಂದದ್ದಾದರೂ ಹೇಗೆ?. ಇದರ ಹಿಂದಿನ ಕೌತುಕವನ್ನು ಚರಿತ್ರಾಕಾರರು ಈ ರೀತಿಯಾಗಿ ಒಡೆದಿದ್ದಾರೆ.  ಕನ್ನಡದ ಶಾಸನಗಳಲ್ಲಿ ವಿಶೇಷವಾಗಿ ಕಂಡುಬರುವ ಲಕ್ಷಣವೆಂದರೆ ಶಾಸನಗಳಲ್ಲಿ ಸ್ಥಳನಾಮದ ಜೊತೆಗೆ ಹೊಂದಿಕೊಂಡಂತೆ ಕಂಡುಬರುವ ಅಂಕಿಗಳು. ಉದಾಹರಣೆಗೆ  ಪುಲಿಗೆರೆ - ೩೦೦, ಬೆಳ್ವೊಲ- ೩೦೦, ಬನವಾಸಿ - ೧೨೦೦೦ ಇತರೆ.  ಪುಲಿಗೆರೆ ಹಾಗೂ ಬೆಳ್ವೊಲದ ಕನ್ನಡವೇ ಈ ಎರಡಱುನೂಱ(ಎರಡು, ಆರುನೂರು)ರ ಕನ್ನಡ. ಇದೇ ತಿರುಳುಗನ್ನಡ. ಈ ಸಂಖ್ಯೆಗಳು ವಾಸ್ತವವಾಗಿ ಏನು ಸೂಚಿಸುತ್ತವೆಂದು ಚರಿತ್ರಾಕಾರರಿಗೂ ತಿಳಿಯದು. ಕೆಲವರು ಇವು ಪ್ರದೇಶದ ಒಟ್ಟು ಆದಾಯದ  ವಿವರವನ್ನು ನೀಡುತ್ತವೆಂದಿರುವರಾದರೂ ಅದರ ಬಗ್ಗೆ ಸರಿಯಾದ ಮಾಹಿತಿಯಿಲ್ಲ. ಇವು ಜನಸಂಖ್ಯೆಯನ್ನಂತೂ ತಿಳಿಸಲಾರವು ಕಾರಣ ಅದು ಸ್ಥಿರವದುದಲ್ಲ.

ದೊರೆತಿರುವ ಪ್ರಾಚೀನ ದ್ರಾವಿಡ ಕೃತಿಗಳ ಅಂಕೆಸಂಖ್ಯೆಗಳಲ್ಲಿ ಕನ್ನಡದ್ದೇ ಮೇಲುಗೈ.  ಸುಮಾರು ನಾಲ್ಕು ನೂರಕ್ಕೂ ಮಿಕ್ಕು ಸಿಕ್ಕ ಈ ಕೃತಿಗಳ ಸಂಖ್ಯೆ ಕನ್ನಡ ಸಾಹಿತ್ಯವು ಎಷ್ಟು ಉತ್ಕೃಷ್ಟವಾಗಿ ಮೆರೆದಿತ್ತು ಎಂಬುದನ್ನು ಧೃಡಪಡಿಸುತ್ತವೆ. ಕುಮಾರವ್ಯಾಸನ ಭಾರತವು  ಎಷ್ಟು ಅನುಪಮವಾದ ಸಾಹಿತ್ಯಿಕ ವಿಷಯಗಳನ್ನು ಒಳಗೊಂಡಿದೆಯೆಂಬುದು ಒಮ್ಮೆ ಒಳನೊಕ್ಕು ನೋಡಿದರೆ ವಿಸ್ತಾರವಾಗಿ ತಿಳಿಯುತ್ತದೆ.

ಇದು ಕೇವಲ ಹಿಂದಿದ್ದ ಪರಿಸ್ಥಿತಿಯೇ?.. ಖಂಡಿತ ಇಲ್ಲಾ,  ಕನ್ನಡವನ್ನು ಉಳಿಸಬೇಕೆಂಬ ಧೋರಣೆಯನ್ನು ಕೇಳಿದಾಗ ಮನಸ್ಸಿಗೆ ಹೊಳೆಯುವ ಏಕೈಕ ಯೋಚನೆಯೆಂದರೆ, ನಿಜವಾಗಿಯೂ ಉಳಿಸಲು ಪಣತೊಡುವಷ್ಟು ಕನ್ನಡ ನಷ್ಟ ಹೊಂದಿದೆಯೇ? ಎಂಬುದು.  ಇಂದಿಗೂ ಕನ್ನಡ ಭಾಷೆಗೆ ಸಿಕ್ಕಷ್ಟು ಜ್ಞಾನಪೀಠ ಪುರಸ್ಕಾರಗಳು ಯಾವ ರಾಜ್ಯಕ್ಕೂ ದೊರೆತಿಲ್ಲ. ಇಂದಿಗೂ ಕನ್ನಡ ನಾಡಿನಲ್ಲಿ ಪ್ರಕಟಗೊಳ್ಳುವ ಪುಸ್ತಕಗಳಷ್ಟು ಮತ್ತಾವ ಭಾಷೆಯಲ್ಲಿಯೂ ಪ್ರಕಟಗೊಳ್ಳುವುದಿಲ್ಲ. ನಮ್ಮಲ್ಲಿ ಇಚ್ಛೆ ಪಟ್ಟು ಕಾದಂಬರಿಗಳನ್ನು ಓದುವ  ಯುವಜನತೆ ಮತ್ತಾವ ಭಾಷೆಯಲ್ಲಿಯೂ ಸಿಗಲಾರರು.  ಅಷ್ಟೇ ಏಕೆ,  ಕನ್ನಡವನ್ನು ಹೆಮ್ಮೆಯಿಂದ ನಮ್ಮದು ಎಂಬ ಧೋರಣೆಯನ್ನು ಘೋಷಣೆಯ ಮೂಲಕ ಕೂಗಿ ಸಾರಿ ಹೇಳುವ ಜನತೆ ಮತ್ತೆಲ್ಲೂ ಇಲ್ಲ.  ಇನ್ನೂ ಒಂದು ವಿಷಯವೆಂದರೆ ಕನ್ನಡ ಕನ್ನಡತನವನ್ನು ಕಳೆದು ಕೊಳ್ಳುತ್ತಿದೆಯೆಂಬ ಅವಾಸ್ತವ ಸ್ಥಿತಿ ಎದುರಾದಾಗಲೆಲ್ಲ ಎದೆಸೆಟೆಸಿ ನಾನೊಬ್ಬ ಕನ್ನಡಿಗ ಎಂಬ ಅಭಿಮಾನತಳೆದ ಕನ್ನಡಿಗರ ಸಂಖ್ಯೆಗೆ ಕೊರತೆಯೇನಿಲ್ಲ.

ನಮ್ಮ ಹಳಗನ್ನಡದ ವೈಭವವನ್ನು ಮತ್ತಷ್ಟು ಉಳಿಸಲು ಪಣತೊಟ್ಟ ಹಲವು ಗುಂಪುಗಳು ನಮ್ಮೊಡನಿವೆ. ಅಂತಹ ಸಂಘಟನೆಗಳಲ್ಲಿ ಶತಾವಧಾನಿ ಗಣೇಶರ ಸಾರಥ್ಯದಲ್ಲಿ ಚಟುವಟಿಕೆಯಲ್ಲಿರುವ  'ಪದ್ಯಪಾನ' ವೆಂಬುದೂ ಒಂದು. ಇಂದಿನ ಪೀಳಿಗೆಗೆ ಕನ್ನಡದ ಹಳತನ್ನು ಪರಿಚಯಿಸುವ ಹಾಗೂ ಹಳಗನ್ನಡದಲ್ಲಿ ಕವಿತೆಗಳನ್ನು ಸೃಜಿಸಲು ಇಚ್ಛಿಸುವವರಿಗೆ ವಿಶೇಷವಾಗಿ ಮಾರ್ಗದರ್ಶನ ಹಾಗೂ ಬುನಾದಿಯನ್ನು ಈ ವೆಬ್ಸೈಟ್ ಕಲ್ಪಿಸಿಕೊಡುತ್ತದೆ.  ಹೊನಲು ಎಂಬ ಸಂಘಟನೆಯೊಂದು ಕನ್ನಡದಲ್ಲಿಯೇ ಪದನಿರ್ಮಾಣ ಮಾಡುವುದರ ಬಗ್ಗೆ ಮಾಹಿತಿಯನ್ನು ಕೊಡುತ್ತದೆ. ಅಷ್ಟೇ ಅಲ್ಲದೆ ಡಿ. ಎನ್ ಶಙ್ಕರಭಟ್ಟರ ಭಾಷೆಯ ಕುರಿತಾದ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಹೊಣೆಯನ್ನು ಹೊತ್ತಿದ್ದು ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.

ಇಷ್ಟಿದ್ದರೂ ಕನ್ನಡ ಬಡವಾಗುತ್ತಿದೆ ಎಂಬ ಅಳುಕು ನಮ್ಮನ್ನು ಇನ್ನೂ ಕಾಡುತ್ತಿದೆಯೇ? ಹಾಗಿದ್ದಲ್ಲಿ ಅದು ನಮ್ಮ ಭ್ರಮೆಯಷ್ಟೇ!.
 

 

Rating
Average: 5 (2 votes)

Comments