ಕನ್ನಡಮ್ಮನುತ್ಸವ

ಕನ್ನಡಮ್ಮನುತ್ಸವ

ಭಾರತಿಯ ಮಗಳಿಗಿಂದು ಶುಭ ಪರ್ವದ ಉತ್ಸವ
ಕನ್ನಡದ ಮನಸುಗಳಲಿ ದಿಬ್ಬಣ ಮಹೋತ್ಸವ
ಅಲ್ಲಿ ನೋಡು ಆಕೆ ತೊಟ್ಟ ಅರಿಸಿನ ಕುಂಕುಮದ ಕೇತನ
ಮೊಳಗಲಿ ಬೆಳಗಲಿ ನಮ್ಮ ತಾಯಿಯ ಚೇತನ

ಭಾವದಲೆ ತುಂಬಿದೆ ಕಸ್ತೂರಿಯ ಕಂಪು
ನುಡಿಯಲ್ಲಿ ಆಲಿಸು ನೀ ಕೋಗಿಲೆಯ ಇಂಪು
ನಲಿದಿದೆ ಮನ ಕನ್ನಡವನಾಡುತಲಿ
ಧನ್ಯವಾಗಿದೆ ಜೀವ ತಾಯಿಯ ಸೇವೆ ಮಾಡುತಲಿ

ಕಲೆಗಾರ ಜಕ್ಕಣ್ಣನ ಆಡಿಸಿದ ತವರೂರು
ಶಿಲ್ಪಕಲೆಯನು ಮೆರೆಸಿದೆ ಹಳೇಬೀಡು ಬೇಲೂರು
ಹಂಪಿಯಲಿ ಸವಿಯಿರಿ ಇತಿಹಾಸದ ಕಲರವ
ಮೈಸೂರಿನಲ್ಲಿ ಕಾಣಿರಿ ಆಳಿದ ಅರಸರ ವೈಭವ

ವಚನಿಗರ ವಾಕ್ಯದಲಿ ಅಡಗಿರುವುದು ಸತ್ಯ
ತ್ರಿಪದಿಗಳ ನೀತಿಯನು ಅಳವಡಿಸಿಕೋ ನಿತ್ಯ
ಪಂಪ, ರನ್ನರ ಮಹಾಕಾವ್ಯಗಳ ಝೇಂಕಾರ
ಕಟ್ಟಿದೆ ಕರುನಾಡಿಗೆ ತೋರಣದ ಸಿಂಗಾರ

ಕುಣಿಕುಣಿದು ಧುಮುಕುತ್ತಿದೆ ಜಲಪಾತಗಳ ಜೋರು
ಪೋಷಿಸುತಲಿ ಹರಿಯುತ್ತಿದೆ ತಾಯಿ ಕಾವೇರಿಯ ತೇರು
ಉಸಿರಾಡುವ ಗಾಳಿಯಲಿ ಹರಡಿದೆ ಪಾವನ ಶ್ರೀಗಂಧ
ಜನುಮ ಜನುಮಕೂ ಜೊತೆ ಇರಲಿ ಕನ್ನಡದ ಅನುಬಂಧ

ಇಗೋ, ಕನ್ನಡಕ್ಕೆ ದೊರಕಿದೆ ಶಾಸ್ತ್ರೀಯ ಸ್ಥಾನ
ಕನ್ನಡಿಗರ ಹೋರಾಟಕೆ ಸಂದ ಸನ್ಮಾನ
ಹರಡಿದೆ ಮಡಿಲಲ್ಲಿ ಸಹ್ಯಾದ್ರಿಯ ಸಾಲು
ಕನ್ನಡಮ್ಮನಿಗೆ ಅರ್ಪಣೆ ನನ್ನ ಉಸಿರಿನ ಪಾಲು

Rating
No votes yet