ಕನ್ನಡ ಕಾದಂಬರಿ ಮತ್ತು ಕಥಾನಕ ಸಿದ್ಧಾಂತಗಳು - ಪೀಠಿಕೆ
ಯಾಕೋ ಏನೋ ಇತ್ತೀಚೆಗೆ ಈ ಬ್ಲಾಗ್ ಬರಹವನ್ನು ನಿಯತವಾಗಿ ಮುಂದುವರಿಸಲಾಗುತ್ತಿಲ್ಲ. ವಿಷಯಗಳಿರಲಿಲ್ಲವೆಂದಲ್ಲ. ಹಾಗೆ ಹೇಳುವುದಾದರೆ ಸಾಕಷ್ಟು ವಿಷಯಗಳಿವೆ. ಕೆಲಸದ ಒತ್ತಡವೆಂಬುದು ಕೇವಲ ನೆಪವಷ್ಟೆ. ನಾನು ಓದಿದ್ದು, ಕೇಳಿದ್ದು, ಕಂಡದ್ದು, ಕಾಣದ್ದು, ಹೀಗೆ ಹತ್ತು ಹಲವು ವಿಚಾರಗಳು ನನ್ನ ತಲೆಯೊಳಗೆ ರಿಂಗಣಿಸುತ್ತಿವೆ. ಆದರೂ, ಧ್ಯಾನಸ್ಥನಾಗಿ ಬರೆಯುವ ಗಳಿಗೆ ಕೂಡಿ ಬಂದಿರಲಿಲ್ಲ. ಸಾಲದ್ದಕ್ಕೆ ಸೋಂಬೇರಿತನ ಬೇರೆ. ಕಳೆದ ತಿಂಗಳು ಕೇವಲ ಎರಡು ಬರಹಗಳನ್ನಷ್ಟೆ ಪ್ರಕಟಿಸಲು ಸಾಧ್ಯವಾಯಿತು. ಈ ತಿಂಗಳು ಕೂಡ ಇದುವರೆಗೆ ಕೇವಲ ಒಂದು ಬರಹವನ್ನಷ್ಟೆ ಪ್ರಕಟಿಸಿದ್ದೇನೆ. ಎಷ್ಟೇ ಒತ್ತಡಗಳಿದ್ದರೂ, ದಿನಕ್ಕೊಂದು ಲೇಖನ ಬರೆಯಲೇ ಬೇಕು ಎಂದು ಯಾವಾಗಲೂ ಅಂದುಕೊಳ್ಳುತ್ತೇನೆ. ಆದರೆ, ಆ ರೀತಿ ಜಿದ್ದಿನಲ್ಲಿ ಬರೆಯಲು ಸಾಧ್ಯವಿಲ್ಲ ಎಂಬುದು ಎಂತಹವರಿಗೂ ತಿಳಿದೇ ಇರುತ್ತದೆ. ಅಂತೂ ಇಂತೂ ಒಂದು ವಾರದಿಂದ ನನ್ನ ನೆನಪಿನಲ್ಲಷ್ಟು, ಟಿಪ್ಪಣಿಗಳಲ್ಲಷ್ಟು ದಾಖಲಾಗಿರುವ ಕೆಲವು ವಿಚಾರಗಳನ್ನು ಅಕ್ಷರ ರೂಪದಲ್ಲಿ ಕಂತಿನ ರೂಪದಲ್ಲಿ ದಾಖಲಿಸುವ ಪ್ರಯತ್ನವನ್ನು ಮಾಡಬೇಕೆಂದಿದ್ದೇನೆ.
ಈ ನಡುವೆ, ಡಿಸೆಂಬರ್ನಿಂದ ಇಲ್ಲಿಯವರೆಗೆ ಶ್ರೀ ಯು.ಆರ್.ಅನಂತಮೂರ್ತಿ, ದ.ರಾ.ಬೇಂದ್ರೆ, ಚಂದ್ರಶೇಖರ ಕಂಬಾರ, ಕೆ.ಎಸ್.ನರಸಿಂಹಸ್ವಾಮಿ ಮುಂತಾದ ನಮ್ಮ ಕನ್ನಡದ ಸಾಹಿತ್ಯದ ಅಂದಿನ ಹಾಗೂ ಈಗಿನ ವಿರಾಟ್ ಪುರುಷರ ಹುಟ್ಟಿದ ದಿನ ಜರುಗಿದ್ದು, ಕೇವಲ ದ.ರಾ.ಬೇಂದ್ರೆಯವರ ಕುರಿತಷ್ಟೆ ಇಲ್ಲಿಯವರೆಗೆ ಲೇಖನ ಬರೆಯಲು ಸಾಧ್ಯವಾಗಿದೆ. ಇವರಲ್ಲಿ ಬೇಂದ್ರೆ, ಹಾಗೂ ಕೆ.ಎಸ್.ನ. ಹೊರತುಪಡಿಸಿ ಇನ್ನುಳಿದವರ ಕುರಿತು 'ಮಯೂರ' ಅತ್ಯಮೂಲ್ಯವಾದ ಸಂಚಿಕೆಗಳನ್ನು ಹೊರತಂದಿದೆ. ಆದರೆ, ನಾನು ಲೇಖನಗಳನ್ನು ಬರೆಯುವ ಮೂಲಕ ನನ್ನ ನಮನಗಳನ್ನು ಸಲ್ಲಿಸುವ ಹಂಬಲವೂ ಒಂದೆಡೆ ಸ್ಥಿರವಾಗಿದೆ. ಹಾಗೆಯೇ, ನನ್ನ ನೆಚ್ಚಿನ ಲೇಖಕ ಹಾಗೂ ಚಿಂತಕ ಶ್ರೀ ಯು.ಆರ್.ಅನಂತಮೂರ್ತಿಯವರ ಇತ್ತೀಚಿನ ಕೃತಿ 'ಮಾತು ಸೋತ ಭಾರತ'ದ ಕುರಿತು ವಿಮರ್ಶೆ ಬರೆಯಬೇಕೆಂದು ಸಮಯ ಸಿಕ್ಕಿದಾಗಲೆಲ್ಲ ಓದುತ್ತಿದ್ದೇನೆ. ಈಗ ಸುಮಾರು ಸಲ ಇಡಿಯಾಗಿ ಒಮ್ಮೆ, ಬಿಡಿಯಾಗಿ ಹಲವಾರು ಬಾರಿ ಓದಿದ್ದರೂ, ಆ ಕುರಿತು ಏನನ್ನೂ ಬರೆಯಲು ಸಾಧ್ಯವಾಗದಿರುವುದು ನನ್ನ ಮಹಾ ಸೋಂಬೇರಿತನವನ್ನು ತೋರಿಸುತ್ತದೆಯಷ್ಟೆ. ಸಾಧ್ಯವಾದಷ್ಟು ಇವೆಲ್ಲವನ್ನೂ ಕಾರ್ಯಗತವಾಗಿಸುವ ಪ್ರಯತ್ನ ನಡೆಸುತ್ತೇನೆ.
ಸಧ್ಯ ನಾನು ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು ಹಾಗೂ ನಾನು ಮೂರು ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ಭಾರತೀಯ ಭಾಷಾ ಸಂಸ್ಥಾನ, ಮೈಸೂರು ಇವರ ಸಂಯುಕ್ತ ಆಶ್ರಯದಲ್ಲಿ "ಕನ್ನಡ ಕಾದಂಬರಿ ಹಾಗೂ ಕಥಾನಕ ಸಿದ್ಧಾಂತಗಳು" ಕುರಿತು ಮಾರ್ಚ್ 17ರಿಂದ 21ರವರೆಗೆ ಐದು ದಿನಗಳ ಕಾಲ ನಡೆದ ಕಮ್ಮಟದಲ್ಲಿ ಚರ್ಚಿತವಾದ ಹಾಗೂ ನಾನು ಪ್ರತ್ಯಕ್ಷವಾಗಿ ಭಾಗವಹಿಸಿ ಗ್ರಹಿಸಿದ ಕೆಲವು ವಿಚಾರಗಳ ಕುರಿತು ಕಂತುಗಳ ರೂಪದಲ್ಲಿ ಟಿಪ್ಪಣಿ ನೀಡಬೇಕೆನ್ನುವುದಕ್ಕೆ ಬದ್ಧನಾಗಿದ್ದೇನೆ.
ಮಾರ್ಚ್ 17ರಂದು ಬೆಳಗ್ಗೆ 10.30ಕ್ಕೆ ಈ ಕಮ್ಮಟದ ಉದ್ಘಾಟನಾ ಸಮಾರಂಭ ನೆರವೇರಿತು. ಪ್ರಾಸ್ತಾವಿಕ ಭಾಷಣವನ್ನು ನನಗೆ ಸುಪರಿಚಿತರಾಗಿರುವ ಶ್ರೀ ಕಿಕ್ಕೇರಿ ನಾರಾಯಣರವರು ಮಾಡಿದರೆ, ಉದ್ಘಾಟನಾ ಭಾಷಣವನ್ನು ನಾಡಿನ ಪ್ರಸಿದ್ಧ ಲೇಖಕರಾದ ಶ್ರೀ ದೇವನೂರ ಮಹಾದೇವರವರು ಮಾಡಿದರು. ಮುಖ್ಯ ಅತಿಥಿಗಳಾಗಿದ್ದದ್ದು ವೃತ್ತಿಯಿಂದ ಭಾಷಾ ತಜ್ಞರು, ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕರು ಹಾಗೂ ಪ್ರವೃತ್ತಿಯಿಂದ ಬರಹಗಾರರಾಗಿರುವ ಶ್ರೀ ಉದಯ ನಾರಾಯಣ ಸಿಂಹರವರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಈಗಿನ ಅಧ್ಯಕ್ಷೆಯಾಗಿರುವ ಲೇಖಕಿ ಡಾ.ಗೀತಾ ನಾಗಭೂಷಣರವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.
ಆದರೆ, ಕಾರಣಾಂತರಗಳಿಂದ ಈ ಕಾರ್ಯಕ್ರಮವನ್ನು ತಪ್ಪಿಸಿಕೊಂಡ ನಾನು, ಮಧ್ಯಾಹ್ನದ ಉಪನ್ಯಾಸ ಸಂವಾದದಲ್ಲಿ ಭಾಗವಹಿಸಲೇಬೇಕೆಂದು ನಮ್ಮ ಸಂಸ್ಥೆಯೆಡೆಗೆ ಧಾವಿಸಿದೆ. ಹೀಗೆ ಧಾವಂತದಲ್ಲಿ ಧಾವಿಸಲು ಬಹುಮುಖ್ಯ ಕಾರಣ ನನ್ನ ನೆಚ್ಚಿನ ವಿಮರ್ಶಕರೂ ಹಾಗೂ ನನಗೆ ತಕ್ಕ ಮಟ್ಟಿಗೆ ಪರಿಚಯಸ್ಥರು ಆಗಿರುವ ಡಾ.ರಹಮತ್ ತರೀಕೆರೆಯವರು. ನಾನು ಸಂಪದದಲ್ಲಿ ಬ್ಲಾಗ್ ಬರೆಯಲಾರಂಭಿಸಿದಾಗ ಮೊದಲು ಲೇಖನ ಬರೆದದ್ದು ಇವರ ಬಗ್ಗೆಯೇ.
ಮಧ್ಯಾಹ್ನ ನಿಗದಿತ 2.30ರ ಹೊತ್ತಿಗೇ ರಹಮತ್ರು ತಮಗೆ ನೀಡಿದ್ದ ವಿಷಯವಾದ 'ದೇಸೀವಾದ ಹಾಗೂ ಕನ್ನಡ ಕಾದಂಬರಿ' ಕುರಿತು ಉಪನ್ಯಾಸ ಆರಂಭಿಸಿದ್ದರಾದರೂ, ನಾನು ಬಸ್ ಸಿಕ್ಕಿದ್ದು ತಡವಾದ್ದರಿಂದಾಗಿ 10-20 ನಿಮಿಷ ತಡವಾಗಿ ಹಾಜರಾದೆ. ಕಮ್ಮಟದ ಮೊದಲ ದಿನವಾದದ್ದರಿಂದಲೋ ಅಥವಾ ರಹಮತ್ರ ಮೇಲಿನ ಅಭಿಮಾನದಿಂದಲೋ ಇಡೀ ರೂಮು ತುಂಬಿ ಹೋಗಿ, ನಿಲ್ಲಲೂ ಸ್ಥಳಾವಕಾಶ ಇಲ್ಲದಂತಾಗಿತ್ತು. ಆದರೂ, ಇಕ್ಕಟ್ಟಾದ ಆ ರೂಮಿನಲ್ಲಿ, ಆ ಭರ್ತಿ ಶೆಖೆಯಲ್ಲಿ ಹಣೆಯಿಂದ ಮುಖ ಮೈಗೆ ಇಳಿಯುತ್ತಿದ್ದ ಬೆವರನ್ನು ಒರೆಸಿಕೊಳ್ಳುತ್ತಲೇ ಅವರ ಉಪನ್ಯಾಸವನ್ನು ತದೇಕಚಿತ್ತದಿಂದ ಆಲಿಸುತ್ತಿದ್ದೆ.
ಈಗಾಗಲೇ ರಹಮತ್ರು ಆಧುನಿಕ ಕನ್ನಡ ಸಾಹಿತ್ಯದ 'ಸೃಜನಶೀಲ' ಕೃತಿಗಳನ್ನು ಆಧರಿಸಿ ಕಟ್ಟಿದ ಮೀಮಾಂಸೆಯನ್ನು 'ಇಲ್ಲಿ ಯಾರೂ ಮುಖ್ಯರಲ್ಲ' ಎಂಬ ಶೈಕ್ಷಣಿಕ ಅಗತ್ಯದಿಂದ ಹುಟ್ಟಿದ, ಒಂದು ರೀತಿಯಲ್ಲಿ ತತ್ವಶಾಸ್ತ್ರೀಯವಾದ, ಅತ್ಯಮೂಲ್ಯವಾದ ಕೃತಿಯನ್ನು ನೀಡಿರುವುದರಿಂದಲೋ ಏನೋ ಅವರಿಗೇ ಈ ದೇಸೀವಾದದಂತಹ ಸಂಕೀರ್ಣವಾದ ವಿಚಾರದ ಕುರಿತು ಉಪನ್ಯಾಸ ನೀಡಲು ಹೇಳಿದ್ದಾರೆಂದು ನನಗನಿಸಿತು. ಆ ಪುಸ್ತಕವನ್ನು ನಾನು ಬಿಡಿ ಬಿಡಿಯಾಗಿ ಓದಿರುವುದರಿಂದ ಸಮಗ್ರವಾಗಿ ಓದಿದ ನಂತರ ಆ ಕುರಿತು ಬರೆಯುವೆನೆಂದು ರಹಮತ್ ಕುರಿತು ನಾನು ಬರೆದ ಮೊದಲ ಲೇಖನದಲ್ಲಿ ತಿಳಿಸಿದ್ದೆ. ಈ ಕೃತಿಯನ್ನು 'ತನ್ನತನದ ಹುಡುಕಾಟ'ವೆಂದು ಕರೆಯುತ್ತಾರೆ ರಹಮತ್. ಇದಕ್ಕೆ ಒಂದು ರೀತಿಯಲ್ಲಿ ಪ್ರೇರಣೆ ಅಥವಾ ಸ್ಫೂರ್ತಿ ಕನ್ನಡದ ದಿಟ್ಟ ಭಾಷಾವಿಜ್ಞಾನಿ ಶ್ರೀ ಶಂಕರ ಭಟ್ಟರ 'ಕನ್ನಡಕ್ಕೆ ಬೇಕು ಕನ್ನಡದ್ದೇ ಆದ ವ್ಯಾಕರಣ' ಕೃತಿ ಎನ್ನಬಹುದು. ಆದರೆ, 'ಇಲ್ಲಿ ಯಾರೂ ಮುಖ್ಯರಲ್ಲ' ಆತ್ಯಂತಿಕ ಬೇಡಿಕೆಯಿಂದ ಹುಟ್ಟಿದ್ದಲ್ಲ ಇಂತಹ ಸಾತ್ವಿಕ ಹಠದಿಂದಲೇ ಹುಟ್ಟಿದ ಕೃತಿ 'ಕನ್ನಡಕ್ಕೆ ಬೇಕು ಕನ್ನಡದ್ದೇ ಆದ ಸಾಹಿತ್ಯ ಚಿಂತನೆ' ಎಂದು ಅವರು ಹೇಳುತ್ತಾರೆ. ಈ ಕುರಿತು ನಾನು 'ಇಲ್ಲಿ ಯಾರೂ ಮುಖ್ಯರಲ್ಲ' ಕುರಿತು ಬರೆಯಬೇಕೆಂದಿರುವ ಲೇಖನದಲ್ಲಿ ಹೇಳಬಯಸುತ್ತ ಇಲ್ಲಿ ನೇರವಾಗಿ ಅವರು ಮಂಡಿಸಿದ ಪ್ರಸ್ತುತ ವಿಚಾರದ ಕುರಿತಷ್ಟೆ ನನ್ನ ಟಿಪ್ಪಣಿಗಳನ್ನು ಇಲ್ಲಿ ದಾಖಲಿಸುವ ಪ್ರಯತ್ನ ಮಾಡುತ್ತೇನೆ.
ಮುಂದಿನ ಭಾಗದಲ್ಲಿ
ಕನ್ನಡ ಕಾದಂಬರಿ
ಮತ್ತು
ಕಥಾನಕ ಸಿದ್ಧಾಂತಗಳು - 'ದೇಸೀವಾದ ಹಾಗೂ ಕನ್ನಡ ಕಾದಂಬರಿ'