ಕನ್ನಡ ಕುಲ ಪುರೋಹಿತ

ಕನ್ನಡ ಕುಲ ಪುರೋಹಿತ

ಚಿತ್ರ

ಸ್ವಾತಂತ್ರ್ಯ ಪೂರ್ವದ ಕರ್ನಾಟಕ ಚಿತ್ರ

ನೆಲ ನುಡಿ ಜನ ಗ್ರಹಣವಾಗಿದ್ದು ಸತ್ಯ!

ಹಂಚಿ ಹರಿದು ಆವರಿಸಿದ ಧೂಳು ನಿರಾಸೆ;

ಬತ್ತಿತ್ತು ನಾಡಲ್ಲಿ ಸಮಗ್ರತೆಯ ಆಸೆ

 

ಮುಂಬಯಿಯಲ್ಲೋದಿ ಧಾರವಾಡಕೆ ಬಂದು

ವಕೀಲ ವೃತ್ತಿಗೆ ತೊಡಗಿದ ಕನ್ನಡದ ಬಂಧು

ವಿದ್ಯಾವರ್ಧಕ ಸಂಘ ಪ್ರವರ್ತಕನು ಅಂದು

ಜಯ ಕರ್ನಾಟಕ ಪತ್ರಿಕೆ ಸ್ಥಾಪಕನು ಮುಂದು

 

ಗೋಖಲೆ ಸಾವರ್ಕರರಿಗೆ ನಿಕಟವರ್ತಿ

ತಿಲಕರ ಗೀತಾ ಕನ್ನಡಕ್ಕನುವಾದಿಸಿ

ನಾಡ ಹಬ್ಬ ಕನಸ ಕನ್ನಡಿಗರಿಗೆ ಹಚ್ಚಿ

ಅಸ್ಮಿತೆಗೆ ನಾಂದಿಯ ಹಾಡಿದನಾ ಮುತ್ಸದ್ಧಿ

 

ಅಂದು ಮಂತ್ರಾಲಯದಿಂದ ಹೊರಟ ವೆಂಕಟ

ಹಂಪೆ ಭೂಮಿಯ ಗತ ವೈಭವವನು ಕಂಡ

ಹೃದಯ ಕಲಕಿತು ಕಣ್ಣೀರು ಹರಿಯಿತು

ಕನ್ನಡ ಏಕೀಕರಣ ಶಪಥ ಮೊಳಗಿತು

 

ಹೊಯ್ಸಳ ಗಂಗ ಕದಂಬ ಇತಿಹಾಸ ಬೆಳಕು

ವಿಜಯನಗರ ಬಾದಾಮಿ ವೈಭವ ಮೆಲುಕು

ಎಲ್ಲರೊಂದಾಗುವಾ ಕನಸನ್ನು ಸ್ಫುರಿಸಿ

ಮುನ್ನಡೆಸಿದ ತೇರ ಕನ್ನಡಾಂಬೆಯನಿರಿಸಿ

 

ಸಾಹಿತಿಗಳೊಗ್ಗೂಡಿಸಿದ ಶ್ರೀಮಂತ ಹೃದಯ

ಡಿವಿಜಿ ಬೇಂದ್ರೆ ಎಲ್ಲರಿಗೂ ದೊಡ್ಡ ಗೆಳೆಯ

ಪರಿಷತ್ತು ಸ್ಥಾಪನೆಗೆ ಮುಂಚೂಣಿಗೆ ನಿಂತ

ಕನ್ನಡಿಗರಭಿಮಾನ ಹೆಚ್ಚಿಸಿದ ಸಂತ

 

ನೀವಲ್ಲವೇ ಕರುನಾಡ ಕುಲ ಪುರೋಹಿತ

ನೆನೆದಾಗ ಸೊಗದ ಗಂಧ ತೀರ್ಥದ ಹಿತ!

ಕೃತಜ್ಞ ನಮನ ಆಲೂರು ವೆಂಕಟರಾಯ

ಅಮರರಾದಿರಿ ಕಟ್ಟಿ ಕನ್ನಡದ ಆಲಯ.

Rating
Average: 4 (1 vote)