ಕನ್ನಡ ಚಿತ್ರರಂಗ "ಅಭಿಮಾನ್ " ರಾಜ್ಕುಮಾರ್...

ಕನ್ನಡ ಚಿತ್ರರಂಗ "ಅಭಿಮಾನ್ " ರಾಜ್ಕುಮಾರ್...

ಈ ಲೇಖನ ಬರೆಯಬೇಕೆಂದು ತುಂಬಾ ದಿನಗಳಿಂದ ಅನ್ಕೊಳ್ತಾ ಇದ್ದೆ.. ಆದ್ರೆ ಬರಿಯಕ್ಕಾಗಿರಲಿಲ್ಲಾ.. ಅಂತೂ ಇಂದು ಸಾದಸಿದೆ.

ನನಗೆ ಬಾಲಣ್ಣ ನವರ ಕನಸಿನ ಕೂಸಾದ ಅಭಿಮಾನ್ ಸ್ಟುಡಿಯೋಗೆ ಹೋದಾಗಲೆಲ್ಲಾ ತುಂಬಾ ಭಾವುಕನಾಗುತ್ತೇನೆ.

ಅಲ್ಲಿಗೆ ಹೋದಾಗಲೆಲ್ಲಾ ಕನ್ನಡ ಚಿತ್ರ ಕಲಾವಿದರಿಂದ ’’ಪಿತಮಹಾ " ಎಂದೇ ಕರೆಸಿಕೊಳ್ಳುವ ಬಾಲಣ್ಣನವರು ಆ ಅಭಿಮಾನ್ ಸ್ಟುಡಿಯೋ ಕಟ್ಟಲು ಕಾರಣಗಳು, ಹಾಗು ೧೯೬೫ ರಲ್ಲಿ ಕಟ್ಟಲು ಪ್ರಾರಂಬಿಸಿದಾಗಿನಿಂದಲೂ ಅವರು ಪಟ್ಟ ಕಷ್ಟಗಳು, ಎದುರಿಸಿದ ಸವಾಲುಗಳು ನೆನಸಿಕೊಂಡ್ರೇನೆ ಎದೆ ತುಂಬಿ ಬರುತ್ತೆ. ೪೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರೂ ಅವರು ಸಂಪಾದನೆ ಅಷ್ಟಕಷ್ಟೆ.. ಆದ್ರೂ ಮದರಾಸಿನ ಸ್ಟುಡಿಯೋಗಳಲ್ಲಿ ಕನ್ನಡ ಚಿತ್ರರಂಗದವರಿಗೆ ಆಗುತ್ತಿದ್ದ ಅವಮಾನಗಳಿಂದ ಬೇಸತ್ತು ಕನ್ನಡದ, ಕನ್ನಡಿಗರ ಅಭಿಮಾನದ ಸಂಕೇತವಾಗಬೇಕೆಂದು ರಾಜ್ಯದಲ್ಲೆಲ್ಲಾ ಚಂದಾ ಎತ್ತಿ, ತಮ್ಮ ಅಷ್ಟೂ ಸಂಪಾದನೆಯನ್ನು ಹಾಕಿ ಕಟ್ಟಿದ " ಅಭಿಮಾನ್" ಸ್ಟುಡಿಯೋ ಕನ್ನಡ ಚಿತ್ರರಂಗದವರ ಉದಾಸೀನತೆಯಿಂದ ಆಗ ಪಾಳು ಬೀಳುವ ಹಂತ ತಲುಪಿದ್ದರೂ .. ಅವರ ಮಗ ಶ್ರೀನಿವಾಸ್ ರವರ ಛಲಬಿಡದ ಪ್ರಯತ್ನದಿಂದಾಗಿ ಈಗ ಬಾಲಣ್ಣನವರ ಕನಸು ಪೂರ್ತಿಯಾಗಿ ಅಲ್ಲವಾದರೂ ಸ್ಟುಡಿಯೋ ಮಟ್ಟಿಗೆ ನಿತ್ಯ ಚಟುವಟಿಕೆಗಳ ತಾಣವಾಗಿದೆ.
ನನಗೆ ಅಲ್ಲಿಗೆ ಹೋದ ಪ್ರತಿಸಲ ನೆನಪಾಗುವುದು, ಕನ್ನಡ ಸಿನಿಮಾಗಳ ವಿಮರ್ಶಕರಾದ ಬಿ.ವಿ.ವೈಕುಂಠರಾಜು ರವರು ೧೯೮೬ ರಲ್ಲಿ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಗಳಾಗಿದ್ದ ಸಮಯದಲ್ಲಿ ಜರಿಗೆ ತಂದಿದ್ದ ತೆರಿಗೆ ವಿನಾಯಿತಿಯನ್ನು ಕುರಿತಾಗಿ ರಾಜಕುಮಾರರನ್ನು ಸಂದರ್ಶಿಸಿದ್ದರು.(ಈ ಲೇಖನದ ಜೊತೆಗೆ ಕನ್ನಡ ಚಿತ್ರರಂಗದ ಕುರಿತ ಹಲವಾರು ಲೇಖನಗಳ ಸಂಗ್ರಹ ’ಸಿನಿಮಾತು’ ಪುಸ್ತಕದಲ್ಲಿವೆ) ಆ ಸಂದರ್ಶನದಲ್ಲಿನ ರಾಜಕುಮಾರ್ ಹಾಗು ಅವರ ಪತ್ನಿ ಪಾರ್ವತಮ್ಮ ರಾಜಕುಮಾರ ರ ನಿಲುವುಗಳು ಆಲೋಚನೆಗಳು ಸದಾ ಕಾಡುತ್ತಲೆ ಇವೆ.

ವೈಕುಂಠರಾಜು ಹಾಗು ರಾಜ್ಕುಮಾರ, ಪಾರ್ವತಮ್ಮ ರಾಜಕುಮಾರ ಸಂದರ್ಶನ ಹೀಗಿದೆ.

"ಸರ್ಕಾರ ಇದನ್ನು ಒಪ್ಪದಿದ್ದರೆ ನಾನು ಇನ್ನು ಮುಂದೆ ಚಿತ್ರಗಳಲ್ಲಿ ಅಭಿನಯಿಸುವುದಿಲ್ಲ ".

ರಾಜಕುಮಾರ್ ಅವರ ಈ ಉತ್ತರ ಕೇಳಿ ಬೆಚ್ಚಿದೆ. ಆಸ್ಟ್ರೇಲಿಯಾ-ಭಾರತ ತಂಡಗಳ ನಡುವಣ ಒಂದು ದಿನದ ಅಂತರಾಷ್ಟ್ರಿಯ ಕ್ರಿಕೆಟ್ ಪಂದ್ಯವನ್ನು ದೂರದರ್ಶನದಲ್ಲಿ ನೋಡುತ್ತಾ ಸೋಫಾದಲ್ಲಿ ಆರಾಮವಾಗಿ ಕುಳಿತಿದ್ದವನ್ನು ಈ ಉತ್ತರವನ್ನು ಕೇಳಿ ನನಗರಿವಿಲ್ಲದಂತೆಯೇ ಸಂದರ್ಶನ ಬಿಸಿಯಾಯಿತು ಎನಿಸಿ ಸರಿಯಾಗಿ ಕುಳಿತೆ " ಏನು ಹೇಳಿದಿರಿ ? ಇನ್ನೊಮ್ಮೆ ಹೇಳಿ? " ಎಂದು ರಾಜ್ ಅವರನ್ನು ಕೇಳಿದಾಗ ಅವರು ಮತ್ತೆ ಅದೇ ಮಾತನ್ನು ಹೇಳಿದರು. ಅವರ ದ್ವನಿಯಲ್ಲಿ ಆವೇಶವಿರಲಿಲ್ಲ. ಮುಖದಲ್ಲಿ ಅಸಮಾಧಾನದ ಚಾಯೆಯಿರಲಿಲ್ಲಾ. ತಮ್ಮ ಎಂದಿನ ಧಾಟಿಯಲ್ಲಿಯೇ ಈ ಮಾತನ್ನು ಹೇಳಿದರು.
ರಾಜ್ಯದಲ್ಲಿ ತಯಾರಾಗುವ ಚಲನಚಿತ್ರಗಳಿಗೆ ಮಾತ್ರ ಸಹಾಯಧನ ಮತ್ತು ಶೇಕಡಾ ಐವತ್ತರಷ್ಟು ಮನರಂಜನೆ ತೆರಿಗೆ ವಿನಾಯಿತಿಯನ್ನು ನೀಡಲು ಸರ್ಕಾರ ನಿರ್ಧರಿಸಿರುವ ಹಿನ್ನಲೆಯಲ್ಲಿ ಡಾ!! ರಾಜಕುಮಾರ್ , ವೀರಾಸ್ವಾಮಿ, ಮತ್ತಿತರರು ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರನ್ನು ಭೇಟಿ ಮಾಡಿ ಇನ್ನೂ ಕೆಲವು ದಿನ ರಾಜ್ಯದ ಹೊರಗೆ ತಯಾರಾಗುವ ಚಲನಚಿತ್ರಗಳಿಗೆ ಕೂಡ ಶೇಕಡಾ ಐವತ್ತರಷ್ಟು ಮನರಂಜನೆ ತೆರಿಗೆ ವಿನಾಯಿತಿಯನ್ನು ನೀಡಬೇಕೆಂದು ಒತಾಯಪಡಿಸಿದ್ದರು. ಇದು ಎಲ್ಲ ಪತ್ರಿಕೆಗಳಲ್ಲೂ ಪ್ರಕಟವಾಗಿತ್ತು . ರಾಜ್ ಅವರನ್ನು ಭೇಟಿ ಮಾಡಲು ಹೋದಾಗ ಈ ವಿಷಯವನ್ನೇ ಮೊದಲು ಪ್ರಸ್ತಾಪಿಸಬೇಕೆಂದು ನಿರ್ಧರಿಸಿದ್ದೆ.

ಅಕ್ಟೋಬರ್ ಏಳರಂದು ಮಂಗಳವಾರ ಬೆಳಗ್ಗೆ ಹತ್ತು ಘಂಟೆಗೆ ಸದಾಶಿವನಗರದಲ್ಲಿರುವ ರಾಜ್ ಅವರ ಹಿರಿಯ ಮಗಳು ಲಕ್ಷ್ಮಿ ಅವರ ಮನೆಗೆ ಹೋದಾಗ ಅವರು ತಿಂಡಿ ತಿನ್ನುತ್ತಿದ್ದರು. ಕ್ರಿಕೆಟ್ ನೋಡುವುದು ತಪ್ಪಿತಲ್ಲಾ ಎಂದುಕೊಂಡೇ ಅವರ ಮನೆಗೆ ಕಾಲಿಟ್ಟಾಗ ರಾಜ್ ಕೂದ ಟಿ.ವಿ.ಯಲ್ಲಿ ಕ್ರಿಕೆಟ್ ನೋಡುತ್ತಿದ್ದುದನ್ನು ಕಂಡು ಖುಷಿಯಾಯಿತು. ಲೋಕಾಭಿರಾಮದ ಒಂದೆರೆಡು ಮಾತು ಮುಗಿದಂತೆಯೆ ನೇರವಾಗಿ ಸಂದರ್ಶನ ಪ್ರಾರಂಭಿಸಿದೆ.

ವೈ- ರಾಜ್ಯದ ಹೊರಗೆ ತಯಾರಾಗುವ ಚಿತ್ರಗಳಿಗೂ ಮನರಂಜನೆ ತೆರಿಗೆ ವಿನಾಯಿತಿ ನೀಡುವುದನ್ನು ಮುಂದುವರಿಸುತ್ತಾ ಹೋದರೆ ರಾಜ್ಯದಲ್ಲಿ ಚಿತ್ರೋದ್ಯಮ ಅಭಿವೃದ್ದಿಯಾಗುವುದು ಹೇಗೆ ? ಇಲ್ಲಿ ತಯಾರಾಗುವ ಚಿತ್ರಗಳಿಗೆ ಮಾತ್ರ ಮನರಂಜನೆ ತೆರಿಗೆ ವಿನಾಯಿತಿ ನೀಡಲು ಸರ್ಕಾರ ನಿರ್ಧರಿಸಿದರೆ ಹೆಚ್ಚು ಜನ ಇಲ್ಲಿಯೇ ಚಿತ್ರಗಳನ್ನು ಮಾಡುತ್ತಾರೆ ಆಗ ಇಲ್ಲಿ ಉದ್ಯಮ ಬೆಳೆಯಲು ಅನುಕೂಲವಾಗುತ್ತದೆಯಲ್ಲವೇ ?

ರಾ- ರಾಜ್ಯದಲ್ಲಿಯೇ ಚಿತ್ರೀಕರಣ ನಡೆಸಬೇಕು ಎನ್ನುವುದಕ್ಕೂ , ಚಿತ್ರವನ್ನು ಮುಗಿಸಬೇಕು ಎನ್ನುವುದಕ್ಕೂ ವ್ಯತ್ಯಾಸವಿದೆ . ಇತ್ತೀಚೆಗೆ ನಾನು ಅಭಿನಯಿಸಿದ ಐದಾರು ಚಿತ್ರಗಳ ಚಿತ್ರೀಕರಣ ಕರ್ನಾಟಕದಲ್ಲಿಯೇ ನಡೆದಿದೆ. ಆದರೆ ರೀರೆಕಾರ್ಡಿಂಗ್ ಮತ್ತು ರೆಕಾರ್ಡಿಂಗ್ ಸೌಲಭ್ಯ ಇಲ್ಲಿ ಸರಿಯಾಗಿಲ್ಲ. ನಾವು ಸಂಗೀತಗಾರರನ್ನು ಮದರಾಸಿನಿಂದಲೇ ಕರೆಸಬೇಕಾಗುತ್ತದೆ. ಅದರಿಂದ ಕನ್ನದ ಚಿತ್ರೋದ್ಯಮ ಹೆಗೆ ಬೆಳೆಯುತ್ತದೆ ? ಅಲ್ಲಿಂದ ಸಂಗೀತಗಾರರನ್ನು ಕರೆಸುವುದೆಂದರೆ ನಿರ್ಮಾಪಕರಿಗೆ ಹೊರೆಯಾಗುತ್ತದೆ . ವಾದ್ಯಗಳನ್ನು ನುಡಿಸುವವರು ಎಷ್ಟೋ ಜನ ಇಲ್ಲಿಗೆ ಬಂದು ಹೋಗುವುದಕ್ಕೂ ಒಪ್ಪುವುದಿಲ್ಲಾ.ಏಕೆಂದರೆ ಮದರಾಸಿನಲ್ಲಿ ಒಂದೇ ದಿನ ಬೇರೆ ಬೇರೆ ಚಿತ್ರಗಳಿಗೆ ಕೆಲಸ ಮಾಡಿ ಹಣ ಸಂಪಾದಿಸುತ್ತಾರೆ . ಒಂದು ದಿನದ ಕೆಲಸಕ್ಕಾಗಿ ಅವರು ಇಲ್ಲಿಗೆ ಬರಬೇಕೆಂದರೆ ಸಮಯವೂ ವ್ಯರ್ಥವಾಗುತ್ತದೆ. ಆದಾಯವೂ ಕಡಿಮೆಯಾಗುತ್ತದೆ. ಇಲ್ಲಿರುವ ಸಂಗೀತಗಾರರು ಚಿತ್ರಗಳಿಗೆ ಸಂಗೀತ ನೀಡುವುದಕ್ಕೆ ಬೇಕಾದ ಅಗತ್ಯವಾದ ತರಬೇತಿಯನ್ನು ಪಡೆದಿಲ್ಲಾ. ಆದ್ದರಿಂದ ಸಹಜವಾಗಿಯೇ ನಿರ್ಮಾಪಕರು ನಿರೀಕ್ಷಿಸುವ ಗುಣಮಟ್ಟ ದೊರೆಯುತ್ತಿಲ್ಲಾ. ಕನ್ನಡ ಚಿತ್ರಗಳಲ್ಲಿ ತಾಂತ್ರಿಕ ಅಂಶಗಳೂ ಚೆನ್ನಾಗಿರಬೇಕು. ಬೇರೆ ಭಾಷೆಗಳಲ್ಲಿ ಅದ್ದೂರಿ ಚಿತ್ರಗಳು ಬರುತ್ತಿರುವಾಗ ತಾಂತ್ರಿಕ ಅಂಶಗಳೂ ಚೆನ್ನಾಗಿರುವಾಗ ನಾವು ಕೂಡ ಅದೇ ರೀತಿ ಮಾಡಬೇಕಲ್ಲವೇ ? ಚಿತ್ರದ ಗುಣಮಟ್ಟವನ್ನು ಕಾಪಾಡುವ ಉದ್ದೇಶದಿಂದ ಎಷ್ಟು ಬೇಕಾದರೂ ಖರ್ಚುಮಾಡಲು ಕೆಲವು ನಿರ್ಮಾಪಕರು ಸಿದ್ದರಿರುತ್ತಾರೆ. ಅಂತಹವರಿಗೆ ಪ್ರೋತ್ಸಾಹ ಕೊಡಬೇಕಲ್ಲವೇ ? ಕೆಲವು ಕೆಲಸಗಳು ಹೊರಗಡೆ ನಡೆದವು ಎಂದಮಾತ್ರಕ್ಕೆ ಶೇಕಡಾ ಐವತ್ತರಷ್ಟು ಮನರಂಜನೆ ತೆರಿಗೆ ವಿನಾಯಿತು ನೀಡುವುದಿಲ್ಲಾ ಎಂದರೆ ಅದು ನ್ಯಾಯವಲ್ಲ.

ವೈ- ರೆಕಾರ್ಡಿಂಗ್ ಮತ್ತು ರೀರೆಕಾರ್ಡಿಂಗ್ ಕೆಲಸಗಳೂ ಹೊರಗಡೆಯೇ ನಡೆಯಬೇಕು ಎನ್ನುವುದಾದರೆ ನಮ್ಮಲ್ಲಿ ಅದು ಸಾದ್ಯವಾಗುವುದೆಂದು ? ಎಂದಾದರೂ ಒಂದು ದಿನ ಈ ಕೆಲಸಗಳು ಇಲ್ಲಿಯೇ ನಡೆಯಬೇಕಲ್ಲವೇ ?

ಇದುವರೆಗೂ ಮೌನವಾಗಿ ನಮ್ಮ ಮಾತುಕತೆಯನ್ನು ಕೇಳುತ್ತಿದ್ದ ಪಾರ್ವತಮ್ಮ ರಾಜಕುಮಾರ್ ಅವರು " ಸಾರ್ ಈ ಪ್ರಷ್ನೆಗೆ ನಾನು ಉತ್ತರ ಹೇಳಲೆ ? " ಎಂದು ಕೇಳಿದರು.

ವೈ- ನೀವು ನಿರ್ಮಾಪಕಿಯಾಗಿರುವುದರಿಂದ ಖಂಡಿತವಾಗಿಯೂ ಹೇಳ ಬಹುದು ಎಂದೆ.

ಪಾ ರಾ- ಎಂದಾದರೂ ಒಂದು ದಿನ ಇಲ್ಲಿ ಆ ಕೆಲಸ ಆಗಬೇಕು ಎನ್ನುವ ಮಾತನ್ನು ನಾನು ಒಪ್ಪುತ್ತೇನೆ. ಆದರೆ ಅದು ಹೇಗೆ ? ಅದಕ್ಕೆ ಒಂದು ವ್ಯವಸ್ಥಿತ ಯೋಜನೆ ಅಗತ್ಯವಲ್ಲವೆ? ನಮ್ಮಲ್ಲಿ ಸಂಗೀತಗಾರರಿದ್ದಾರೆ . ಆದರೆ ಅವರಿಗೆ ಚಿತ್ರಕ್ಕೆ ಬೇಕಾದ ರೀತಿಯಲ್ಲಿ ವಾದ್ಯಗಳನ್ನು ನುಡಿಸುವ ಅಭ್ಯಾಸವಿಲ್ಲಾ. ಅಂತಹ ಅಭ್ಯಾಸವಾಗಬೇಕಾದರೆ ತರಬೇತಿ ಅಗತ್ಯ. ಹತ್ತು ಹನ್ನೆರಡು ಜನರ ತಂಡವನ್ನು ಮದ್ರಾಸಿಗೆ ಕಳುಹಿಸಿ ಅಲ್ಲಿ ಅವರಿಗೆ ಚೆನ್ನಾಗಿ ತರಬೇತಿ ಕೊಡಿಸಬೇಕು. ಹೀಗೆ ಏಳೆಂಟು ತಂಡಗಳಿಗೆ ತರಬೇತಿ ನೀಡಿದರೆ ನಾವು ಅವರಿಂದ ಒಳ್ಳೆಯ ಕೆಲಸಗಳನ್ನು ನಿರೀಕ್ಷಿಸಬಹುದು.

ಈ ಕೆಲಸವನ್ನು ಸರ್ಕಾರ ಮಾಡಬೇಕಲ್ಲವೇ? ಎರೆಡು ಮೂರು ವರ್ಷ ಹಂತ ಹಂತವಾಗಿ ಈ ಕೆಲಸ ಕ್ರಮ ಬದ್ದವಾಗಿ ನಡೆದರೆ ನಾವು ಇಲ್ಲಿಯೇ ರೆಕಾರ್ಡಿಂಗ್ ಮತ್ತು ರೀರೆಕಾರ್ಡಿಂಗ್ ಮಾಡಲು ಸಾದ್ಯವಾಗಬಹುದು. ಅಲ್ಲಿಯವರೆಗೆ ನಾವು ಹೊರಗಡೆ ಮಾಡಿಸಲು ಅವಕಾಶವಿರಬೇಕು. ನಿರ್ಮಾಪಕಿಯಾಗಿರುವುದರಿಂದ ನಾನು ಈ ಮಾತನ್ನು ಹೇಳುತ್ತಿದ್ದೇನೆ. ಕನ್ನಡ ಚಿತ್ರೋದ್ಯಮ ಇಲ್ಲಿ ಬೆಳೆಯಬೇಕು ಸರಿ. ಆದರೆ ಎಲ್ಲಾ ಕ್ಷೇತ್ರಗಳಲ್ಲಿಯೂ ಕನ್ನಡಿಗರೇ ಕೆಲಸ ಮಾಡುವಂತಾಗಬೇಕು.

ಮದರಾಸಿನಿಂದ ತಮಿಳು ಸಂಗೀತಗಾರರನ್ನು ಇಲ್ಲಿಗೆ ಕರೆಸದ ಮಾತ್ರಕ್ಕೆ ಕನ್ನಡ ಚಿತ್ರೋದ್ಯಮ ಅಭಿವೃದ್ದಿಯಾಗುತ್ತದೆಯೇ? ಇಲ್ಲಿರುವ ಸ್ಟುಡಿಯೋಗಳಲ್ಲಿ ಕೆಲಸ ಮಾಡುವ ಸೌಂಡ್ ಇಂಜಿನಿಯರ್ಗಳು ಯಾರು? ಬೇರೆ ಕೆಲಸಗಾರರು ಯಾರು? ಇವರೆಲ್ಲಾ ಕನ್ನಡದವರಲ್ಲ. ಕನ್ನಡದವರಿಗೆ ಏಕೆ ತರಬೇತಿ ಕೊಡುತ್ತಿಲ್ಲ? ನಮ್ಮ ಚಿತ್ರಕ್ಕೆ ರೆಕಾರ್ಡಿಂಗ್ ಮಾಡಿಸುವಾಗ ಸಾದ್ಯವಾದಷ್ಟು ಕನ್ನಡ ಸಂಗೀತಗಾರರನ್ನು ಕರೆತರುವಂತೆ ಸೂಚಿಸುತ್ತೇನೆ. ವಾದ್ಯಗಳನ್ನು ನುಡಿಸುವ ಕನ್ನಡಿಗರು ಮದರಾಸಿನಲ್ಲಿ ಬೇಕಾದಷ್ಟು ಮಂದಿಯಿದ್ದಾರೆ. ಅವರನ್ನೇ ನಾವು ಕರೆಸುವುದು. ಕನ್ನಡಿಗರಿಗೆ ಕೆಲಸ ಕೊಡುವುದು ಮುಖ್ಯವಲ್ಲವೇ? ಅವರೆಲ್ಲರನ್ನೂ ಒಟ್ಟಿಗೆ ಕಲೆಹಾಕಿ ಇಲ್ಲಿಗೆ ಕರೆಸುವುದೆಂದರೆ ಕಷ್ಟ. ಇಲ್ಲಿಯ ವಾದ್ಯಗಾರರೆ ತರಬೇತಿ ಪಡೆಯಬೇಕು. ಅಂತಹ ಕೆಲಸವನ್ನು ಸರ್ಕಾರ ಮಾಡದೆ ಇಲ್ಲಿಯೇ ಎಲ್ಲವೂ ಗಬೇಕು ಎಂದರೆ ಹೇಗೆ ?

" ಬೆಂಗಳೂರಿನಲ್ಲಿ ಬೇರೆ ಬೇರೆ ಭಾಷೆಯ ಚಿತ್ರಗಳು ಪ್ರದರ್ಶಿತವಾಗುತ್ತಿರುತ್ತವೆ. ನಮ್ಮ ಜನ ಅವುಗಳನ್ನು ನೋಡುತ್ತಾರೆ. ತಾಂತ್ರಿಕ ವಿಷಯಗಳಲ್ಲಿ , ಬೇರೆ ವಿಷಯಗಳಲ್ಲಿ ಅದೇ ಗುಣಮಟ್ಟವನ್ನು ಕನ್ನಡ ಚಿತ್ರಗಳಲ್ಲಿಯೂ ಅಪೇಕ್ಷಿಸುತ್ತಾರೆ. ಅವರ ಅಪೇಕ್ಷೆಯನ್ನು ನಾವು ನೆರವೇರಿಸದಿದ್ದರೆ ಹೇಗೆ ? ಅದ್ದೂರಿಯಾಗಿ ಒಳ್ಳೆ ಗುಣ ಮಟ್ಟದ ಚಿತ್ರಗಳನ್ನು ತಯರಿಸುವುದು ನನ್ನ ಉದ್ದೇಶ. ಸರ್ಕಾರ ಇದನ್ನು ಅರ್ಥ ಮಾಡಿಕೊಳ್ಳಬೇಕು" ಎಂದು ಪಾರ್ವತಮ್ಮನವರು ಹೇಳುತ್ತಿದ್ದಂತೆ ರಾಜ್ ಮಧ್ಯೆ ಪ್ರವೇಶಿಸಿ " ಇಲ್ಲಿ ತಯಾರಾದ ಚಿತ್ರಗಳಿಗೆ ಸಬ್ಸಿಡಿ ನೀಡಲಿ. ಆದರೆ ಶೇಕಡಾ ಐವತ್ತರಷ್ಟು ಮನರಂಜನಾ ತೆರಿಗೆ ವಿನಾಯಿತಿಯನ್ನು ಎಲ್ಲಾ ಕನ್ನಡ ಚಲನಚಿತ್ರಗಳಿಗೂ ನೀಡಲಿ" ಎಂದರು.

ವೈ- ನಿಮ್ಮ ಬೇಡಿಕೆಯನ್ನು ಸರ್ಕಾರ ಒಪ್ಪದಿದ್ದರೆ ಏನು ಮಾಡುತ್ತೀರಿ?

ರಾ- ನಾನು ಚಿತ್ರಗಳಲ್ಲಿ ಅಭಿನಯಿಸುವುದನ್ನು ನಿಲ್ಲಿಸುತ್ತೇನೆ.

--- ಈ ಹಂತದಲ್ಲೇ ನಾನು ಬೆಚ್ಚಿಬಿದ್ದು " ಏನು ಹೇಳಿದಿರಿ ಇನ್ನೊಮ್ಮೆ ಹೇಳಿ" ಎಂದದ್ದು. ರಾಜ್ ತಮ್ಮ ಮಾತನ್ನು ಪುನರುಚ್ಚಿಸಿದರು.

ವೈ-ಇದು ನಿಜವೇ ?
ರಾ- ನಿಜ.
ವೈ- ಇಂತಹ ತೀವ್ರ ನಿರ್ಧಾರವನ್ನು ತೆಗೆದುಕೊಳ್ಳುವ ಅಗತ್ಯವೇನು ?
ರಾ- ಮತ್ತೆ ಇನ್ನೇನು ಮಾಡಲಿ ಸಾರ್ ನಾನು? ಚೆನ್ನಾಗಿ ಚಿತ್ರ ತೆಗೆಯುವುದಕ್ಕೆ ಅವಕಾಶವಿರಬೇಕು. ಅದಕ್ಕೆ ನಮ್ಮ ನಿರ್ಮಾಪಕರುಎಷ್ಟು ಬೇಕಾದರೂ ವೆಚ್ಚಮಾಡಲು ಸಿದ್ದವಾಗಿದ್ದಾರೆ. ಆದರೆ ಶೇಕಡಾ ೫೦ರಷ್ಟು ಮನರಂಜನೆ ತೆರಿಗೆ ವಿನಾಯಿತಿ ನೀಡುವುದಿಲ್ಲ ಎಂದು ಸರ್ಕಾರ ಹೇಳಿದರೆ ? " ನಿಮ್ಮ ತೆರಿಗೆ ವಿನಾಯಿತಿಯೂ ಬೇಡ , ನೀವೂ ಬೇಡ " ಎಂದು ಹೇಳಿ ಹೊರಗೆ ಚಿತ್ರ ತಯಾರಿಸಬಹುದು. ಆದರೆ ಕರ್ನಾಟಕ ಸರ್ಕಾರಕ್ಕಿಂತ ದೊಡ್ಡವನಲ್ಲ. ’ ಕನ್ನಡ ಸೇವೆ ಮಾಡುವುದಕ್ಕೆ ಅವಕಾಶ ಕೊಡಿ ’ ಎಂದು ಕೇಳುತ್ತೇನೆ. ಅವಕಾಶ ಕೊಡದಿದ್ದರೆ ನಾನೇನು ಮಾಡಲಿ ? ಚಿತ್ರರಂಗದಿಂದ ನಿವೃತ್ತಿಯಾಗಿ ಬೇಸಾಯ ಮಾಡಲು ಹೋಗುವುದೊಂದೇ ಉಳಿದಿರುವ ಮಾರ್ಗ.

ವೈ-ಚೆನ್ನಾಗಿ ಯೋಚಿಸಿ ಈ ನಿರ್ಧಾರಕ್ಕೆ ಬಂದಿದೀರಾ..?

ರಾ- ಚೆನ್ನಾಗಿ ಯೋಚನೆ ಮಾಡಿದೀನಿ ಸಾರ್.. ಇಲ್ಲಿ ನಿಮಗೆ ಒಂದು ಮಾತನ್ನು ಸ್ಪಷ್ಟ ಪಡಿಸಬೇಕು. ಆವೇಶದಿಂದ ಅಥವಾ ಅಸಮಾಧಾನದಿಂಅದ , ಅತೃಪ್ತಿಯಿಂದ ನಾನು ಈ ಮಾತನ್ನು ಹೇಳುತ್ತಿಲ್ಲಾ . ನನಗೆ ಅತೃಪ್ತಿಯಾಗುವುದಕ್ಕೆ ಕಾರಣವೇ ಇಲ್ಲ. ಚಿತ್ರರಂಗದಲ್ಲಿ ನನಗೆ ಪೂರ್ಣ ತೃಪ್ತಿ ದೊರಕಿದೆ. ಕೆಲಸ ಮಾಡುವುದಕ್ಕೆ ಸರಿಯಾದ ವಾತಾವರಣ ನಿರ್ಮಾಣವಾದರೆ ಇನ್ನು ಸ್ವಲ್ಪ ದಿನ ಕೆಲಸಮಾಡಬಹುದು. ಇಲ್ಲದಿದ್ದರೆ ಚಿತ್ರರಂಗದಲ್ಲಿ ಮುಂದುವರಿಯುವ ಅಗತ್ಯವಿಲ್ಲ. ಕರ್ನಾಟಕಕ್ಕೆ ಸವಾಲು ಹಾಕುವಷ್ಟು ನಾನು ದೊಡ್ಡವನಲ್ಲ.. ಇದನ್ನು ಮತ್ತೆ ಹೇಳುತ್ತಿದ್ದೇನೆ.

ವೈ- ನೀವು ನಿವೃತ್ತಿಯಾಗುವ ಸಂಭವವುಂಟಾದರೆ ಮುಂದೆ ಏನು ಮಾಡ್ತೀರಿ ?

ರಾ- ನಾನು ಮೊದಲೇ ಹೇಳಿದ್ನಲ್ಲ. ಬೇಸಾಯ ಮಾಡಲು ಹೋಗ್ತೀನಿ . ನನಗೆ ಬೇಸಾಯ ಮಾಡುವುದೆಂದರೆ ತುಂಬಾ ಇಷ್ಟ.ಈಗಲೂ ಇವರನ್ನೆಲ್ಲಾ (ಪಾರ್ವತಮ್ಮನವರ ಕಡೆ ಕೈ ತೋರಿಸಿ) ’ನನಗೆ ಒಂದೆರೆಡು ತಿಂಗಳಾದರೂ ಬೇಸಾಯ ಮಾಡುವುದಕ್ಕೆ ಅವಕಾಶ ಮಾಡಿಕೊಡಿ ’ ಅಂತ ಕೇಳ್ತಾ ಇರ್ತೀನಿ.. ಸರ್ಕಾರ ಇದಕ್ಕೆ ಒಪ್ಪದೇ ಇದ್ದರೆ ( ಮನರಂಜನೆ ತೆರಿಗೆ ವಿನಾಯಿತಿ ಬೇಡಿಕೆ) ನನಗೆ ಅ ಅವಕಾಶ ಸಿಕ್ಕುತ್ತೆ.. ಇದು ನನ್ನ ನಿರ್ಧಾರ .. ಈಗ ನನ್ನ ಮಗ ಶಿವರಾಜಕುಮಾರ್ ಚಿತ್ರರಂಗದಲ್ಲಿದ್ದಾನೆ. ಅವನು ಯಾವ ಚಿತ್ರದಲ್ಲಿ ಬೇಕಾದರೂ ಅಭಿನಯಿಸಲಿ, ಯಾವ ಭಾಷೆಯ ಚಿತ್ರದಲ್ಲಾದರೂ ಅಭಿನಯಿಸಲಿ. ಅವನಿಗೆ ಮಾತ್ರ ಯಾವ ನಿರ್ಬಂದ ಹಾಕುವುದಿಲ್ಲಾ.
ವೈ-ನೀವೆ ಕರ್ನಾಟಕದಲ್ಲಿ ಒಂದು ಸುಸಜ್ಜಿತ ಸ್ಟುಡಿಯೋ ಏಕೆ ಪ್ರಾರಂಬಿಸಬಾರದು ? ಕನ್ನಡದ ಜನ ನಿಮ್ಮನ್ನು ತುಂಬಾ ಪ್ರೀತಿಸಿದ್ದಾರೆ. ಆ ಋಣವನ್ನು ತೀರಿಸುವುದು ಮುಖ್ಯವಲ್ಲವೇ? ತೆಲುಗಿನಲ್ಲಿ ಬಹಳ ಹಿಂದೆಯೇ ನಾಗೇಶ್ವರರಾವ್ ಅವರು ’ಆಂದ್ರದಲ್ಲಿ ತಯಾರಾಗುವ ಚಿತ್ರಗಳಲ್ಲಿ ಮಾತ್ರ ಅಭಿನಯಿಸುತ್ತೇನೆ ’ ಎಂದು ಹೇಳಿ ಮದರಾಸಿನಿಂದ ಹೈದರಾಬಾದಿಗೆ ಹೋಗಿ ನೆಲಸಿದರು . ಅವರು ಈ ರೀತಿ ನಿರ್ಧಾರ ಮಾಡಿದ ನಂತರ ಹೈದರಬಾದಿನಲ್ಲಿ ಚಿತ್ರೋದ್ಯಮ ಬೆಳೆಯಿತು. ನೀವೂ ಅದೇ ರೀತಿಯಲ್ಲಿ ಏಕೆ ಮಾಡಬಾರದು ?

ರಾ- ಆಂಧ್ರದಲ್ಲಿ ಯಾವ ರೀತಿ ಚಿತ್ರೋದ್ಯಮ ಬೆಳೆದಿದೆ ಎಂದು ಹೇಳುತ್ತೀರಿ ? ನೀವು ಹೇಳಿದ ಹಾಗೆ ನಾಗೇಶ್ವರರಾವ್ ಮಾಡಿದರು. ಕೃಷ್ಣ ಮಾಡಿದರು. ಎನ್.ಟ್.ಆರ್ ಅವರೂ ಮಾಡಿದರು ಇವರೆಲ್ಲಾ ಭಾರಿ ಭಾರಿ ಸ್ಟುಡಿಯೋಗಳನ್ನು ಕಟ್ಟಿದರು ಆದರೆ ಅಲ್ಲಿ ರೆಕಾರ್ಡಿಂಗ್ ಮತ್ತು ರೀರೆಕಾರ್ಡಿಂಗ್ ಸೌಲಭ್ಯಗಳು ಸರಿಯಾಗಿಲ್ಲಾ. ಎಲ್ಲರೂ ಮದ್ರಾಸಿಗೆ ಹೋಗುತ್ತಿದ್ದಾರೆ. ಸ್ಟುಡಿಯೋಗಳಿಗೂ ಸಾಕ್ಷ್ಟು ಕೆಲಸವಿಲ್ಲ. ’ ಇವನ್ನೆಲ್ಲಾ ನಾವೇಕೆ ಕಟ್ಟಿದೆವೋ ?’ ಎಂದು ಕೇಳುತ್ತಿದ್ದಾರೆ.. ಎನ್.ಟಿ.ಆರ್ ಏ.ಎನ್.ಆರ್ , ಕೃಷ್ಣ ಅವರು ಅಲ್ಲಿ ಗಳಿಸಿದ್ದೆಷ್ಟು ? ಇಲ್ಲಿ ನಮ್ಮ ಆದಾಯ ಎಷ್ಟು ? ಅದೂ ಅಲ್ಲದೆ ಇಲ್ಲಿ ಸ್ಟುಡಿಯೋಗಳಿವೆ . ಸ್ಟುಡಿಯೋಗಳಿಗಿಂತ ಮುಖ್ಯವಾಗಿ ಇಲ್ಲಿ ಸ್ಥಾಪಿತವಾಗಬೇಕಗಿರುವುದು ಒಳ್ಳೆಯ ಲ್ಯಾಬೋರೇಟರಿಗಳು.

ವೈ- ನೀವೇ ಒಂದು ಲ್ಯಾಬೋರೇಟರಿ ಏಕೆ ಸ್ಥಾಪಿಸಬಾರದು ?
-- ಈ ಪ್ರಶ್ನೆಗೆ ಪಾರ್ವತಮ್ಮ ರಾಜ್ ಕುಮಾರ್ ಅವರು ಥಟ್ಟನೆ ಉತ್ತರಿಸಿದರು.
ಪಾ ರಾ- ನಾನು ಲ್ಯಾಬೊರೇಟರಿ ಪ್ರಾರಂಭಿಸುವುದಕ್ಕೆ ಸಿದ್ದ. ಅದಕ್ಕೆ ಬೇಕಾದ ಅನುಕೂಲಗಳನ್ನು ಸರ್ಕಾರ ಒದಗಿಸಲಿ ಒಂದು ನಿವೇಶನ ಕೇಳಿದರೆ ’ಹೆಸರು ಘಟ್ಟಕ್ಕೆ ಹೋಗಿ’ ಎಂದು ಹೇಳುತ್ತಾರೆ. ಅಲ್ಲಿ ಹೋಗಿ ಲ್ಯಾಬೊರೇಟರಿ ಮಾಡುವದಕ್ಕೆ ಬದಲಾಗಿ ನಮ್ಮ ಫಾರಂನಲ್ಲಿಯೇ ಮಾಡಬಹುದು. ಆದರೆ ಅಷ್ಟು ದೂರ ಯಾರು ಬರುತ್ತಾರೆ ? ಲ್ಯಾಬೋರೇಟರಿ ಯಾವಾಗಲೂ ನಗರದ ಒಳಗೆ ಇರಬೇಕು. ಓಡಾಡುವುದಕ್ಕೆ ಸಮಯ ಪೋಲಾಗಬಾರದು. ಚೌಡಯ್ಯ ಸ್ಮಾರಕಭವನದ ಎದುರಿನಲ್ಲಿ ಒಂದು ನಿವೇಶನವಿದೆ, ಅದನ್ನು ಏಕೆ ಕೊಡಬಾರದು? ಅಥವಾ ನಗರದ ಮದ್ಯಭಾಗದಲ್ಲಿ ಯಾವುದಾದರೂ ಒಂದು ನಿವೇಶನ ಕೊಡಲಿ. ನಾನು ಲ್ಯಾಬೊರೇಟರಿ ಮಾಡುತ್ತೇನೆ.

------ರಾಜ್ ಅವರ ಸಂದರ್ಶನ ಮಾಡಿದ ಒಂದು ವಾರದ ನಂತರ ಕರ್ನಾಟಕ ಸರ್ಕಾರ ಒಂದು ಪ್ರಕಟಣೆಯನ್ನು ಹೊರಡಿಸಿ ರಾಜ್ಯದ ಹೊರಗೆ ತಯಾರಾಗುವ ಕನ್ನಡ ಚಲನಚಿತ್ರಗಳಿಗೂ ಶೇಕಡಾ ೫೦ರಷ್ಟು ಮನರಂಜನೆ ತೆರಿಗೆ ವಿನಾಯಿತಿ ನೀಡುವುದನ್ನು ಒಂದು ವರ್ಷಕಾಲ್ ಮುಂದುವರೆಸುವುದಾಗಿ ತಿಳಿಸಿದೆ. ಇದಕ್ಕೆ ರಾಜ್ ಅವರ ಅಭಿಪ್ರಾಯವೇನಿರಬಹುದು ಎನುವುದನ್ನು ತಿಳಿದು ಕೊಳ್ಳಲು ಮದರಾಸಿನಲ್ಲಿರುವ ಅವರನ್ನು ಸಂಪರ್ಕಿಸಿದಾಗ ಅವರಿಂದ ಬಂದ ಉತ್ತರ -
" ಸರ್ಕಾರ ಒಂದು ವರ್ಷ ವಿನಾಯಿತಿ ನೀಡಲು ನಿರ್ಧರಿಸಿರುವುದು ಸಂತೋಷದ ವಿಷಯ. ಆದರೆ ರಾಜ್ಯದ ಹೊರಗೆ ಚಿತ್ರಗಳನ್ನು ತಯಾರಿಸಲು ಅವಕಾಶ ನೀಡುವುದರ ಜೊತೆಗೆ ರಾಜ್ಯದಲ್ಲಿ ಅನುಕೂಲಗಳನ್ನು ಕಲ್ಪಿಸುವ ಕಡೆಯೂ ಗಮನ ಕೊಡಬೇಕು. ಒಂದು ಅವದಿಯ ಮಿತಿಯನ್ನು ಹಾಕಿಕೊಂಡು ಹಂತಹಂತವಾಗಿ ಕೆಲಸ ಮಾಡುತ್ತಾ ಹೋದರೆ , ಈ ಕೆಲಸಗಳು ವ್ಯವಸ್ಥಿತವಾಗಿ ನಡೆದರೆ ನಮ್ಗೆ ಬೇಕಾದ ಅನುಕೂಲಗಳನ್ನು ಕಲ್ಪಿಸಬಹುದು. ಸರ್ಕಾರ ಈ ದಿಕ್ಕಿನಲ್ಲಿ ಈಗಿನಿಂದಲೆ ಕೆಲಸ ಪ್ರಾರಂಭಿಸಿದರೆ ಒಳ್ಳೆಯದು".
"ನಿಮ್ಮ ನಿರ್ಧಾರ ಈಗ ಬದಲಾಗಿದೆಯೇ " ಎಂದು ಪ್ರಶ್ನಿಸಿದಾಗ " ಇನ್ನು ಒಂದು ವರ್ಷ ಕೆಲಸ ಮಾಡಲು ಅವಕಾಶ ದೊರೆತಿದೆಯಲ್ಲ. ಅನಂತರ ಏನಾಗುವುದೋ ನೋಡೋಣ" ಎಂದು ಹೇಳಿ ನಕ್ಕರು.

>>>>>
ಇತ್ತೀಚೆಗೆ ಸ್ವಪ್ನ ಪುಸ್ತಕ ಮಳಿಗೆಯಲ್ಲಿ ಸಿನಿಮಾಗಳನ್ನು ಹುಡುಕುತ್ತಿದ್ದಾಗ , ಬಾಲಣ್ಣನವರು ಬದುಕಿದ್ದಾಗಲೇ ಅವರನ್ನು ಕುರಿತಾದ ಅವರ ಮಗ ಶ್ರೀನಿವಾಸ್ ನಿರ್ಮಿಸಿರುವ ಸಾಕ್ಷ್ಯಚಿತ್ರವೊಂದು ಸಿಕ್ಕಿತು. " ಕಲಾಭಿಮಾನಿ" ಎಂದು ಅದರ ಹೆಸರು. ಅದರ ಕುರಿತು ಇನ್ನೊಮೆ ಬರೆಯುತ್ತೇನೆ..

Rating
No votes yet

Comments