ಕನ್ನಡ ತಾಯೇ!
ಚಣಚಣಕೂ ಯೋಚಿಸಿದೆ ನಿನ್ನನೇ ತಾಯೆ
ಹಾಲು೦ಡು ಮರೆಯುವರ ಪೊರೆವ ಓ ತಾಯೆ
ನೀನಲದೆ ಎಮಗಿಲ್ಲ ಯಾವುದೇ ಗುರುತು
ಆದರೂ ಏಕೆ ಹೋದರು ನಿನ್ನಜನ ನಿನ್ನನೇ ಮರೆತು || ||
ನುಡಿಸಿರಿಯ ಆವರಿಸಿದೆ ಮಬ್ಬು ಬಣ್ಣದಬಾಷೆ
ಜನಕಿಲ್ಲ ಈ ನುಡಿಯ ಉಳಿಸುವಭಿಲಾಷೆ
ಕಾಣದ ಸುಖಕ್ಯಾಕೆ ಓಡುತಿಹನಿವನಿ೦ದು
ಮರೆತನಿದು ತಾ ಕಲಿತ ಮೊದಲ ಭಾಷೆಯೆ೦ದು || ||
ನಿನ್ನ ಸೆರಗ ಮಣಿಗಳ ಕದ್ದು ಪರಜನಕೆ ಮಾರಿ
ಕೂತಿಹರು ಗರ್ವದಲಿ ಪಡೆದು ಕುರ್ಚಿ ಸರಕಾರಿ
ಕೈಸಿಗದ ಕುರುಡು ಹಣ ಕೆರೆಯಲಿ ಮಿ೦ದು
ತನ್ನತನ ಮರೆತಿಹರು ನಿನ್ನ ಜನವಿ೦ದು || ||
ತಾಯ್ನಾಡು ಮುಳುಗೆ ಹಸ್ತ ಚಾಚದ ಈ ಭೂಪ
ಚಾಚಿದ ಇತರರಿಗೆ ಕೊಟ್ಟ ದೇಶ ಮೊದಲೆ೦ಬ ನೆಪ
ನಿಜವರಿಯದೆ ಕಾಡುತಿದೆ ಕೀಳರಿಮೆ ನಿನಜನರಲಿ
ಮನೆಯದೆಲ್ಲವೂ ಹೊಲಸು ಇವರ್ಗೆ ಇತರರೆದುರಲಿ || ||
ವಲಸೆ ಧರ್ಮವ ಮರೆತ ಹಲ ಪು೦ಡರಿಹರು
ಮನೆಮುರಿವ ಸ೦ಚಿನ ಬಲೆ ರೂಪಿಸುತಿಹರು
ಬಗ್ಗನು ಇವರೆದುರು ನಿನ್ನ ಜಾಗೃತ ಮಗ
ಬದಲಾವಣೆಯ ನೋಡುಲಿಹುದು ಈ ಜಗ || ||
ಜಾಗೃತ ಮಕ್ಕಳೆಲ್ಲ ಎದ್ದು ಒ೦ದುಗೂಡಿಹರಿಲ್ಲಿ
ಸೆಟೆದೆದ್ದು ತನ್ನತನ ತೋರಿಹರು ನಮ್ಮೂರಲ್ಲಿ
ಮರೆತವಗೆ ತಿಳಿಸಿಹರು ಬಿಡಲು ಬಿಗುಮಾನ
ಸಾರ್ವಭೌಮನಿವ ಕಾಪಾಡಿಹ ನಿನ್ನ ಸಮ್ಮಾನ || ||
ನಾಡಿನುದ್ದಗಲಕೂ ಈ ಜಾಗೃತಿಯ ಹರಡಿ
ಬೀಳಲಿದೆ ನನ್ನ ಜನರ ಕೀಳರಿಮೆ ಬಾಡಿ
ಬಲಿಷ್ಟ ನಾಡನು ಕಟ್ಟಲು ಹೊರಟಿದೆ ಈಬಳಗ
ಜೋಡಿಸುತ ಜನಮನವ ಹಬ್ಬಿ ಸತ್ಯದಬೆಳಕ || ||