ಕನ್ನಡ ಭಾಷೆ ಆಡುವವರೆಲ್ಲ ಕನ್ನಡಿಗರು...... .

ಕನ್ನಡ ಭಾಷೆ ಆಡುವವರೆಲ್ಲ ಕನ್ನಡಿಗರು...... .

೧೮೯೬ ನವಂಬರ ೨೨ಕ್ಕೆ ಕೂಡಿದ ಕರ್ನಾಟಕ ವಿದ್ಯಾವರ್ಧಕ ಸಂಗದ ಸಭೆಯಲ್ಲಿ ಅದೇ ಆಗ ಪುಣೆಯಲ್ಲಿ ಕೂಡಲಿರುವ ಎಜುಕೇಶನ್ ಇನ್‍ಸ್ಪೆಕ್ಟರರ ಸಮ್ಮೇಲನದ ಮುಂದಿಡಲು ' ಕನ್ನದ ಶಾಲೆಗಳಲ್ಲಿ ಬಾಳಬೋಧೆ( ದೇವನಾಗರಿ) ಅಕ್ಷರಗಳನ್ನೂ , ಮರಾಠೀ ಭಾಷೆಯನ್ನೂ ಕಲಿಸುವ ಅವಶ್ಯವಿಲ್ಲವೆಂದು " ಠರಾವು ಪಾಸು ಮಾಡಲ್ಪಟ್ಟಿತು.
......

ಕನ್ನಡ ಭಾಷೆ ಆಡುವವರೆಲ್ಲ ಕನ್ನಡಿಗರು . ಇದರಲ್ಲಿ ಪರಸ್ಪರ ಸಂಪರ್ಕ ಸಾಮರಸ್ಯಗಳಿರಬೇಕು. ಕನ್ನಡದ ಮಾತಿನ ಮತ್ತು ಬರೆಹದ ಭಾಷೆಯಲ್ಲಿ ಏಕರೂಪತೆ ಇರಬೇಕು . ಸಾಹಿತ್ಯ , ಸಂಸ್ಕೃತಿ , ಸಮಾಜ , ಸಂಪದಭಿವೃತ್ತಿ- ಈ ಯೆಲ್ಲ ದೃಷ್ಟಿಗಳಿಂದಲೂ ಕರ್ನಾಟಕ ಮುಂದುವರೆಯಬೇಕು - ಎಂಬ ಈ ದೃಷ್ಟಿಯಿಂದ ಪ್ರೇರಿತವಾದ ಸಂಘವು ಬರಿಯ ಇಚ್ಛಾಸಾಮ್ರಾಜ್ಯದಲ್ಲಿ ಮಾತ್ರ ನಿಲ್ಲದೆ ಸಕ್ರಿಯವಾಗಿ ಕಾರ್ಯಪ್ರವೃತ್ತವಾಯಿತು. ಕನ್ನಡರಾಜ್ಯರಮಾರಮಣರೂ ಕನ್ನಡರತ್ನ ಸಿಂಹಾಸನದ ಒಡೆಯರೂ ಆದ ಮೈಸೂರು ಮಹಾರಾಜರನ್ನೂ , ವಂಟಮುರಿ , ಶಿರಸಂಗಿ ದೇಸಾಯರನ್ನೂ ಸಂಘಕ್ಕೆ ಆಶ್ರಯ ಕೊಡಬೇಕೆಂದು ಬಿನ್ನವಿಸಲಾಯಿತು. "ಮೈಸೂರು ಡೈರೆಕ್ಟರರು ಬಂದಾಗ ಅವರನ್ನು ಕರೆದು ವೀಳೆ ಕೊಟ್ಟು ಕಳುಹಿಸತಕ್ಕದ್ದು " ಎಂದು ೧೫-೧೧-೧೮೯೧ರಂದು ನಿರ್ಣಯಿಸಲಯಿತು. ಮಹಾರಾಜರ ಪಟ್ಟಾಭಿಷೇಕ ಸಮಾರಂಭಕ್ಕೆ ಹೋಗಬೇಕೆಂದು ೨೧-೧-೧೮೯೫ರಂದು ನಿರ್ಣಯಿಸಲಾಯಿತು. ೧೫-೨-೧೯೦೦ರ ಸಂಘದ ವಾರ್ಷಿಕ ಸಭೆಗೆ ಮೈಸೂರು ಪ್ರತಿನಿಧಿಗಳನ್ನು ಆಮಂತ್ರಿಸಲಾಯಿತು.

ಸಂಘದ ಹೃದಯವೈಶಾಲ್ಯದ ದ್ಯೋತಕವಾಗಿ ಜುಸ್ಟಿಸ್ ಜಾನ್ ಜಾರ್ಡಿನ್ , ಡಾ. ರಾಮಕೃಷ್ಣ ಭಂಡಾರಕರ ಅವರನ್ನು ಸಂಘದ ಬಹುಮಾನಿತ ಸದಸ್ಯರಾಗಲಿಕ್ಕೆ ಬಿನ್ನವಿಸಲಾಯಿತು. ಸಂಘದ ಪ್ರಥಮ ಅಧ್ಯಕ್ಷರಾಗಿ ಶಾಮರಾವ ವಿಠಲರಾವ ಕೈಕಿಣಿ ೧೮೯೧-೯೨ ರಲ್ಲಿ , ಡಾ ಝೀಗ್ಲರ್ ಅವರು ೧೮೯೩-೯೪ ರಲ್ಲಿ , ಮ್ಯೂರ್ ಸಾಹೇಬರು ೧೮೯೫ರಲ್ಲಿ , ಆಂಡರ್ಸನ್ ಅವರು ೧೮೯೬-೯೭ರಲ್ಲಿ ಕೆಲಸ ಮಾಡಿದರು . ಈ ಐರೋಪ್ಯರೆಲ್ಲ ಬರಿಯ ಹೆಸರಿಗೆ ಮಾತ್ರ ಅಧ್ಯಕ್ಷರಾಗಿರದೆ ಸಂಘದ ಎಲ್ಲ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಭಾಗವಹಿಸಿದರು . ಪ್ರಾಯಶಃ ಇವರ ಸೌಕರ್ಯಕ್ಕಾಗಿಯೇ "ಸಂಘದ ಎಲ್ಲ ಸಭೆಗಳಲ್ಲಿ ಕನ್ನಡ ಮಾತಾಡಲಿಕ್ಕೆ ಅಡ್ಡಿ ಇಲ್ಲ. ಉಳಿದ ಭಾಷೆಯಲ್ಲಿ ಮಾತಾಡುವವರು ಅಧ್ಯಕ್ಷರ ಅಪ್ಪಣೆ ತೆಗೆದುಕೊಂಡು ಮಾತಾಡಬಹುದು " ಎಂದು ೨೨-೧೨-೧೮೯೫ರ ವ್ಯವಸ್ಥಾಪಕರ ಸಭೆಯಲ್ಲಿ ನಿರ್ಣಯಿಸಲಾಯಿತು . (೧) ಕನ್ನಡವನ್ನು ಸಾರ್ವಜನಿಕ ಸಭೆಗಳಲ್ಲಿ ಮಾತನಾಡುವದಕ್ಕೆ ಪ್ರೋತ್ಸಾಹ ಕೊಡುವದು (೨) ಕನ್ನಡದಲ್ಲಿ ಗ್ರಂಥಗಳನ್ನು ಹೊಸದಾಗಿ ಬರೆದು , ಬೇರೆ ಭಾಷೆಯಿಂದ ಪರಿವರ್ತಿಸಿ , ಪ್ರಾಚೀನ ಗ್ರಂಥಗಳನ್ನು ಪರಿಶೋಧಿಸಿ ಪ್ರಕಟಿಸುವದು. (೩) ಈ ಕೆಲಸವನ್ನು ಮಾಡುವಂಥ ವಿದ್ವಾಂಸರಿಗೆ ಸಹಾಯ ಮಾಡುವದು (೪) ಇವೆಲ್ಲ ಕಾರ್ಯಗಳಿಗೆ ಸಹಾಯಕವಾಗುವಂತೆ ಒಂದು ನಿಯತಕಾಲಿಕವನ್ನು ಪ್ರಕಟಿಸುವದು.- ಇವೆಲ್ಲ ಸಂಘದ ಧ್ಯೇಯಗಳಾಗಿದ್ದವು .

Rating
No votes yet