ಕನ್ನಡ ಸಾಹಿತ್ಯದ ಚಿನ್ನದ ಪುಟಗಳು
ಕನ್ನಡ ಸಾಹಿತ್ಯದ ಚಿನ್ನದ ಪುಟಗಳು
ಇದೊಂದು ವಿನೂತನ ಪ್ರಯೋಗ. 'ವಿಕ್ರಾಂತ ಕರ್ನಾಟಕ'ದ ಈ ಸಂಚಿಕೆಯಿಂದ ಆರಂಭವಾಗಿರುವ ಆಧುನಿಕ ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳ ಹತ್ತು ಅತ್ಯುತ್ತಮಗಳನ್ನು ಆಯುವ ಲೇಖನ ಮಾಲೆಗೆ ಸುವರ್ಣ ಕರ್ನಾಟಕಾಚರಣೆ ಒಂದು ನೆಪವಷ್ಟೆ. ವಿಫುಲವಾಗಿ ಬೆಳೆದಿರುವ ಹೊಸಗನ್ನಡ ಸಾಹಿತ್ಯದಿಂದ ಹೀಗೆ ಹತ್ತತ್ತನ್ನು ಆಯ್ಕೆ ಮಾಡುವುದು ಕಷ್ಟದ ಕೆಲಸವೇ ಸರಿ. ಇದು ಅನಗತ್ಯದ ಕೆಲಸ ಎನ್ನುವವರೂ ಇದ್ದಾರೆ. ಅಷ್ಟೇ ಏಕೆ, ಈ ಸಂಚಿಕೆಯಲ್ಲಿ ಪ್ರಕಟವಾಗಿರುವ ಈ ಲೇಖನ ಮಾಲೆಯ ಮೊದಲ ಲೇಖನಕ್ಕಾಗಿ ಹತ್ತು ಅತ್ಯುತ್ತಮ ಪದ್ಯಗಳನ್ನು ಆಯ್ಕೆ ಮಾಡಿರುವ ಕನ್ನಡದ ಹತ್ತು ಅತ್ಯುತ್ತಮ ವಿಮರ್ಶನ ಪ್ರತಿಭೆಗಳಲ್ಲಿ ಒಬ್ಬರಾದ (ಖಂಡಿತ ನಾನು ಈ ಮೂಲಕ ಈ ಲೇಖನ ಮಾಲೆಯ ಹತ್ತು ಅತ್ಯುತ್ತಮ ವಿಮರ್ಶೆಗಳ ಆಯ್ಕೆಯಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ!) ರಾಜೇಂದ್ರ ಚೆನ್ನಿಯವರು ಆತಂಕ ಪಟ್ಟಿರುವಂತೆ, ಇದನ್ನು ಹೊಸ ಮಾಧ್ಯಮ ಸಂಸ್ಕೃತಿಯ 'ಟಾಪ್ ಟೆನ್' ವಾಣಿಜ್ಯ ಮಾದರಿಯು ಸಾಹಿತ್ಯವನ್ನೂ ಪ್ರವೇಶಿಸಿರುವುದಕ್ಕೆ ಸಾಕ್ಷಿಯಾಗಿ ನೋಡುವವರಿದ್ದರೆ ಆಶ್ಚರ್ಯವಿಲ್ಲ! ಹಾಗೇ ಈ ಲೇಖನ ಮಾಲೆಯ ಇನ್ನೋರ್ವ ಲೇಖಕರು ಅನುಮಾನಿಸಿರುವಂತೆ, ಇದೊಂದು ಉದ್ಧಟತನದ ಕೆಲಸವೆಂದು ಭಾವಿಸುವವರೂ ಇರಬಹುದು. ಆದರೆ ಇದು ಎಸ್.ಎಂ.ಎಸ್. ಅಥವಾ ಟಿ.ಆರ್.ಪಿ. ಆಧಾರಿತ ಆಯ್ಕೆಯಾಗಿರದೆ, ಸಂಬಂಧಪಟ್ಟ ಕ್ಷೇತ್ರಗಳ ಪರಿಣತರು ಮಾಡಿರುವ ಆಯ್ಕೆಯಾಗಿರುವುದರಿಂದ; ಇಲ್ಲಿ ಮಾಡಲಾಗಿರುವ ಆಯ್ಕೆ ಅಂತಿಮ ಅಥವಾ ಆತ್ಯಂತಿಕ ಎಂದು ತಪ್ಪಾಗಿ ಭಾವಿಸಿ ಭಯಪಡುವವರಷ್ಟೇ ನಮ್ಮ ಈ ಪ್ರಯೋಗವನ್ನು ಮೆಚ್ಚದೇ ಹೋಗಬಹುದು ಎಂಬುದು ನಮ್ಮ ಭಾವನೆ!
ಕರ್ನಾಟಕದ ಬಂಗಾರದ ಹಬ್ಬದ ಸಂದರ್ಭದಲ್ಲಿ ಕನ್ನಡ ಸಾಹಿತ್ಯವನ್ನೊಮ್ಮೆ ತಿರುಗಿ ನೋಡುವ ನಮ್ಮ ಪ್ರಯತ್ನ ವಿನೂತನವಾಗಿರಲಿ, ಈವರೆಗೆ ಅನುಸರಿಸಲಾಗಿರುವ ಸಮೀಕ್ಷಾತ್ಮಕ ಪ್ರಯೋಗಗಳಿಂದ ವಿಭಿನ್ನವಾಗಿರಲಿ ಎಂಬ ಆಶಯದಿಂದ ನಾವು ಈ 'ಅತ್ಯುತ್ತಮ ಹತ್ತು' ಆಯ್ಕೆಗಳ ವಿಧಾನವನ್ನು ರೂಪಿಸಿಕೊಂಡದ್ದು. ಇದು ಕೂಡಾ ಒಂದು ಕಾಲಘಟ್ಟದ ಸಾಹಿತ್ಯದ ಮೌಲ್ಯಮಾಪನದ ಒಂದು ವಿಶ್ವಾಸಾರ್ಹ ಮಾನದಂಡ ಆಗಬಹುದು ಎಂಬುದನ್ನು ಈ ಲೇಖನ ಮಾಲೆಯನ್ನು ಓದುತ್ತಾ ಹೋದಂತೆ ಓದುಗರಿಗೆ ಮನವರಿಕೆಯಾಗಬಹುದು. ನಮ್ಮ ಪರಿಣತರು ತಮ್ಮ ಆಯ್ಕೆಗಳನ್ನು ಸಮರ್ಥಿಸುವ ಟಿಪ್ಪಣಿಗಳನ್ನೂ ಬರೆಯುತ್ತಿರುವುದರಿಂದ; ಇದು ಶುದ್ಧ ಲೆಕ್ಕಾಚಾರದಲ್ಲಿ ಕಳೆದ ಐವ್ವತ್ತು ವರ್ಷಗಳದ್ದಲ್ಲದಿದ್ದರೂ, ಆಧುನಿಕವೆಂದು ಕರೆಯಬಹುದಾದ ಕನ್ನಡ ಸಾಹಿತ್ಯದ ಪರೋಕ್ಷ ವಿಮರ್ಶೆಯೂ ಆಗುವುದನ್ನು ಓದುಗರು ಗಮನಿಸಬಹುದು. ಇಂತಹ ವಿಶಿಷ್ಟ ಹಾಗೂ ಅಸಾಂಪ್ರದಾಯಿಕ ಆಯ್ಕೆ ವಿಧಾನದಲ್ಲೇ ಕನ್ನಡ ಸಾಹಿತ್ಯ ಅಧ್ಯಯನಕ್ಕೆ ಸಂಬಂಧಿಸಿದಂತೆ ಈವರೆಗೆ ಕಾಣದಂತಹ ಒಳನೋಟಗಳೂ ಮೂಡಿ ಬರಬಹುದೆಂಬ ನಿರೀಕ್ಷೆ ನಮ್ಮದು. ರಾಜೇಂದ್ರ ಚೆನ್ನಿಯವರ ಲೇಖನದಿಂದಲೇ ಈ ಒಳನೋಟಗಳ ಸರಮಾಲೆ ಆರಂಭವಾದಂತಿದೆ.
ಹಾಗೇ ವಿವಾದಗಳ ಸರಮಾಲೆಯೂ ಆರಂಭವಾಗಿರಬಹುದು! ಕನ್ನಡದ ಹತ್ತು ಅತ್ಯುತ್ತಮ ಪದ್ಯಗಳಲ್ಲಿ ಜಿ.ಎಸ್.ಎಸ್., ಕಣವಿ, ತಿರುಮಲೇಶ್ ಹೋಗಲಿ, ಕುವೆಂಪು, ಪು.ತಿ.ನ., ಕೆ.ಎಸ್.ನ.ರ ಪದ್ಯಗಳೂ ಇಲ್ಲ ಎಂದರೆ? ಆದರೆ ನಿಜವಾದ ವಿಮರ್ಶೆಯ ಜಾಯಮಾನವೇ ಹಾಗೆ. ಅದು ಜನಪ್ರಿಯ ಗ್ರಹಿಕೆಗಳ ದಾಕ್ಷಿಣ್ಯಕ್ಕೆ ಸಿಕ್ಕದೆ, ತನ್ನದೇ ತಿಳುವಳಿಕೆಯ ಆತ್ಮವಿಶ್ವಾಸದೊಂದಿಗೆ ಸಾಹಿತ್ಯ ಲೋಕದ ನಿಜಗಳನ್ನು ಸಾಧಿಸುತ್ತಾ ಹೋಗುತ್ತದೆ. ಪ್ರತಿಭೆಯ ಆ ದಿಟ್ಟತನವೇ ಸಾಹಿತ್ಯ ಪ್ರವಚನಕ್ಕೂ, ಸಾಹಿತ್ಯ ವಿಮರ್ಶೆಗೂ ಇರುವ ಮುಖ್ಯ ವ್ಯತ್ಯಾಸ. ಅದು ಸ್ಥಾಪಿತ ಅಭಿಪ್ರಾಯಗಳನ್ನು ಪ್ರಶ್ನೆ ಮಾಡುತ್ತಲೇ, ಆ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಮೂಲಕ ಸಾಹಿತ್ಯ ಅಧ್ಯಯನದ ದಿಗಂತಗಳನ್ನು ವಿಸ್ತರಿಸುತ್ತಾ ಹೋಗುತ್ತದೆ. ನೀವು ಒಪ್ಪಬಹುದು, ಬಿಡಬಹುದು; ವಿಮರ್ಶೆ ತನ್ನ ದಾರಿಯನ್ನು ತಾನೇ ಕಂಡುಕೊಂಡು ಆ ದಾರಿಯ ಅನುಭವದ ಬೆಳಕಲ್ಲಿ ಕೃತಿಯ ಮೌಲ್ಯಮಾಪನ ಮಾಡುತ್ತ, ಕೃತಿಯನ್ನು ಬೆಳಸುತ್ತ ಹೋಗುತ್ತದೆ.
ವಿಮರ್ಶೆಗೆ ಕೃತಿಗೆ ಹೊರತಾದ ಸ್ವಾಯತ್ತತೆ ಎಂಬುದಿದೆಯೇ ಎಂಬುದು ಬಹು ಚರ್ಚಿತ ಪ್ರಶ್ನೆ. ಆದರೆ, ವಿಮರ್ಶೆ ಕೃತಿ ವಿಮರ್ಶೆಯಾಗಷ್ಟೇ ಅಲ್ಲ; ಒಂದು ಕಾಲ ಸಂದರ್ಭದ ಸಮಷ್ಠಿ ವಿಮರ್ಶೆಯೂ ಆಗಿ, ಮನುಷ್ಯ ಪ್ರಜ್ಞೆಯ ಆಯಾಮಗಳನ್ನು ವಿಸ್ತರಿಸುತ್ತಾ ಹೋಗುವ ಮೂಲಕವೇ ಕೃತಿಯ ಅರ್ಥ ಸಂಪತ್ತನ್ನು ಅನ್ವೇಷಿಸುವ ಪ್ರಯತ್ನವೂ ಆಗುತ್ತಿರುವುದನ್ನು ನಾವು ಆಧುನಿಕ ಸಾಹಿತ್ಯ ವಿಮರ್ಶೆಯುದ್ದಕ್ಕೂ ಗಮನಿಸುತ್ತಿದ್ದೇವೆ. ಹೀಗಾಗಿ ಯಾವುದೇ ಒಂದು ಸಾಹಿತ್ಯ ಪ್ರಕಾರದಲ್ಲಿ ಹತ್ತು ಅತ್ಯುತ್ತಮಗಳನ್ನು ಆಯುವಾಗ ಕವಿ ಮುಖ್ಯವಾಗದೆ, ಒಟ್ಟಾರೆ ಕಾವ್ಯವೇ ವಿಮರ್ಶೆಯ ಕೇಂದ್ರ ಕಳಕಳಿಯಾಗುತ್ತದೆ. ಉದಾಹರಣೆಗೆ ಕಾವ್ಯ ಕುರಿತಂತೆ ಚೆನ್ನಿಯವರನ್ನು ಕನ್ನಡದ ಅತ್ಯುತ್ತಮ ಹತ್ತು ಕವಿಗಳನ್ನು ಆಯಿರಿ ಎಂದು ಹೇಳಿದ್ದರೆ, ಅದು ಅವರಲ್ಲಿ ಬೇರೆಯೇ ವಿಮರ್ಶಾ ತರಂಗಗಳನ್ನೆಬ್ಬಿಸಿ ಅವರ ಪಟ್ಟಿಯೇ ಬೇರೆಯಾಗುತ್ತಿತ್ತೇನೋ! ಅಥವಾ ಕನ್ನಡ ಕಾವ್ಯದ ಎಲ್ಲ ಪಂಥಗಳನ್ನೂ ಪ್ರತಿನಿಧಿಸುವಂತಹ ಹತ್ತು ಅತ್ಯುತ್ತಮ ಪದ್ಯಗಳನ್ನು ಆರಿಸಿರಿ ಎಂದು ಹೇಳಿದ್ದರೂ (ಅದನ್ನು ಚೆನ್ನಿ ಮಾಡುತ್ತಿದ್ದರೋ ಇಲ್ಲವೋ ತಿಳಿಯದು!), ಪಟ್ಟಿ ಸಂಪೂರ್ಣ ಭಿನ್ನವಾಗಿರುತ್ತಿತ್ತು. ಅಷ್ಟೇ ಅಲ್ಲ, ಚೆನ್ನಿಯವರನ್ನು ಬಿಟ್ಟು ಬೇರೆಯವರು ಈ ಆಯ್ಕೆ ಮಾಡಿದ್ದಲ್ಲಿ, ಪಟ್ಟಿ ಬೇರೆಯಾಗಿಯೇ ಇರುತ್ತಿತ್ತು ಎಂಬುದನ್ನು ನಾನು ಪ್ರಾಯೋಗಿಕವಾಗಿಯೇ ಕಂಡುಕೊಂಡೆ. ನಾನು ಸುಮ್ಮನೆ, ಇತರ ಒಂದಿಬ್ಬರು ವಿಮರ್ಶಕ ಮಿತ್ರರಿಗೆ ಅವರ ಹತ್ತನ್ನು ಆಯಲು ಹೇಳಿದೆ. ಅವರು ಸಿದ್ಧ ಪಡಿಸಿದ ಪಟ್ಟಿಗಳಲ್ಲ್ಲಿ ಚೆನ್ನಿಯವರ ಪಟ್ಟಿಯ ಅರ್ಧಕ್ಕರ್ಧ ಹೆಸರುಗಳು ಮಾಯವಾಗಿದ್ದವು!
ನಾನು ಇದನ್ನು ಏಕೆ ಹೇಳುತ್ತಿದ್ದೇನೆಂದರೆ, ಸಾಹಿತ್ಯ ವಿಮರ್ಶೆ ಎಷ್ಟೇ ತಾತ್ವಿಕವಾಗಿ ಬೆಳೆಯುತ್ತಿದ್ದರೂ, ಅದರಲ್ಲಿ ವ್ಯಕ್ತಿನಿಷ್ಠ ನೋಟವೂ ಒಂದು ಪ್ರಧಾನ ಆಯಾಮವಾಗಿ ಕ್ರಿಯಾಶೀಲವಾಗಿರುತ್ತದೆ ಎಂಬುದನ್ನು ನಾವು ಅಲ್ಲಗೆಳೆಯಲಾಗುವುದಿಲ್ಲ. ಏಕೆಂದರೆ, ಸಾಹಿತ್ಯ ಅಧ್ಯಯನವೆಂಬುದೇ ಒಂದು ರೀತಿಯಲ್ಲಿ ಮಾನವನ ಅಂತರಂಗದ ಚೈತನ್ಯಶೀಲತೆಯ ಒಂದು ಅಧ್ಯಯನವೂ ಆಗಿರುವುದರಿಂದ, ವಿಮರ್ಶಕನೂ ಒಬ್ಬ ವ್ಯಕ್ತಿಯಾಗಿ ಅದಕ್ಕೆ ಒಂದು ವೈಯುಕ್ತಿಕ ನೆಲೆಯಲ್ಲೂ ಪ್ರತಿಕ್ರಿಯಿಸುತ್ತಲೇ, ತನ್ನ ಸಾಹಿತ್ಯ ಮೀಮಾಂಸೆಯನ್ನು ಕಟ್ಟಿಕೊಳ್ಳುತ್ತಿರುತ್ತಾನೆ. ಆದರೆ ಆ ವಿಮರ್ಶಕನ ವೈಯುಕ್ತಿಕತೆ ಎಷ್ಟರ ಮಟ್ಟಿಗೆ ಸಾಹಿತ್ಯದ ಆಂತರಿಕ ಸ್ವಾಯತ್ತತೆಗೆ ಭಂಗ ಬಾರದಂತೆ ಅದನ್ನು ಅರ್ಥ ಮಾಡಿಕೊಳ್ಳಲು ಯತ್ನಿಸಿದೆ ಎಂಬುದರ ಮೇಲೆ ವಿಮರ್ಶೆಯ ಗುಣಮಟ್ಟ ನಿರ್ಧರಿತವಾಗುತ್ತದೆ. ಚೆನ್ನಿ ಈ ದೃಷ್ಟಿಯಿಂದ ಗಂಭೀರವಾಗಿ ಬರೆಯಲು ಕೂತಾಗಲೆಲ್ಲ ನಮ್ಮ ಶ್ರೇಷ್ಠ ವಿಮರ್ಶಕರಲ್ಲಿ ಒಬ್ಬರೆನಿಸಿಕೊಂಡಿರುತ್ತಾರೆ.
ಸದ್ಯದ ತಮ್ಮ ಆಯ್ಕೆಯನ್ನು ಅವರು ಗಂಭೀರ ಅಧ್ಯಯನ, ವಿವೇಚನೆ ಹಾಗೂ ಔಚಿತ್ಯ ಪ್ರಜ್ಞೆಗಳೊಂದಿಗೆ ಮಾಡಿದ್ದಾರೆಂದು ನಾನು ನಂಬಿದ್ದೇನೆ. ಏಕೆಂದರೆ ಅವರು ಆಯ್ದಿರುವ ಹತ್ತೂ ಪದ್ಯಗಳು ಈವರೆಗಿನ ಕನ್ನಡ ವಿಮರ್ಶೆ ಒಂದಲ್ಲ ಒಂದು ಕಾಲಘಟ್ಟದಲ್ಲಿ ಒಂದಲ್ಲ ಒಂದು ಕಾರಣಕ್ಕೆ ಶ್ರೇಷ್ಠವೆಂದು ಗುರುತಿಸಿದ ಪದ್ಯಗಳೇ ಆಗಿವೆ. ಚೆನ್ನಿಯವರ ಈ ಪಟ್ಟಿಯಲ್ಲಿ shocking ಎನ್ನುವುದು ಏನಾದರೂ ಇದ್ದರೆ, ಅಂತಹ shock ಇಂದು ಕನ್ನಡ ಸಾಹಿತ್ಯಕ್ಕೆ ಅಗತ್ಯವಾಗಿತ್ತೆಂದೇ ನಾನು ಭಾವಿಸಿದ್ದೇನೆ. ಸಾಮಾಜಿಕ ನ್ಯಾಯ, ಲಿಂಗ ನ್ಯಾಯ, ಪ್ರಾದೇಶಿಕ ನ್ಯಾಯಗಳ ಹೆಸರಲ್ಲಿ ಸಾಹಿತ್ಯ ಲೋಕದ ಪುಢಾರಿಗಳು ರಾಜಕೀಯ ಪುಢಾರಿಗಳ ಸಹಕಾರದೊಂದಿಗೆ ಎಲ್ಲ ಅನ್ಯಾಯಗಳನ್ನು ನಡೆಸಿ, ಸಾಹಿತ್ಯವನ್ನು ವೋಟ್ ಬ್ಯಾಂಕ್ ರಾಜಕಾರಣಕ್ಕೆ ಬಳಸಬಹುದಾದ ಸರಕನ್ನಾಗಿ ಮಾರ್ಪಡಿಸಿದ್ದಾರೆ.
ಇದರ ಇತ್ತೀಚಿನ ಉದಾಹರಣೆ, ರಾಜ್ಯ ಸರ್ಕಾರ ಬ್ಯಾರಿ ಸಾಹಿತ್ಯ ಅಕಾಡೆಮಿಯನ್ನು ಸ್ಥಾಪಿಸಲು ಮುಂದಾಗಿರುವುದು. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಸರ್ಕಾರ ತುಳು, ಕೊಂಕಣಿ ಹಾಗೂ ಕೊಡವ ಸಾಹಿತ್ಯ ಅಕಾಡೆಮಿಗಳನ್ನು ಸ್ಥಾಪಿಸಲು ಹೊರಟಾಗ ದೊಡ್ಡ ವಿವಾದವೇ ಉಂಟಾಯಿತು. ಏಕೆಂದರೆ, ಸರ್ಕಾರದ ಈ ನಿರ್ಧಾರ ಯಾವುದೇ ಭಾಷಾ ಜನಸಮುದಾಯದ ಬೇಡಿಕೆಯನ್ನಾಧರಿಸಿರಲಿಲ್ಲ. ಮೂಲತಃ ಅದು ಆಗ ಅಧಿಕಾರ ರಾಜಕಾರಣದ ನಡುಮಧ್ಯೆ ಇದ್ದ ವೀರಪ್ಪ ಮೊಯ್ಲಿಯವರ ಚುನಾವಣಾ ಕ್ಷೇತ್ರದ ವೋಟ್ ಬ್ಯಾಂಕ್ ರಾಜಕಾರಣವೇ ಆಗಿತ್ತು. ಆಗ ರಾಜ್ಯ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಜಿ.ಎಸ್.ಶಿವರುದ್ರಪ್ಪನವರು, ರಾಜ್ಯ ಸಾಹಿತ್ಯ ಅಕಾಡೆಮಿಯು ಕನ್ನಡ ಸಾಹಿತ್ಯ ಅಕಾಡೆಮಿಯಾಗಿರದೆ, ಕರ್ನಾಟಕ ಸಾಹಿತ್ಯ ಅಕಾಡೆಮಿ ಆಗಿರುವುದರಿಂದ; ಆದರ ಆಶ್ರಯದಲ್ಲೇ, ಕನ್ನಡ ಸಾಹಿತ್ಯದ ಜೊತೆಯಲ್ಲೇ, ಕನ್ನಡದ ಇತರ ಜೊತೆಗಾರ ಭಾಷೆಗಳ ಸಾಹಿತ್ಯ ಪೋಷಣೆ ನಡೆಯುವುದು ಅವುಗಳ ಗುಣಮಟ್ಟದ ದೃಷ್ಟಿಯಿಂದ ಕೂಡಾ ಒಳ್ಳೆಯದು ಎಂಬ ಸದ್ಭಾವನೆಯಿಂದಲೇ, ಈ ಅಕಾಡೆಮಿಗಳ ಸ್ಥಾಪನೆಯನ್ನು ವಿರೋಧಿಸಿದ್ದರು. ಆ ಹೊತ್ತಿಗಾಗಲೇ ಜಿ.ಎಸ್.ಎಸ್. ಯಾರ ಶಿಫಾರಸೂ ಇಲ್ಲದೆ, ತುಳು ಭಾಷೆಯ ಉತ್ತಮ ಕೃತಿಗಳು ಪ್ರಕಟವಾದಲ್ಲಿ, ಅವುಗಳಿಗೂ ಅಕಾಡೆಮಿ ಬಹುಮಾನಗಳನ್ನು ನೀಡುವ ಯೋಜನೆಯನ್ನು ಆರಂಭಿಸಿದ್ದರು. ಆದರೂ, ಅವರನ್ನು ಹಾಗೂ ಅವರೊಂದಿಗೆ ಸಹಮತ ಹೊಂದಿದ್ದವರನ್ನು ಭಾಷಾ ಸಂಕುಚಿತವಾದಿಗಳೆಂದು, ಇಂದು ಬ್ಯಾರಿ ಸಾಹಿತ್ಯ ಅಕಾಡೆಮಿ ಸ್ಥಾಪನೆಯನ್ನು ಬಹುಮುಖಿ ಸಂಸ್ಕೃತಿ ಪೋಷಣೆಯ ಹೆಸರಲ್ಲಿ ಸಮರ್ಥಿಸುತ್ತಿರುವ ಪ್ರಗತಿಪರೇಶ್ವರರೇ ಖಂಡಿಸಿದ್ದರು.
ಆದರೆ ಒಂದು ಅಕಾಡೆಮಿಯ ಅಗತ್ಯವೇಳುವಂತಹ ಮೌಲಿಕ ಸಾಹಿತ್ಯ ನಿರ್ಮಾಣ ಮಾಡುವ ಸೃಷ್ಟಿಶೀಲ ಶಕ್ತಿಯನ್ನು - ಅದರ ಜೊತೆಗೇ ಅದಕ್ಕೆ ಓದಿನ ಮನ್ನಣೆ ನೀಡುವಂತಹ ಜನಸ್ತೋಮವನ್ನೂ - ಒಂದು ಭಾಷೆ ತನ್ನ ಸ್ವಂತ ಶಕ್ತಿಯಿಂದ ರೂಢಿಸಿಕೊಳ್ಳುವ ಮುನ್ನವೇ ಅದಕ್ಕೊಂದು ಅಕಾಡೆಮಿ ವ್ಯವಸ್ಥೆ ಒದಗಿಸಿವುದು ಅಕಾಡೆಮಿಯ ಪರಿಕಲ್ಪನೆಯ ಘನತೆಗಷ್ಟೇ ಅಲ್ಲ, ಸಾಹಿತ್ಯದ ಪರಿಕಲ್ಪನೆಯ ಘನತೆಗೂ ಕುಂದುಂಟು ಮಾಡುವಂತಹ ಅಗ್ಗದ ಕ್ರಮವಾಗುವುದಿಲ್ಲವೇ? ಈ ಅಕಾಡೆಮಿಗಳಿಂದಾಗಿ ಈಗ ತುಳು, ಕೊಂಕಣಿ, ಕೊಡವ ಭಾಷೆಗಳಲ್ಲಿ ಎಂತಹ ಸಾಹಿತ್ಯ ಸೃಷ್ಟಿಯಾಗುತ್ತಿದೆ, ಇದಕ್ಕೆ ಎಷ್ಟು ಓದುಗ ವರ್ಗ ಸೃಷ್ಟಿಯಾಗಿದೆ ಹಾಗೂ ಕ್ರಮೇಣ ಎಂತಹ ಸಾಹಿತಿಗಳಿಗೆ ಮನ್ನಣೆ ನೀಡಬೇಕಾಗಿದೆ ಎಂಬುದನ್ನು ಈ ಭಾಷಾ ಸಮುದಾಯಗಳ ಸಾರಸ್ವತ ಲೋಕದ ಜನರೇ ದಿಟ್ಟವಾಗಿ ಹೇಳಬೇಕಿದೆ. ಇದಕ್ಕೆ ಬದಲಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿಯಲ್ಲೇ ಈ ಭಾಷೆಗಳ ಸಾಹಿತಿಗಳಿಗೆ ಸೂಕ್ತ ಪ್ರಾತಿನಿಧ್ಯ ನೀಡಿ, ಆಯಾ ಭಾಷೆಗಳಲ್ಲಿ ಗಮನಾರ್ಹ ಕೃತಿಗಳು ಪ್ರಕಟವಾದಾಗ ಒಂದು ತೌಲನಿಕ ಚರ್ಚೆಯ ನೆಲೆಯಲ್ಲಿ ಅದರ ಮೌಲ್ಯಮಾಪನ ಮಾಡಿ, ಅವಕ್ಕೆ ಸೂಕ್ತ ಮನ್ನಣೆ ನೀಡುವುದರ ಮೂಲಕ ಆ ಭಾಷಾ ಸಾಹಿತ್ಯಗಳನ್ನು ಇನ್ನಷ್ಟು ಮೌಲಿಕವಾಗಿ ಬೆಳೆಸಬಹುದಿತ್ತಲ್ಲವೇ? ಇನ್ನು ಬ್ಯಾರಿ ಭಾಷೆಯಲ್ಲಿ ಯಾವ ಲಿಪಿಯೊಂದಿಗೆ ಎಂತಹ ಮತ್ತು ಎಷ್ಟು ಸಾಹಿತ್ಯ ಬರುತ್ತಿದೆ ಹಾಗೂ ಅದಕ್ಕೆಂತಹ ಓದುಗ ವರ್ಗವಿದೆ ಎಂಬುದರ ಒಂದು ಸಮೀಕ್ಷೆಯನ್ನೂ ಮಾಡದೆ, ರಾಜಕೀಯ ಒತ್ತಡಕ್ಕೆ ಮಣಿದು ಅದಕೊಂದು ಅಕಾಡೆಮಿ ಸ್ಥಾಪಿಸುವುದನ್ನು ಈಗ ಕನ್ನಡದಲ್ಲಿ ಅತ್ಯುತ್ತಮ ಸಾಹಿತ್ಯ ನಿರ್ಮಿಸುತ್ತಿರುವ ನಮ್ಮ ಬ್ಯಾರಿ ಗೆಳೆಯರು ಹೇಗೆ ಸ್ವಾಗತಿಸುವರೋ ನೋಡಬೇಕಾಗಿದೆ!
ಇಂತಹ ದಟ್ಟ ಅಸಾಹಿತ್ಯಿಕ ವಾತಾವರಣದಲ್ಲಿ, ಸಾಹಿತ್ಯದಿಂದ ಸಾಹಿತ್ಯದ ಪರಿಮಳದ ಹೊರತಾಗಿ ಇನ್ನೆಲ್ಲಾ 'ಪರಿಮಳ'ಗಳು ಹೊಮ್ಮುವುದು ಸಹಜವೇ ಆಗಿದೆ. ಮಾನವ ಸಹಜ ಸಾಹಿತ್ಯಾಭಿವ್ಯಕ್ತಿಗೆ ತೆರೆದುಕೊಂಡ ಎಷ್ಟೋ ಎಳೆಯರು ಈ 'ಪರಿಮಳ'ಗಳಿಂದ ವಿಚಲಿತರಾಗುವುದೂ ಉಂಟು. ಇಂತಹ ಸಂದಿಗ್ಧ ಸಂದರ್ಭದಲ್ಲಿ ಚೆನ್ನಿಯವರು ಸಾಹಿತ್ಯದ ಮೂಲ ಸೆಲೆಗಳಿಗೇ ಕೈ ಹಾಕಿ ಹುಟ್ಟಿಸಿರುವ ಈ shock, ಸದ್ಯದ ಕನ್ನಡ ಸಾಹಿತ್ಯ ಸಂದರ್ಭಕ್ಕೆ ಕೆಟ್ಟದ್ದಕ್ಕಿಂತ ಒಳ್ಳೆಯದನ್ನೇ ಮಾಡುವುದು ಎಂದು ನಾನು ನಂಬಿದ್ದೇನೆ. ಹಾಗೇ ಈ ಲೇಖನ ಮಾಲೆಯ ಮುಂದಿನ ಲೇಖನಗಳು ಕೂಡಾ ಇನ್ನಷ್ಟು ಆಶ್ಚರ್ಯಗಳು ಹಾಗೂ ಕಂಪನಗಳೊಂದಿಗೆ ಮೂಡಿ ಬಂದು ಕನ್ನಡ ಸಾಹಿತ್ಯ ಲೋಕದ ತತ್ಕಾಲೀನ ಕೊಳೆಗಳನ್ನು ತೊಳೆಯುತ್ತದೆ ಎಂದು ನಾವು ನಿರೀಕ್ಷಿಸಿದ್ದೇವೆ. ಈ ದೃಷ್ಟಿಯಿಂದ ನಮ್ಮ ಈ ಪ್ರಯತ್ನ ಕನ್ನಡ ಸಾಹಿತ್ಯ ಲೋಕದ ಪುನರಾನಾವರಣದ ಒಂದು ಪ್ರಾಮಾಣಿಕ ಪ್ರಯತ್ನವೇ ಆಗಿದೆ ಎಂಬುದನ್ನು ನಮ್ಮ ಓದುಗರೂ ಒಪ್ಪುತ್ತಾರೆಂಬುದು ನಮ್ಮ ಭಾವನೆ. ಇದಕ್ಕಿಂತ ಹೆಚ್ಚಾಗಿ, ಇದು ನಮ್ಮ ಓದುಗರನ್ನು ಒಳ್ಳೆಯ ಸಾಹಿತ್ಯದ ಓದಿನ ಕಡೆ ಪ್ರೇರೇಪಿಸದರೆ, ನಮ್ಮ ಈ ಪ್ರಯತ್ನ ಸಾರ್ಥಕ.
ಸಾಹಿತ್ಯ ಪಂಡಿತರು - ಪರಿಣತಷ್ಟೇ ಅಲ್ಲ, ಸಾಮಾನ್ಯ ಓದುಗರೂ ನಮ್ಮ ಆಯ್ಕೆಗಳನ್ನು ಕುರಿತು ದಿಟ್ಟವಾಗಿ ಆದರೆ ಸ್ಪಷ್ಟವಾಗಿ ಮತ್ತು ಸಂಕ್ಷಿಪ್ತವಾಗಿ ಪ್ರತಿಕ್ರಿಯಿಸುವ ಮೂಲಕ ಈ ಒಟ್ಟಾರೆ ಚರ್ಚೆಯಲ್ಲಿ ಭಾಗವಹಿಸಲು ಕೋರುತ್ತೇವೆ.
ಅಂದಹಾಗೆ: ಅಧಿಕಾರ ಹಂಚಿಕೊಂಡು ಮುಖ್ಯಮಂತಿಯಾದಾಗ ಒಂಚೂರೂ ಕಾಣದೇ ಹೋಗಿದ್ದ ಬಿ.ಜೆ.ಪಿ.ಯ ಕೋಮುವಾದಿತನ, ಅಧಿಕಾರ ಬಿಟ್ಟುಕೊಡಬೇಕಾದ ದಿನ ಹತ್ತಿರವಾಗುತ್ತಿದ್ದಂತೆ, ಕುಮಾರಸ್ವಾಮಿಯವರಿಗೆ ಬೃಹದಾಕಾರವಾಗಿ ಕಾಣತೊಡಗಿದೆ! ಅವರ ತಂದೆ ದೇವೇಗೌಡರ ತಳಮಳವಂತೂ ತಾರಕಕ್ಕೇರಿದೆ. ಅವರ ಕೈವಾಡ ಎಲ್ಲೆಲ್ಲೂ ಕಾಣತೊಡಗಿದೆ. ಹಲವಾರು ದಳಗಳೂ, ವೇದಿಕೆಗಳೂ ಇದ್ದಕ್ಕಿದ್ದಂತೆ ಅಧಿಕಾರ ಹಸ್ತಾಂತರದ ವಿರುದ್ಧ ತಮ್ಮ ಶಕ್ತ್ಯಾನುಸಾರ ಪ್ರದರ್ಶನಕ್ಕೆ ಮುಂದಾಗಿವೆ! ತನಗೂ ರಾಜಕಾರಣಕ್ಕೂ ಸಂಬಂಧವೇ ಇಲ್ಲವೆಂದು ಹೇಳಿಕೊಳ್ಳುತ್ತಿದ್ದ ಕೋಮು ಸೌಹಾರ್ದ ವೇದಿಕೆ, ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲದಿರುವ ತನ್ನ ಗುಪ್ತ ರಾಜಕೀಯ ದರ್ಶನವನ್ನು ಈ ಮೂಲಕ ಬಯಲು ಮಾಡಿಕೊಂಡಿದೆ. ಬಿ.ಜೆ.ಪಿ. ನಮಗೆ ಇಷ್ಟವಿರಲಿ - ಇಲ್ಲದಿರಲಿ, ಚುನಾವಣೆಗಳಲ್ಲಿ ಜನ ಮನ್ನಣೆ ಪಡೆದಿರುವ ಒಂದು ರಾಜಕೀಯ ಪಕ್ಷ; ಅದನ್ನು ಜನಸಂಘಟನೆಯ ಮೂಲಕ ಚುನಾವಣಾ ಆಖಾಡದಲ್ಲೇ ಎದುರಿಸಬೇಕು ಎಂಬ ಪ್ರಜಾಪ್ರಭುತ್ವವಾದಿ ನೈತಿಕತೆಯಾಗಲೀ, ವಿಶ್ವಾಸವಾಗಲೀ ಇಲ್ಲದವರು ಮಾತ್ರ ಇಂತಹ ರಾಜಕೀಯ ನಾಟಕಗಳಲ್ಲಿ ಭಾಗವಹಿಸಿಯಾರು.