ಕಬ್ಬು ತಿನ್ನುವ ಸಂಭ್ರಮ:

ಕಬ್ಬು ತಿನ್ನುವ ಸಂಭ್ರಮ:

ಮ್ಮೂರಿನಲ್ಲಿ ಆಗ ಒಂದೇ ಪ್ರಾಥಮಿಕ ಶಾಲೆಯಿದ್ದಿದ್ದು. ನಾವು ಮನೆಯಿಂದ ಶಾಲೆಗೆ ಹೋಗಬೇಕಾದರೆ ಸುಮಾರು ಒಂದು ಗಂಟೆ ಕಾಲ ನಡೆದುಕೊಂಡೇ ಹೋಗಬೇಕಾಗಿತ್ತು. ಶಾಲೆಯಲ್ಲಿ ಒಂಭತ್ತೂವರೆಗೆ ಸ್ಟಡಿ ಬೆಲ್ ಬಾರಿಸುತ್ತಿದ್ದರಿಂದ ಅದಕ್ಕಿಂತ ಮುಂಚೆ ಎಲ್ಲರೂ ತರಗತಿಯ ಒಳಗಡೆ ಹಾಜರಿರಬೇಕೆಂಬುದು ಅಂದಿನ ನಿಯಮ. ಅದಕ್ಕಾಗಿ ಎಂಟು ಗಂಟೆಗೇ ಮನೆಯಿಂದ ಹೊರಡಬೇಕಾಗುತ್ತಿತ್ತು. ಈಗಿನಂತೆ ಅಂದು ಶಾಲೆಗಳಲ್ಲಿ ಬಿಸಿಯೂಟ ಇರಲಿಲ್ಲ. ಹಾಗಾಗಿ ಬೆಳಗ್ಗೆಯೇ ಮಧ್ಯಾಹ್ನದ ಊಟವನ್ನೂ ಬುತ್ತಿ ಕಟ್ಟಿಕೊಂಡು  ಹೋಗಬೇಕಾಗುತ್ತಿತ್ತು. ಒಂದಷ್ಟು ಪುಸ್ತಕಗಳು, ಒಂದು ದೊಡ್ಡದಾದ ಕೊಡೆ, ಬುತ್ತಿ(ಟಿಫನ್ ಬಾಕ್ಸ್‌) ಇವೆನ್ನೆಲ್ಲಾ ಒಂದೇ ಬ್ಯಾಗಿನಲ್ಲಿಟ್ಟುಕೊಂಡು, ಬೆನ್ನು ಬಾಗಿಸಿಕೊಂಡು ಹೋಗಬೇಕಾಗಿತ್ತು. ಬೆನ್ನಿಗೆ ಭಾರ ಹೊತ್ತರೂ ಪರವಾಗಿಲ್ಲ, ಕೈ ಬೀಸಿ ನಡೆಯುವುದು ಅಂದಿನ ಖುಷಿ.
ಶಾಲೆಗೆ ಹೋಗಲು ಸರಿಯಾದ ರಸ್ತೆಗಳು ಇರಲಿಲ್ಲ. ಹಳ್ಳಿಯಾದ್ದರಿಂದ ಅಡಿಕೆ ತೋಟ, ಗದ್ದೆ, ಗುಡ್ಡ, ನದಿ, ಇವುಗಳನ್ನೆಲ್ಲಾ ದಾಟಿಕೊಂಡು ಕಾಲುದಾರಿಯಲ್ಲೇ ಹೋಗಬೇಕಾಗಿತ್ತು. ಅಂದು ಎಳೆಯ ಮಕ್ಕಳಾಗಿದ್ದರಿಂದ ದೊಡ್ಡ ಬ್ಯಾಗನ್ನು ಹೊತ್ತುಕೊಂಡು ಹೋಗಲು ಕಷ್ಟವೆನಿಸಿದ್ದರೂ, ಇಂದು ಅದೊಂದು ಸುಂದರ ನೆನಪಾಗಿ ಉಳಿದಿದೆ. ಇಂದು ಗಂಟೆಗಟ್ಟಲೇ ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿಹಾಕಿಕೊಳ್ಳುತ್ತಾ ಕಾಯುವಾಗ,  ದಣಿವೊಂದನ್ನು ಬಿಟ್ಟರೆ ಯಾವುದೇ ಅಡೆತಡೆಯಿಲ್ಲದೆ, ಯಾರದೋ ಅಡಿಕೆ ತೋಟದಿಂದ ಹಾದು ಹೋಗುವಾಗ ಅಲ್ಲಿ ಉದುರಿದ್ದ ಅಡಿಕೆ ಹೂ(ಪಿಂಗಾರ) ವನ್ನು ಹೆಕ್ಕುತ್ತಾ, ಭೂಮಿಯೇ ಹಸಿರಾಗಿರುವಂತೆ ವಿಶಾಲವಾಗಿ ಚಾಚಿಕೊಂಡಿರುವ ಭತ್ತದ ತೆನೆಗಳ ಅಂದವನ್ನು ಆಸ್ವಾದಿಸುತ್ತಾ..ಈ ಹಸಿರು ಸಿರಿಯಲಿ..ಮನಸು ಮೆರೆಯಲಿ..ಎಂದು ತಮ್ಮದೇ ರಾಗದಲ್ಲಿ ಹಾಡುತ್ತಾ, ನದಿಯನ್ನು ದಾಟಿ ಹೋಗುವಾಗ ಒಬ್ಬರಿಗೊಬ್ಬರು ನೀರನ್ನು ಚುಮುಕಿಸಿಕೊಳ್ಳುತ್ತಾ... ನಮ್ಮದೇ ಸಾಮ್ರಾಜ್ಯವೆಂಬಂತೆ ಸಾಗುತ್ತಿದ್ದ ಆ ದಿನಗಳೇ ಎಷ್ಟೋ ವಾಸಿ ಎಂದೆನಿಸದೆ ಇರದು.
ಹೀಗೆ ಎಂಟು ಗಂಟೆಗೆ ಮನೆಯಿಂದ ಶಾಲೆಗೆ ಹೊರಟರೆ ಅಲ್ಲಲ್ಲಿ ಇಬ್ಬರು, ಮೂವರು ಜತೆಯಾಗುತ್ತಾ ಇನ್ನೂ ರೆಡಿಯಾಗದೆ ಇದ್ದವರಿಗಾಗಿ ಮನೆ ಬದಿಯಲ್ಲಿ ಕಾಯುತ್ತಾ ಎಲ್ಲರನ್ನೂ ಒಟ್ಟು ಸೇರಿಸಿಕೊಂಡಾಗ ಮಕ್ಕಳ ಸೈನ್ಯವೆಂಬಂತೆ ನಮ್ಮದೇ ಜೋರಿನಲ್ಲಿ ರಾಜಾರೋಷವಾಗಿ ನಗು ಹರಟೆಯಿಂದ ಸಾಗುತ್ತಿದ್ದೆವು. ಸಮಯಕ್ಕೆ ಸರಿಯಾಗಿ ಅಂದರೆ ಒಂಭತ್ತೂವರೆಯ ಬೆಲ್ ಕೇಳಿಸಿತೆಂದರೆ ಉದ್ದಕ್ಕೆ ಸುಮಾರು ಹೊತ್ತು ಹೊಡೆಯುತ್ತಿದ್ದ ಆ ಗಂಟೆಯ ಶಬ್ದ ನಿಲ್ಲುವುದರೊಳಗೆ ತರಗತಿ ಸೇರಿಕೊಳ್ಳಬೇಕೆಂದು ಆತುರಾತುರವಾಗಿ ಶಾಲೆಯ ಗೇಟಿನಿಂದ ಒಳಗೆ ಓಡಿಕೊಂಡು ಹೋಗಿ ಕೂರುವ ಸಂಭ್ರಮವೇ ಬೇರೆಯಾಗಿತ್ತು.
ಸಂಜೆ ನಾಲ್ಕು ಗಂಟೆಯ ಹೊತ್ತಿಗೆ ಅದೇ ರೀತಿ ಪುನಃ ಬೆಲ್ ಬಾರಿಸುತ್ತಿದ್ದರು. ಇನ್ನು ಮನೆಗೆ ನಡೆದುಕೊಂಡೇ ಹೋಗಬೇಕಿತ್ತಲ್ವಾ..ಅಲ್ಲಿಂದ ಶುರುವಾಗುತ್ತಿತ್ತು ನಮ್ಮ ಬೇಟೆ. ಮಧ್ಯಾಹ್ನದ ಮಾಡಿದ ಊಟ, ಆಟ - ಪಾಟದ ನಡುವೆ ಎಲ್ಲೋ ಮಾಯವಾಗಿ ಬಿಡುತ್ತಿತ್ತು. ಸಂಜೆ ವೇಳೆಗೆ ಹೊಟ್ಟೆ ತಾಳ ಹಾಕಲು ಶುರುಮಾಡುತ್ತಿತ್ತು. ಅದೆಷ್ಟೋ ಕಾಯಿಗಳು ನೇರಳೆ ಹಣ್ಣು, ಕುಂಟಾಲ ಹಣ್ಣು, ಚೂರಿ ಕಾಯಿ(ಹಳ್ಳಿಗಳಲ್ಲಿ ಹೆಚ್ಚಾಗಿ ಕಾಣಸಿಗುವ ಈ ಹಣ್ಣು ತುಂಬಾ ರುಚಿಯಾಗಿರುತ್ತದೆ, ಗಿಡದ ತುಂಬ ಮುಳ್ಳುಗಳೇ ಇರುವುದರಿಂದ ಹಣ್ಣುಗಳನ್ನು ಕೊಯ್ಯುವಾಗ ಅವು ಚಚ್ಚುವ ಸಾಧ್ಯತೆಗಳೇ ಹೆಚ್ಚು- ಚೂರಿಯಂತೆ), ಇಂತಹ ಹಣ್ಣುಗಳು ಆಗ ತುಂಬಾನೇ ಸಿಗುತ್ತಿದ್ದವು. ಇನ್ನೂ ಹೆಚ್ಚೆಂದರೆ ತೋಟದಲ್ಲಿರುತ್ತಿದ್ದ ಕಬ್ಬುಗಳು ನಮ್ಮ ಗಮನಸೆಳೆಯುತ್ತಿದ್ದದು.
ಎತ್ತರೆತ್ತರಕ್ಕೆ ಬೆಳೆದು ನಿಂತಿರುತ್ತಿದ್ದ ಕಬ್ಬುಗಳು ನೋಡಿದವರ ಬಾಯಲ್ಲಿ ನೀರೂರಿಸುವಂತಿದ್ದವು. ತೋಟದಲ್ಲಿ ಕೆಲಸ ಮಾಡುತ್ತಿದ್ದ ಆಳುಗಳಲ್ಲಿ ಕೇಳಿ ಒಂದೆರಡು ಕಬ್ಬುಗಳನ್ನು ದಾರಿಯಲ್ಲಿ ಹೋಗುವಾಗಲೇ ಸ್ವಾಹ ಮಾಡುತ್ತಿದ್ದೆವು. ಪರಿಚಯಸ್ಥರ ತೋಟದಿಂದಾದರೆ ನಾವೇ ಹೋಗಿ ಕೀಳುತ್ತಿದ್ದೆವು ಅಂದು ಮಕ್ಕಳು ಎಂಬ ವಿನಾಯಿತಿ ಸಿಗುತ್ತಿತ್ತು. ಅವುಗಳನ್ನು ಹೇಗೋ ಸಿಗಿದು ನದಿ ಬದಿಯ ಬಂಡೆ ಮೇಲೆ ಕೂರಲು ಪ್ರಶಸ್ತವಾದ ಸ್ಥಳದಲ್ಲಿ ಒಟ್ಟಾಗಿ ಸುತ್ತ ಕುಳಿತು ಕಾಲನ್ನು ನೀರಲ್ಲಿ ಇಳಿಬಿಟ್ಟು ಆಡುತ್ತಾ ಕಬ್ಬು ತಿನ್ನುವುದೆಂದರೆ ಹೇಳಲಾರದ ಖುಷಿ,ಸಂಭ್ರಮ. ಎಲ್ಲವನ್ನೂ ತಿಂದು ಮುಗಿಸಿದ ಮೇಲೆಯೇ ಅಲ್ಲಿಂದ ಕಾಲುಕೀಳುತ್ತಿದ್ದುದು. ಹೀಗೆ ಮುಂಜಾನೆ ಒಂದು ಗಂಟೆಯಲ್ಲಿ ಸಾಗುತ್ತಿದ್ದ ನಮ್ಮ ಪಯಣ ಹಿಂತಿರುಗಿ ಬರಬೇಕಾದರೆ ಎರಡು ಗಂಟೆಗೂ ಹೆಚ್ಚು ಸಮಯ ಬೇಕಾಗುತ್ತಿತ್ತು.
ಇದೆಲ್ಲಾ ಬರೆಯಬೇಕೆಂದೆನಿಸಿದ್ದು ಮೊನ್ನೆಯ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ, ನಮ್ಮ ಆಂಟಿ ನೂರ ಇಪ್ಪತ್ತು ರೂಪಾಯಿ ಕೊಟ್ಟು ಎರಡು ಉದ್ದದ ಕಬ್ಬುಗಳನ್ನು ತಂದು ಹುಡುಗಿಯರಿಗೆಲ್ಲಾ ಹಂಚಿದಾಗ.. ಬೆಲೆ ಕೊಟ್ಟರೂ ಸಿಹಿಯಾಗಿರದ ಇಂದಿನ ಕಬ್ಬನ್ನು ತಿಂದಾಗ, ತೋಟದಿಂದಲೇ ಕೀಳುತ್ತಿದ್ದ ಯಾವುದೇ ಬೆಲೆ ಇಲ್ಲದ ಕಬ್ಬನ್ನು ತಿನ್ನುವಾಗ ಆಗುತ್ತಿದ್ದ ಸಂಭ್ರಮವೇ ಮಿಗಿಲು.

Rating
No votes yet

Comments

Submitted by Premashri Mon, 01/21/2013 - 14:57

ಬಾಲ್ಯವನ್ನು ನೆನಪಿಸಿದಿರಿ.ದಾರಿಬದಿಯ ನೆಲ್ಲಿಕಾಯಿ,ಮಾವಿನಕಾಯಿ, ಗೇರುಹಣ್ಣು,ಹುಣಸೇಹುಳಿ.... ಹೀಗೆ ಮುಂಜಾನೆ ಒಂದು ಗಂಟೆಯಲ್ಲಿ ಸಾಗುತ್ತಿದ್ದ ನಮ್ಮ ಪಯಣವೂ ಹಿಂತಿರುಗಿ ಬರಬೇಕಾದರೆ ಎರಡು ಗಂಟೆಗೂ ಹೆಚ್ಚು ಸಮಯ ಬೇಕಾಗುತ್ತಿತ್ತು :) :)

Submitted by tthimmappa Mon, 01/21/2013 - 19:26

ಮಧ್ಯಾಹ್ನದ ಸ್ಕೂಲಿಗೆ ಚಕ್ಕರ್ ಹಾಕಿ ಕೆರೆಯಲ್ಲಿ ಈಜು ಹೊಡೆದು ಕದ್ದು ಕಬ್ಬು ಮುರಿದು ತಿನ್ನುತ್ತಿದ್ದುದು ನೆನಪಾಯಿತು