ಕಮಲಾ ದಾಸ್ ಮತ್ತು ಸಿಂಹ

ಕಮಲಾ ದಾಸ್ ಮತ್ತು ಸಿಂಹ

Kamala Dasಹುಡುಗಿ ಒಬ್ಬಳು ತನ್ನ ನಲ್ಲನಿಗೆ ಕಾಯ್ತಾ ಇದ್ದಾಳೆ. ಅವಳ ನಲ್ಲ ಒಬ್ಬ ರಾಜಕಾರಣಿ. ಅವನನ್ನು ಭೇಟಿ ಮಾಡಲು ಕಾತರಿಸ್ತಾ ಇದ್ದಾಳೆ… ಕಾಯ್ತಾ ನಲ್ಲನ್ನ ಬಣ್ಣಿಸ್ತಾಳೆ. ಅವನ ಇಷ್ಟ, ಕಷ್ಟ, ಪ್ರೀತಿ ದ್ವೇಷ ಎಲ್ಲಾ ವರ್ಣಿಸ್ತಾ ತನ್ನನ್ನೇ ತೆರೆದಿಟ್ಟುಕೊಳ್ಳುತ್ತಾಳೆ. ಸಿಂಹದ ರಾಶಿಯ ಅವನ ಜತೆಗೆ ತನ್ನ ಸಂಗವನ್ನು ಕೆಲವೊಮ್ಮೆ ಮಧುರವಾಗಿ, ಕೆಲವೊಮ್ಮೆ ಅಸಹನೆಯಿಂದ, ಕೆಲವೊಮ್ಮೆ ಸಿಟ್ಟಿನಿಂದ ನೆನಪಿಸಿಕೋತಾಳೆ. ಅವನ ದರ್ಪ ಮೋಸ ಅರ್ಥವಾಗಿಯೂ ಕಾತರ ನಿಲ್ಲುವುದಿಲ್ಲ. ಅಸಹಾಯಕತೆಯನ್ನು ಮೀರಿದ ಮತ್ತೇನೋ ಅಲ್ಲಿ ಕೆಲಸಮಾಡುತ್ತಿರುತ್ತದೆ. ಆದರೆ ಕಡೆಗೂ ಆ ನಲ್ಲ ಬರುವುದೇ ಇಲ್ಲ.

ಈ ಕತೇನ ನೆನಪಿಂದ ಹೇಳ್ತಾ ಇದ್ದೀನಿ. ಯಾಕೆಂದರೆ ಕಮಲಾ ದಾಸ್ ಬರೆದ ‘ದ ಸೈನ್ ಆಫ್ ಎ ಲಯನ್’ ಎಂಬ ಕತೆಯನ್ನು ಯಥಾವತ್ತಾಗಿ “ಸಿಂಹ” ಅಂತ ಕನ್ನಡಿಸಿ ೧೯೮೮ರಲ್ಲಿ ನಾಟಕ ಮಾಡಿದ್ದೆವು. “ಬೆನಕ”ದ “ಮಂಡೇ ಥೇಟರ್‍” ಅನ್ನೋ ಇಂಟಿಮೇಟ್ ಸಭಾಂಗಣದಲ್ಲಿ. ಬೆನಕದ ನಟಿ ವೀಣಾ ಒಬ್ಬಾಕೆಯೇ ಪ್ರಭಾವಶಾಲಿಯಾಗಿ ನಟಿಸಿದ್ದ ಪ್ರಯೋಗ ಅದು. ಇಪ್ಪತ್ತೈದು ಜನರಷ್ಟೇ ಸುತ್ತ ಕೂತು ನೋಡಬಹುದಾದ ಆ ಪ್ರಯೋಗ ಹಲವರನ್ನು ದಿಗ್ಭ್ರಮೆಗೊಳಿಸಿತು. ಆ ಹೆಣ್ಣಿನ ಒಳಪಾತಳಿಯನ್ನು ಪಕ್ಕದಲ್ಲೇ ಕೂತು ಅನುಭವಿಸಿದ ಹಾಗೆ ನಾಟಕ ನೋಡಿದವರಿಗೆ ಅನಿಸಿತ್ತು. ಹಾಗೆ ಅನಿಸುವುದರಲ್ಲಿ ಕಮಲಾ ದಾಸ್ ಕತೆಯದು ಹಾಗು ಮಾತುಗಳದು ದೊಡ್ಡ ಪಾತ್ರ. ಆ ಹೆಣ್ಣಿನ ಅಂತರಾಳದ ಮಾತುಗಳು ಹರಿದಾಡುವುದೇ ಸಭ್ಯತೆ ಅಂಚಿನಲ್ಲಿ, ಸಮಾಜ ಒಪ್ಪದ ಅಂತರಂಗದ ತುಡಿತದಲ್ಲಿ.

ಈಗ ಕಮಲಾ ದಾಸ್ ತೀರಿಕೊಂಡಿದ್ದಾರೆ. ನೆನಪು ಉಳಿದುಕೊಂಡಿದೆ.

ಚಿತ್ರ: www.newint.org

Rating
No votes yet

Comments