ಕರಿಯರೇ, ಹೊರ ನಡೆಯುವಿರಾ?
ಅಮೆರಿಕೆಯ ನ್ಯೂ ಜೆರ್ಸಿ ರಾಜ್ಯದ ವಾಶಿಂಗ್ಟನ್ ಉಪನಗರದಲ್ಲಿ ಒಂದು "ವಾಲ್ ಮಾರ್ಟ್" ಮಳಿಗೆ. ೧೬ ವರ್ಷದ ಪೋರನೊಬ್ಬ ಮಳಿಗೆಗೆ ಹೋಗಿ ಅಲ್ಲಿಟ್ಟಿದ್ದ ಮೈಕನ್ನು ಹಿಡಿದು ಘೋಷಿಸಿದ, ಕರಿಯರೇ, ಮಳಿಗೆ ಬಿಟ್ಟು ಕೂಡಲೇ ಹೊರನಡೆಯಿರಿ ಎಂದು. ಈ ಒಂದು ಮಾತಿನಿಂದ ಇಡೀ ಮಳಿಗೆಯಲ್ಲಿದ್ದ ಗ್ರಾಹಕರು ಮಾತ್ರವಲ್ಲ, ಅದರೊಂದಿಗೆ ನಗರವೂ ದಿಗ್ಭ್ರಾಂತವಾಯಿತು. ಪೊಲೀಸರು ಬಂದರು ವಿಚಾರಿಸಲು, ಅಧಿಕಾರಿಗಳೂ ಬಂದರು, ಘಟನೆಯನ್ನು ಖಂಡಿಸಲು. ಇದು ವಿಶ್ವಕ್ಕೆ ಸಮಾನತೆಯನ್ನು ಬೋಧಿಸುವ ಹಿರಿಯಣ್ಣ ಅಮೆರಿಕೆಯ ಪರಿಸ್ಥಿತಿ. ಕರಿಯ ಅಧ್ಯಕ್ಷ ನಾದರೇನು, ಸೇನೆಯ ದಂಡನಾಯಕನಾದರೇನು, ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶನಾದರೇನು, ಹುಟ್ಟು ಗುಣ ಎಲ್ಲಿಂದ ಹೋಗಬೇಕು? ಈ ಹುಡುಗನ ಮಾತಿನಿಂದ ಹಿಟ್ಲರ್ ತನ್ನ ಸಮಾಧಿಯಲ್ಲಿ ಮಲಗಿ ಮುಸಿ ಮುಸಿ ನಗುತ್ತಿರಬೇಕು. ಅವನಿಗೂ ಕರಿಯರೆಂದರೆ ತಾತ್ಸಾರ ತಾನೇ? ಈ ಆಧುನಿಕ ಯುಗದಲ್ಲೂ ಬಿಳಿಯರಿಗೆ ಕರಿಯರನ್ನು ಸಮಾನತೆಯಿಂದ, ಗೌರವದಿಂದ ಕಾಣಲು ಕಷ್ಟವಾಗುತ್ತಿರುವುದು ವಿಪರ್ಯಾಸವೇ ಸರಿ.
ಸರಿ ಸುಮಾರು ೧೬೦೦ ವರ್ಷಗಳ ಹಿಂದಿನ ಮಾತು. ಬಿಲಾಲ್ ಇಥಿಯೋಪಿಯಾ ದೇಶದಿಂದ ಅರಬ್ ದೇಶಕ್ಕೆ ಬಂದ ಹದಿಹರೆಯದ ಜೀತದಾಳು. ಅಪ್ಪಟ ಕರಿಯ. ಪ್ರವಾದಿಗಳ ಸಮಾನತೆಯ ಸಂದೇಶ ಕೇಳಿ ಇಸ್ಲಾಂ ನ ದೀಕ್ಷೆ ಪಡೆಯುತ್ತಾನೆ. ಈ ಕಾರಣಕ್ಕಾಗಿ ಅವನ ಯಜಮಾನ ಬಹಳಷ್ಟು ಕಿರುಕುಳ ಕೊಡುತ್ತಾನೆ. ಇದ ನೋಡಿ ಪ್ರವಾದಿಗಳ ಸಹವರ್ತಿಯೊಬ್ಬರು ಬಿಲಾಲ್ ನನ್ನು ಖರೀದಿಸಿ ಜೀತದಿಂದ ವಿಮೋಚನೆಗೊಳಿಸುತ್ತಾರೆ. ಇದನ್ನು ಕಂಡ ಪ್ರವಾದಿಗಳ ಮತ್ತೊಬ್ಬ ಅನುಚರ ಉಮರ್ ಉದ್ಗರಿಸುತ್ತಾರೆ, "ನಮ್ಮ ಒಡೆಯ ಅಬು ಬಕರ್ ಮತ್ತೊಬ್ಬ "ಒಡೆಯ ಬಿಲಾಲ್" ನನ್ನು ವಿಮೋಚಿಸಿದರು" ಎಂದು. ಅಗರ್ಭ ಶ್ರೀಮಂತ, ಬಿಳಿ ವರ್ಣದ ಉಮರ್ ಕರಿಯ ಬಿಲಾಲ್ ರನ್ನು ಸಂಬೋಧಿಸಿದ್ದು "ಒಡೆಯ" ಎಂದು. ಇಸ್ಲಾಂ ಅರೇಬಿಯಾದಲ್ಲಿ ಸ್ಥಾಪಿತವಾದ ನಂತರ ಪವಿತ್ರ ಕಾಬಾ ಭವನದ ಮೇಲೆ ನಿಂತು ಪ್ರಾಥನೆಯ ಕರೆಯನ್ನು ನೀಡಲು ಬಿಲಾಲ್ ರನ್ನು ಪ್ರವಾದಿಗಳು ಆಮಂತ್ರಿಸಿದಾಗ ಇಡೀ ಅರೇಬಿಯಾ ಕೆಂಡಾ ಮಂಡಲ. ಒಬ್ಬ ಕರಿಯ, ಅದೂ ಮಾಜಿ ಜೀತದಾಳು ಪವಿತ್ರ ಕಾಬಾದ ಮೇಲೆ ನಿಲ್ಲುವುದು ಎಂದರೇನು ಎಂದು ಸಿಡುಕುತ್ತಾರೆ. ಆಗ ಪ್ರವಾದಿಗಳು ಹೇಳುತ್ತಾರೆ, ಈ ದಿನದೊಂದಿಗೆ ಹುಟ್ಟಿನಿಂದ ಬಂದ ಎಲ್ಲಾ ವಿಶೇಷ ಸವಲತ್ತುಗಳು, ಮರ್ಯಾದೆಗಳು, ಹಕ್ಕುಗಳು ನಿಂತವು, ಮಾನವರೆಲ್ಲರೂ ಸಮಾನರು ಮತ್ತು ಎಲ್ಲರೂ ಆ ಮಹಾ ಪ್ರಭು ಸೃಷ್ಟಿಸಿದ ಆದಮನ ಮಕ್ಕಳು ಎಂದು ಸಾರುತ್ತಾರೆ.
ಘಟನೆಯ ನಂತರ ಹುಡುಗ ಎಳೆ ಪ್ರಾಯದವನು ಎಂದು ಪೊಲೀಸರು ಅವನ ಹೆತ್ತವರಿಗೆ ಅವನನ್ನು ಒಪ್ಪಿಸಿ ಅವನನ್ನು ಇನ್ನೊಮ್ಮೆ juvenile court ಗೆ ಹಾಜರುಪಡಿಸಲು ನಿರ್ಧರಿಸಿದರು. ಎಳೆ ಪ್ರಾಯದ ಹುಡುಗನಿಗೆ ಇಂಥ ದೊಡ್ಡ ಮಾತನ್ನು ಹೇಳಿಕೊಟ್ಟವರಾರೋ? ಗೌಪ್ಯತೆ ಕಾಪಾಡುವ ಉದ್ದೇಶದಿಂದ ಹುಡಗನ ಹೆಸರನ್ನಾಗಲಿ, ಅವನು ಬಿಳಿಯನೆಂದಾಗಲಿ ಪೊಲೀಸರು ಮಾಹಿತಿ ನೀಡಲಿಲ್ಲ. ಒಟ್ಟಿನಲ್ಲಿ ಅಮೆರಿಕೆಯ ಬಿಳಿ ನಗುವಿನ ಬಹಿರಂಗದ ಹಿಂದೆ ಅಡಗಿದೆ ಕರಾಳ ಅಂತರಂಗ.