ಕರುಣೆಯಲ್ಲೂ ಕಲಬೆರಕೆಯೇ?
ಮೊನ್ನೆ ಹೀಗೊಂದು ಸಾವಾಯಿತು ನೋಡಿ. ಒಬ್ಬ ಯುವಕನಿಗೆ ಕ್ಯಾನ್ಸರ್ ಬಂದು, ಅಪ್ಪ, ಅಮ್ಮ, ಹೆಂಡತಿ, ಇಬ್ಬರು ಮಕ್ಕಳು, ಹೀಗೆ ತುಂಬಿ ತುಳುಕುತ್ತಿದ್ದ ಸಂಪೂರ್ಣ ಪರಿವಾರವನ್ನು ತ್ಯಜಿಸಿ ಹೊರಟುಹೋದ. ಆ ಮುದ್ದಾದ ಪುಟ್ಟ ಮಕ್ಕಳನ್ನು ನೋಡಿ ಎಲ್ಲರ ಕಣ್ಣಲ್ಲೂ ನೀರು. ವಿಧವೆ ಹೆಂಡತಿಯ ಮೇಲೆ ಅಯ್ಯೋ-ಪಾಪಗಳ ಸುರಿಮಳೆ ನಡೆದೇ ಇತ್ತು. ಅಷ್ಟರಲ್ಲಿ ಯಾರೋ ಪಿಸುಗುಟ್ಟಿದರು, "ಅವನಿಗೆ ಸಿಕ್ಕಾಪಟ್ಟೆ ಗುಟ್ಕಾ ಚಟವಿತ್ತಂತೆ". ಸರಿ, ಎಲ್ಲರ ಮನಸ್ಸಿನಲ್ಲೂ ಪ್ರಶ್ನೆಗಳು ಏಳುವುದಕ್ಕೆ ಶುರುವಾಯಿತು. ಅವನು ಗುಟ್ಕಾ ಜಗಿಯುತಿದ್ದಾಗ ಬೇಡ ಅಂತನ್ನದವರು ಇವರೆಂತಹ ಜನ? ತನ್ನ ಸ್ವಾರ್ಥ ಚಟ ಇಂಗಿಸಲು ಹೋಗಿ, ಹೆಂಡತಿ ಮಕ್ಕಳನ್ನು ನಡುನೀರಿನಲ್ಲಿ ಕೈಬಿಟ್ಟು ಹೋದ ಅವನಾದರೂ ಎಂತಹ ಮನುಷ್ಯ? ಇದು ಸ್ವಯಂಕೃತ ಅಪರಾಧವೆಂದ ಮೇಲೆ ನಮ್ಮ ಅನುಕಂಪಕ್ಕೆ ಇವರೆಷ್ಟು ಅರ್ಹರು? ಹೀಗೆ ಆ ಮನೆಯವರ ದುಃಖ, ನೋವು, ಮೀರಿ ಅವರ ನೈತಿಕ ವಿವೇಚನೆಯ ಬಗ್ಗೆ ಚರ್ಚೆ ನಡೆಯತೊಡಗಿತು.
ಇದೇ ರೀತಿಯ ಅನುಭವ ಬಹಳಷ್ಟು ಸಾರಿ ನನಗಾಗಿದೆ. ಏಡ್ಸ್ ಬಂದು ನರಳುತ್ತಿರುವ ರೋಗಿಯ ಚಿತ್ರಣ ಟೀವಿಯಲ್ಲಿ ನೋಡನೋಡುತ್ತ, ಎದೆಯಲ್ಲಿ ಕರುಣೆಯ ಮಿಡಿತ ಶುರುವಾಗುತ್ತಿದ್ದಂತೆ, ತಲೆಯಲ್ಲಿ "ಇವನಿಗೆ ಈ ರೋಗ ಹೇಗೆ ಬಂತು? ಎಷ್ಟು ಜನರ ಜೊತೆ ಮಲಗಿದ್ದನೋ ಏನೋ? ಡ್ರಗ್ ಆಡಿಕ್ಟ್ ಇರಬಹುದೇನೋ?" ಎಂಬ ಸಂಶಯದ ಸುಳಿ ಏಳುತ್ತದೆ. ಅವನಿಗೆ ಯಾವುದೋ ರಕ್ತದ ಟ್ರಾನ್ಸ್ ಫ್ಯೂಶನ್ ಸಮಯದಲ್ಲಿ ಹೆಚ್.ಐ.ವಿ. ಸೊಂಕು ತಗಲಿದ್ದು ಎಂದು ಸ್ಪಷ್ಟವಾದರೆ ಛೆ! ಪಾಪ! ಎಂಬ ನಿಟ್ಟುಸಿರು. ಇಲ್ಲವಾದರೆ ಛೀ! ಏನು ಅಸಹ್ಯದ ಜನರಿರುತ್ತಾರೆ ಎಂಬ ತಿರಸ್ಕಾರ. ಹೀಗೇಕೆ ಮನಸ್ಸು?
ಅಪ್ಪ ಅಮ್ಮಂದಿರು ನಮಗೆ ಒಳ್ಳೆಯ ದಾರಿ ತೋರಿಸಲು ನೀತಿ ಪಾಠಗಳನ್ನು ಹೇಳುತ್ತಾ ಬೆಳೆಸಿರುತ್ತಾರೆ. ಇನ್ನು ನಾವು, ತಾರುಣ್ಯದಲ್ಲಿ ನಮ್ಮನ್ನು ಆಕರ್ಷಿಸುವ ದುಶ್ಚಟಗಳನ್ನು ದೂರವಿಡಲು ಮನಸ್ಸಿಗೆ ಒಂದು ನೈತಿಕ ಬೇಲಿಯನ್ನು ಹಾಕಿಕೊಳ್ಳುತ್ತೇವೆ. ಅದರ ಒಳಗಿರುವವರು ಸರಿ, ಆಚಿನವರು ತಪ್ಪು. ಇದೇ ತತ್ವವನ್ನು ಮೈಗೂಡಿಸಿಕೊಂಡು, ನಮ್ಮ ಮಕ್ಕಳಿಗೂ ಭೋದಿಸುತ್ತಾ ಬದುಕುತ್ತಿರುತ್ತೇವೆ. ಆಗಲೇ ನೋಡಿ, ಜೀವನ ಮಧ್ಯದಲ್ಲಿ, ಈ ಬೇಲಿ ಹಾರಿರುವ ಜನರನ್ನು ಎದಿರುಗೊಂಡರೆ ಮುಜುಗರ ಶುರುವಾಗುತ್ತದೆ. ಯಾರೋ ಅಪರಿಚಿತರಾದರೆ ಅವಾಯ್ಡ್ ಮಾಡೋದು ಸುಲಭ. ಆದರೆ ಕೆಲವೊಮ್ಮೆ ಇವರು ಬಂಧುಗಳಲ್ಲಿ, ಸ್ನೇಹಿತರಲ್ಲಿ ಕಂಡು ಬರುತ್ತಾರೆ. ಆಗ "judgmental" ಆಗದೆ ಅವರ ಕಷ್ಟಗಳಿಗೆ ಸ್ಪಂದಿಸಲಾಗುವುದಿಲ್ಲ. ಹಾಗೇನಾದರೂ ಮಾಡಿದರೆ ನಮ್ಮ ಆತ್ಮಸಾಕ್ಷಿಯನ್ನು ಧಿಕ್ಕರಿಸಿದ ಅನುಭವ. ನಮ್ಮ ಸಾತ್ವಿಕ ನಿಲುವುಗಳನ್ನು ನಾವೇ ಖಂಡಿಸಿದ ಹಾಗೆ. ಮಕ್ಕಳಿಗೆ "ನೀವು ನಡತೆಗೆಟ್ಟರೂ ಪರವಾಗಿಲ್ಲಾ ಬಿಡಿ" ಅನ್ನುವ ಪೀಠಿಕೆ ಹಾಕಿಕೊಟ್ಟ ಹಾಗೆ. ಇಂತಹ ಸಮಯದಲ್ಲಿ ಯಾವ ಪ್ರತಿಕ್ರಿಯೆ ಸರಿ?
ಯಾವುದೇ ಪೂರ್ವೋತ್ತರ ಕೇಳದೆ, ಯಾವುದೇ ಪ್ರತಿಫಲ(ಮನಸ್ಸಿನ ಸಾರ್ಥಕತೆ ಸಹ) ಅಪೇಕ್ಷಿಸದೆ ಶುದ್ಧ ಮನಸ್ಸಿನಿಂದ ಒಬ್ಬರಿಗೆ ಸಹಾಯ ಮಾಡಲು ಸಾಧ್ಯವೆ? ಹಾಗೆ ಅಭಯಹಸ್ತ ಚಾಚಿದ ಮದರ್ ತೆರೇಸರಂತಹವರಿಗೂ ಕ್ರಿಸ್ಚಿಯಾನಿಟಿ ಹರಡುವ ಆಸೆ ಇತ್ತೆಂದರು ಜನ. ಹಾಗಾದರೆ ಕಲಬೆರಕೆಯಿಲ್ಲದ ಕರುಣೆ ಎಲ್ಲೂ ಇಲ್ಲವೇ?
Comments
ಉ: ಕರುಣೆಯಲ್ಲೂ ಕಲಬೆರಕೆಯೇ?
In reply to ಉ: ಕರುಣೆಯಲ್ಲೂ ಕಲಬೆರಕೆಯೇ? by srivathsajoshi
ಉ: ಕರುಣೆಯಲ್ಲೂ ಕಲಬೆರಕೆಯೇ?
In reply to ಉ: ಕರುಣೆಯಲ್ಲೂ ಕಲಬೆರಕೆಯೇ? by kalpana
ಉ: ಕರುಣೆಯಲ್ಲೂ ಕಲಬೆರಕೆಯೇ?
In reply to ಉ: ಕರುಣೆಯಲ್ಲೂ ಕಲಬೆರಕೆಯೇ? by Abhimani
ಉ: ಕರುಣೆಯಲ್ಲೂ ಕಲಬೆರಕೆಯೇ?
In reply to ಉ: ಕರುಣೆಯಲ್ಲೂ ಕಲಬೆರಕೆಯೇ? by kalpana
ಉ: ಕರುಣೆಯಲ್ಲೂ ಕಲಬೆರಕೆಯೇ?
ಉ: ಕರುಣೆಯಲ್ಲೂ ಕಲಬೆರಕೆಯೇ?
In reply to ಉ: ಕರುಣೆಯಲ್ಲೂ ಕಲಬೆರಕೆಯೇ? by krishnamurthy bmsce
ಉ: ಕರುಣೆಯಲ್ಲೂ ಕಲಬೆರಕೆಯೇ?
In reply to ಉ: ಕರುಣೆಯಲ್ಲೂ ಕಲಬೆರಕೆಯೇ? by krishnamurthy bmsce
ಉ: ಕರುಣೆಯಲ್ಲೂ ಕಲಬೆರಕೆಯೇ?
ಉ: ಕರುಣೆಯಲ್ಲೂ ಕಲಬೆರಕೆಯೇ?