ಕರ್ತವ್ಯ, ನಂಬಿಕೆ, ವಿಶ್ವಾಸಗಳೆಂಬ ದೇವರ ನೆರಳಿನಲ್ಲಿ........

ಕರ್ತವ್ಯ, ನಂಬಿಕೆ, ವಿಶ್ವಾಸಗಳೆಂಬ ದೇವರ ನೆರಳಿನಲ್ಲಿ........

  ನಂಬಿಕೆ ಜೀವನದ ಮೂಲಾಧಾರ. ಪ್ರತಿಯೊಂದು ಜೀವಿಗೂ ಸಹ ತನ್ನ ಸುರಕ್ಷತೆಯ ಬಗೆಗಿನ ಅರಿವು ಇದ್ದೇ ಇರುತ್ತದೆ. ಇವತ್ತು ಮಲಗಿ ನಾಳೆ ಏಳುತ್ತೇನೆಯೆಂಬ  ಭರವಸೆಯ ಮೇಲೆಯೇ ಮನುಷ್ಯ ಬದುಕುತ್ತಾನೆ. ಇಡೀ ಜಗತ್ತಿಗೇ ಬೆಳಕನ್ನಿತ್ತು ಪೋಷಿಸುವ ಸೂರ್ಯನು ಸಕಲ ಕೋತಿ ಚರಾಚರ ಜೀವಿಗಳ ಜೀವಾಧಾರ. ಇಂದು ಮುಳುಗಿ ಕತ್ತಲ ಮರೆಗೆ ಸರಿದರೂ ನಾಳೆ ಮತ್ತೆ ಉದಯಿಸಿ ಬೆಳಗುತ್ತಾನೆಂಬ ಭದ್ರ ಅಡಿಪಾಯದ  ಮೇಲೆಯೇ ಎಲ್ಲಾ ಜೀವಜಾಲದ ಬದುಕು ನಿಂತಿದೆ. 

               

              ನಂಬಿಕೆಗಳು ಬಾಂದವ್ಯ ಬೆಸೆಯುವ ಕೊಂಡಿಗಳು. ಅಸಹನೀಯ ಬದುಕನ್ನು ಸಹ್ಯವನ್ನಾಗಿಸುವಂತವುಗಳು. ತನ್ನ ತಾಯ್ತಂದೆಯರ   ಪೋಷಣೆಯಲ್ಲಿ ತಾನು ಸುರಕ್ಷೆ ಯಾಗಿದ್ದೇನೆ ತನ್ನೆಲ್ಲಾ ನೋವುನಲಿವುಗಳಲ್ಲಿ ಅವರ ಅಭಯ ಹಸ್ತ ತನ್ನ ಮೇಲಿದೆಯೆಂಬ ವಿಶ್ವಾಸವೇ ಆ ಮಗುವಿನ ಸುಂದರ ವ್ಯಕ್ತಿತ್ವ ರೂಪುಗೊಳ್ಳಲು ಭದ್ರ ಬುನಾದಿಯಾಗುತ್ತದೆ. ಹಾಗೆಯೇ ಕುಟುಂಬದಲ್ಲಿ ಗಂಡಹೆಂಡತಿಯರ ನಡುವೆ ನಂಬಿಕೆ ವಿಶ್ವಾಸಗಳಿದ್ದಾಗ ಮಾತ್ರ ಅಲ್ಲೊಂದು ಸುಂದರ ಪರಿಸರ ನಿರ್ಮಾಣವಾಗುತ್ತದೆ . ಇಲ್ಲವಾದರೆ ಸಂಬಂಧಗಳು ಅರ್ಥ ಕಳೆದುಕೊಳ್ಳುತ್ತವೆ. 
              

              ನಿಯತಕಾಲಕ್ಕೆ ಮಳೆ ಬರುತ್ತದೆ ಎಂದೇ ರೈತ ಬೀಜ ಬಿತ್ತುತ್ತಾನೆ . 'ನಂಬಿ ಕೆಟ್ಟವರಿಲ್ಲವೋ' ಎಂಬ ದಾಸವಾಣಿಯಂತೆ,  'ನಂಬಿದರೆ ಭಯವಿಲ್ಲ ನಂಬದಿರೆ  ಬಾಳಿಲ್ಲ' ಎಂಬ ನಾಣ್ಣುಡಿಯಂತೆ. ನಂಬಿಕೆ ವಿಶ್ವಾಸಗಳ ನೆರಳಿನಲ್ಲಿ ಸ್ವಸ್ಥ ಸಮಾಜದ ಸಾಕಾರವಾಗುವುದು ಸತ್ಯ. ಪ್ರತಿ ಕಾರ್ಮೋಡದ ಅಂಚು ಸಹ ಬೆಳ್ಳಿ ಮಿಂಚು. ಕಡು ಕಷ್ಟದೆಲ್ಲೆಯ ದಾಟಿ ಸುಖದ ಅಲೆಗಳ ಮೀಟುತ್ತಾ ಮುನ್ನಡೆಯುವಾಗ ಅನುಭವಿಸುವ ಧನ್ಯತಾಭಾವಕ್ಕೆ ಎಣೆಯುಂಟೆ. 
 

ಕಮಲಾ ಬೆಲಗೂರ್

Rating
No votes yet