ಕರ್ನಾಟಕ ಕ್ರಿಕೆಟ್ - ೫

ಕರ್ನಾಟಕ ಕ್ರಿಕೆಟ್ - ೫

ಮಿಥುನ್ ಬೀರಾಲ: ಆರಂಭಿಕ ಆಟಗಾರನಾಗಿ ೬೦ರ ದಶಕದ ಕೊನೆಯಲ್ಲಿ ಮತ್ತು ೭೦ರ ದಶಕದ ಆರಂಭದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಮಾಜಿ ರಣಜಿ ಆಟಗಾರ ರಘುನಾಥ್ ಬೀರಾಲ ಇವರ ಮಗನೇ ಮಿಥುನ್. ಸಾಧಾರಣ ಮಟ್ಟದ ಆರಂಭಿಕ ಆಟಗಾರನಾಗಿರುವ ಮಿಥುನ್, ತನ್ನ ಚೊಚ್ಚಲ ರಣಜಿ ಪಂದ್ಯವನ್ನಾಡಿದ್ದು ೧೯೯೯-೨೦೦೦ ಋತುವಿನಲ್ಲಿ. ತನ್ನ ನೈಜ ಪ್ರತಿಭೆಯ ಬಲಕ್ಕಿಂತಲೂ ಹೆಚ್ಚಾಗಿ ತಂದೆಗೆ ಕೆ.ಎಸ್.ಸಿ.ಎ ಯಲ್ಲಿರುವ 'ಇನ್-ಫ್ಲುಯನ್ಸ್' ನಿಂದ ತಂಡಕ್ಕೆ ಬಂದವರು ಮಿಥುನ್. ಆಯ್ಕೆಗಾರರು ಎಡವಿದ್ದೇ ಇಲ್ಲಿ. ಪ್ರತಿಭೆಯುಳ್ಳ ಆಟಗಾರರಾದ ಸುಧೀಂದ್ರ ಶಿಂದೆ ಮತ್ತು ಶ್ಯಾಮ್ ಪೊನ್ನಪ್ಪ ಇವರುಗಳು ಮತ್ತಷ್ಟು ಕಾಯುವಂತಾಯಿತು.

ಮಿಥುನ್ ಬಹಳ ಕೆಟ್ಟದಾಗಿ ಆಡಲಿಲ್ಲ. ಆದರೆ ನಿರೀಕ್ಷಿತ ಮಟ್ಟಕ್ಕೆ ಅವರ ಆಟ ಬೆಳೆಯಲೂ ಇಲ್ಲ. ೯೯-೨೦೦೦, ೨೦೦೦-೦೧ ಋತುಗಳ ಎಲ್ಲಾ ಪಂದ್ಯಗಳನ್ನು ಮಿಥುನ್ ಆಡಿದರು. ತನ್ನ ಚೊಚ್ಚಲ ಋತುವಿನಲ್ಲಿ ಮಿಥುನ್ ಚೆನ್ನಾಗಿಯೇ ಆಡಿದರು. ಪ್ರಥಮ ಪಂದ್ಯದಲ್ಲೇ ಅಂಧ್ರದ ವಿರುದ್ಧ ೮೩ ಮತ್ತು ೯೪ ಓಟಗಳನ್ನು ಗಳಿಸಿದರು. ಚೊಚ್ಚಲ ಋತುವನ್ನು ೫೧.೪೧ ಸರಾಸರಿಯಲ್ಲಿ ೬೧೭ ಓಟಗಳೊಂದಿಗೆ ಮುಗಿಸಿದರು. ದುರ್ಬಲ ತಂಡಗಳ ವಿರುದ್ಧ ಚೆನ್ನಾಗಿ ಆಡುತ್ತಿದ್ದ ಮಿಥುನ್, ಬಲಶಾಲಿ ತಂಡಗಳ ವಿರುದ್ಧ ಮುಗ್ಗರಿಸುತ್ತಿದ್ದರು. ಒತ್ತಡವಿದ್ದಾಗ ಅವರ ದಾಂಡಿನಿಂದ ಓಟಗಳೇ ಬರುತ್ತಿರಲಿಲ್ಲ. ನಂತರದ ಋತುವಿನಲ್ಲಿ ಮಿಥುನ್ ತುಂಬಾ ಕಳಪೆಯಾಗಿ ಆಡಿದರು. ಆದರೂ ಕರ್ನಾಟಕದ ಪರವಾಗಿ ೨ ಋತುಗಳಲ್ಲಿ ಆಡಿದ ಮಿಥುನ್ ಸರಾಸರಿ ಮಾತ್ರ ೩೬ ರಷ್ಟಿತ್ತು. ಕರ್ನಾಟಕಕ್ಕೆ ಉತ್ತಮ ಆರಂಭವೂ ದೊರೆಯುತ್ತಿತ್ತು ಆದರೆ ಇದರ ಹಿಂದೆ ಅರುಣ್ ಕುಮಾರ್ ಅವರ ಯೋಗದಾನ ಹೆಚ್ಚು ಇರುತ್ತಿತ್ತು. ಈ ಎರಡೂ ಋತುಗಳಲ್ಲಿ ಕರ್ನಾಟಕ ತಂಡದ ಮ್ಯಾನೇಜರ್ ಆಗಿದ್ದವರು ರಘುನಾಥ್ ಬೀರಾಲ.

ರಘುನಾಥ್ ಬೀರಾಲರವರು ಎಲ್ಲಾ ಕಡೆ ಓಡಾಡಿ, ಬೇಕಾದೆಲ್ಲೆಡೆ ಮಾತಾಡಿ, ಅವಶ್ಯವಿದ್ದವರನ್ನು ಪುಸಲಾಯಿಸಿ ಮಗ ರಾಜ್ಯ ತಂಡಕ್ಕೆ ಆಯ್ಕೆಯಾಗುವುದನ್ನು ಖಾತ್ರಿಪಡಿಸಿದ್ದರು. ಬಡಪಾಯಿ ಸುಜಿತ್ ಸೋಮಸುಂದರ್ ಜಾಗ ಖಾಲಿಮಾಡಬೇಕಾಯಿತು. ಹಾಗೆ ನೋಡಿದರೆ ಸುಜಿತ್ ಆ ವೇಳೆಯಲ್ಲಿ ಸತತ ವೈಫಲ್ಯವನ್ನು ಅನುಭವಿಸುತ್ತಿದ್ದರು. ಬಟ್ ಎಟ್ ಎನಿ ಗಿವನ್ ಟೈಮ್, ಸುಜಿತ್ ಸೋಮಸುಂದರ್ ಮಿಥುನ್ ಬೀರಾಲಕ್ಕಿಂತ ಒಳ್ಳೆಯ ಆಟಗಾರನಾಗಿದ್ದರು.

ಕರ್ನಾಟಕ ೧೯೯೮-೯೯ ರಣಜಿ ಟ್ರೋಫಿ ಗೆದ್ದ ಋತುವಿನಲ್ಲಿ ತಂಡದಲ್ಲಿದ್ದರೂ ಒಂದೇ ಒಂದು ಪಂದ್ಯವನ್ನು ಮಿಥುನ್ ಆಡಿರಲಿಲ್ಲ. ಮಿಥುನ್ ಸ್ವಭಾವದಿಂದ ಬಹಳ ಸೌಮ್ಯ ವ್ಯಕ್ತಿ. ಅಪ್ಪನಿಗಿರುವ ಜಂಭ, ಕೊಬ್ಬು ಮತ್ತು ಸೊಕ್ಕು ಮಗನಿಗಿಲ್ಲ. ಆದರೆ ಅಪ್ಪನ ಪ್ರಭಾವೀ ಸಂಪರ್ಕಗಳಿಂದ ತಂಡದಲ್ಲಿ ಸ್ಥಾನ ಗಿಟ್ಟಿಸಿದ್ದ ಮಿಥುನ್ ಗೆ ಸಹ ಆಟಗಾರರಿಂದ ಸಿಗುವ ಗೌರವ ಅಷ್ಟರಲ್ಲೇ ಇತ್ತು, ಎಷ್ಟೇ ಚೆನ್ನಾಗಿ ಆಡಿದರೂ! ತಾನು ತನ್ನ ಪ್ರಥಮ ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡಿದರೂ ತನ್ನ ಬಗ್ಗೆ ಸಹ ಆಟಗಾರರಿಗಿದ್ದ ಅಸಹನೆ ಮಿಥುನ್ ಆಟದಲ್ಲಿ ಮುಂದಿನ ಋತುವಿನಲ್ಲಿ ಕಾಣಬಂತು. ಈ ಋತುವಿನಲ್ಲಿ ಮಿಥುನ್ ತುಂಬಾನೇ ಕಳಪೆಯಾಗಿ ಆಡಿದರು. ಮೊದಲಿದ್ದ ಆತ್ಮವಿಶ್ವಾಸ ಅವರ ಆಟದಲ್ಲಿ ನಂತರ ಬರಲೇ ಇಲ್ಲ. ತನ್ನ ನೈಜ ಆಟ ಪ್ರದರ್ಶಿಸುವುದರಲ್ಲಿ ಮಿಥುನ್ ಸಂಪೂರ್ಣವಾಗಿ ವಿಫಲರಾದರು.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಮಿಥುನ್ ಒಬ್ಬ ಭರವಸೆಯ ಆರಂಭಿಕ ಆಟಗಾರನಾಗಿದ್ದರು. ಮಲ್ಲೇಶ್ವರಂ ಜಿಮ್ಖಾನದ ಪರವಾಗಿ ಇನ್ನೊಂದೆರಡು ಋತುಗಳನ್ನು ಅವರು ಆಡಿದ್ದರೆ ತಾನಾಗಿಯೇ ಕರ್ನಾಟಕ ತಂಡಕ್ಕೆ ಆಯ್ಕೆಯಾಗುತ್ತಿದ್ದರೇನೋ. ಆದರೆ ರಘುನಾಥ್ ಬೀರಾಲ ದುಡುಕಿಬಿಟ್ಟರು. ಮಗನಿಗೆ ತನ್ನ ಆಟವನ್ನು ಇನ್ನಷ್ಟು ಸುಧಾರಿಸುವ ಅವಕಾಶ ನೀಡದೆ ತನ್ನ ಸಂಪರ್ಕಗಳನ್ನು ಬಳಸಿ ಕರ್ನಾಟಕಕ್ಕಾಗಿ ಆಡಿಸಿದರು. ಸಹಜವಾಗಿಯೇ ಮಿಥುನ್ ಹೆಚ್ಚು ದಿನ ಆಡಲಾಗಲಿಲ್ಲ. ಸ್ವಲ್ಪ ಸಂಯಮ ರಘುನಾಥ್ ರಿಗಿದ್ದಿದ್ದರೆ ಕರ್ನಾಟಕಕ್ಕೆ ಒಬ್ಬ ಉತ್ತಮ ಆರಂಭಿಕ ಆಟಗಾರ ಸಿಗುತ್ತಿದ್ದನೇನೊ. ಯಾವ್ಯಾವ ರೀತಿಯಲ್ಲಿ ಪ್ರತಿಭಾವಂತ ಆಟಗಾರರನ್ನು ಕರ್ನಾಟಕ ಕಳೆದುಕೊಳ್ಳುತ್ತಿದೆ ಎಂಬುದಕ್ಕೆ ಇದು ಮತ್ತೊಂದು ಉದಾಹರಣೆ.

ಆದರೆ ಮಿಥುನ್ ಅದೃಷ್ಟ ಹೆಚ್ಚು ದಿನ ಓಡಲಿಲ್ಲ. ೨೦೦೨-೦೩ ಋತುವಿನಲ್ಲಿ ಅವರು ಆಯ್ಕೆಯಾಗಲಿಲ್ಲ. ನಂತರವೂ ಇದುವರೆಗೆ ಅವರು ಕರ್ನಾಟಕಕ್ಕಾಗಿ ಆಯ್ಕೆಯಾಗಿಲ್ಲ. ರಘುನಾಥ್ ಬೀರಾಲ ಎಲ್ಲಾ ಪ್ರಯತ್ನವನ್ನೂ ಮಾಡಿದರು ಮತ್ತು ಛಲ ಬಿಡದೆ ಇನ್ನೂ ಮಾಡುತ್ತಾ ಇದ್ದಾರೆ ಆದರೆ ಸತತ ವೈಫಲ್ಯವನ್ನು ಅನುಭವಿಸುತ್ತಿದ್ದ ಆಟಗಾರರು ಯಾರೂ ಇರಲಿಲ್ಲವಲ್ಲ!

ಕಳೆದ ಋತುವಿನಲ್ಲಿ (೨೦೦೫-೦೬) ರಘುನಾಥ್, ಮಗನನ್ನು ಪ್ಲೇಟ್ ಲೀಗ್-ನ ರನ್ನರ್ಸ್ ಅಪ್ ಆದ ರಾಜಸ್ಥಾನದ ಪರವಾಗಿ ಆಡಿಸಿದರು. ಕೊನೆಯ ಲೀಗ್ ಪಂದ್ಯ, ಪ್ಲೇಟ್ ಸೆಮಿ ಫೈನಲ್ ಮತ್ತು ಪ್ಲೇಟ್ ಫೈನಲ್ ಹೀಗೆ ೩ ಪಂದ್ಯಗಳಲ್ಲಿ ಮಿಥುನ್ ಆಡಿದರು. ಗಳಿಸಿದ್ದು ೨೭.೨೫ ಸರಾಸರಿಯಲ್ಲಿ ೧೦೯ ಓಟಗಳನ್ನು. ಪ್ರಸಕ್ತ ಋತುವಿನಲ್ಲಿ ರಾಜಸ್ಥಾನದ ಪರವಾಗಿ ಆಡಲು ಇಂಗ್ಲಂಡ್ ನಿಂದ ವಿಕ್ರಮ್ ಸೋಳಂಕಿ ಆಗಮಿಸಿದ್ದರಿಂದ ಮಿಥುನ್ ಮಲ್ಲೇಶ್ವರಂ ಜಿಮ್ಖಾನಕ್ಕೆ ಹಿಂತಿರುಗಬೇಕಾಯಿತು.

ಕಳೆದ ಋತುವಿನಲ್ಲಿ ಉದಯಪುರದಲ್ಲೊಂದು ಪಂದ್ಯ ನಡೆಯಿತು. ಪ್ಲೇಟ್ ಲೀಗ್ ನ ಕೊನೆಯ ಸುತ್ತಿನ ಪಂದ್ಯಗಳಲ್ಲೊಂದು ಪಂದ್ಯವಾಗಿತ್ತು ಇದು. ರಾಜಸ್ಥಾನದ ಎದುರಾಳಿ ಅಸ್ಸಾಮ್. ರಾಜಸ್ಥಾನದ ಪರವಾಗಿ ಆಡುತ್ತಿದ್ದರು ಕರ್ನಾಟಕದ ಮಾಜಿ ಆರಂಭ ಆಟಗಾರ ಮಿಥುನ್ ಬೀರಾಲ. ಅಸ್ಸಾಮ್ ಪರವಾಗಿ ಆಡುತ್ತಿದ್ದರು ಕರ್ನಾಟಕದ ಮತ್ತೊಬ್ಬ ಮಾಜಿ ಆರಂಭ ಆಟಗಾರ ಅರುಣ್ ಕುಮಾರ್. ಈ ಪಂದ್ಯದ ಮ್ಯಾಚ್ ರೆಫ್ರೀ ಯಾರಾಗಿದ್ದರು ಗೊತ್ತೇ? ಅವರ ಹೆಸರು ರಘುನಾಥ್ ಬೀರಾಲ! ಇಟ್ ಇಸ್ ಇಂಡೀಡ್ ಅ ಸ್ಮಾಲ್ ವರ್ಲ್ಡ್.

Rating
No votes yet

Comments