ಕರ್ನಾಟಕ ಕ್ರಿಕೆಟ್ - ೮

ಕರ್ನಾಟಕ ಕ್ರಿಕೆಟ್ - ೮

ಚಂದ್ರಶೇಖರ್ ರಘು: ಕರ್ನಾಟಕಕ್ಕೆ ಬೇಕಾಗಿದ್ದ ಭರವಸೆಯ ದಾಂಡಿಗ. ರಣಜಿಗೆ ಪಾದಾರ್ಪಣ ೨೦೦೨-೦೩ ಋತುವಿನಲ್ಲಿ ಮಾಡಿದರೂ ಸ್ಥಿರವಾಗಿ ತಂಡದಲ್ಲಿರಲು ರಘು ಪರದಾಡುತ್ತಿದ್ದರು. ಸಿಕ್ಕ ಅವಕಾಶಗಳನ್ನು ಉಪಯೋಗಿಸಿಕೊಳ್ಳದೇ ತಂಡದಲ್ಲಿದ್ದರೂ ಅಂತಿಮ ಹನ್ನೊಂದರಲ್ಲಿ ಅವಕಾಶ ಸಿಗುತ್ತಿರಲಿಲ್ಲ. ೪ ಋತುಗಳಲ್ಲಿ ಆಡಿದ್ದು ೯ ಪಂದ್ಯಗಳಲ್ಲಿ. ಆಗ ರಘು ಆಯ್ಕೆಯಾಗುತ್ತಿದ್ದು, ಆಫ್ ಸ್ಪಿನ್ ಬೌಲಿಂಗ್ ಮಾಡಬಲ್ಲ ಬೌಲರ್ ಮತ್ತು ಸಾಧಾರಣವಾಗಿ ಬ್ಯಾಟಿಂಗ್ ಮಾಡಬಲ್ಲ ಆಟಗಾರನಾಗಿಯೇ ವಿನ: ಪಕ್ಕಾ ಬ್ಯಾಟ್ಸ್-ಮನ್ ಆಗಿ ಅಲ್ಲ!

ಕರ್ನಾಟಕಕ್ಕಾಗಿ ತನ್ನ ಪ್ರಥಮ ಪಂದ್ಯವನ್ನು ೨೦೦೨-೦೩ನೇ ಋತುವಿನಲ್ಲಿ ಬೆಂಗಳೂರಿನಲ್ಲಿ ಜಮ್ಮು ಕಾಶ್ಮೀರದ ವಿರುದ್ಧ ಆಡಿದರು. ಬ್ಯಾಟಿಂಗ್ ಮಾಡಲು ಅವಕಾಶ ಸಿಗಲಿಲ್ಲ. ಬೌಲಿಂಗ್ ನೀಡಲಿಲ್ಲ. ಒಂದು ಕ್ಯಾಚ್ ಹಿಡಿದದ್ದು ಮತ್ತು ಕ್ಷೇತ್ರರಕ್ಷಣೆ ಮಾಡಿದ್ದು ಬಿಟ್ಟರೆ ತನ್ನ ಚೊಚ್ಚಲ ಪಂದ್ಯದಲ್ಲಿ ರಘು ಬೇರೇನು ಮಾಡಲಿಲ್ಲ. ನಂತರದ ಪಂದ್ಯಗಳಲ್ಲಿ ಮಧ್ಯ ಪ್ರದೇಶದ ವಿರುದ್ಧ ೨೨; ೦ ಔಟಾಗದೆ, ವಿದರ್ಭದ ವಿರುದ್ಧ ೨೪;೦ ಮತ್ತು ಪ್ಲೇಟ್ ಫೈನಲ್ ನಲ್ಲಿ ಕೇರಳ ವಿರುದ್ಧ ೮ ಓಟಗಳು. ಈ ಋತುವಿನಲ್ಲಿ ಆಡಿದ ೪ ಪಂದ್ಯಗಳಲ್ಲಿ ೫ ಸಾರಿ ಬ್ಯಾಟಿಂಗ್ ಮಾಡಿ ಒಂದು ಬಾರಿ ನಾಟೌಟ್ ಆಗಿ ಉಳಿದು ಗಳಿಸಿದ್ದು ೧೩.೫ ಸರಾಸರಿಯಲ್ಲಿ ಕೇವಲ ೫೪ ಓಟಗಳನ್ನು. ಬೌಲಿಂಗ್ ನಲ್ಲಿ ಶೂನ್ಯ ಸಂಪಾದನೆ.

೨೦೦೩-೦೪ ಋತುವಿನಲ್ಲಿ ಆಡಿದ್ದು ಒಂದೇ ಪಂದ್ಯ, ಹೈದರಾಬಾದ್ ವಿರುದ್ಧ. ಗಳಿಕೆ ಔಟಾಗದೆ ೧೬ ಓಟಗಳು ಮತ್ತು ಶೂನ್ಯ. ೨೦೦೪-೦೫ ಋತುವಿನಲ್ಲಿ ೩ ಪಂದ್ಯಗಳು. ೭.೦೦ ಸರಾಸರಿಯಲ್ಲಿ ೨೧ ಓಟಗಳು. ಈ ಋತುವಿನಲ್ಲಿ ರಘು ಬೌಲಿಂಗನಲ್ಲಿ ೬೬.೦೦ ಸರಾಸರಿಯಲ್ಲಿ ೩ ಹುದ್ದರಿ ಗಳಿಸಿದ್ದರು. ಒಟ್ಟಾರೆ ಮತ್ತೆ ಕಳಪೆ ಪ್ರದರ್ಶನ. ೨೦೦೫-೦೬ ಋತುವಿಗೆ ಮತೆ ಆಯ್ಕೆಯಾದರು ಆದರೆ ಆಡಿದ್ದು ಒಂದೇ ಪಂದ್ಯ. ಗಳಿಸಿದ್ದು ೧೧ ಓಟಗಳನ್ನು.

೪ ಋತುಗಳು. ೯ ಪಂದ್ಯಗಳು. ೧೦.೨ ಸರಾಸರಿಯಲ್ಲಿ ೧೦೨ ಓಟಗಳು. ಸುಮಾರು ೭೫ರ ಸರಾಸರಿಯಲ್ಲಿ ೩ ಹುದ್ದರಿಗಳು. ಇವು ರಘು ಸಾಧನೆ. ಈ ಅಂಕಿ ಅಂಶಗಳ ಹಿಂದೆ ಆಯ್ಕೆಗಾರರ ಕೊಡುಗೆಯೂ ಇದೆ. ರಘು ತಾನ್ನು ಆಡಿದ ೯ ಪಂದ್ಯಗಳಲ್ಲಿ ಸ್ಥಿರವಾಗಿ ಒಂದೇ ಕ್ರಮಾಂಕದಲ್ಲಿ ಆಡಲಿಲ್ಲ. ಅವರ ಜವಾಬ್ದಾರಿ ಏನು ಎಂಬುದು ಅವರಿಗೇ ತಿಳಿಹೇಳಲಾಗಲಿಲ್ಲ. ಯುವ ಆಟಗಾರನಿಗೆ ಒಂದು ಸಲ ನಾಲ್ಕನೇ ಕ್ರಮಾಂಕದಲ್ಲಿ ಆಡಿಸಿದರೆ ಮುಂದಿನ ಪಂದ್ಯದಲ್ಲಿ ೮ನೇ ಕ್ರಮಾಂಕ! ಬೌಲಿಂಗ್ ವಿಭಾಗದಲ್ಲೂ ಸರಿಯಾಗಿ ರಘು ಅವರನ್ನು ಬಳಸಲಿಲ್ಲ.

ಬೆಂಗಳೂರು ಕೆ.ಎಸ್.ಸಿ.ಎ ಲೀಗ್-ನಲ್ಲಿ ಕೆನರಾ ಬ್ಯಾಂಕ್ ಪರ ರಘು ಆಡುತ್ತಾರೆ.  ಉಡುಪಿಯಲ್ಲಿ ಎರಡು ವರ್ಷಗಳ ಹಿಂದೆ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ರಘು ಬಂದಿದ್ದರು. ಕೆನರಾ ಬ್ಯಾಂಕ್ ತಂಡದ ಪ್ರತಿಯೊಂದು ಪಂದ್ಯವನ್ನು ತಪ್ಪದೇ ವೀಕ್ಷಿಸಿದ್ದೆ. ರಘು ಆಟ ನೋಡಲೆಂದೇ ಮುಂದೆ ಕುಳಿತು ಪಂದ್ಯ ವೀಕ್ಷಿಸುತ್ತಿದ್ದೆ. ಅವರ ಆಟದ ಶೈಲಿ ಬಹಳ ಇಷ್ಟವಾಗಿತ್ತು.

ಹೀಗೆ ರಘು ಕ್ರಿಕೆಟ್ ಭವಿಷ್ಯ ಒಟ್ಟಾರೆ ಗೊಂದಲಮಯವಾಗಿದ್ದಾಗ ೨೦೦೬-೦೭ನೇ ಋತುವಿಗೆ ವೆಂಕಟೇಶ್ ಪ್ರಸಾದ್ ತಂಡದ ಕೋಚ್ ಆಗಿ ನೇಮಕಗೊಂಡರು. ಇವೆಲ್ಲದರ ನಡುವೆ ೨೦೦೫-೦೬ ಋತುವಿನ ದಕ್ಷಿಣ ವಲಯ ಏಕದಿನ ಪಂದ್ಯಗಳಲ್ಲಿ ರಘು ಭರ್ಜರಿ ಪ್ರದರ್ಶನ ನೀಡಿದರು. ಅವರನ್ನು ಸತತವಾಗಿ ಒಂದು ನಿರ್ದಿಷ್ಟ ಕ್ರಮಾಂಕದಲ್ಲಿ ಆಡಿಸಲಾಯಿತು. ಆಯ್ಕೆಗಾರರು ಅವರಲ್ಲಿ ನಂಬಿಕೆಯಿರಿಸಿದಾಗ ರಘು ಭರವಸೆಯ ಆಟ ತೋರ್ಪಡಿಸಿದರು. ಎಲ್ಲಾ ಪಂದ್ಯಗಳಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡಿದ ರಘು, ೭ ಪಂದ್ಯಗಳಲ್ಲಿ ೨ ಶತಕದ ಬಾರಿಗಳೊಂದಿಗೆ ೫೭.೦೦ ಸರಾಸರಿಯಲ್ಲಿ ೩೪೨ ಓಟಗಳನ್ನು ಕಲೆಹಾಕಿದರು. ಅವರ ಈ ನಿರ್ವಹಣೆಯನ್ನು ಗಮನದಲ್ಲಿರಿಸಿ ವೆಂಕಿ ರಣಜಿ ಪಂದ್ಯಗಳಲ್ಲಿ ರಘುವನ್ನು ೩ನೇ ಕ್ರಮಾಂಕದಲ್ಲಿ ಆಡಿಸಿದರು. ಕಳೆದ ಋತುವಿನಲ್ಲಿ ಅತ್ಯುತ್ತಮ ಆಟ ಪ್ರದರ್ಶಿಸಿದ ರಘು, ಕೋಚ್ ತನ್ನ ಮೇಲಿಟ್ಟ ನಂಬಿಕೆಗೆಗೆ ನಿರಾಸೆ ಮಾಡಲಿಲ್ಲ.

ಕಳೆದ ಋತುವಿನ ಎಲ್ಲಾ ಪಂದ್ಯಗಳಲ್ಲೂ ಆಡಿದ ರಘು, ೩೫.೮ ಸರಾಸರಿಯಲ್ಲಿ ೫೩೭ ಓಟಗಳನ್ನು ಗಳಿಸಿದರು. ಒಟ್ಟಾರೆ ಸರಾಸರಿ ಕಡಿಮೆಯಂತೆ ಕಾಣುತ್ತದೆ ಆದರೆ ರಘು ಪ್ರದರ್ಶಿಸಿದ ಆಟ ಉನ್ನತ ಮಟ್ಟದ್ದಾಗಿತ್ತು. ಉತ್ತರ ಪ್ರದೇಶದ ವಿರುದ್ಧ ಪಂದ್ಯ ನಡೆಯುತ್ತಿತ್ತು. ಗೆಲ್ಲಲು ೧೨೨ ಓಟಗಳನ್ನು ಬೆಂಬತ್ತಿದ ಕರ್ನಾಟಕ ೩ನೇ ದಿನದ ಆಟ ಮುಗಿದಾಗ ೫ ಹುದ್ದರಿ ಕಳಕೊಂಡು ೫೩ ಓಟಗಳನ್ನು ಗಳಿಸಿತ್ತು. ರಘು ಮತ್ತು ಬೇಜವಾಬ್ದಾರಿ ಆಟಾಗಾರ ಸ್ಟುವರ್ಟ್ ಬಿನ್ನಿ ಮರುದಿನ ಆಟ ಮುಂದುವರಿಸಿದರು. ಎಂದಿನಂತೆ ಸ್ಟುವರ್ಟ್ ಬೇಗನೆ ನಿರ್ಗಮಿಸಿದರು. ಆಗ ತಂಡದ ಮೊತ್ತ ೫೮ ಕ್ಕೆ ೬. ನಂತರ ಸುನಿಲ್ ಜೋಶಿ ನಿರ್ಗಮಿಸಿದಾಗ ಸ್ಕೋರ್ ೭೩ಕ್ಕೆ ೭. ಇನ್ನೂ ೪೯ ರನ್ನು ಗಳ ಅವಶ್ಯಕತೆ. ಗೆಲ್ಲಲೇಬೇಕು ಎಂಬ ಛಲದಿಂದ ಆಡಿದ ರಘು, ಅಖಿಲ್ ಜೊತೆಗೂಡಿ ಅಮೂಲ್ಯ ೪೭ ಓಟಗಳನ್ನು ಕಲೆಹಾಕಿ, ಗೆಲ್ಲಲು ಕೇವಲ ೨ ಓಟಗಳ ಅವಶ್ಯಕತೆ ಇದ್ದಾಗ ಔಟಾದರು. ಗಳಿಸಿದ್ದು ಅತ್ಯುತ್ತಮ ೫೦ ಓಟಗಳನ್ನು. ಆ ಪಂದ್ಯ ಕರ್ನಾಟಕ ಗೆದ್ದಿದ್ದೇ ರಘು ಆಟದಿಂದ.

ರಘು ಅವರ ಆಟದ ಮತ್ತೊಂದು ಅತ್ಯುತ್ತಮ ಪ್ರದರ್ಶನವಾದದ್ದು ಬಂಗಾಲ ವಿರುದ್ಧ ಸೆಮಿ ಫೈನಲ್ ನಲ್ಲಿ. ಪ್ರಥಮ ಬಾರಿಯಲ್ಲಿ ಜುಜುಬಿ ಮೊತ್ತಕ್ಕೆ ತನ್ನ ಇನ್ನಿಂಗ್ಸ್ ಮುಗಿಸಿದ್ದರಿಂದ ಕರ್ನಾಟಕ ಭಾರೀ ಮೊತ್ತದಿಂದ ಹಿನ್ನಡೆಯಲ್ಲಿತ್ತು. ವೇಗವಾಗಿ ಓಟಗಳನ್ನು ಗಳಿಸುವ ಅವಶ್ಯಕತೆ ಇದ್ದಲ್ಲಿ ಬಂಗಾಲದ ಬೌಲರ್ ಗಳು ಲೆಗ್-ಸ್ಟಂಪ್ ಹೊರಗೆ ಬೌಲ್ ಮಾಡುತ್ತಿದ್ದರು. ಆದರೂ ತಾಳ್ಮೆ, ಸಂಯಮ ಕಳಕೊಳ್ಳದೆ ಆಡಿದ ರಘು ಉತ್ತಮ ೮೫ ಓಟಗಳನ್ನು ಗಳಿಸಿದ್ದರು.

ರಘು ಹೊಡೆಬಡಿಯ ಆಟಗಾರನಲ್ಲ. ಹಾಗೇನೆ ನೀರಸ ಆಟವನ್ನೂ ಅವರು ಪ್ರದರ್ಶಿಸುವುದಿಲ್ಲ. ಅವಶ್ಯಕತೆಗೆ ತಕ್ಕಂತೆ ಆಡುವುದು ಅವರ ಶೈಲಿ. ಕಳೆದೆರಡು ಋತುಗಳಲ್ಲಿ ಅವರ ಬ್ಯಾಟಿಂಗ್ ಬಹಳ ಸುಧಾರಿಸಿದೆ. ತನ್ನ ಆಟವನ್ನು ಇನ್ನೂ ಸುಧಾರಿಸಿಕೊಳ್ಳುತ್ತಾ ಕರ್ನಾಟಕಕ್ಕೆ ಇನ್ನಷ್ಟು ಕಾಲ ಆಡುತ್ತಾ ಉತ್ತಮ ಪ್ರದರ್ಶನವನ್ನು ರಘು ನೀಡಲಿ.

Rating
No votes yet