ಕರ್ನಾಟಕ ರಕ್ಷಣಾ ವೇದಿಕೆಯ "ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶ" - ಅಧ್ಯಕ್ಷರ ಆಹ್ವಾನ

ಕರ್ನಾಟಕ ರಕ್ಷಣಾ ವೇದಿಕೆಯ "ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶ" - ಅಧ್ಯಕ್ಷರ ಆಹ್ವಾನ

ಇತ್ತೀಚಿನ ಬೆಳವಣಿಗೆಯನ್ನ ಗಮನಿಸಿದ್ರ ಭಾಳ ಕೆಟ್ಟ ಅನ್ನಿಸ್ತತಿ. ನಮ್ಮ ರಾಜೆಕೀಯ ಪಕ್ಷಗಳು ಒಬ್ಬರ ಮ್ಯಾಲೆ ಇನ್ನೊಬ್ರು ಕಾಗಿ ಕುಂದುರ್ಸೋ ಕೆಲಸದಾಗ ಅದಾರ. ಹಂಗ ಇದರ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆಯ ನಿಲುವು ಏನೈತಿ ಅಂತ ಓದಿ ನೋಡ್ರಿ. ಜಾಗತಿಕ ಬಿಕ್ಕಟ್ಟು, ಅನಿಯಂತ್ರಿತ ವಲಸೆಗಳಿಂದ ಆಗೋ ಪರಿಣಾಮಗಳ ಬಗ್ಗೆ ಚರ್ಚೆ ಮಾಡ್ಯಾರ.

--------------------------------------------------------------------------------------------------------------------------------------------------------
ಅಕ್ಕರೆಯ ಕನ್ನಡಿಗ,

ಭಾರತ ಇಂದು ಅತ್ಯಂತ ಸಂಕಟದ ಸ್ಥಿತಿಯಲ್ಲಿರುವುದನ್ನು ನಾವೆಲ್ಲಾ ನೋಡುತ್ತಾ ಇದೀವಿ. ಒಂದು ಕಡೆ ತೀವ್ರವಾದ ಜಾಗತಿಕ ಆರ್ಥಿಕ ಹಿಂಜರಿತದಿಂದ ನಮ್ಮ ಬದುಕಿನ ಮೇಲಾಗಿರುವ ಕೆಟ್ಟ ಪರಿಣಾಮಗಳು. ಇನ್ನೊಂದೆಡೆ ಭಯೋತ್ಪಾದಕರು ಅಮಾಯಕ ನಾಗರೀಕರನ್ನು ಅಮಾನವೀಯವಾಗಿ ಕೊಲ್ಲುತ್ತಾ ಭಾರತದ ಭದ್ರತೆಗೇ ಒಡ್ಡುತ್ತಿರುವ ಸವಾಲುಗಳು. ಕನ್ನಡನಾಡಿನ ಮೇಲೂ ಇವೆರಡು ಆತಂಕಗಳ ಕಪ್ಪುಮೋಡಗಳು ಕವಿದಿರುವುದು ಸುಳ್ಳಲ್ಲ. ಇಂತಹ ಸನ್ನಿವೇಶದಲ್ಲಿಯೇ ನಮ್ಮ ಒಗ್ಗಟ್ಟಿಗೆ ಮಹತ್ವ ಬರುವುದು.

ಜಾಗತಿಕ ಬಿಕ್ಕಟ್ಟಿನ ಪ್ರಭಾವದಿಂದಾಗಿ ಇಂದು ಕನ್ನಡನಾಡಿನಲ್ಲಿನ ಸಾವಿರಾರು ಉದ್ಯಮಗಳು ಆತಂಕ ಎದುರಿಸುತ್ತಿವೆ. ಈ ಉದ್ದಿಮೆಗಳಲ್ಲಿ ಕೆಲಸ ಮಾಡುತ್ತಿರುವ ಲಕ್ಷಾಂತರ ಕನ್ನಡಿಗರು ತೊಂದರೆಗೊಳಗಾಗಿದ್ದಾರೆ. ಇದರ ಕೆಟ್ಟ ಪ್ರಭಾವಗಳು ನಾಡಿನ ಕೃಷಿ ಕ್ಷೇತ್ರದ ಉತ್ತಮ ಬೆಳೆ ಇಳುವರಿಯ ಮೂಲಕ ತಕ್ಕ ಮಟ್ಟಿಗೆ ಕಡಿಮೆಯಾಗುವ ನಿರೀಕ್ಷೆ ಇದೆ. ಪ್ರಪಂಚದಲ್ಲಿ ಪ್ರತಿ ಹತ್ತು ಹದಿನೈದು ವರ್ಷಕ್ಕೊಮ್ಮೆ ಇಂತಹ ಕುಸಿತ ಆಗುತ್ತಲೇ ಇದ್ದರೂ ಈ ಬಾರಿ ನಾಡಿನ ಮೇಲೆ ಹೆಚ್ಚು ಪರಿಣಾಮವಾಗಿರಲು ನಾವು ಜಾಗತೀಕರಣಕ್ಕೆ ಹೆಚ್ಚು ತೆರೆದುಕೊಂಡಿರುವುದೇ ಕಾರಣವಾಗಿದೆ. ಜಾಗತೀಕರಣ ತಂದುಕೊಡುವ ಆರ್ಥಿಕ ಬೆಳವಣಿಗೆಯ ಜೊತೆಗೇ ಇಂತಹ ಆತಂಕಗಳೂ ಬೆಸೆದಿರುವುದು ಸತ್ಯ. ಆದಷ್ಟು ಬೇಗ ನಮ್ಮ ಉದ್ದಿಮೆಗಳು ಈ ಆರ್ಥಿಕ ಬಿಕ್ಕಟ್ಟಿನಿಂದ ಚೇತರಿಸಿಕೊಳ್ಳಲೆಂದು ಹಾರೈಸೋಣ. ಇನ್ನೊಂದು ಕುಸಿತವನ್ನು ದೀರ್ಘಕಾಲ ತಾಳಿಕೊಳ್ಳುವ ಬಲವನ್ನು ಗಳಿಸಿಕೊಳ್ಳುವುದೇ ನಮ್ಮ ಮುಂದಿರುವ ದಾರಿ.

ಮುಂಬೈಯಲ್ಲಿ ನಡೆದ ಭಯೋತ್ಪಾದಕರ ಭೀಕರ ದಾಳಿ ಎಲ್ಲರ ಮನಕಲಕಿದೆ. ಅಮಾಯಕರನ್ನು ಕೊಲ್ಲುವ ಇಂತಹ ಕೃತ್ಯಗಳನ್ನು ಖಂಡಿಸುತ್ತಲೇ ಇದರ ಕರಾಳ ನೆರಳು ನಮ್ಮ ನಾಡಿನತ್ತಲೂ ಚಾಚದಂತೆ ಎಚ್ಚರ ವಹಿಸಬೇಕಾಗಿದೆ. ಇಂತಹ ಪರಿಸ್ಥಿತಿಗಳನ್ನು ನಿಭಾಯಿಸಲು ರಾಜ್ಯಗಳಲ್ಲಿಯೇ ವಿಶೇಷ ಪಡೆಗಳನ್ನು ಹೊಂದಿರುವುದು ಅತ್ಯಂತ ಸೂಕ್ತವಾಗಿದೆ. ಅಂತಹ ಪಡೆಗಳು ನಮ್ಮ ನಾಡಿನ ಸೂಕ್ಷ್ಮ ಪ್ರದೇಶಗಳ ಒಳಹೊರಗುಗಳ ಸಂಪೂರ್ಣ ಪರಿಚಯ ಪಡೆಯುವುದು ಸುಲಭ ಮತ್ತು ಮತ್ತು ಆ ಕಾರಣದಿಂದಲೇ ಹೆಚ್ಚು ಪರಿಣಾಮಕಾರಿ. ನಮ್ಮ ಪೊಲೀಸರ ಕೈಗಳನ್ನು ಈ ವಿಷಯದಲ್ಲಿ ಬಲಪಡಿಸಲೇ ಬೇಕಾಗಿದೆ. ರಾಜಕಾರಣಿಗಳ ಕೈವಾಡ ಇಲ್ಲದಿದ್ದರೆ ಭಯೋತ್ಪಾದನಾ ನಿಗ್ರಹ ದಳಗಳ ಕೆಲಸಗಳು ಕೂಡಾ ಪರಿಣಾಮಕಾರಿಯಾಗಿ ಇರುವುದರಲ್ಲಿ ಅನುಮಾನವಿಲ್ಲ. ನಮ್ಮ ನಾಡಿಗೆ ಬರುವ ವಲಸಿಗರ ಮೇಲೆ ನಿಗಾ ಇದಬೇಕಾದ ಹೊಣೆಗಾರಿಕೆ ನಮ್ಮ ಸರ್ಕಾರ ಹಾಗೂ ಪೊಲೀಸ್ ಮೇಲಿದೆ. ಅನಿಯಂತ್ರಿತ ವಲಸೆಗೆ ಕಡಿವಾಣ ಹಾಕದೇ ಇದ್ದಲ್ಲಿ ಕನ್ನಡನಾಡಿನಲ್ಲೂ ಇಂತಹ ಕೃತ್ಯಗಳು ನಡೆಯುವ ಸಾಧ್ಯತೆಗಳು ದಟ್ಟವಾಗಿದೆ.

ಇಂತಹ ಪರೀಕ್ಷಾ ಸಂದರ್ಭದಲ್ಲಿಯೇ ಕರ್ನಾಟಕ ರಕ್ಷಣಾ ವೇದಿಕೆಯು ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಇದೇ ಡಿಸೆಂಬರ್ ೨೦ ಮತ್ತು ೨೧ರಂದು ನಡೆಸಲು ಮುಂದಾಗಿದೆ. ಈ ಸಮಾವೇಶದಲ್ಲಿ ಲಕ್ಷಾಂತರ ಕನ್ನಡಿಗರು ಸೇರಲಿದ್ದು ನಾಡಿನ ಮುಂದಿರುವ ಸವಾಲುಗಳ ಬಗ್ಗೆ ಗಹನವಾದ ಚರ್ಚೆಗಳನ್ನು ನಡೆಸಲಿದ್ದಾರೆ. ನಮ್ಮ ನಾಡಿನ ಉದ್ದಿಮೆಗಾರಿಕೆ, ಉದ್ಯೋಗಾವಕಾಶಗಳು ಮತ್ತು ಏಳಿಗೆಯ ಹಾದಿಯ ಬಗ್ಗೆ ಅರ್ಥಪೂರ್ಣವಾದ ವಿಚಾರ ಸಂಕಿರಣವನ್ನು ಕೂಡಾ ಏರ್ಪಡಿಸಲಾಗಿದೆ. ಕನ್ನಡಿಗರ ಪಾಲಿನ ಈ ಮಹತ್ವದ ಸಮಾವೇಶದಲ್ಲಿ ತಾವೂ ಪಾಲ್ಗೊಳ್ಳಿ ಎಂದು ಈ ಮೂಲಕ ಕರೆ ಕೊಡುತ್ತಿದ್ದೇವೆ. ಈ ಸಮಾವೇಶದ ಮೂಲಕ ನಾಡಿನ ಸರ್ಕಾರಕ್ಕೆ ನಮ್ಮ ಬದುಕಿನ, ಉದ್ದಿಮೆಯ, ಉದ್ಯೋಗದ, ರಕ್ಷಣೆಯ, ಏಳಿಗೆಯ ಬಗ್ಗೆ ಕಾಳಜಿ ತೋರಿ ಎನ್ನುವ ಸಂದೇಶ ನೀಡೋಣ.

ಸಿರಿಗನ್ನಡಂ ಗೆಲ್ಗೆ ; ಬಾಳ್ಗೆ : ಆಳ್ಗೆ
ಕನ್ನಡ ಸೇವಕ
ಟಿ. ಏ ನಾರಾಯಣ ಗೌಡ
ರಾಜ್ಯಾಧ್ಯಕ್ಷರು

Rating
No votes yet