ಕರ್ನಾಟಕ ಸಂಗೀತದ ರಸಾನುಭವ - ರಾಗ ಮೋಹನ (ಭಾಗ ೧)
ಕೆಲವು ದಿನಗಳ ಹಿಂದೆ ಬರೆದಿದ್ದಂತೆ ಇಂದು ಸಂಗೀತದ ರಸಾನುಭೂತಿಯ ಬಗ್ಗೆ ನನ್ನ ಬರಹವನ್ನು ಆರಂಭಿಸುತ್ತೇನೆ. ನನ್ನ ಉದ್ದೇಶ ಜನಪ್ರಿಯ ಗೀತೆಗಳ ಉದಾಹರಣೆಗಳನ್ನು ತೆಗೆದುಕೊಂಡು ಕೆಲವು ಶಾಸ್ತ್ರೀಯ ರಾಗಗಳ ಪರಿಚಯ ಮಾಡಿಕೊಡುವುದು. ಈಗಾಗಲೇ ಅಂತರ್ಜಾಲದಲ್ಲಿ ಸಂಗೀತದ ಬಗ್ಗೆ ಹಲವಾರು ಫೋರಮ್ ಗಳು ಇವೆ. ಸ್ವಲ್ಪಮಟ್ಟಿಗಾದರೂ ಸಂಗೀತದ ಪ್ರವೇಶ ಇರುವವರು ಅಂತಹ ಜಾಲತಾಣಗಳಲ್ಲಿ ಭಾಗವಹಿಸುವುದರಿಂದ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು. ನನ್ನ ಈ ಮಾಲಿಕೆಯಲ್ಲಿ ಸಾಧ್ಯವಾದಷ್ಟೂ ಸರಳವಾಗಿ ರಾಗಗಳ ಪರಿಚಯ ಮಾಡುತ್ತ, ಹೆಚ್ಚಿನ ವಿವರಣೆಗಳಿಗೆ ಇತರ ಕೊಂಡಿಗಳನ್ನು ಕೊಡುವುದು ನನ್ನ ಉದ್ದೇಶ.
ಅದಲ್ಲದೆ, ಉಳಿದ ಸಂಗೀತಸಂಬಂಧಿ ಫೋರಮ್‍ಗಳಾವುದೂ ಕನ್ನಡದಲ್ಲಿ ಇಲ್ಲ .. ಆ ದಿಸೆಯಲ್ಲಿ ನನ್ನ ಪ್ರಯತ್ನ ಹೊಳೆಯಲ್ಲಿ ಹುಣಿಸೆಹಣ್ಣು ತೊಳೆದಂತಾಗಲಾರದೆಂದು ಭಾವಿಸಿದ್ದೇನೆ.
ಮೊದಲು ಕೆಲವು ಮುಖ್ಯ ವಿಷಯಗಳನ್ನು ಗಮನಿಸೋಣ. ಶಾಸ್ತ್ರೀಯ ಸಂಗೀತಕ್ಕೆ ಭಾಷೆಯ ಹಂಗಿಲ್ಲ. ಇದು ಪಾಶ್ಚಿಮಾತ್ಯ, ಪೌರ್ವಾತ್ಯ ಮತ್ತು ಭಾರತೀಯ ಸಂಗೀತಕ್ಕೆಲ್ಲ ಅನ್ವಯಿಸುವ ಮಾತು. ಆದರೆ, ಶಾಸ್ತ್ರೀಯ ಸಂಗೀತದ ಮೇಲೆ ಅಭಿರುಚಿ ಬರಲು ನಮಗೆ ಅರ್ಥವಾಗುವ ಭಾಷೆಯಲ್ಲಿ ಇರುವ ಸಂಗೀತ ರಚನೆಗಳಿದ್ದರೆ, ಒಳಿತು. ಇಲ್ಲದಿದ್ದರೆ, ಮನೋರಮೆಯಂತೆ, "ನೀರಿಳಿಯದ ಗಂಟಲಲ್ಲಿ ಕಡುಬು ತುರುಕುವಂತಾಗುವುದು" ಸಹಜವೇ. ಕಡುಬು ರುಚಿಯಾದ ಖಾದ್ಯ- ಆದರೆ, ಅದನ್ನು ಸವಿದು ಆನಂದಿಸಲು ಸ್ವಲ್ಪ ಮಟ್ಟಿನ ತಯಾರಿ ಬೇಕು!
ಇಷ್ಟೇ ಅಲ್ಲದೆ, ಸಂಗೀತದ ಮಾತು ಬಂದರೆ, ಯಾವುದೇ ಕಲೆ, ಅಥವಾ ವಿಜ್ಶಾನದಲ್ಲಿರುವಂತೆ ಇಲ್ಲೂ ಹಲವಾರು ಪಾರಿಭಾಷಿಕ ಪದಗಳ ಪರಿಚಯ ಅಗತ್ಯ. ಆದರೆ, ಯಾವುದೇ ಕಂಪ್ಯೂಟರ್ ಭಾಷೆಯನ್ನು ಕಲಿತವರೂ ಒಪ್ಪುವಂತೆ ಹೇಳುವುದಾದರೆ, ಬರೀ syntax ಅರಿತರೆ, program ಮಾಡಲಾಗದು; ಆದರೆ, program ಮಾಡಲು syntax ನ ತಿಳುವಳಿಕೆ ಇರಬೇಕು. ಹಾಗಾಗಿ, ನಾನು ಅಗತ್ಯ ಬಿದ್ದಾಗ, ಒಂದೊಂದಾಗಿ ಈ ರೀತಿಯ ಪಾರಿಭಾಷಿಕ ಪದಗಳ ಪರಿಚಯ ಮಾಡಿಕೊಡುತ್ತಾ ಹೋಗುತ್ತೇನೆ.
ನಮ್ಮ ಭಾರತೀಯ ಸಂಗೀತಕ್ಕೂ, ಪಾಶ್ಚಿಮಾತ್ಯ ಸಂಗೀತಕ್ಕೂ ಇರುವ ಮುಖ್ಯ ವ್ಯ್ತತ್ಶ್ಸಾಸವೆಂದರೆ ನಮ್ಮ ಸಂಗೀತ ರಾಗ(melodic) ಆಧಾರಿತವಾಗಿದ್ದರೆ ಪಾಶ್ಚಿಮಾತ್ಯ ಸಂಗೀತ ಸ್ವರಮೇಳ(harmony) ಆಧಾರಿತ. ನಮ್ಮ ಚಲನಚಿತ್ರ ಸಂಗೀತದಲ್ಲಿ, ಪಾಶ್ಚಾತ್ಯ ಹಾಗೂ ಭಾರತೀಯ ಸಂಗೀತದ ಸಮ್ಮೇಳವಾಗಿದೆ ಎಂದು ಹೇಳಬಹುದು. ಇದರ ಬಗ್ಗೆ ಇನ್ನೊಮ್ಮೆ ವಿವರವಾಗಿ ಬರೆಯುವೆ. ನಾನು ಚಿತ್ರಸಂಗೀತದಿಂದ ಉದಾಹರಣೆಗಳನ್ನು ಕೊಡುವವನಿದ್ದರಿಂದ, ಈ ಅಂಶ ಗಮನದಲ್ಲಿರಲಿ ಎಂದು ಮೊದಲೇ ಹೇಳಿದೆ.
ಇವತ್ತು ನಮ್ಮ ಮೊದಲ ರಾಗಕ್ಕೆ ಬರೋಣ. ರಾಗ ಎಂದರೇನು? ಶಾಸ್ರ್ರಗ್ರಂಥಗಳಲ್ಲಿ ಕೊಡುವ definition ಏನು ಗೊತ್ತೆ? "ರಂಜಿಸುತ್ತಾದ್ದರಿಂದ, ಅದು ರಾಗ". ರಾಗ ಎಂಬ ಪದಕ್ಕೆ ಬಣ್ಣ ಎಂಬ ಅರ್ಥವೂ ಇದೆ. ಬೇರೆ ಬೇರೆ ರಾಗಗಳು, ಸಂಗೀತವನ್ನು ಅಲಂಕರಿಸುವ ವಿವಿಧ ಬಣ್ಣಗಳೆಂದರೂ ತಪ್ಪಿಲ್ಲ.
ರಾಗವೊಂದರಲ್ಲಿ ಏನಿರುತ್ತದೆ? ಎಲ್ಲಾ ರಾಗಗಳಲ್ಲೂ ಐರೋ, ಆರೋ, ಏಳೋ ಸ್ವರಗಳಿರುತ್ತವೆ. ಕೆಲವೊಮ್ಮೆ ಅಪರೂಪಕ್ಕೆ, ಇನ್ನೂ ಕಡಿಮೆ ಸ್ವರಗಳಿರುವ ರಾಗಗಳೂ ಇವೆ. ಏಳು ಸ್ವರವು ಸೇರಿ ಸಂಗೀತವಾಯಿತು ಎಂಬ ಹಾಡನ್ನು ನಾವೆಲ್ಲ ಕೇಳಿದ್ದೇವೆ. ಈ ಏಳು ಸ್ವರಗಳು universal. ನಾವು ಅವನ್ನು ಸ ರಿ ಗ ಮ ಪ ದ ನಿ ಎಂಬ ಅಕ್ಷರಗಳಿಂದ ಗುರುತಿಸಿದರೆ, ಪಾಶ್ಶಾತ್ಯರು A B C D E F G ಎಂಬ ಸಂಕೇತಗಳೊಂದಿಗೆ ಗುರುತಿಸುತ್ತಾರೆ. ಸದ್ಯಕ್ಕೆ ಇಷ್ಟು ವಿವರ ಸಾಕು. ಹೆಚ್ಚಿಗೆ ಬೇಕಾದಾಗ ಇದರ ವಿಷಯಕ್ಕೆ ಮತ್ತೆ ಬರಬಹುದು.
ಇವತ್ತು ನಾನು ತೆಗೆದುಕೊಳ್ಳುವ ರಾಗ ಮೋಹನ. ಒಂದು ವಿಷಯ ಮೊದಲೇ ಹೇಳಿಬಿಡುತ್ತೇನೆ. ರಾಗವೊಂದಕ್ಕೂ, ಅದು ನಮ್ಮಲ್ಲಿ ಹುಟ್ಟಿಸಬಹುದಾದ ಭಾವನೆಗಳಿಗೂ, ಮತ್ತು ಅದರ ಹೆಸರಿಗೂ ಯಾವ ಸಂಬಂಧವೂ ಇಲ್ಲ. ಕೆಲವೊಮ್ಮೆ ಚಾರಿತ್ರಿಕ ಕಾರಣಗಳಿಗಾಗಿ ಕೆಲವು ಹೆಸರುಗಳು ಬಂದಿರಬಹುದು ಅಷ್ಟೇ. ಹಾಗಾಗಿ ಹಂಸಧ್ವನಿ ರಾಗಕ್ಕೂ ಹಂಸವು ಮಾಡುವ ಧ್ವ್ನನಿಗೂ ಯಾವ ಸಂಬಂಧವೂ ಇಲ್ಲ. ಅಥವಾ ಕೋಕಿಲಪ್ರಿಯ ರಾಗ ಕೋಗಿಲೆಗಳಿಗೆ ಪ್ರಿಯವೂ ಅಲ್ಲ. ಕನ್ನಡ ರಾಗವನ್ನು ಕನ್ನಡಿಗರು ಮಾತ್ರ ಹಾಡಬೇಕೆಂದೂ ಇಲ್ಲ ಆದರೆ, ಯಾವುವಾದರೊಂದು ರಾಗಕ್ಕೆ ಅನ್ವರ್ಥ ನಾಮವಿರುವುದು ನಿಜವಾದರೆ, ಅದು ಮೋಹನ ರಾಗಕ್ಕೇ. ಅದು ಅಷ್ಟು ಮನಮೋಹಕ. ಬರಿ ನಮಗಷ್ಟೇ ಅಲ್ಲ. ಈ ರಾಗ ಪ್ರಪಂಚದಾದ್ಯಂತ ಇರುವ ಸಂಗೀತ ಪದ್ಧತಿಗಳಲ್ಲೆಲ್ಲ ಪ್ರಸಿದ್ಧ. ಚೀನೀ-ಜಪಾನಿ-ಥೈಲ್ಯಾಂಡುಗಳ ಸಾಂಪ್ರದಾಯಿಕ ಸಂಗೀತದಲ್ಲಿಯೂ ಇದೊಂದು ಪ್ರಖ್ಯಾತ ರಾಗ. ಹಾಗೇ ಪಾಸ್ಚಾತ್ಯರಿಗೂ ಈ ರಾಗ (ಅವರು ರಾಗವೆಂದು ಕರೆಯರು - ಅದೊಂದು scale ಅವರಿಗೆ. ರಾಗಕ್ಕೂ scale ಗೂ ಇರುವ ವ್ಯತ್ಯ್ಶಾಸವನ್ನು ಮುಂದೆ ಯಾವಾಗಲಾದರೂ ನೋಡೋಣ). ಸುಪರಿಚಿತ. ಹಾಗಾಗಿ ಎಲ್ಲ ಕಡೆಯ ಸಂಗೀತಪ್ರೇಮಿಗಳ ಮನಸ್ಸನ್ನು ಸೆಳೆದು ಮೋಡಿ ಮಾಡಿರುವ ಮೋಹಕ ರಾಗ ಮೋಹನ
ಇಷ್ಟೆಲ್ಲಾ ಬರೀ ಪೀಠಿಕೆಯೇ ಆಯ್ತು ಎಂದಿರಾ? ಪೀಠ, ಅಥವ ಬುನಾದಿ ಭದ್ರವಾಗಿದ್ದರೆ ತಾನೇ ಕಟ್ಟಡ ನಿಲ್ಲುವುದು? ಮುಂದಿನ ಕಂತಿನಲ್ಲಿ ಮೋಹನ ರಾಗದ ಮೇಲೆ (ನಿಜವಾಗಿಯೂ, ನನ್ನನ್ನು ನಂಬಿ :-) ಹೆಚ್ಚಿನ ಮಾಹಿತಿ ಬರಲಿದೆ. ಹಲವು ಚಿತ್ರಗೀತೆ, ಭಾವಗೀತೆ, ಯಕ್ಶಗಾನ , ಗಮಕ ವಾಚನ ಮತ್ತು ಶಾಸ್ತ್ರೀಯ ಸಂಗೀತದ ಉದಾಹರಣೆಗಳೊಂದಿಗೆ ಮೋಹನ ರಾಗವೈಭವವನ್ನು ನಿರೀಕ್ಷಿಸಿ.
ಅಲ್ಲಿಯವರಿಗೂ ಒಂದು ಸಂಪದಿಗರಿಗೆ ಒಂದು ಕಿರು ಪ್ರಶ್ನೆ. ಈ ಕೆಳಗಿನ ಚಿತ್ರಗೀತೆ ಯಾವ ರಾಗವಿರಬಹುದು ?
ಸರಸದ ಈ ರಸನಿಮಿಷ ಸ್ವರಸ್ವರವೂ ನವ ಮೋಹನ ರಾಗ
ಉತ್ತರ ಸಿಕ್ಕರೆ, ಅದಕ್ಕೆ ಬಹುಮಾನವಿಲ್ಲ :) ಆದರೆ, ಈ ಹಾಡು ಯಾವ ಚಿತ್ರದ್ದೆಂದು ಯಾರಿಗಾದರೂ ಗೊತ್ತಿದ್ದರೆ ಖಂಡಿತ ತಿಳಿಸಿ.