ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ

ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ

ಚಿತ್ರ

 

 

 

 

 ಈ ಜನರೇಕೆ ಹೀಗೆ?

 

ಮಾಡಿದ್ದ ಮರೆಯುವರು ಮಾಡಲಿಲ್ಲೆನ್ನುವರು

ಕೂಡಿ ಬಾಳಿದರೂ ಕೊರತೆಯ ಹುಡುಕುತ

ರೂಢಿಯೊಳು ಕಪಟ ನಾಟಕಗಳನೆ ಮೆಚ್ಚುವರು

ನಾಡಿನೊಳು ಗುಣಕಿಲ್ಲ ಹಣಕಿಹುದು ಬೆಲೆಯು

ತಿಳಿದರೂ ನಮ್ಮವರೆ ನಮ್ಮೆದೆಯ ಸುಡುವರು

ಬಳಲಿಸುತ ಶುದ್ಧಹೃದಯಿಗಳನು

ಕಳವಳದಿ ಬಳಲಿದರು ಬೆನ್ನು ತೋರಿಸಿ ನಡೆದು

ತಿಳಿಮನವ ಕಲಕಿ ತಳಮಳವೀವರು

ನಮಗೇಕೆ ಬಾರದೋ ಒಳಗೊಂದು ಹೊರಗೊಂದು

ನಮಗಿಲ್ಲಿ  ನೇರ ನಡೆ ನುಡಿಯದೇಕೊ?

ಮೋಸ ವಂಚನೆ ಬರದು ಸೋಗಿನಾ ನಡೆ ಬರದು

ದೋಷವಿದು ಕಲಿಯುಗದಿ ನಿಜದ ನಡೆಯು

 

ಇಲ್ಲಿ ನೀ ನಗಬೇಕು ಎದೆ ಕುದಿಯುತಿದ್ದರೂ

ಇಲ್ಲಿ ಧೂರ್ತಗು ಕೈ ಮುಗಿಯಬೇಕು

ಇಲ್ಲಿ ತೋರಿಕೆಯಾಟ ತೋರಲೇ ಬೇಕಲ್ಲ!

ಇಲ್ಲಿ ಸಜ್ಜನಿಕೆಗೆ ಬೆಲೆ ಅತಿವಿರಳವೂ

ನಿನ್ನ ಜೀವನವನ್ನೆ ನೀ ಕೊಟ್ಟರೇನಾಯ್ತು

ನೀನೇನು ಮಾಡಿರುವಿ ಎನ್ನುವವರದೋ!

ನಿನ್ನ ತ್ಯಾಗಕೆ ಇಲ್ಲಿ ಯಾವ ಬೆಲೆ ಇಲ್ಲವೈ

ನಿನ್ನವರು ನಿನ್ನ ಮೆಚ್ಚರು ದಿಟವಿದು

 

ಗೀತೆಯಲಿ ರಂಗನಾಡಿದ ಮಾತ ನೆನಪಿಸಿಕೊ

ಕರ್ಮವನು ಮಾಡು ಫಲದಾಸೆ ಮರೆತು

ನಿನ್ನ ಕರ್ತವ್ಯವನು ನೀನು ಮಾಡುತ ಸಾಗು

ಇಹಕುಂಟು ಪರಕುಂಟು ನಿನಗೆ ಸುಖವುಂಟು

 

ಯಾರು ಹೊಗಳಿದರೇನು ಯಾರು ತೆಗಳಿದರೇನು

ಆತ್ಮಸಾಕ್ಷಿಯ ದಾರಿ ದೀಪವಾಗಿರಿಸಿ

ಸಂಸಾರ ನಿಸ್ಸಾರ ನೀರಮೇಳಣ ಗುಳ್ಳೆ

ತತ್ವ ಪದ ನೆನಪಿಸುತ ಮುಂದೆ ಸಾಗು

 

ಕರ್ಮದಲಿ ಅನುರಕ್ತಿ ಧರ್ಮದಲಿ ಆಸಕ್ತಿ

ಧರ್ಮ ಕರ್ಮಗಳ ಸಂಗಮದಿ ರಕ್ತಿ

ಮರ್ಮವನು ತಿಳಿ ಜಗದಿ ನಿರ್ಮಲ ಮನಸ್ಕನೇ

ಕರ್ಮ ಫಲತ್ಯಾಗದಲ್ಲಿರೆಲಿ ಆಸಕ್ತಿ

 

 

Rating
No votes yet

Comments