ಕಲಿಯುಗದ ತಪಸ್ಸು --- ಖರೇನೇ ಭಾಳ ಕಠಿಣದ

ಕಲಿಯುಗದ ತಪಸ್ಸು --- ಖರೇನೇ ಭಾಳ ಕಠಿಣದ

ಪುರಾತನ ಕಾಲದಾಗ ಋಷಿ-ಮುನಿಗಳು, ರಾಕ್ಷಸರು, ಮತ್ತ್ಯಾರ್ಯಾರೋ ತಪಸ್ಸು ಮಾಡ್ತಿದ್ರು ಅಂತ ಹೇಳಿದ್ದು ನಾವೆಲ್ಲಾರೂ ಕೇಳಿವಿ. ತಪಸ್ಸು ಮಾಡಲಿಕ್ಕೇ ಎಷ್ಟು ಕಷ್ಟ ಪಡತಿದ್ರು ಅಂತನೂ ಕೇಳಿವಿ. ಕೆಲೊಬ್ರು ಸದಾಕಾಲ ದೇವರ ಧ್ಯಾನ ಮಾಡೀದ್ರ ಮತ್ತೊಬ್ರು ಈ ಸದ್ದ ದೇವರು ಇಲ್ಲಿ ಬರಬೇಕು ಅಂತ ಹೇಳಿ ವಾಮಾಚಾರಿ ಮಾಡ್ತಿದ್ರು. ಏನೇ ಮಾಡ್ಲಿ, ಹೆಂಗೇ ಮಾಡ್ಲಿ ವಟ್ಟ ಎಲ್ಲಾ ಆದಮ್ಯಾಲೇ ದೇವರನ್ನ ಪ್ರತ್ಯಕ್ಷ ಮಾಡ್ಕೊಂಡು, ಒಂದಿಷ್ಟು ವರಾ ಕೇಳಿ ಕಥಿ ಮುಗಸ್ತಿದ್ರು. ಇದು ಅವಾಗಿನ ಕಾಲದ್ದಾತು. ಇವತ್ತಿನ ಈ ಕಲಿಯುಗದೊಳಗ ಹೆಂಗದ ಪರಿಸ್ತಿಥಿ ಅಂತ ನೋಡುಣು ಬರ್ರಿ.

ಪುರಾಣದಾಗ ಕೇಳಿದಂತಾ ಮಹಾತ್ಮರನ್ನ ನಾ ಅಂತ್ರು ಇನುತನಾ ನೋಡಿಲ್ಲಾ. ಹಂತವರು ಇದ್ರೋ ಇಲ್ಲೋ, ಈಗ ಇದ್ದಾರೋ ಇಲ್ಲೋ ಗೊತ್ತಿಲ್ಲಾ. ಆದ್ರ ನನ್ನ ಅನುಭವದ ಪ್ರಕಾರ ಈ ಕಲಿಯುಗದ ತಪಸ್ಸೇ ಬ್ಯಾರೆ ಆಗೇದ. ಈಗ ನೋಡ್ರಿ, ನಮ್ಮೊಳಗ ಎಷ್ಟು ಮಂದಿ ತಿರುಪತಿಗೆ ಹೋಗಿಲ್ಲಾ. ಅಲ್ಲಿ ಹೋಗಿ ಬಂದವರೆಲ್ಲಾ "ಅಬಾಬಾಬಾ, ಎಷ್ಟು ಗದ್ಲಾ, ಎಷ್ಟು ಮಂದಿ, ಏನ್ ಸುದ್ದಿ, ಏನ್ ಕಥಿ" ಅಂತ ಹೇಳುದು ಇದ್ದಿದ್ದ. ಬರೇ ತಿರುಪತಿ ಅಂತಲ್ಲಾ ಯಾವುದೇ ಪ್ರಮುಖ ಜಾಗಾ ಇದ್ರೂ ಇದೇ ಕಥಿ. ಇನ್ನ ಹಿಂತಾ ಜಾಗಾಗೋಳು ಒಂದ, ಎರಡ -- ನೂರಾರವ, ಮತ್ತ ಎಲ್ಲಾದಕ್ಕು ಒಂದೊಂದು ಮಹತ್ವದ್ದ ಕಥಿ ಇರ್ತದ. ಯಾವುದು ಬಿಡುಹಂಗಿಲ್ಲಾ. ಅವು ಈ ಪುಣ್ಯ ಜಾಗಾ ಹೆಂಗಿರ್ತಾವಪಾ ಅಂದ್ರ, ಬಟಾ ಬೈಲು ಜಾಗಾ, ಬಿಸಿ ಬಿಸಿ ಊರು - ಹಿಂತಾ ಕಡೇ ಬ್ಯಾಸಗಿದಾಗೇ ಹೋಗಬೇಕಂತ. ಅದಲ್ದ ವರ್ಷದಾಗ ಯಾವದೋ ಒಂದು ದಿನ ಅಷ್ಟೇ ಅಲ್ಲಿ ಹೋದ್ರ ಮಹಾ ಪುಣ್ಯ ಅಂತಬ್ಯಾರೇ ಹೇಳಿಬಿಡ್ತಾರ. ನಡಿ. ಅವತ್ತೇ ಜಗತ್ತೆಲ್ಲಾ ಅಲ್ಲಿಗ ಬರ್ತದ. ಆತಲಾ, ಗದ್ಲಾನೇ ಗದ್ಲಾ. ಮತ್ತಿನಾ ಕೆಲವೊಂದು ಅಗದಿ ಸಣ್ಣ ಹಳ್ಳ್ಯಾಗಿರ್ತಾವ. ಅಲ್ಲಿಗೆ ಹೋಗು ಬರು ವ್ಯವಸ್ಥೆ ಇರುದಿಲ್ಲಾ. ತಿಣ್ಣು-ಉಣ್ಣು ವ್ಯವಸ್ಧೆನು ಸ್ವಲ್ಪ ಭಿರಿನೇ. ಅವರೂರಿಂದ ಸಮೀಪದ್ದ ಊರಿಗೆ ಗಾಡಿದಾಗ ಹೋಗಿ, ಅಲ್ಲಿಂದ ಸ್ವಲ್ಪ ದೂರ ಟ್ರ್ಯಾಕ್ಟರ್ ಇಲ್ಲಾ ಚಕಡಿದಾಗ ಹೋಗಿ ಮತ್ತ ಕಡೀಕ ಸ್ವಲ್ಪ ನಡದು, ಹಿಂಗೆಲ್ಲಾ ಏನೇನೋ ಮಾಡಿ ಹೋಗುದಿರ್ತದ.
ಹಿಂತಾದರಾಗೂ ನಮ್ಮ ಮಂದಿ ಬಿಡುದಿಲ್ಲಾ, ಬ್ಯಾಡ ಸರಿಪಾ ಅಂತ ಹೇಳಿ ಮನ್ಯಾಗ ಕೂಡುದಿಲ್ಲಾ. ದೇವರ ದರ್ಶನ ಆಗಬೇಕು, ಆ ದಿನಾನೇ ಆಗಬೇಕು. ಎಲ್ಲಾ ಕಡೇ ಹೋಗಿ ಬರ್ತಾರ.

ಇದು ಪುಣ್ಯ ಜಾಗಾಗೋಳ ಕಥಿ ಆದ್ರ ನಮ್ಮ ಲೋಕಲ್ ಗುಡಿಗೋಳು ಏನು ಕಡಿಮಿಲ್ಲಾ. ಹಬ್ಬಾ ಹುಣ್ಮಿ ಬಂತಿಲ್ಲೋ ಎರ್ರಾ-ಬಿರ್ರಿ ಭಕ್ತಿ, ಹುಚ್ಚಾ ಪಟ್ಟೇ ಮಂದಿ. ಅಲ್ಲೂ ಗದ್ಲಾ. ತಿರುಪತಿ ಆಗಿಲ್ಲಾ ಅಂದ್ರ ಇಲ್ಲೇ ಮಗ್ಲಕ್ಕಿನ ವೆಂಕಪ್ಪನ ಗುಡಿಗ ಹೋಗಿ ಬಂದ್ರ ಆತ್ ನಡೀ ಅನ್ನು ಮಂದಿನೂ ರಗಡ ಇದ್ದಾರ.

ನಾ ಹಿಂತಾದರೊಳಗ ಸ್ವಲ್ಪ ಹಿಂದ. ಯಾಕ ಅಷ್ಟು ಗದ್ದಲ್ದಾಗ ಹೋಗುದೋ ಮಾರಾಯ ಅಂತ ಹೇಳಿ ಮನ್ಯಾಗೇ ಇನಾ ಒಂದು ನಾಕ ಮಂತ್ರಾ ಜಾಸ್ತಿ ಹೇಳಿ ಕೂಡುಹಂತಾ ಆಸಲಿ ಮನಷಾ ನಾ. ಇಷ್ಟೆಲ್ಲಾ ಕಷ್ಟ ಪಡು ಮಂದೀನ ನೋಡಿದ್ರ ನನಗ ಈಗಿನ ಕಾಲದ್ದು ತಪಸ್ಸು ಇದೇ ಏನಪಾ ಅಂತ ಅನಸ್ತದ. ಖರೇನೆ. ಒಂದು ತೀರ್ಥ ಕ್ಷೇತ್ರಕ್ಕ ಹೋಗಿ ಬರೂದು ಅಂತ ಅಂದ್ರ ಅಗದಿ ಸರಳ ಏನಿಲ್ಲಾ. ಈಗೆಲ್ಲಾ ರಗಡ ಕಡೇ ಮೊದಲ ವ್ಯವಸ್ಥೆ ಮಾಡುದು ಎಲ್ಲಾ ಇರ್ತದ, ಆದ್ರು ಭಾಳಷ್ಟು ಸಣ್ಣ ಜಾಗಾದಾಗ ಏನೂ ಇರುದಿಲ್ಲಾ. ನಮ್ಮ ಲೋಕಲ್ ಗುಡಿದಾಗ ಹಂತಾಪರಿ ಏನು ವ್ಯವಸ್ಥೆ ಇರ್ತದ, ಏನ್ ಇರ್ಲಿಕ್ಕೆ ಸಾಧ್ಯ ಅದ. ನನಗ ಅನಸುಮಟ್ಟಿಗೆ ಹಂತಾಪರಿ ಏನಿಲ್ಲಾ.

ಅದಕ್ಕ ಹಿಂಗ ಗುಡಿಗ ಹೋಗಿದೆಲ್ಲಾನೇ ಈ ಕಾಲದ ತಪಸ್ಸು ಅಂತ ಅನಸ್ತದ. ಆ ಲೆಕ್ಕದಾಗ ನಾ ಅಂತ್ರು ಋಷಿ ಆಗುದು ಭಾಳ ದೂರದ.

Rating
No votes yet

Comments