ಕಲ್ಲಂಗಡಿ ಹಣ್ಣು ಹೇಳಿದ ತತ್ವ

ಕಲ್ಲಂಗಡಿ ಹಣ್ಣು ಹೇಳಿದ ತತ್ವ

ನನ್ನ ಅಪ್ಪನ ಅಪ್ಪ ಶ್ರೀಮಂತನಲ್ಲ. ಅದರಿಂದಾಗಿ ನನ್ನ ಅಪ್ಪನಿಗೆ ಯಾವ ಪಿತ್ರಾರ್ಜಿತ ಸ್ವತ್ತೂ ಇರಲಿಲ್ಲ. ನನ್ನ ತಾಯಿಯ ಅಪ್ಪ ಸಾಕಷ್ಟು ಶ್ರೀಮಂತನಿದ್ದ. ಆದರೇ ಅಷ್ಟೇ ಸಂಪ್ರದಾಯಸ್ಥ. ನನ್ನ ಅಪ್ಪನ ಅಪ್ಪನಂತೆ ಕ್ರಾಂತಿಕಾರಿ ಆಲೋಚನೆಗಳಿಂದ ಸ್ವಲ್ಪವೇ ದೂರ, ನನ್ನ ತಾತ. ಇಲ್ಲಿ ಅನುಕೂಲಕ್ಕಾಗಿ ನನ್ನ ಅಪ್ಪನ ಅಪ್ಪನನ್ನು ಅಜ್ಜ ಎಂದೂ ತಾಯಿಯ ಅಪ್ಪನನ್ನು ತಾತ ಎಂದೂ ಕರೆದಿದ್ದೇನೆ. ನನ್ನ ಅಜ್ಜ ಶ್ರೀಮಂತನಲ್ಲದಿದ್ದರೂ, ಕುಗ್ರಾಮವಾದ ತಾಳವಾಡಿಯಲ್ಲಿ ಮಾಸ್ತರಾಗಿದ್ದರೂ, ಮಹಾತ್ಮಾ ಗಾಂಧೀಜಿಯವರು ಪ್ರಕಟಿಸುತ್ತಿದ್ದ “ಹರಿಜನ್” ಪತ್ರಿಕೆಗೆ ಚಂದಾದಾರನಾಗಿ ಆ ಪತ್ರಿಕೆಯನ್ನು, ತರಿಸಿಕೊಂಡು ಓದಿ ವಿಚಾರಗಳನ್ನು ತಿಳಿಯುತ್ತಿದ್ದರು. ತಾನೇ ಸ್ವಂತವಾಗಿ ಹಿಂದಿ ಭಾಷೆ ಕಲಿತು ‘ಹರಿಜನ್’ ಪತ್ರಿಕೆಯನ್ನು ಓದಿ ಅದರಲ್ಲಿ ಪ್ರಕಟವಾಗುತ್ತಿದ್ದ ವಿಚಾರಗಳನ್ನು ಊರಿನವರಿಗೆ ತಿಳಿಸುತ್ತಿದ್ದರಂತೆ. ಆ ಕಾಲಕ್ಕೆ ಬ್ರಿಟಿಷರು ಆಡಳಿತ ನಡೆಸುತ್ತಿದ್ದ ಸಮಯದಲ್ಲಿ ಈ ರೀತಿ ಗಾಂಧೀಜಿಯವರ ಅನುಯಾಯಿಯಾದಿದ್ದು ಸ್ವಲ್ಪ ಸಾಹಸದ ವಿಷಯವೇ ಆಗಿತ್ತು.

ನನ್ನ ತಾತ ಮತ್ತು ಅಜ್ಜ ಇವರಿಬ್ಬರಿಗೂ ಗಾಢ ಸ್ನೇಹವಿತ್ತು. ಜತೆಗೆ ಹತ್ತಿರದ ಸಂಬಂಧಿಗಳು ಮತ್ತು ಬೀಗರು. ಹಾಗಾಗಿ ಇವರಿಬ್ಬರೂ ಪರಸ್ಪರ ಸ್ನೇಹ, ಸೌಹಾರ್ದಗಳಿಂದ ಇದ್ದರು. ಇಬ್ಬರೂ ಆಗಾಗ್ಗೆ ಒಬ್ಬರು ಮತ್ತೊಬ್ಬರ ಮನೆಗೆ ಭೇಟಿ ಕೊಟ್ಟು ಔತಣ ಉಪಚಾರಗಳನ್ನು ಸ್ವೀಕರಿಸುವುದು ವಾಡಿಕೆಯಾಗಿತ್ತು. ನನ್ನ ತಾತ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನನ್ನೂರಿನಿಂದ ಸುಮಾರು 80 ಕಿ.ಮೀ ದೂರದಲ್ಲಿರುವ ಮೈಸೂರು ನಗರದಲ್ಲಿ ಮನೆಯಾಡಿದ್ದರು. ನನ್ನ ಅಜ್ಜಿಯು ಮಕ್ಕಳಿಗಾಗಿ, ಮೈಸೂರಿನ ಮನೆಯಲ್ಲಿದ್ದುಕೊಂಡು ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಿದ್ದರು.

ಆಗಿನ ಕಾಲಕ್ಕೆ ಹೆಣ್ಣು ಮಕ್ಕಳು ಶಾಲೆಗೆ ಸೇರಿ ವಿದ್ಯಾಭ್ಯಾಸ ಮಾಡುವ ಅಭ್ಯಾಸವೇ ಇರಲಿಲ್ಲ. ನನ್ನ ತಾಯಿಯು ಮೈಸೂರಿನಲ್ಲಿ ಶಾಲೆಗೆ ಸೇರಿದ ಕಾಲಕ್ಕೆ ಹೆಣ್ಣುಮಕ್ಕಲು ಶಾಲೆಗೆ ಬರುತ್ತಲೇ ಇರಲಿಲ್ಲ. ಹೆಣ್ಣು ಮಕ್ಕಳು ಶಾಲೆಗೆ ಬಂದು ವಿದ್ಯಾಭ್ಯಾಸ ಮಾಡಲು ಅನುಕೂಲವಾಗುವಂತೆ ಅಂದಿನ ಮೈಸೂರು ಮಹಾರಾಜರು ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದರಂತೆ. ಪ್ರತಿದಿನ ಹೆಣ್ಣು ಮಕ್ಕಳು ಶಾಲೆಗೆ ಬರಲು ಮತ್ತು ವಾಪಸ್ಸು ತಮ್ಮ ತಮ್ಮ ಮನೆಗಳಿಗೆ ಹಿಂದಿರುಗಲು ಸಾರೋಟುಗಳನ್ನು ಉಚಿತವಾಗಿ ಏರ್ಪಾಟು ಮಾಡಿದ್ದರು. ಮುಖ್ಯ ರಸ್ತೆಗಳು ಸೇರುವ ಸ್ಥಳಗಳಿಗೆ ಈ ಸಾರೋಟು ಬಂದು ನಿಲ್ಲುತ್ತಿತ್ತು. ಸಾರೋಟಿನಲ್ಲಿ ಎಂಟು ಮಕ್ಕಳು ಕುಳಿತುಕೊಳ್ಳಬಹುದಾಗಿತ್ತು, ಅದಕ್ಕೆ ಕಿಟಕಿಗಳಿದ್ದು ಅವುಗಳಿಗೆ ಅಂದವಾದ ತೆರೆಗಳನ್ನು ಹಾಕಿ ಮರೆ ಮಾಡಿರುತ್ತಿತ್ತು. ಈ ಸಾರೋಟನ್ನು ಜೋಡಿ ಎತ್ತುಗಳು ಅಥವ ಕುದುರೆಗಳನ್ನು ಕಟ್ಟಿ ಎಳೆದುಕೊಂಡು ಹೋಗುವ ಹಾಗೆ ಮಾಡಿದ್ದರು. ಈ ಸಾರೋಟು ಮುಖ್ಯ ರಸ್ತೆಗಳ ಮೂಲಕ ಹಾದು ಶಾಲೆಯ ಬಳಿ ಬಂದು ನಿಲ್ಲುತ್ತಿತ್ತು. ಹೆಣ್ಣು ಮಕ್ಕಳು ಇಳಿದು ಶಾಲೆಗೆ ಹೋದಮೇಲೆ ವಾಪಸ್ಸಾಗುತ್ತಿತ್ತು. ಮತ್ತೆ ಶಾಲೆ ಮುಗಿಯುವ ಸಮಯಕ್ಕೆ ಸರಿಯಾಗಿ ಬಂದು ಮಕ್ಕಳನ್ನು ಪುನಃ ಮನೆಯ ಬಳಿಗೆ ತಲುಪಿಸುತ್ತಿತ್ತು.

ನನ್ನ ತಾಯಿಯೂ ಸಹ ಈ ಸಾರೋಟಿನಲ್ಲಿಯೇ ಸಂಚರಿಸಿ ವಿದ್ಯಾಭ್ಯಾಸ ಪೂರೈಸಿದ್ದು, ನನ್ನ ತಾಯಿ ಈ ವಿಚಾರವನ್ನು ನನಗೆ ಹೇಳಿದಾಗ ನನಗೆ ಆಶ್ಚರ್ಯದೊಂದಿಗೆ ಸ್ವಲ್ಪ ಅಸೂಯೆಯೂ ಉಂಟಾಯಿತು. ಅಸೂಯೆ ಏಕೆಂದರೆ ಸಿನೆಮಾಗಳಲ್ಲಿ ಕಥಾನಾಯಕನು ಕುದುರೆ ಸಾರೋಟಿನಲ್ಲಿ ಓಡಾಡುವುದನ್ನು ನೋಡಿದ್ದ ನನಗೆ, ನಾನೂ ಸಹ ಈ ರೀತಿ ರಾಜನಂತೆ ಸಾರೋಟಿನಲ್ಲಿ ಹೋಗಬೇಕೆಂಬ ಆಸೆ ಮನದಾಳದಲ್ಲಿ ಅಡಗಿತ್ತು. ಆದರೆ ನನ್ನ ತಾಯಿಯಾದರೋ ಶಾಲೆಗೆ ಪ್ರತಿನಿತ್ಯ ಸಾರೋಟಿನಲ್ಲಿ ಹೋಗಿ ಬಂದು ಮಾಡುತ್ತಿದ್ದಳು, ಅವಳು ಎಷ್ಟು ಅದೃಷ್ಟವಂತೆ ಎಂದು ಅಸೂಯೆಯಾಯಿತು.

ಈಗ ಇದನ್ನು ಕನಸಿನಲ್ಲೂ ಸಹ ಕಾಣಲು ಸಾಧ್ಯವಿಲ್ಲ. ಈ ವಾಹನ ಸಂಚಾರ ದಟ್ಟಣೆಯಲ್ಲಿ ಸಾರೋಟನ್ನು ಎಲ್ಲಿ ಓಡಿಸುವುದು ಅದಕ್ಕೆ ರಸ್ತೆಯಲ್ಲಿ ಜಾಗವೆಲ್ಲಿದೆ. ಈ ಸಾರೋಟಿನ ವಿಷಯವನ್ನು ನನ್ನ ತಾಯಿ ನನಗೆ ಹೇಳಿದಾಗ ನಾನು ಅವಳಿಗೆ ಹೇಳಿದ್ದು, “ನೋಡಮ್ಮ ನನ್ನ ಮಗನನ್ನು ನಾನು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ವಿದೇಶದಲ್ಲಿ ಓದಿಸಿದ್ದೇನೆ. ಆದರೆ ಅವನನ್ನು ರಾಜಕುಮಾರನಂತೆ ಸಾರೋಟಿನಲ್ಲಿ ಶಾಲೆಗೆ ಕಳುಹಿಸಲು ಆಗಲಿಲ್ಲವಲ್ಲ. ನಿನ್ನಷ್ಟು ಅದೃಷ್ಟ ಅವನಿಗಿಲ್ಲ ಎಂದೆ. ಈಗ ಮಕ್ಕಳನ್ನು ಕೋಟ್ಯಂತರ ರೂಪಾಯಿ ಬೆಲೆಬಾಳುವ ಹಮ್ಮರ್ ಅಥವಾ ಮರ್ಸಿಡಿಸ್ ಕಾರಿನಲ್ಲಿ ಕಳುಹಿಸಿದರೂ ಯಾರೂ ಅಷ್ಟಾಗಿ ಅದರ ಬಗ್ಗೆ ಗಮನ ಕೊಡುವುದಿಲ್ಲ. ಇವೆಲ್ಲಾ ಈಗ ಮಾಮೂಲಿ ವಿಷಯಗಳಾಗಿ ಬಿಟ್ಟಿವೆ. ಆದರೆ, ಅದೇ ಜೋಡಿ ಕುದುರೆ ಸಾರೋಟಿನಲ್ಲಿ ಶಾಲೆಗೆ ಬಂದರೆ ಅದರ ಗಮ್ಮತ್ತೇ ಗಮ್ಮತ್ತು. ಅಂದರೆ ಮನುಷ್ಯನು ಯಾವುದು ಇಲ್ಲವೋ ಅದನ್ನೇ ಬಯಸುತ್ತಾನೆ. ಇರುವುದನ್ನು ಅನುಭವಿಸಿ ಸಂತೋಷ ಪಡುವುದಿಲ್ಲ.

ನನ್ನ ಅಪ್ಪ ಅಮ್ಮನ ಮದುವೆ ಆಗಿ, ನನ್ನ ಅಪ್ಪನೊಡನೆ ನನ್ನ ತಾಯಿ ಅಪ್ಪನು ಕೆಲಸ ಮಾಡುವ ಊರಿಗೆ ಬಂದು ಸಂಸಾರ ಹೂಡಿದ್ದಾಯಿತು. ನನ್ನ ತಾತ ಎಷ್ಟೇ ಶ್ರೀಮಂತನಾಗಿದ್ದರೂ ಸಹ ಕಟ್ಟಾ ಸ್ವಾಭಿಮಾನಿಯಾದ ನನ್ನ ಅಪ್ಪ, ಮಾವನ ಮನೆಗೆ ಹೆಚ್ಚಾಗಿ ಹೋಗುತ್ತಿರಲಿಲ್ಲ. ಅನಿವಾರ್ಯ ಕಾರಣಗಳಿಗಾಗಿ ಮಾತ್ರ ನನ್ನ ತಾಯಿಯನ್ನು ನನ್ನ ತಾತನ ಮನೆಗೆ ಕಳುಹಿಸುತ್ತಿದ್ದರು. ಉಪಧ್ಯಾಯ ವೃತ್ತಿಯಲ್ಲಿದ್ದ ನನ್ನ ಅಪ್ಪ, ಆಗಿನ ಕಾಲಕ್ಕೇನೆ ನನ್ನ ತಾಯಿಯನ್ನೂ ಸಹ ಉಪಾಧ್ಯಾಯಿನಿಯ ಕೆಲಸಕ್ಕೆ ಸೇರಲು ಹೇಳಿದರು. ಆಗ ನನ್ನ ತಾತ ಇದನ್ನು ಕೇಳಿ, “ಅಯ್ಯೋ ಎಲ್ಲಾದರೂ ಉಂಟೇ, ಹೆಂಗಸರು ಕೆಲಸಕ್ಕೆ ಸೇರಿ ಸಂಪಾದಿಸುವುದು ಸಂಪ್ರದಾಯವಲ್ಲ, ನನ್ನ ಮಗಳು ಇಷ್ಟೆಲ್ಲಾ ಕಷ್ಟ ಯಾಕೆ ಪಡಬೇಕು”, ಎಂದೆಲ್ಲ ಪ್ರಲಾಪಿಸಿದರಂತೆ. ಆದರೆ ನನ್ನ ಅಪ್ಪ ಅದಕ್ಕೆಲ್ಲ ಬಗ್ಗಲಿಲ್ಲ. ಅವರು ನನ್ನ ತಾಯಿಗೆ ಹೇಳಿದ್ದು ಇಷ್ಟೆ. ಸ್ವಾವಲಂಬಿಯಾಗಿ ಸ್ವಂತ ಸಂಪಾದನೆಯಿಂದ ನಮ್ಮ ಜೀವನ ನಿರ್ವಹಣೆ ಆಗಬೇಕು. ಇತರರ ಸ್ವತ್ತು ನಮಗೆ ಬೇಡ, ನಿನ್ನ ಅಪ್ಪನ ಸ್ವತ್ತು ಅವನಿಗೇ ಇರಲಿ, ಇದಕ್ಕೆ ಮೇಲೆ ನಿನ್ನ ಇಷ್ಟ ಎಂದು ಬಿಟ್ಟರು. ನನ್ನ ತಾಯಿಯೂ ಸಹ ಅಪ್ಪನ ಮಾತಿನಂತೆ ಕೆಲಸಕ್ಕೆ ಸೇರಿ ಉಪಾಧ್ಯಾಯಿನಿಯರ ಶಿಕ್ಷಣವನ್ನು ಮುಗಿಸಿ, ಶಾಲೆಯಲ್ಲಿ ಉಪಾಧ್ಯಾಯಿನಿಯಾಗಿ ಸೇರಿದರು. ಇವೆಲ್ಲ 1930ರ ಸಮಯದಲ್ಲಿ ನಡೆದ ವಿದ್ಯಮಾನಗಳು. ಆಗಿನ ಕಾಲಕ್ಕೆ ಇದು ಅತ್ಯಂತ ಕ್ರಾಂತಿಕಾರೀ ಬೆಳವಣಿಗೆಯಾಗಿತ್ತು. ಅದೂ, ಅತ್ಯಂತ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದ ಹೆಣ್ಣು ಮಕ್ಕಳು ಶಾಲೆಯ ಉಪಾಧ್ಯಾಯಿನಿಯಾಗಿ ಸೇರುವುದು ಆಗೆಲ್ಲ ಅಪರೂಪದ ಸಂಗತಿಯಾಗಿತ್ತು.

ನನ್ನ ತಾತ ಮೊದಲು ಸ್ವಲ್ಪ ವಿರೋಧಿಸಿದರೂ, ಅಳಿಯನು ಇಷ್ಟು ಸ್ವಾಭಿಮಾನಿಯಾಗಿದ್ದಾನಲ್ಲ, ತನ್ನ ಸಂಪಾದನೆಯಲ್ಲಿಯೇ ತನ್ನ ಸಂಸಾರ ನಡೆಸುತ್ತಿದ್ದಾನೆ, ನನ್ನ ಆಸ್ತಿಗೆ ಆಸೆಪಡಲಿಲ್ಲ ಎಂದು ಬಹಳ ಹೆಮ್ಮೆ ಪಟ್ಟುಕೊಂಡರು.

ಈಗ ಕಲ್ಲಂಗಡಿ ಹಣ್ಣಿನ ವಿಚಾರಕ್ಕೆ ಬರೋಣ. ಇದೇನಿದು ಕಲ್ಲಂಗಡಿ ಹಣ್ಣಿನ ತತ್ವ? ಈ ಅಧ್ಯಾಯದ ಶಿರ್ಷಿಕೆ ಕಲ್ಲಂಗಡಿ ಹಣ್ಣು ಹೇಳಿದ ತತ್ವ ಎಂದಿದೆ. ಆದರೆ ಇಲ್ಲಿಯವರೆಗೂ ಆ ವಿಷಯದ ಪ್ರಸ್ತಾವನೇ ಇಲ್ಲವಲ್ಲ. ಬೇರೇನೋ ವಿಷಯ ಹೇಳುತ್ತಿದ್ದಾನೆ ಎಂದು ಸಂಶಯ ಏಳಬಹುದು.

ನನ್ನ ತಾಯಿ ಕೆಲಸಕ್ಕೆ ಸೇರಿ, ಸಂಸಾರ ನಿರ್ವಹಿಸಿ, ಮುಂದೆ ನನ್ನ ಅಪ್ಪನ ಜತೆ ತಾನೂ ಕೆಲಸ ಮಾಡಿ, ರಾಜೀನಾಮೆ ನೀಡಿ ನನ್ನೂರಿಗೆ ಬಂದು ಅಪ್ಪನ ವ್ಯವಸಾಯದ ಕಸುಬಿಗೆ ಸಹಾಯಕಳಾಗಿದ್ದು, ನಮ್ಮನ್ನೆಲ್ಲ ಮುಂದಕ್ಕೆ ತಂದರು. ಎಭತ್ತೆಂಟು ವರ್ಷಗಳ ಸಾಹಸೀ ಬದುಕನ್ನು ಬದುಕಿ ನನ್ನಪ್ಪ ದೇವರ ಪಾದ ಸೇರಿಬಿಟ್ಟ. ನಂತರದ ಕಾಲದಲ್ಲಿ ನಾನು ಉನ್ನತ ವ್ಯಾಸಂಗ ಮುಗಿಸಿ ಬ್ಯಾಂಕೊಂದರಲ್ಲಿ ಕೆಲಸಕ್ಕೆ ಸೇರಿ ಮುಂದೆ ಮೇನೇಜರಾಗಿ ಬಡ್ತಿ ಹೊಂದಿ ಕೆಲಸ ನಿರ್ವಹಿಸುತ್ತಿದ್ದೆ. ನನ್ನ ಮದುವೆಯಾಗಿ, ನನ್ನ ಮಗ ತನ್ನ ಬಿ.ಇ. ವ್ಯಾಸಂಗವನ್ನು ಮುಗಿಸಿ ಮುಂದೆ ವ್ಯಾಸಂಗಕ್ಕಾಗಿ ಆಸ್ಟ್ರೇಲಿಯಾಕ್ಕೆ ಹೊರಡುವ ತಯಾರಿ ಮಾಡುತ್ತಿದ್ದ.

ಈ ಸಮಯದಲ್ಲಿ ನನ್ನ ತಾಯಿ, ತನ್ನ ಮೊಮ್ಮಗ ವಿದೇಶಕ್ಕೆ ಹೊರಡುವ ಮುಂಚೆ ಅವನೊಡನೆ ಸ್ವಲ್ಪ ಸಮಯ ಇರಬೇಕೆಂದು ನನ್ನ ಮನೆಯಲ್ಲಿಯೇ ನಮ್ಮೆಲ್ಲರೊಡನೆ ಇದ್ದರು. ದಿನಾ ಸಂಜೆ ನಾನು ಮನೆಗೆ ಬಂದ ಮೇಲೆ, ಎಲ್ಲರೂ ಒಟ್ಟಿಗೆ ಕುಳಿತು ಸ್ವಾರಸ್ಯಕರವಾಗಿ ಮಾತನಾಡುತ್ತಾ ರಾತ್ರಿಯವರೆಗೂ ಕಾಲಕಳೆಯುತ್ತಿದ್ದೆವು. ಸರಿ ಎಲ್ಲರೂ ಇರುತ್ತಾರಲ್ಲ, ಮಾತನಾಡುವಾಗ ಏನನ್ನಾದರೂ ಬಾಯಿ ಆಡಿಸಬೇಕು. ಇದಕ್ಕಾಗಿ ಏನಾದರೂ ಕುರುಕಲು ತಿಂಡಿಗಳು ಮತ್ತು ಹಣ್ಣುಗಳನ್ನು ದಿನಾಲೂ ಮರೆಯದೇ ಮನೆಗೆ ತರುತ್ತಿದ್ದೆ. ಆಗ ಕಲ್ಲಂಗಡಿ ಹಣ್ಣು ಮಾರುಕಟ್ಟೆಯಲ್ಲಿ ಬಹಳವಾಗಿ ಮಾರಾಟವಾಗುತ್ತಿದ್ದ ಕಾಲ. ಜೊತೆಗೆ ಬೇಸಿಗೆ ಕಾಲ ಆಗತಾನೇ ಪ್ರಾರಂಭವಾಗಿತ್ತು.

ಸಂಜೆ ಮನೆಗೆ ಬಂದೊಡನೆ ಕಲ್ಲಂಗಡಿ ಹಣ್ಣನ್ನು ಚೊಕ್ಕವಾಗಿ ಕುಯ್ದು ಎಲ್ಲರಿಗೂ ಹಂಚುತ್ತಿದ್ದೆ. ಕಲ್ಲಂಗಡಿ ಮಾತ್ರವಲ್ಲದೆ ಕೆಲವು ದಿನ ದಾಳಿಂಬೆ, ಕಿತ್ತಳೆ ಹೀಗೆ ಬೇರೆ ಹಣ್ಣುಗಳನ್ನೂ ಸಹ ತರುತ್ತಿದ್ದೆ. ನನ್ನ ತಾಯಿ ಹಣ್ಣನ್ನು ತಿನ್ನಲಿ, ವಿದೇಶಕ್ಕೆ ಹೊರಡುವ ಮಗ ತಿನ್ನಲಿ ಎಂಬ ವಾತ್ಸಲ್ಯ ನನ್ನನ್ನು ಆವರಿಸಿತ್ತು.

ಹೀಗೆ ದಿನಾಲು ಕಲ್ಲಂಗಡಿ ಹಣ್ಣು ಕುಯ್ದು ತಾಯಿಗೆ ಕೊಡುತ್ತಿದ್ದೆ. ಅವರೂ ಸಹ ಬಹಳ ತೃಪ್ತಿಯಿಂದ ಹಣ್ಣು ತಿನ್ನುತ್ತಿದ್ದರು. ಈ ಕಾರ್ಯಕ್ರಮ ಸುಮಾರು ಒಂದರಿಂದ ಒಂದೂವರೆ ತಿಂಗಳು ಬಿಡದೇ ನಡೆಯಿತು.

ಒಂದು ದಿನ ಹೀಗೆ ಕಲ್ಲಂಗಡಿ ಹಣ್ಣು ತಿಂದು, ನನ್ನ ತಾಯಿ ‘ಏತಿ ಜೀವಂತಿ ಆನಂದಂ ನರಃ ವರ್ಷ ಶತಾದಪಿ’ ಅಂದಹಾಗೆ ನನಗೆ ತೃಪ್ತಿ ಆಯಿತು ಎಂದರು. ಸಂಸ್ಕೃತದ ಗಂಧ, ಗಾಳಿ ಅರಿಯದ ನಾನು ನನ್ನ ತಾಯಿಯನ್ನು “ಏನು ನೀನು ಹೇಳಿದ ಈ ಮಾತಿನ ಅರ್ಥ ಹೀಗೆ ಸಂಸ್ಕೃತದಲ್ಲಿ ಏನೇನೋ ಹೇಳಿ ನನ್ನನ್ನು ಹೆದರಿಸಬೇಡ” ಎಂದೆ. (ಮೇಲೆ ನಾನು ಉದಾಹರಿಸಿದ ಸುಭಾಷಿತ ಸರಿಯಾಗಿದೆಯೋ ಇಲ್ಲವೋ ತಿಳಿಯದು. ಸಂಸ್ಕೃತ ಭಾಷೆ ಬಲ್ಲವರು ತಪ್ಪಿದ್ದರೆ ಮನ್ನಿಸಬೇಕು. ನನ್ನ ಕಿವಿಗೆ ಹೇಗೆ ಕೇಳಿಸಿಕೋ ಹಾಗೆಯೇ ಹೇಳಿದ್ದೇನೆ. ಸಂಸ್ಕೃತ ಭಾಷೆ ತಿಳಿದ ನನ್ನ ತಾಯಿಯಿಂದ ಅದರ ಶುದ್ಧಪಾಠ ಬರೆದುಕೊಳ್ಳಲಿಲ್ಲ).

ಅದೇನೇ ಇರಲಿ, ಈ ಮಾತಿನ ಸಾರಾಂಶ ನನ್ನ ತಾಯಿ ಹೇಳಿದ್ದು, ನೂರು ವರ್ಷ ಮನುಷ್ಯ ಬದುಕಿದ್ದರೆ ಏನಾದರೂ ಒಂದು ಸಂತೋಷ ಅನುಭವಿಸಬಹುದು ಎಂದು. ಇದರ ಹಿನ್ನೆಲೆ ಅರಿಯದ ನಾನು “ಇದೇನಮ್ಮ, ಈವಾಗ ಯಾಕೆ ಹೀಗೆ ಒಂದು Statement ಮಾಡುತ್ತಿದ್ದೀಯ? ಏನಿದರ ಮರ್ಮ? ಪೂರ್ತಿ ವಿಚಾರ ತಿಳಿಸು. ಒಗಟಿನಂತೆ ಮಾತನಾಡಬೇಡ” ಎಂದೆ. ಅದಕ್ಕೆ ನನ್ನ ತಾಯಿ ತಾನು ಈ ರೀತಿ ಉದ್ಗರಿಸುವುದಕ್ಕೆ ಕಾರಣವನ್ನು ಸವಿಸ್ತಾರವಾಗಿ ಹೇಳಿದರು. ಅದನ್ನು ಕೇಳಿದ ನಾನು ಮೂಕವಿಸ್ಮಿತನಾದೆ.

ನನ್ನ ತಾಯಿ ಚಿಕ್ಕವಯಸ್ಸಿನಲ್ಲಿ ಶಾಲೆಗೆ ಸಾರೋಟಿನಲ್ಲಿ ಹೋಗಿ ಬರುತ್ತಿದ್ದರು ಎಂದು ಹಿಂದೆಯೇ ತಿಳಿಸಿದೆ. ಶಾಲೆಗೆ ಹೋಗುವಾಗ ಶಾಲೆಯ ಮುಂದೆ ಕೆಂಪುಕೆಂಪಾದ ಕಲ್ಲಂಗಡಿ ಹಣ್ಣನ್ನು ಹೋಳುಗಳನ್ನಾಗಿ ಕುಯ್ದು ಮಾರುತ್ತಿದ್ದರಂತೆ. ಆ ರಸವತ್ತಾದ ಕೆಂಪುಬಣ್ಣದ ಕಲ್ಲಂಗಡಿ ಹಣ್ಣಿನ ಹೋಳುಗಳನ್ನು ಕೊಂಡು ತಿನ್ನಬೇಕೆಂದು ಸಣ್ಣ ಹುಡುಗಿಯಾಗಿದ್ದ ನನ್ನ ತಾಯಿಗೆ ಮಹತ್ತರವಾದ ಆಸೆ. ಆದರೆ ಆಗಿನ ಕಾಲಕ್ಕೆ ಇದಕ್ಕೆಲ್ಲ ಹಣ ಯಾರು ಕೊಡುತ್ತಿದ್ದರು. ಅದೂ ಹೆಣ್ಣು ಮಗುವಿನ ಹತ್ತಿರವಂತೂ ಹಣದ ಮಾತೇ ಇಲ್ಲ. ಶಾಲೆಯ ವಿದ್ಯಾಭ್ಯಾಸ ಮುಗಿಯುವವರೆಗೂ ನನ್ನ ತಾಯಿ ದಿನಾಲು ಕಲ್ಲಂಗಡಿ ಹಣ್ಣಿನ ಹೋಳುಗಳನ್ನು ಬರೀ ನೋಡಿಯೇ ಆಸೆ ತೀರಿಸಿಕೊಳ್ಳಬೇಕಾಯಿತು. ಕಲ್ಲಂಗಡಿ ಹಣ್ಣು ತಿನ್ನುವ ಆಸೆ ಬರಿ ಆಸೆಯಾಗಿಯೇ ಉಳಿದು ಬಿಟ್ಟಿತು.

ಮುಂದೆ ಮದುವೆ ಆಗಿ ಕೆಲಸಕ್ಕೆ ಸೇರಿದ ಮೇಲಾದರೂ ಕೈಲಿ ಹಣವಿತ್ತಲ್ಲ, ಕೊಂಡುಕೊಂಡು ತಿನ್ನಬಹುದಿತ್ತಲ್ಲ ಅಂದರೆ ಮಕ್ಕಳನ್ನು ಹೆತ್ತು, ಬೆಳೆಸುವುದರಲ್ಲಿಯೇ ಸಮಯ ಹೋಯಿತು. ಇನ್ನು ಮನದಾಳದ ಆಸೆಗಳನ್ನು ಪೂರೈಸಿಕೊಳ್ಳಲು ಪುರುಸೊತ್ತೆಲ್ಲಿ ಬಂತು. ನನ್ನ ಅಪ್ಪನಿಗೆ ಹೇಳಿದ್ದರೆ ಅವರು ಒಂದು ಕಲ್ಲಂಗಡಿ ಹಣ್ಣು ತಂದು ಕೊಡುತ್ತಿರಲಿಲ್ಲವೇ? ಎಂದು ಕೇಳಿದಾಗ, ಸಂಸಾರ ತಾಪತ್ರಯದಲ್ಲಿ ಈ ಕಲ್ಲಂಗಡಿಯ ನೆನಪೇ ನನಗೆ ಬರಲಿಲ್ಲ ಎಂದರು.

“ನೋಡು ಈಗ ನನಗೆ ತೊಂಭತ್ತು ವರ್ಷ. ಮೊಮ್ಮಗ ಬೆಳೆದು ದೊಡ್ಡವನಾಗಿ ವಿದೇಶಕ್ಕೆ ಹೋಗುತ್ತಿದ್ದಾನೆ. ಇಷ್ಟು ವರ್ಷ ಬದುಕಿದ್ದಕ್ಕೆ ಈಗ ಎರಡು ತಿಂಗಳಿಂದ ದಿನಾಲೂ ತೃಪ್ತಿ ಆಗುವಷ್ಟು ಕಲ್ಲಂಗಡಿ ಹಣ್ಣು ತಿಂದೆ. ಎಷ್ಟೋ ವರ್ಷದ ಹಿಂದೆ ಮನಸ್ಸಿನಲ್ಲಿಯೇ ಹುದುಗಿದ್ದ ಆಸೆ ಇಷ್ಟು ವರ್ಷಗಳು ಆದ ಮೇಲೆ ಪೂರ್ತಿ ಆಯಿತು. ನಾನು ಹೇಳಿದ ಸುಭಾಷಿತ ನಿಜವಾಯಿತು” ಎಂದರು.

ಇದನ್ನು ಕೇಳಿ, ನನಗೆ ತಿಳಿಯದಂತೆಯೇ ನನ್ನ ತಾಯಿಯ ಚಿಕ್ಕವಯಸ್ಸಿನ ಆಸೆಯೊಂದನ್ನು ನಾನು ಪೂರೈಸಿದೆನಲ್ಲ. ಎಂಬ ಸಂತೃಪ್ತಿ ಆಗ ನನಗಾಯಿತು.

ಈಗ ನನ್ನ ತಾಯಿ ಜೀವಿಸಿಲ್ಲ, ಮಗ ದೂರದ ಆಸ್ಟ್ರೇಲಿಯಾದಲ್ಲಿದ್ದಾನೆ. ಆದರು ಒಂದು ದಶಕದ ಹಿಂದೆ ನಡೆದ ಈ ಘಟನೆ ಅಚ್ಚಳಿಯದೇ ನನ್ನ ಮನಸ್ಸಿನಲ್ಲಿ ನಿಂತುಬಿಟ್ಟಿದೆ. ಧೀರ್ಘಾಯುಷಿಯಾಗಿದ್ದರೆ ಜೀವನದ ಯಾವುದೋ ಒಂದು ಅತೃಪ್ತ ಬಯಕೆ ಪೂರೈಕೆಯಾಗಿ ಮನಸ್ಸಿಗೆ ಸಂತೋಷವಾಗುತ್ತದೆ ಎಂದು ಕಲ್ಲಂಗಡಿ ಹಣ್ಣು ತಿಳಿಸಿದ ತತ್ವ.

Rating
No votes yet

Comments