ಕಳಚಿ ಕೊಂಡಿದ್ದ ಕೊಂಡಿ

ಕಳಚಿ ಕೊಂಡಿದ್ದ ಕೊಂಡಿ

ಕಾಲವು ಬದಲಾಗುತ್ತಿರುತ್ತಿದ್ದಂತೆ ನಾವು ಹೊಸ ಹೊಸ ಜನಗಳ ಪರಿಚಯ ಮಾಡಿಕೊಳ್ಳುತ್ತಿರುತ್ತೇವೆ ಹಾಗೆ ಹೊಸ ಸಂಬಂಧಗಳನ್ನೂ ಜೋಡಿಸಿಕೊಳ್ಳುತ್ತಿರುತ್ತೇವೆ. ಕೇವಲ ಹತ್ತಿರದ ಸಂಬಂಧಿಗಳ ಸಂಬಂಧಗಳು ಮಾತ್ರ ಚಿರಂತನವಾಗಿ ನಮ್ಮೊಡನೆ ಇರುತ್ತದೆ. ಮೊದಲ ಸಲ ಶಾಲೆಗೆ ಹೋದಾಗ ಸ್ನೇಹಿತರಾದವರು ನಮ್ಮ ಸಂಬಂಧಿಗಳಂತೆಯೇ ಅಂದುಕೊಳ್ಳುತ್ತೇವೆ. ನಮ್ಮ ಮನೆಯಲ್ಲಿ ನಡೆಯುವುದನ್ನೆಲ್ಲಾ ಹಂಚಿಕೊಳ್ಳುತ್ತೇವೆ. ಯಾವುದನ್ನೂ ಮುಚ್ಚಟೆ ಮಾಡುವುದಿಲ್ಲ. ಅದೇ ಸ್ವಲ್ಪ ವರುಷಗಳ ತರುವಾಯ ಶಾಲೆ ಬದಲಾಗುವ ಸಾಧ್ಯತೆ ಇರುವಂತೆ ಸ್ನೇಹಿತರುಗಳು ಬದಲಾಗುತ್ತಾರೆ. ಸ್ವಲ್ಪ ಸ್ವಲ್ಪವಾಗಿ ನಾವು ಮನೆಯ ವಿಷಯಗಳನ್ನು ಮುಚ್ಚಿಟ್ಟುಕೊಳ್ಳುವ ಪ್ರಯತ್ನ ಮಾಡುತ್ತೇವೆ. ಮುಂದೆ ಕಾಲೇಜುಗಳಲ್ಲಿ ಬರುವ ಸ್ನೇಹಿತರುಗಳೊಂದಿಗೆ ಚಿಕ್ಕ ವಯಸ್ಸಿನಲ್ಲಿ ಮನೆಯ ವಿಷಯಗಳನ್ನು ಹಂಚಿಕೊಂಡಷ್ಟು, ಎಲ್ಲ ವಿಷಯಗಳನ್ನೂ ಅಷ್ಟಾಗಿ ಹಂಚಿಕೊಳ್ಳುವುದಿಲ್ಲ. ಹೀಗೆ ಕಾಲಕ್ರಮೇಣ ನಮ್ಮ ಬಾಳಿನಲ್ಲಿ ಎಷ್ಟೋ ಸ್ನೇಹಿತರು ಬರುವರು ಹೋಗುವರು. ತರುವಾಯ ಅವರು ಮತ್ತೆ ಆಕಸ್ಮಿಕವಾಗಿ ಸಿಕ್ಕಾಗ ನಮಗಾಗುವ ಆನಂದವೇ ಬೇರೆ. ಅದರಲ್ಲೂ ಹೆಚ್ಚಿನ ಸಮಯವಾದಷ್ಟೂ ಮತ್ತೆ ಸಿಕ್ಕ ಸಮಯದಲ್ಲಿ ಬಹು ಹತ್ತಿರವಾಗುವರು. ಆಗ ನಮ್ಮ ತಲೆಯಲ್ಲಿ ಅಲ್ಲಿಯವರೆಗಿನ ಎಲ್ಲ ವಿಷಯಗಳೂ ಒಮ್ಮೆಯೇ ಬರುವವು. ಯಾವುದನ್ನು ಮೊದಲು ಯಾವುದನ್ನು ನಂತರ ಹೇಳಬೇಕು, ಯಾವುದನ್ನು ಹೇಳಬಾರದು ಎನ್ನುವ ವಿವೇಚನೆಯೇ ಆಗುವುದಿಲ್ಲ. ಆ ಸಮಯದಲ್ಲಿ ಇವರುಗಳು ರಕ್ತ ಸಂಬಂಧಿಗಳಿಗಿಂತ ಹತ್ತಿರವಾಗುವರು. ಆದರೆ ಕೆಲ ಕಾಲ ಮಾತ್ರ. ಮತ್ತೆ ನಮ್ಮ ನಿತ್ಯ ಜೀವನದಲ್ಲಿ ತೊಡಗಿಕೊಳ್ಳುತ್ತೇವೆ, ಸಂಬಂಧಗಳಲ್ಲಿ ಸಿಲುಕಿಕೊಳ್ಳುತ್ತೇವೆ. ಇದೇಕೆ ಹೇಳ್ತಿದ್ದೀನಿ ಅಂದ್ರೆ, ಎರಡು ತಿಂಗಳ ಹಿಂದೆ ನನ್ನ ಮೊದಲ ಕವನ ಅದುವೇಕನ್ನಡದಲ್ಲಿ (thatskannada.com) ಪ್ರಕಟವಾದಾಗ ನನಗೊಂದು ವಿ-ಅಂಚೆ ಬಂದಿತು. ಅದನ್ನು ಬರೆದದ್ದು ನನ್ನ ತಮ್ಮ ಅಂದರೆ ಚಿಕ್ಕಪ್ಪನ ಮಗ. ಹತ್ತು ವರುಷಗಳಿಂದ ಅವನ ಬಗ್ಗೆ ನನಗೇನೂ ವಿಷಯಗಳೇ ತಿಳಿದಿರಲಿಲ್ಲ. ಅಂದು ಅದೆಷ್ಟು ಸಂತೋಷವಾಯಿತೆಂದರೆ ಮಾತಿನಲ್ಲಿ ಹೇಳಲು ಸಾಧ್ಯವೇ ಇಲ್ಲ. ಒಂದೇ ದಿನದಲ್ಲಿ ಒಂದರ ಮೇಲೊಂದರಂತೆ ೫-೬ ವಿ-ಆಂಚೆಗಳನ್ನು ಕಳುಹಿಸಿದ್ದೆ. ಚಾಟ್ ಮಾಡಿದ್ದೆ. ದುಡ್ಡಿನ ಖರ್ಚಿನ ಕಡೆ ಗಮನವೂ ಕೊಡದೆ (ಅವನು ಇರುವುದು ದೂರದೂರಿನಲ್ಲಿ), ದೂರವಾಣಿಯಲ್ಲೂ ಮಾತನಾಡಿದ್ದೆ. ಸ್ವಲ್ಲ್ಪ ಸಮಯದ ನಂತರ ಆ ಬಿಸಿ ನಿಧಾನವಾಗಿ ಇಳಿಯತೊಡಗಿತು. ಅದೇ ತರಹದ ಇನ್ನೊಂದು ಸಂದರ್ಭ ಇಂದಾಯಿತು. ಇಂದು ಅದುವೇಕನ್ನಡದಲ್ಲಿ ಕುಂಕುಮದ ಬಗ್ಗೆ ನನ್ನ ಲೇಖನ ಪ್ರಕಟವಾಗಿದೆ. ಕೆಲ ಘಂಟೆಗಳ ಹಿಂದೆ ಒಂದು ವಿ-ಅಂಚೆ ಬಂದಿತು. ನನ್ನ ಜೊತೆ ಕೆಲಸ ಮಾಡುತ್ತಿದ್ದ ಸಹೋದ್ಯೋಗಿ (ಸ್ನೇಹಿತೆ) ಮದುವೆಯ ನಂತರ ಕೆಲಸ ಬಿಟ್ಟು ಪತಿಯೊಡನೆ ಅಮೆರಿಕಾಕ್ಕೆ ಹೋಗಿದ್ದರು. ಅವರು ಇಲ್ಲಿಯವರೆವಿಗೆ ಅದುವೇಕನ್ನಡ ಮತ್ತು ಕನ್ನಡಧ್ವನಿಯಲ್ಲಿ ಪ್ರಕಟವಾದ ನನ್ನ ಕವನಗಳನ್ನು ಮತ್ತು ಲೇಖನಗಳನ್ನು ಓದಿದ್ದಾರಂತೆ. ನನಗೆ ಅವರ ಬಗ್ಗೆ ನೆನಪಿರುವುದೋ ಇಲ್ಲವೋ ಎಂದು ಪತ್ರ ಬರೆದಿರಲಿಲ್ಲವಂತೆ. ಇಂದು ಪತ್ರ ಬರೆಯುವ ಧೈರ್ಯ ಮಾಡಿದ್ದಾರೆ. ನನಗಾದ ಸಂತೋಷ ಅಷ್ಟಿಷ್ಟಲ್ಲ. ಇಲ್ಲಿಯವರೆವಿಗೆ ನನ್ನ ಪ್ರಕಟನೆಗಳ ಬಗ್ಗೆ ಅಂಚೆಯ ಮೂಲಕ ಅನಿಸಿಕೆ ತಿಳಿಸಿದ ಹೆಚ್ಚಿನವರೆಲ್ಲರೂ ಮುಖಪರಿಚಯವಿಲ್ಲದವರೇ. ನನ್ನ ಜೊತೆಗೇ ೪-೫ ವರುಷಗಳು ಕೆಲಸ ಮಾಡಿ ಪತ್ರ ಬರೆದದ್ದು ನೋಡಿ ನನಗೆ ಮಾತೇ ಹೊರಡಲಿಲ್ಲ. ಅವರಿಗೆ ಉತ್ತರಿಸುವಾಗ, ಸದ್ಯಕ್ಕೆ ನನ್ನ ತಲೆಯಲ್ಲಿ ಏನೂ ಯೋಚನೆಗಳೇ ಬರುತ್ತಿಲ್ಲ, ಶೂನ್ಯವಾಗಿದೆ, ಸದ್ಯದಲ್ಲೇ ಮರುತ್ತರವನ್ನು ಮಾರುತ್ತರವಾಗಿ ಬರೆಯುವೆ ಎಂದು ತಿಳಿಸಿರುವೆ. ಹೀಗೆ ನಮ್ಮ ಬದುಕಿನಲ್ಲಿ ಕೊಂಡಿಗಳು ಸೇರುತ್ತಿರುತ್ತವೆ, ಕಳಚಿಕೊಳ್ಳುತ್ತಿರುತ್ತವೆ. ಮತ್ತೆ ಸೇರುತ್ತಾ ಕಳಚಿಕೊಳ್ಳುತ್ತವೆ. ಜೀವನದಲ್ಲಿ ಈ ಕೊಂಡಿಗಳನ್ನು ಸೇರಿಸುವುದೇ ಆ ಸಂದರ್ಭದಲ್ಲಿ ಉಂಟಾಗುವ ಶಾಖದ ಬೆಸುಗೆಯೇ? ಇಂತಹ ಸಂದರ್ಭಗಳು ಎಲ್ಲರ ಬಾಳಿನಲ್ಲೂ ಬಂದಿರುವುದಲ್ಲವೇ?
Rating
No votes yet

Comments