'ಕಳಬೇಡ, ಕೊಲಬೇಡ'ದ ಅಡುಗೆ - ಲಕ್ಷ್ಮೀಕಾಂತ ಇಟ್ನಾಳ

'ಕಳಬೇಡ, ಕೊಲಬೇಡ'ದ ಅಡುಗೆ - ಲಕ್ಷ್ಮೀಕಾಂತ ಇಟ್ನಾಳ

'ಕಳಬೇಡ, ಕೊಲಬೇಡ'ದ ಅಡುಗೆ    
               - ಲಕ್ಷ್ಮೀಕಾಂತ ಇಟ್ನಾಳ

‘ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ……’
ಏನಿದು! ಈ ಅಂತರಂಗದ ಅಡುಗೆ
ಇನ್ನೂ ಬಿಸಿಯಾಗಿದೆಯಲ್ಲಾ, ಈ ಬೆಂಕಿ ಉಂಡೆ!
ಉಂಡಿಲ್ಲವೇ ಯಾರೂ, ಕಡೆಗೆ

ಮನುಜ, ಈ ನಿನ್ನ, ಕೈ, ಕಾಲು, ಬಾಯಿ, ಕಣ್ಣು
ಮಿದುಳು, ಮನಸ್ಸು ಎಲ್ಲವೂ ಭ್ರಷ್ಟ,
ತುಟಿ, ಕಿವಿ, ತಲೆಯೆಲ್ಲಾ ಭ್ರಷ್ಟ,
ನಾಲಿಗೆಯಂತೂ ಹೇಳುವುದೇ ಬೇಡ,
ಪರಮಭ್ರಷ್ಟ.
ನೀನಾದರೂ ಹಾಗೆಯೇ  ಇರಬಾರದೇ
ಹೃದಯವೇ,
ಹೇಗಿರುವೆಯೋ ಹಾಗೆ!

ನಕ್ಕಾಗ ಅರಳುತ್ತ, ಅಳುವಾಗ ಮುದುಡತ್ತ,
ಸಂಭ್ರಮಗಳಿಗೆ ರೋಮಾಂಚನಗೊಳ್ಳುತ್ತ,
ಭಾವಗಳ ನರನರಗಳಿಗೆ ಹರಡುತ್ತ,
ಮೈಜುಮ್ಮೆನ್ನಿಸುತ್ತ,
ದಣಿವಾರದ ನಿನ್ನ ಈ  ಪ್ರೀತಿಯ ಸೆಲೆ,
ನಿರಂತರ ಬದುಕಿನ ಝರಿಗೆ ಏನೆನ್ನಲಿ?

ಒಲುಮೆಗಳ ಚಿಲುಮೆ ಚಿಮ್ಮುತ,
ಗಾಳಿ ರೆಕ್ಕೆಯ ಸಖ್ಯದ ಗೆಳೆಯ,
ನಿರಂತರ  ಚಲನೆಯ ಜೀವ ರಥ,
ಕಾಂತಿಯ ನಾಲಗೆಯ ದೀಪ ನೀನು!

ಹೃದಯವೇ, ನೀನೊಮ್ಮೆ ಬದಲಾದರೆ,
ನಗು, ಅಳುಗಳ ಗತಿಯೇನು?  
ವಿದಾಯ, ವಿಷಾದಗಳಲ್ಲಿ
ಸತ್ತವರ ಮನೆಯಲ್ಲಿ
ಅಳವುದು ಹೇಗೊ, ಕರೆವುದು ಹೇಗೋ!
ಏನುತ್ತರ ಕೊಡುವುದು,
ಭಾವ ಸತ್ತ ಪೀಳಿಗೆಗೆ!

ಅವ್ವ, ಅಪ್ಪ, ಕೂಸುಗಳ  ಮುದ್ದಿಸುತ್ತ
ಮನುಷ್ಯರನ್ನಾಗಿಸುವುದು  ನಿನ್ನಿಂದಲೇ ತಾನೇ!
ಬದಲಾದರೆ ನೀನು, ಇದನೆಲ್ಲಾ ಮಾಡುವವರಾರು,
ಜಗದ ಕೈ ಹಿಡಿದು ನಡೆ ಕಲಿಸುವವರಾರು?

ನೀನಾದರೂ ಹಾಗೆಯೇ  ಇರಬಾರದೇ
ಹೃದಯವೇ,
ಹೇಗಿರುವೆಯೋ ಹಾಗೆ!

Rating
No votes yet

Comments

Submitted by nageshamysore Sat, 05/03/2014 - 03:25

ಹೃದಯಕ್ಕೆ ಬೈಪಾಸ್ ಸರ್ಜರಿ ಮಾಡುವ ಯುಗ, ನಿರಂತರ ಬದಲಾವಣೆಯೇ ಜೀವನ ಧರ್ಮ ಅನ್ನುವ ಪರಿಸರ, ವಾತಾವರಣ; ಹೃದಯದ ಮೇಲೆ ಆರೋಪಿಸಿದರೆ ಅದು ತಾನೇ ಏನು ಮಾಡೀತು? ಆದರೂ ಅದನ್ನೇ ಒಮ್ಮೆ ಪ್ರಶ್ನಿಸಿ ಬಿಡುವುದು ಸರಿ :-)

Submitted by lpitnal Sun, 05/04/2014 - 01:41

In reply to by nageshamysore

ನಾಗೇಶ ಜಿ ನಮಸ್ಕಾರ. ಹೌದು ತಮ್ಮ ಅನಿಸಿಕೆ ನಿಜ. ಇಲ್ಲಿ ಹೃದಯ ಅಪ್ಪಟ ಪ್ರಾಮಾಣಿಕತೆ ಪ್ರತೀಕವಾಗಿ ಬಳಸಲಾಗಿದೆ. ಅದಕ್ಕೂ ಬೈಪಾಸ್ ಆದಲ್ಲಿ ಮತ್ತು ಅದು ಕೊನೆಯುಸಿರುರುವರೆಗೂ ತನ್ನ ಕಾಯಕದಲ್ಲಿ ನಿಷ್ಠೆ ತೋರುವುದು, ಭ್ರಷ್ಟವಾಗುವುದಿಲ್ಲ, ಕ್ಷಣಗಳ ಮಟ್ಟಿಗಾದರೂ ಅಲ್ಲವೇ ಸರ್.ತಮ್ಮ ಪ್ರೀತಿಯ ಪ್ರತಿಕ್ರಿಯೆ ಚೇತನ ಪೂರ್ವವಾಗಿದೆ.ಧನ್ಯವಾದಗಳು ಸರ್.

Submitted by lpitnal Sun, 05/04/2014 - 01:45

In reply to by kavinagaraj

ಹಿರಿಯರಾದ ಕವಿನಾ ಸರ್ ಗೆ, ವಂದನೆಗಳು. ವಚನದ ಎರಡನೆಯ ಸಾಲಿನಲ್ಲೇ ಉತ್ತರ ಹುಡುಕಿದಿರಲ್ಲಾ ಸರ್. ಅಂತರಂಗದ ಶುದ್ಧಿ ಎಲ್ಲರಿಗೂ ಎಲ್ಲದಕ್ಕೂ ಬೇಕೇ ಬೇಕು. ಇಲ್ಲದಿರೆ ವಚನಗದ ಆಶಯಕ್ಕೆ ಸ್ಪಂದಿಸಲು ಯಾರೂ ಉಳಿಯರು ಮುಂದೊಮ್ಮೆ. ಲ್ಯಾಂಡಸ್ಲೈಡ್ ತರಹ ಮೌಲ್ಯಗಳು ಭರದಿಂದ ಬದಲಾಗುತ್ತಿರುವ ಈ ಕಾಲಘಟ್ಟವನ್ನು ಗಮನಿಸಿದರೆ. ಪ್ರತಿಕ್ರಿಯೆಗೆ ಧನ್ಯವಾದಗಳು ಸರ್.