ಕಳೆಗುಂದುತ್ತಿದೆಯೇ ಕನ್ನಡ ತಾಯ್ ಜಾತ್ರೆ:

ಕಳೆಗುಂದುತ್ತಿದೆಯೇ ಕನ್ನಡ ತಾಯ್ ಜಾತ್ರೆ:

ಕಳೆಗುಂದುತ್ತಿದೆಯೇ ಕನ್ನಡ ತಾಯ್ ಜಾತ್ರೆ:
ಮೊನ್ನೆ ಮೊನ್ನೆ ಮಾಘ ಹುಣ್ಣಿಮೆ/ ಭಾರತ ಹುಣ್ಣಿಮೆಯಂದು ಕನ್ನಡ ತಾಯಿಯ ಏಕೈಕ ದೇಗುಲವೆಂದು ಬಿಂಬಿತವಾಗಿರುವ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲ್ಲೂಕು ಭುವನ ಗಿರಿಯ ಭುವನೇಶ್ವರಿ ದೇವಿಯ ಜಾತ್ರೆ ನಡೆಯಿತು. ತದಂಗ ಮಾಘಶುದ್ಧ ತ್ರಯೋದಶಿಯಂದು ಪಂಚಗವ್ಯ ಪೂರ್ವಕ ಅವಭೃತ ಸ್ನಾನ,  ಅಂಕುರಾರ್ಪಣೆ, ನೂತನ ಧ್ವಜಾರೋಹಣ, ಯಾಗಶಾಲಾ ಪ್ರವೇಶ ಹೀಗೆ ಎಲ್ಲ ರಥೋತ್ಸವಗಳು ಪ್ರಾರಂಭವಾಗುವಂತೆ ಪ್ರಾರಂಭಗೊಂಡು ದೇವಿ ಭುವನೇಶ್ವರಿಯ ಪ್ರೀತ್ಯರ್ಥ ಚಂಡಿಕಾ ಯಾಗವೂ ಸೇರಿದಂತೆ ಒಟ್ಟು ಒಂಭತ್ತು ಕುಂಡಗಳಲ್ಲಿ ವಿವಿಧ ಹೋಮ ಹವನಗಳು ಪ್ರತಿದಿನ ನಾಲ್ಕು ದಿನಗಲ ಪರ್ಯಂತ ನಡೆಯುವುದು. ಮೊದಲ ದಿನ ತ್ರಯೋದಶಿಯಂದು ಸಿಂಹ ಯಂತ್ರೋತ್ಸವವೂ, ಚತುರ್ದಶಿಯಂದು ಪುಷ್ಪ ಮಂಜರಿ ರಥೋತ್ಸವವೂ, ಮೂರನೇ ದಿನ ಹುಣ್ಣಿಮೆಯಂದು ಸ್ಯಂದನ ರಥೋತ್ಸವ ನಡೆಯುತ್ತದೆ. ನಂತರ ಇಲ್ಲಿನ ಗಟ್ಟಿ ಪರಂಪರೆ ಹೊಂದಿರುವ ಬಡಗು ತಿಟ್ಟಿನ ಯಕ್ಷಗಾನ ನಡೆಯುತ್ತದೆ.  ನಾಲ್ಕನೇ ದಿನ ಓಕಳಿ, ಇದು ವೈಭವದ ಜಾತ್ರಾ ಮಹೋತ್ಸವಕ್ಕೆ ತೆರೆ ಎಳೆಯುತ್ತದೆ. ನಂತರ ತಾಂತ್ರಿಕರು ಋತ್ವಿಜರೂ ಸೇರಿದಂತೆ ಎಲ್ಲರಿಗೂ ತೀರ್ಥ ಪ್ರಸಾದ ವಿತರಸಿದ ನಂತರ ದೇವಾಲಯದ ವತಿಯಿಂದಲೂ ಹರಕೆ ಹೊತ್ತವರಿಂದಲೂ ದೇವಾಲಯದಲ್ಲಿ ಹಾಗೂ ಕೆರೆಯ ದಂಡೆಗಳಲ್ಲಿ ಅನ್ನ ಸಂತರ್ಪಣೆ ನಡೆಯುವುದು. ಹೀಗೆ ನಾಲ್ಕು ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಪ್ರತಿ ದಿನ ತ್ರಿಕಾಲ ಬಲಿ ಹಾಗೂ ಪೂಜೆ ನಡೆಯುವುದು ಇಲ್ಲಿನ ವಿಶೇಷ. ಎಲ್ಲ ದೇವಿ ದೇವಾಲಯ ಗಳಲ್ಲಿ ನಡೆಯುವಂತೆ ಇಲ್ಲೂ ಸಹ ಕುಂಕುಮಾರ್ಚನೆ, ದೇವಿಗೆ ಉಡಿ/ ಮಡಿಲು ತುಂಬುವುದು, ನಡೆಯುತ್ತಲೇ ಇರುತ್ತದೆ. ಓಕಳಿಯ ದಿನದಂದು ಹರಕೆ ಹೊತ್ತ ಭಕ್ತಾದಿಗಳು ಧನ ಧಾನ್ಯಗಳಿಂದ ತುಲಾಭಾರ ನಡೆಸುವುದು ಇಲ್ಲಿ  ಹಿಂದಿನಿಂದಲೂ ನಡೆದು ಬಂದಿದೆ. ಮಾರನೆದಿನ ಅಂದರೆ ಓಕಳಿಯ ಮರುದಿನ ತಾಂತ್ರಿಕರು, ಮಾಗಣಿ ದಾರರು, ಬಂಡಾರಿಗಳು, ರಥ ಕಟ್ಟುವವರು, ಓಲಗದವರು, ಫಳದವರು, ಚಾಮರದವರು, ದೀವಟಿಗೆಯವರು,  ಸುತ್ತಮುತ್ತಲಿನ ಸೀಮೆಗಳ ಜನರು, ಅವರವರ ಘನತೆಯ ಸಂಕೇತವಾಗಿ ಕ್ರಮವಾಗಿ ದೇವಿಗೆ ಇಡಿಗಾಯಿ ಸಲ್ಲಿಸುವುದು ಎನ್ನುವ ಪದ್ಧತಿ ಇಲ್ಲಿ ಕಾಣಬರುತ್ತದೆ.
ಇವೆಲ್ಲವೂ ಮುಗಿದ ನಂತರ ಇನ್ನೆಲ್ಲೂ ನಾನು ನೋಡಿರದ ಒಂದು ಪದ್ಧತಿ ಇಲ್ಲಿ ಕಂಡು ಬರುತ್ತದೆ. ಇಲ್ಲಿನ ದೇವಾಲಯದ ರಥೋತ್ಸವದಲ್ಲಿ ಭಾಗವಹಿಸಿದ ಪುರೋಹಿತರಿಗೆ ಗೌರವ ಸಮರ್ಪಣೆಯ ನಂತರ ಮುಖ್ಯ ತಾಂತ್ರಿಕರನ್ನು ಬೆಳ್ಳಿ ದೊಣ್ಣೆಯ ಗೌರವದೊಂದಿಗೆ ಓಲಗ ಸಮೇತ ಮೆರವಣಿಗೆಯಲ್ಲಿ ಅವರ ಮನೆಗೆ ಕರೆದುಕೊಂಡು ಹೋಗುವುದು. ತಾಂತ್ರಿಕರ ಮನೆಯಲ್ಲಿ ನಡೆಯುವ ಭೋಜನ ಕೂಟದಲ್ಲಿ ಹೋದವರೆಲ್ಲರೂ ಭಾಗವಹಿಸುವುದು ಇಲ್ಲಿನ ವಿಶೇಷ ಪದ್ಧತಿಯಾಗಿದೆ.


ಇಷ್ಟೊಂದು ವೈಶಿಷ್ಟ್ಯಗಳನ್ನು ಹೊಂದಿರುವ ಕನ್ನಡ ತಾಯಿ ಭುವನೇಶ್ವರಿಯ ದೇವಾಲಯದಿಂದ ಇತ್ತೀಚೆಗೆ ಪ್ರತಿ ವರ್ಷ ನವೆಂಬರ್ ನಲ್ಲಿ ನಡೆಯುವ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಜ್ಯೋತಿಯನ್ನು ಒಯ್ಯುವ ರೂಢಿಯೂ ಬೆಳೆದುಬಂದಿದೆ. ಆ ಸಂದರ್ಭದಲ್ಲಿ ರಾಜ್ಯಾದ್ಯಂತ ಕನ್ನಡ ತಾಯಿ ಭುವನೇಶ್ವರಿ ಎಂದೆಲ್ಲಾ ಪ್ರಚಾರಗೊಳ್ಳುವ ದೇವಿಯ ವಾರ್ಷಿಕ ರಥೋತ್ಸವಕ್ಕೆ ಮಾತ್ರಾ ಯಾವ ಪ್ರಚಾರವೂ ಇಲ್ಲದೇ ಇರುವುದು ವಿಪರ್ಯಾಸವೇ ಸರಿ. ಒಂದು ಕಾಲದಲ್ಲಿ ಕನಿಷ್ಟ 15-20 ಸಾವಿರ ಜನ ಸೇರುತ್ತಿದ್ದ ಜಾತ್ರೆಗೆ ಸೇರುವ ಜನ ಸಹ 4-5 ಸಾವಿರ ದಾಟದಿರುವುದು ಜಾತ್ರೆ ಕಳೆಗುಂದುತ್ತಿರುವಂತೆ ಕಾಣುತ್ತಿದೆ. ಅದಕ್ಕೆ ತಕ್ಕಂತೆ ಬರುವ ಅಂಗಡಿ ಮುಂಗಟ್ಟುಗಳೂ ಕಡಿಮೆಯಾಗಿದೆ.


ನವೆಂಬರ್ ತಿಂಗಳಲ್ಲಿ ಕನ್ನಡದ ಬಗ್ಗೆ ಕಾಳಜಿ ವಹಿಸಿವವರು ಕನ್ನಡ ತಾಯಿ ಎನ್ನಿಸಿರುವ, ಪಂಪನ ನಾಡಿನ,  ಕನ್ನಡವೇ ಗಟ್ಟಿಯಾಗಿ ನೆಲೆಸಿರುವ ಪ್ರಾಂತ್ಯದಲ್ಲಿರುವ  ಭುವನೇಶ್ವರಿಯ ಜಾತ್ರೆಯನ್ನು ಕನ್ನಡ ಜಾತ್ರೆಯನ್ನಾಗಿಸಿದರೆ ಜಾತ್ರೆಯ ಗತ ವೈಭವ ಮರುಕಳಿಸಬಹುದೇ?


ನಾನು ಓಕಳಿ ದಿನ ಹೋದಾಗ  ದೊರೆತ ಕೆಲವು ಸಂದರ್ಭಗಳಾದ ಭೂವನೇಶ್ವರಿ ಅಮ್ಮನವರ ಉತ್ಸವ ಮೂರ್ತಿ, ಸಿಂಗಾರಗೊಂಡ ರಥಗಳು, ಬಲಿ ಹಾಕುವುದು, ಬಲಿ ಸೊಪ್ಪು - ಆರತಿಯ ತಯಾರಿ, ತುಲಾಭಾರ, ವಿಶಿಷ್ಟ ವಾದ್ಯ ಫಳ, ಇಡಿಗಾಯಿ ಸಮರ್ಪಿಸುವ ಸ್ಥಳ, ದೇವಾಲಯದ ಪ್ರಾಕಾರದಲ್ಲಿ ನೆಲೆಸಿರುವ ನಂದಿಕೇಶ್ವರ, ಗೋಪಾಲಕೃಷ್ಣ ದೇವರು, ವಿವಿಧ ಸೇವಾ ನಿರತರು, ಕೆರೆಯ ಮಧ್ಯೆ ಹಾರಾಡುವ ಕನ್ನಡ ಧ್ವಜ ಇತ್ಯಾದಿಗಳ ಫೋಟೋ ಇದರೊಂದಿಗೆ ಇಟ್ಟಿದ್ದೇನೆ.
 

Rating
No votes yet