ಕಳೆದುಹೋಗಿದ್ದರ ನೆನಪು, ಕಳೆದೂಹೋದ ನೆನಪು

ಕಳೆದುಹೋಗಿದ್ದರ ನೆನಪು, ಕಳೆದೂಹೋದ ನೆನಪು

ಪ್ರತಿ ದಿನವೂ ಅದು ಹೇಗೋ ಶೀಘ್ರ ಅಂತ್ಯ ಕಾಣುತ್ತೆ. ಬೆಳಗಾಗೆದ್ದು ರೆಡಿಯಾಗಿ ಎತ್ತ ಹೊರಟಿರುತ್ತೇವೋ ಅತ್ತ ಹೊರಟು ನಡೆದು ತಲುಪಿದುದರ ನೆನಪಿಲ್ಲದಷ್ಟು, ಪರಿವೆಯೂ ಇಲ್ಲದಷ್ಟು ಯಾಂತ್ರಿಕವಾಗಿ ದಿನ ಪ್ರಾರಂಭಿಸಿ ಹಾಗೆಯೇ ಮುಗಿಸಿರುತ್ತೇವೆ. ಹೀಗೆ ಸರಿದ ದಿನಗಳು ಎಷ್ಟೆಷ್ಟೋ.

ಈ ದಿನ ಹೇಳಿಕೊಳ್ಳುವಂತಾದ್ದು ಏನು ಮಾಡಿದೆ ಎಂಬುದನ್ನು ಸ್ವತಃ ಪ್ರಶ್ನಿಸಿಕೊಳ್ಳಿ (What did you do that was worth mentioning today?) ಎಂದು ಅನುಭವವುಳ್ಳವರು ಹೇಳಿದ ಮಾತೊಂದನ್ನು ಗೋಡೆಯ ಮೇಲಂಟಿಸಿದ ಬ್ಯಾನರಿನಲ್ಲೋದಿ "ಬೈಕು ತೆಗೆದುಕೊಂಡು ಹೋದೆ, ಟ್ರಾಫಿಕ್ ನಲ್ಲಿ ನಿಂತಿದ್ದೆ, ಲೈಬ್ರರಿಗೆ ಹೋಗಿದ್ದೆ, ವಾಪಸ್ಸು ಬಂದೆ" ಎಂದು ನೆನಪಿಸಿಕೊಂಡಾಗ ಬರುವುದು ಕೆಲವು ಕ್ಷಣಗಳ ನಂತರದ ಗೊಳ್ಳೆಂಬ ನಗು ಮಾತ್ರ.

ಮಾಡಬೇಕಾಗಿರುವುದು ಬಹಳಷ್ಟಿರುತ್ತದೆ, ಮಾಡದೇ ಬಿಟ್ಟದ್ದು ಬಹಳಷ್ಟಿರುತ್ತವೆ. ಮಾಡಿ ಮುಗಿಸಿ ಮತ್ತೆ ಕೈಗೆತ್ತಿಕೊಳ್ಳುವ ಕೆಲಸಗಳೂ ನೆನಪಿಸುವಷ್ಟು ಸನಿಹದಲ್ಲಿರುತ್ತವೆ. ಈ ಮಧ್ಯೆ ಅರಿವಿಗೆ ಬಾರದಂತೆ ಸಮಯ ಹೋದದ್ದು, ಕಳೆದ ಸಮಯದಲ್ಲಿ ಸ್ವತಃ ಕಳೆದುಹೋದದ್ದು ಕಳೆದುಕೊಂಡದ್ದು ನೆನಪಾದರೂ ನೆನಪಿನಲ್ಲುಳಿಯದೆ ಅವೂ ಕಳೆದುಹೋಗುತ್ತವೆ.

ಹೀಗೆ ಕಳಕೊಂಡದ್ದು, ಪಡಕೊಂಡದ್ದರ ನಡುವೆ ಉಳಿದುಕೊಳ್ಳುವುದು, ತೆಗೆದುಕೊಂಡು ಹೋಗುವುದು, ಮಾಡಬೇಕಾಗಿರುವುದರ ಆಲೋಚನೆಗಳು ಮತ್ತೊಂದು ದಿನ, ಮತ್ತಷ್ಟು ಕೆಲಸಗಳಿಗೆ ಎಳೆದೊಯ್ಯುತ್ತವೆ. ಗೋಡೆಗೆ ತಗಲು ಹಾಕಿದ ಕ್ಯಾಲೆಂಡರ್ ಮೇಲಿನ ಸಂಖ್ಯೆ ಮಾತ್ರ ಬದಲಾಗುತ್ತಲೇ ಇರುತ್ತದೆ!

Rating
No votes yet

Comments