ಕಳೆದು ಹೋದವರು
ಈ ಮೊಬೈಲುಗಳು ಎಂದು ನಮ್ಮ ದೇಶಕ್ಕೆ ಬಂತೋ ಅಂದಿನಿಂದ ಪ್ರಾರಂಭವಾದ ಮೊಬೈಲ್ ಹಾವಳಿ ಇತ್ತೀಚೆಗಂತು ಮೊಬೈಲ್ ಇಲ್ಲದೇ ಜೀವನವೇ ಇಲ್ಲ ಅನ್ನಿಸಿಬಿಟ್ಟಿದೆ. ಒಮ್ಮೊಮ್ಮೆ ಕರೆಗಳ ಕಾಟ ನೋಡಿ ಈ ಮೊಬೈಲ್ ಸಾಕಪ್ಪ ಸಾಕು ಅನಿಸಿದರೂ ಮತ್ತೊಮ್ಮೆ ಯಾಕಪ್ಪ ಒಂದಾದರೂ ಕರೆ ಬರಬಾರದಿತ್ತೇ ಅನ್ನಿಸಿ ಬಿಡುವಂತೆ ಮಾಡುತ್ತದೆ. ಎಲ್ಲಾದರೂ ಹೋಗುವಾಗ ಮೊಬೈಲ್ ಏನಾದರೂ ಮನೆಯಲ್ಲಿ ಬಿಟ್ಟು ಹೋದರೆ ನಮ್ಮ ಪೇಚಾಟವನ್ನು ನೋಡುವವರಿಲ್ಲ. ಮೊಬೈಲ್ ಕೈಯಲ್ಲಿ ಇದ್ದಾಗ ಒಂದೇ ಒಂದು ಕರೆ ಬಾರದಿದ್ದರೂ ಕೈಯಲ್ಲಿ ಇಲ್ಲದ್ದಿದ್ದಾಗ, ಕರೆ ಬಾರದಿದ್ದರೂ ಕರೆ ಬಂದಂತೆ ಅನಿಸುತ್ತದೆ. ಯಾಕಪ್ಪ ಮೊಬೈಲ್ ಬಿಟ್ಟು ಬಂದೆ, ಏನಾದರೂ ಮುಖ್ಯವಾದ ಕರೆ ಬಂದು ಬಿಟ್ಟಿತೇನೋ ಅನ್ನಿಸಿ ಮನಸ್ಸೆನ್ನೆಲ್ಲ ಚಡಪಡಿಸುವಂತೆ ಮಾಡಿಬಿಡುತ್ತದೆ.
ರಘುರಾಮನಿಗೆ ಮಾತ್ರ ಈ ಮೊಬೈಲ್ ಇತ್ತೀಚಿಗೆ ತೀರಾ ಕಿರಿಕಿರಿಯನ್ನುಂಟು ಮಾಡಿ ಬಿಟ್ಟಿದೆ. ಕಛೇರಿಯಲ್ಲಿ ತನ್ನ ಬಳಿ ಮೊಬೈಲ್ ಇಲ್ಲ ಎಂದು ಹೇಳಿದಾಗ, ಕಛೇರಿಯೇ ಮೊಬೈಲನ್ನು, ಸಿಮ್ ಕಾರ್ಡನ್ನು ಕೊಟ್ಟಿತ್ತು. ಆ ಮೊಬೈಲನಿಂದ ಯಾವ ಮೊಬೈಲಗೆ ಕರೆ ಮಾಡಿದರೂ ಅದರ ಸಂಪೂರ್ಣ ವೆಚ್ಚವನ್ನು ಕಂಪನಿಯೇ ಭರಿಸುತ್ತಿತ್ತು. ಮೊದ ಮೊದಲು ಕಂಪನಿಯಲ್ಲಿ ಮೊಬೈಲ್ ಕೊಟ್ಟಾಗ ತುಂಬಾ ಸಂತೋಷವಾಗಿತ್ತು. ಯಾರ ಜೊತೆ ಬೇಕಾದರೂ ಎಷ್ಟು ಹೊತ್ತು ಬೇಕಾದರೂ ಪುಕ್ಕಟ್ಟೆ ಮಾತನಾಡಬಹುದು ಎನಿಸಿತ್ತು. ಆದರೆ ಕ್ರಮೇಣ ದಿನಗಳು ಉರುಳಿದ ಹಾಗೆ, ಅವನ ಸಂಬಳದ ಜೊತೆಗೆ ಹುದ್ದೆ ಹಾಗೂ ಕೆಲಸದ ಒತ್ತಡಗಳು ಹೆಚ್ಚಾಗುತ್ತಾ ಹೋದ ಹಾಗೆ ಸ್ನೇಹಿತರ, ಬಂಧುಗಳ ಕರೆಗಳಿಗಿಂತ ಕಛೇರಿಯ ಕರೆಗಳು ಹೆಚ್ಚಾಗುತ್ತಾ ಹೋದಂತೆ ಯಾತಕ್ಕಾದರೂ ಈ ಮೊಬೈಲನ್ನು ತೆಗೆದುಕೊಂಡೆನೋ ಅನಿಸಿಬಿಟ್ಟಿತು. ಕಂಪನಿಯ ಕರೆಗಳಷ್ಟೇ ಅಲ್ಲದೇ ಕಂಪನಿಯ ಗ್ರಾಹಕರ ಕರೆಗಳು ಬರುತ್ತಿದ್ದವು. ಹೋಗಲಿ ಕಛೇರಿಯ ಸಮಯದಲ್ಲಷ್ಟೇ ಆದರೆ ಪರವಾಗಿಲ್ಲ, ಕಛೇರಿಯಿಂದ ಮನೆಗೆ ಬಂದರೂ, ಊಟ ಮಾಡುತ್ತಿದ್ದರೂ ಈ ಕರೆಗಳು ಬರುತ್ತಲೇ ಇರುತ್ತವೆ. ಈಗೀಗ ಈ ಮೊಬೈಲೇ ಅನಿಷ್ಟ ಅನ್ನಿಸಿ ಬಿಟ್ಟಿದೆ ರಘುರಾಮನಿಗೆ.
ಇಂದು ಕಛೇರಿಯನ್ನು ಬಿಟ್ಟು ಮನೆಗೆ ಬರುವಾಗ ಒಂದೆರಡು ಗ್ರಾಹಕರ ಕರೆಗಳು ಬಂದಿದ್ದವು, ತಾನು ಕಾರು ಚಲಾಯಿಸುತ್ತಲೇ, ಇಯರ್ ಫೋನನ ಸಹಾಯದಿಂದ ಆ ಕರೆಗಳಿಗೆ ಉತ್ತರಿಸುತ್ತಾ, ಉತ್ತರಿಸುತ್ತಾ ಮನೆ ತಲುಪಿದ್ದೇ ತಿಳಿಯಲಿಲ್ಲ. "ಥೂ, ಹಾಳಾದ ಕರೆಗಳು, ಯಾಕೆ ಬರುತ್ತವೋ ಜೀವ ತಿನ್ನಲು" ಎನ್ನುತ್ತಾ ಮನೆ ಪ್ರವೇಶಿಸಿದ. ಕಛೇರಿಯ ಧಿರಿಸನ್ನೆಲ್ಲಾ ತೆಗೆದು ಬಿಳಿಯ ಪಂಚೆ ಸುತ್ತಿ, ಸ್ನಾನದ ಕೊಠಡಿ ಸೇರಿದ. ತಲೆಗೆ ಸ್ವಲ್ಪ ತಣ್ಣೀರನ್ನು ಎರೆದುಕೊಂಡು ಸ್ನಾನ ಮಾಡಿದ ಮೇಲೆ ಮನಸ್ಸಿಗೆ ಸ್ವಲ್ಪ ಹಿತವೆನಿಸಿತು. ಸ್ನಾನ ಮುಗಿಸಿ ದೇವರ ಕೋಣೆಯ ಎದುರಿಗೆ ಬಂದು ಸಂದ್ಯಾವಂದನೆ ಮಾಡಲು ಕುಳಿತ.
ರಘುರಾಮ ರಾತ್ರಿ ಬೇಕಾದರೆ ಊಟ ಬಿಡುತ್ತಿದ್ದನೇ ಹೊರತು, ದಿನಾ ಸಂದ್ಯಾವಂದನೆ ಮಾತ್ರ ತಪ್ಪಿಸುತ್ತಿರಲಿಲ್ಲ. ಅದು ಹುಟ್ಟಿನಿಂದಲೇ ನಡೆದು ಬಂದ ವಿಧಿ ವಿಧಾನ. ರಘುರಾಮ ಗಣಪತಿ ಬಟ್ಟರ ಇಬ್ಬರು ಗಂಡು ಮಕ್ಕಳಲ್ಲಿ ಕಿರಿಯವನು. ಗಣಪತಿ ಬಟ್ಟರು ತಮ್ಮ ತಂದೆಯಂತೆ, ಪೂಜೆ, ಹೋಮ, ಹವನ ಮುಂತಾದ ವೈಧಿಕ ಕಾರ್ಯಗಳನ್ನು ಮಾಡಿ, ಅದರಿಂದ ಬಂದ ಆದಾಯದಿಂದ ತಮ್ಮ ಸಂಸಾರವನ್ನು ನಡೆಸಿಕೊಂಡು, ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕೊಡಿಸಿದ್ದರು. ಹಿರಿಯ ಮಗ ಪರಶುರಾಮ ತನ್ನ ಊರಾದ ಶಿರ್ಶಿಯಲ್ಲಿಯೇ ಬಿ. ಎಸ್.ಸಿ ಮುಗಿಸಿ, ಮುಂದೆ ವೇದಾಭ್ಯಾಸ ಮಾಡಿ ತಂದೆಯಂತೆಯೇ ತಾನು ವೈಧಿಕ ಕಾರ್ಯಗಳನ್ನು ಮಾಡಿಕೊಂಡು ತಂದೆ ತಾಯಿಯರೊಂದಿಗೆ ಊರಲ್ಲಿಯೇ ವಾಸವಾಗಿದ್ದರು. ಕಿರಿಯ ಮಗ ರಘುರಾಮ ಶಿರ್ಶಿಯಲ್ಲಿ ಪಿಯುಸಿ ಮುಗಿಸಿ, ಒಳ್ಳೆಯ ಅಂಕಗಳನ್ನು ತೆಗೆದುಕೊಂಡು, ಧಾರವಾಡದಲ್ಲಿ ಇಂಜಿನಿಯರಿಂಗ ಓದಿ, ಬೆಂಗಳೂರಿನ ಪ್ರತಿಷ್ಟಿತ ವಿದೇಶಿ ಕಂಪನಿಯಲ್ಲಿ ಕೆಲಸ ಮಾಡುತಿದ್ದ. ಮಕ್ಕಳಿಬ್ಬರಿಗೂ ಚಿಕ್ಕವರಿದ್ದಾಗಿನಿಂದಲೂ ಸಂದ್ಯಾವಂದನೆ ಮಾತ್ರ ದಿನವೂ ತಪ್ಪದ ರೀತಿಯಲ್ಲಿ ಬೆಳೆಸಿದ್ದರೂ ಗಣಪತಿ ಬಟ್ಟರು. ಮನೆಯ ಸಂಪ್ರದಾಯದಿಂದಲೋ, ತಂದೆಯ ಮೇಲಿನ ಅಭಿಮಾನದಿಂದಲೋ ಸಂದ್ಯಾವಂದನೆಯನ್ನು ಮಾತ್ರ ಒಂದು ದಿನವೂ ತಪ್ಪದ ರೀತಿಯಲ್ಲಿ ನೋಡಿಕೊಂಡಿದ್ದ ರಘುರಾಮ. ಕಂಪನಿಯ ಕಾರ್ಯದ ನೀಮಿತ್ತ ಒಂದೆರಡು ಬಾರಿ ಹೊರದೇಶಕ್ಕೆ ಹೋದಾಗಲೂ ತನ್ನ ಸಂದ್ಯಾವಂದನೆಯನ್ನು ಮಾತ್ರ ತಪ್ಪಿಸಿರಲಿಲ್ಲ. ಅದೆಷ್ಟೇ ಮುಖ್ಯವಾದ ಕೆಲಸವಿರಲಿ ಸಂದ್ಯಾವಂದನೆಯನ್ನು ಮಾತ್ರ ತಪ್ಪಿಸುತ್ತಿರಲಿಲ್ಲ ರಘುರಾಮ.
ಸಂದ್ಯಾವಂದನೆಗೆ ಕುಳಿತು ಒಂದೆರಡು ನಿಮಿಷ ಕಳೆದಿರಲಿಲ್ಲ, ಮೊಬೈಲ್ ರಿಂಗಗುಡಲು ಪಾರಂಭವಾಯಿತು. ಸಂದ್ಯಾವಂದನೆ ಮುಗಿಸಿ ನೋಡಿದರಾಯಿತು ಎಂದು ದೃಡ ಮನಸ್ಸಿನಿಂದ ಕುಳಿತ. ಇನ್ನೈದು ನಿಮಿಷ ಕಳೆಯುವುದರಲ್ಲಿ ಮತ್ತೆ ಮೊಬೈಲ್ ಸದ್ದು, "ಯಾರಪ್ಪ ಇದು? ಕಛೇರಿಯಿಂದ ಯಾರಾದರೂ ಕರೆ ಮಾಡಿರಬಹುದೇ, ಎನ್ನುವ ಯೋಚನೆ ಮನಸ್ಸಿನಲ್ಲಿ ಸುಳಿಯಿತಾದರೂ, ಯಾರಾದ್ದಾದರೇನು ಆಮೇಲೆ ನೋಡಿದರಾಯಿತು" ಎಂದು ನಿಶ್ಚಯಿಸಿ ಸಂದ್ಯಾವಂದನೆಯತ್ತ ಗಮನಹರಿಸಿದ. ಹತ್ತು ಹದಿನೈದು ನಿಮಿಷ ಕಳೆಯುವದರಲ್ಲಿ ಮತ್ತೆರಡು ಬಾರಿ ಮೊಬೈಲ್ ರಿಂಗಣಿಸಿತು. ಯಾರಪ್ಪ ಇದು ಸರಿಯಾಗಿ ಸಂದ್ಯಾವಂದನೆ ಮಾಡುವ ಸಮಯದಲ್ಲಿಯೇ ಕರೆ ಮಾಡುತ್ತಿರುವುದು ಎನಿಸಿತ್ತಾದರೂ, ಕರೆ ಮಾಡುವವರಿಗೇನು ಗೊತ್ತು ನಾನು ಈಗ ಸಂದ್ಯಾವಂದನೆ ಮಾಡುತ್ತಿರುವುದು ಎನಿಸಿ ಸುಮ್ಮನಾದ. ಬಹಳ ಹೊತ್ತು ಕುಳಿತುಕೊಳ್ಳುವ ವ್ಯವಧಾನವಿಲ್ಲದೇ ಗಡಿಬಿಡಿಯಿಂದ ಸಂದ್ಯಾವಂದನೆಯ ಶಾಸ್ತ್ರ ಮುಗಿಸಿ ಮೇಲೆದ್ದ. ಮನಸ್ಸಿನ ಪೂರ್ತಿ ಮೊಬೈಲ್ ಕರೆಗಳೆ ತುಂಬಿಕೊಂಡಿದ್ದವು. ಹೋಗಿ ಮೊಬೈಲ್ ಎತ್ತಿ ನೋಡಿದ. ಆಗಲೇ ಹತ್ತು ಮಿಸ್ಡ ಕಾಲಗಳಿದ್ದವು. ಸಮಯ ನೋಡಿದ ಆಗಲೇ ರಾತ್ರಿ ೧೨:೩೦ ಕಳೆದಿತ್ತು. ಇದು ನಿನ್ನೆಯ ದಿನದ ಸಂದ್ಯಾವಂದನೆಯೋ, ನಾಳೆಯ ದಿನದ್ದೋ ಅರ್ಥವಾಗಲಿಲ್ಲ.
ಮೊಬೈಲ್ ಎತ್ತಿಕೊಂಡು ಮಿಸ್ಡ ಕಾಲ್ ಬಂದ ಸಂಖ್ಯೆಗಳನ್ನು ಪರಿಶೀಲಿಸಿದ. ಎಲ್ಲಾ ಒಂದೇ ನಂಬರಿನಿಂದ ಬಂದ ಕರೆಗಳು. ಯಾವುದು ವಿದೇಶಿ ಕರೆಗಳಿಲ್ಲ ಎಂದೊಡನೆ ಸಮಧಾನವೆನಿಸಿತು. ಇಷ್ಟು ರಾತ್ರಿಯಲ್ಲಿ ಯಾರಿರಬಹುದು ಕರೆಮಾಡಿದ್ದು? ಕಛೇರಿಗೆ ಸಂಬಂಧ ಪಟ್ಟವರ್ಯಾರಾದರೂ ಕರೆ ಮಾಡಿರಬಹುದೇ ಎನ್ನುವ ಸಂಸಯ ಬಂದು, ಕರೆ ಬಂದ ನಂಬರಿಗೆ ತಾನು ವಾಪಸ್ ಕರೆಮಾಡಿದ. ಆ ಮೊಬೈಲ್ ರಿಂಗಾಗಿ ಕಟ್ಟಾಯಿತು ಬಿಟ್ಟರೆ ಯಾರು ಕರೆಯನ್ನು ಸ್ವಿಕರಿಸಲಿಲ್ಲ. "ಹಾಳಾದವ್ರು ಯಾಕಾದ್ರೂ ರಾತ್ರಿ ಕರೆ ಮಾಡಿ ಜೀವ ತಿನ್ನುತ್ತಾರಪ್ಪ" ಎಂದು ಬಯ್ಯುತ್ತಾ ಎದ್ದು ಅಡಿಗೆ ಕೋಣೆಗೆ ಹೋದ. ಹೊಟ್ಟೆ ತಾಳ ಹಾಕುತ್ತಿತ್ತು. ತಾನು ಕಡೆಯ ಬಾರಿ ತಿಂದಿದ್ದು ಯಾವಾಗ ಎಂದು ನೆನಪಿಸಿಕೊಂಡ. ಸಾಯಂಕಾಲ ೫ ಗಂಟೆಗೆ ಆಪೀಸಿನ ಕ್ಯಾಪಟೇರಿಯಾದಲ್ಲಿ ಗೆಳೆಯರೊಂದಿಗೆ ಸೇರಿ ಒಂದು ಸಮೋಸಾ ತಿಂದು ಚಹಾ ಕುಡಿದಿದ್ದು ನೆನಪಾಯಿತು. ತಾನು ಕಳೆದ ಎಂಟು ಗಂಟೆಯಿಂದ ಏನನ್ನ್ಉ ತಿಂದಿಲ್ಲ ಎಂದು ನೆನೆಸಿಕೊಂಡೊಡನೆ ಹೊಟ್ಟೆ ಹಸಿವಿನಿಂದ ತಾಳ ಹಾಕಲು ಸುರು ಮಾಡತೊಡಗಿತು. ತಿನ್ನಲು ಏನಿದೆ ಎಂದು ಹುಡುಕಿದ, ಸಿಗಲಿಲ್ಲ, ಬೇಸರವಾಯಿತು.ಹೊರಗೆ ಹೋಗಿ ತಿನ್ನೋಣವೆಂದುಕೊಂಡರೆ, ಈಗ ಯಾವ ಹೊಟೇಲು ತೆರೆದಿರುತ್ತದೆ. ಮತ್ತೊಮ್ಮೆ ಮನೆಯಲ್ಲಿದ್ದ ಡಬ್ಬಿಯೆನ್ನೆಲ್ಲಾ ಹುಡುಕಿದ, ಅಕ್ಕಿ, ಬೇಳೆ, ತರಕಾರಿಗಳಿದ್ದವಾದರೂ ಈಗ ಅದರಿಂದ ಊಟ ತಯಾರಿಮಾಡುಕೊಳ್ಳುವಷ್ಟು ವ್ಯವಧಾನವಿರಲಿಲ್ಲ.
"ತಥ್, ಹಾಳಾದ್ದು, ಹಸಿವೆಯಾದಾಗಲೇ ಕೈ ಕೊಡುತ್ತವೆ" ಎನಿಸಿಬಿಟ್ಟಿತು. ನೀರನ್ನಾದರೂ ಕುಡಿದು ಮಲಗೋಣ ಎಂದು ನೀರ ಬಾಟಲಿಯನ್ನು ಎತ್ತಿಕೊಂಡು ನಾಲ್ಕಾರು ಗುಟುಕು ನೀರು ಕುಡಿಯುತ್ತದ್ದಂತೆ, ಒಂದು ವಾರದ ಹಿಂದೆ ತಂದು ಅರ್ಧ ಉಪಯೋಗಿಸಿ ಶೀತಕದಲ್ಲಿ ಇಟ್ಟ ಮ್ಯಾಗಿ ಪೊಟ್ಟಣದ ನೆನಪಾಯಿತು. ಕುಡಿಯುವ ನೀರನ್ನು ಅರ್ಧಕ್ಕೆ ನಿಲ್ಲಿಸಿ, ಶೀತಕದ ಬಾಗಿಲು ತೆರೆದು ಮ್ಯಾಗಿ ಪೊಟ್ಟಣ ಇದೆ ಎನ್ನುವುದನ್ನು ನೋಡಿ ಖಾತ್ರಿ ಮಾಡಿಕೊಂಡ. ಬಾಣಲೆಯಲ್ಲಿ ನೀರು ಕಾಸಲು ಇಟ್ಟು ಬಾಟಲಿಯಲ್ಲಿ ಉಳಿದ ನೀರಲ್ಲಿ ಸ್ವಲ್ಪ ನೀರು ಕುಡಿದ. ಕಾದ ಬಾಣೆಲೆಗೆ ಮ್ಯಾಗಿ ಹಾಕಿ ಸ್ವಲ್ಪ ಕದಡಿ, ಮ್ಯಾಗಿ ಬೆಂದೊಡನೆ ಅದನ್ನು ತಟ್ಟೆಗೆ ಸುರುದ. ಅದೇ ಅವನಿಗೆ ಇವತ್ತಿನ ರಾತ್ರಿಯ ಊಟ. ಮ್ಯಾಗಿ ತಿಂದೊಡನೆ ಹೊಟ್ಟೆ ಸ್ವಲ್ಪ ತಣ್ಣಗೆ ಎನಿಸಿತು. ಮ್ಯಾಗಿ ಮಾಡಿದ ಬಾಣಲೆಯನ್ನು, ತಿಂದ ತಟ್ಟೆಯನ್ನು ನಾಳೆ ತೊಳೆದರಾಯಿತು ಎಂದು ಸಿಂಕ್ ಒಳಗೆ ಎಸೆದು ಬಂದ. ಹಾಸಿಗೆ ಹಾಸಿ ಸಮಯ ನೋಡಿದ ,ಸಮಯ ಆಗಲೇ ಒಂದೂವರೆ ದಾಟಿತ್ತು. ಬೆಳಿಗ್ಗೆ ಬೇರೆ ಬೇಗ ಏಳಬೇಕು ಎಂದು ಮಲಗಿದ.
ಬೆಳಿಗ್ಗೆ ಆಗಿನ್ನೂ ೬:೩೦ ಗಂಟೆ, ಚಳಿಗಾಲದ ಚಳಿಗೆ ಸೋತು ಮುಸುಕು ಹೊದ್ದು ಮಲಗಿದ್ದ ರಘುರಾಮನಿಗೆ ಎಚ್ಚರವಾದರೂ ಏಳಲು ಮನಸ್ಸು ಬರಲಿಲ್ಲ. ಇನ್ನು ಸ್ವಲ್ಪ ಹೊತ್ತು ಹೀಗೆ ಮಲಗಿರೋಣ ಎಂದು ಮಲಗಿದ ಅವನನ್ನು ಮೊಬೈಲ್ ಕರೆ ಮತ್ತೆ ಎಬ್ಬಿಸಿತು. "ಥೂ, ಇದೊಂದು ಮಲಗೊಕ್ಕು ಬಿಡಲ್ಲ, ಹಾಳಾದುದ್ದು." ಎಂದು ಶಾಪ ಹಾಕುತ್ತಾ ಹೋಗಿ ಬಂದ ಕರೆಯನ್ನು ನೋಡಿದ. ಹೌದು ಅದೇ ನಂಬರ್, ನಿನ್ನೆ ರಾತ್ರಿ ಹತ್ತು ಬಾರಿ ಕರೆ ಬಂದದ್ದು ಇದೇ ಮೊಬೈಲನಿಂದ. ಮೊಬೈಲ್ ಕರೆಯನ್ನು ಸ್ವಿಕರಿಸಿ "ಹಲೋ, ಯಾರಿದು?" ಎಂದ.
"ಏನೋ ಗೂಬೆ, ಮರೆತು ಬಿಟ್ಟೆಯಾ, ಯಾಕೋ ಹೀಗಾದೆ, ಒಂದು ವರ್ಷ ಆಯಿತಲ್ಲವೇನೋ ನಾವಿಬ್ಬರೂ ಮಾತನ್ನಾಡಿ."
ಹೆಣ್ಣು ಧ್ವನಿ, ಹೌದು ಈ ಧ್ವನಿಯನ್ನು ಎಲ್ಲೋ ಕೇಳಿದ್ದೇನೆ ಅನಿಸಿತು, ಯಾರಾಗಿರಬಹುದು? ನೆನಪಿಸಿಕೊಳ್ಳಲು ಯತ್ನಿಸಿದ. ಎಷ್ಟೇ ಮೆದುಳನ್ನು ಕಲಕಾಡಿದರೂ, ಆಪೀಸಿನ ಕರೆಗಳೇ ಜ್ನಾಪಕಕ್ಕೆ ಬರುತ್ತಿದ್ದವೇ ವಿನಃ ಮತ್ಯಾವ ಹೆಸರು ನೆನಪಿಗೆ ಬರುತ್ತಿಲ್ಲ. ಯಾರಪ್ಪ ಈಕೆ ಎಂದು ನೆನಸಿಕೊಳ್ಳಲು ಯತ್ನಿಸಿದರು ಅವಳ ಹೆಸರು ನೆನಪಿಗೆ ಬರಲಿಲ್ಲ, ಹೆಸರು ಗೊತ್ತಿಲ್ಲ ಎಂದರೆ ಎಲ್ಲಿ ತನ್ನ ಮರ್ಯಾದೆ ಹೋಗುತ್ತೋ ಎಂದನಿಸಿ, "ಹೋ! ನೆನಪಾಯ್ತು ಹೇಳಿ, ಚೆನ್ನಾಗಿದ್ದಿರಾ?" ಎಂದು ಕೇಳಿದ.
"ಏನೋ ರಘು ಇದು, ಬಹುವಚನದಲ್ಲಿ ಮಾತನ್ನಾಡಿಸುತ್ತಿದ್ದಿಯಾ? ಯಾಕೋ, ಏನಾಯ್ತೋ ನಿನಗೆ? ನಾನು ಚೆನ್ನಾಗಿದ್ದಿನಿ ಕಣೋ, ನೀನು ಹೇಗಿದ್ದಿಯಾ ಹೇಳು" ಎಂದಳು ಆಕೆ.
ಯಾರೀಕೆ, ನನಗೆ ತುಂಬಾ ಪರಿಚಯವಿರುವಂತೆ ಮಾತನ್ನಾಡುತ್ತಿದ್ದಾಳಲ್ಲ, ನಮ್ಮ ಆಪೀಸಿನವರ್ಯಾರಾದರೂ ನನಗೆ ಯಾಮಾರಿಸುತ್ತಿರಬಹುದೇ? ಅಥವಾ ನನ್ನ ಸಂಬಂಧಿಕರ್ಯಾರಾದರೂ ಇರಬಹುದೇ? ಎನೇ ಇರಲಿ ಕೇಳೇ ಬಿಡೋಣ ಎಂದನಿಸಿ, "ಕ್ಷಮಿಸಿ, ನಿಮ್ಮ ಹೆಸರು ಜ್ನಾಪಕಕ್ಕೆ ಬರುತ್ತಿಲ್ಲ."
"ಹೇ, ಕೋತಿ ನಾನು ಕಣೋ, ನಾನು ನಿನ್ನ ಕ್ಲಾಸಮೇಟ್ ಶಿಲ್ಪಾ, ಏನೋ ಇಷ್ಟು ಬೇಗ ಮರೆತು ಬಿಟ್ಟೆಯಾ?"
ಈಗ ನೆನಪಾಯಿತು ಆತನಿಗೆ, ಅದೆಷ್ಟು ದಿನವಾಯಿತು ಅವಳ ಹತ್ತಿರ ಮಾತನ್ನಾಡಿ. ಕೊನೆಯ ಬಾರಿ ಕರೆ ಮಾಡಿದಾಗ ಒಂದೆರಡು ಮಾತನ್ನಾಡಿ, ಆಮೇಲೆ ಮಾಡುತ್ತೇನೆ ಎಂದವನು ಕರೆ ಮಾಡಿರಲೇ ಇರಲಿಲ್ಲ. ಅದಾಗಲೇ ಅವಳ ಬಳಿ ಮಾತನ್ನಾಡಿ ಒಂದು ವರ್ಷ ಕಳೆದಿದ್ದು ಅವನಿಗೆ ಜ್ನಾಪಕಕ್ಕೆ ಬರಲಿಲ್ಲ.
"ಏನೋ, ಇನ್ನಾದರೂ ನೆನಪಾಯಿತೋ ಹೇಗೆ" ಎಂದಾಗ ನೆನಪಿನ ಲೋಕದಿಂದ ಹೊರಬಂದವನಂತೆ ತೊದಲುತ್ತಾ, "ಹೇ ಶಿಲ್ಪಾ, ಸಾರಿ ಕಣೇ, ನಿದ್ದೆಯ ಗುಂಗಿನಲ್ಲಿ ನಿನ್ನ ನೆನಪೇ ಆಗಲಿಲ್ಲ" ಎಂದು ಒಂದು ಚಿಕ್ಕ ಸುಳ್ಳನ್ನು ಎಸೆದ.
"ಆಯ್ತು ಬಿಡೋ, ಇರಲಿ" ಎನ್ನುತ್ತಾ "ಹುಟ್ಟು ಹಬ್ಬದ ಶುಭಾಶಯಗಳು" ಎಂದಳು.
ಆಗಲೇ ನೆನಪಾಗಿದ್ದು ಆತನಿಗೆ ಇಂದು ತನ್ನ ಹುಟ್ಟಿದ ದಿನವೆಂದು ಈಗ ನೆನಪಾಯಿತು, ಕಳೆದ ಬಾರಿ ನೆನಪು ಮಾಡಿದ್ದು ಕೂಡ ಈಕೇನೆ ಎಂದು ಅವನಿಗೆ ಈಗ ನೆನಪಾಯಿತು.
ಕಾಲೇಜಿನಲ್ಲಿ ಓದುವಾಗ ಒಮ್ಮೆ ಶಿಲ್ಪಾ "ನಿನ್ನ ಹುಟ್ಟಿದ ದಿನ ಯಾವಾಗ" ಎಂದು ಕೇಳಿದಾಗ, "೧೮ ಜನವರಿ" ಎಂದು ಹೇಳಿದ್ದನಾದರೂ, ಅವಳು ಹೀಗೆ ಕೇಳಿರಬೇಕು ಎಂದು ತಿಳಿದು ಅವಳಿಗೆ ತನ್ನ ಹುಟ್ಟಿದ ದಿನಾಂಕವನ್ನು ತಿಳಿಸಿದ್ದ. ಅವಳಿಗೆ ತನ್ನ ಸ್ನೇಹಿತರ ಹುಟ್ಟಿದ ದಿನಾಂಕವನ್ನು ಒಂದಡೆ ಕೂಡಿಟ್ಟು, ಅವರು ಹುಟ್ಟಿದ ದಿನದಂದು, ಅವರಿಗೆ ಶುಭಾಶಯ ತಿಳಿಸುವುದು ಅವಳ ಹವ್ಯಾಸ ಎಂದು ಅವನಿಗೆ ತಿಳಿದಿದ್ದು, ಅವಳು ಆ ವರ್ಷ ಅವನ ಹುಟ್ಟಿದ ದಿನದಂದು ಅವನಿಗೆ ಹುಟ್ಟಿದ ಹಬ್ಬದ ಶುಭಾಶಯವನ್ನು ತಿಳಿಸಿದಾಗಲೇ. ಅಂದಿನಿಂದ ಇಂದಿನವರೆಗೂ ತಪ್ಪದೇ ಅವನ ಹುಟ್ಟಿದ ದಿನದಂದು ಕರೆ ಮಾಡಿ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸುತ್ತಿದ್ದಳು ಶಿಲ್ಪಾ.
ಇಂದು ಕೂಡಾ ಆಕೆ ಕರೆ ಮಾಡಿದ್ದು ಅವನಿಗೆ ಶುಭಾಶಯ ತಿಳಿಸಲೆಂದೇ. ರಾತ್ರಿ ಹನ್ನೆರಡು ಹೊಡೆಯುತ್ತಿದ್ದ ಹಾಗೆ ಅವನಿಗೆ ಕರೆ ಮಾಡಲು ಪ್ರಯತ್ನಿಸಿದಳು. ಎಂಟು ಹತ್ತು ಬಾರಿ ಪ್ರಯತ್ನಿಸಿದಾಗಲೂ ಆತ ಕರೆ ಸ್ವಿಕರಿಸದೇ ಇದ್ದುದನ್ನು ತಿಳಿದು, ಬಹುಷಃ ಆತ ಮಲಗಿರಬಹುದು ಎಂದು ತಾನು ಮಲಗಿದ್ದಳು. ರಘುರಾಮ ರಾತ್ರಿ ಕರೆ ಮಾಡಿದಾಗ ಅವಳು ಆಗಲೇ ಮಲಗಿದ್ದಳು. ಬೆಳಿಗ್ಗೆ ಎದ್ದು ಆತನ ಕರೆ ನೋಡಿ ನೆನಪಾಗಿ ಮತ್ತೆ ಕರೆ ಮಾಡಿದ್ದಳು. ಅವನ ಹುಟ್ಟಿದ ದಿನದ ನೆನಪು ಆತನಿಗೆ ಇಲ್ಲದಿದ್ದರೂ ಆಕೆಗೆ ನೆನಪಿತ್ತು.
ತನ್ನ ಹುಟ್ಟಿದ ದಿನವನ್ನು ನೆನಪಿಸಿದ್ದಕ್ಕಾಗಿ ಅವಳಿಗೆ ಧನ್ಯವಾದಗಳನ್ನು ತಿಳಿಸಿದ. ಆಪೀಸಿನ ನೆನಪಾಗಿ ಮತ್ತೆ ಕರೆ ಮಾಡುವುದಾಗಿ ಹೇಳಿ ಮೊಬೈಲ್ ಇಟ್ಟು ಸ್ನಾನದ ಕೋಣೆ ಸೇರಿದ. ಸ್ನಾನ ಮಾಡಿ ತಯಾರಿಗೊಂಡು ಆಪೀಸಿನತ್ತ ಪ್ರಯಾಣ ಬೆಳೆಸಿದ. ಇಂದೇಕೋ ಆತ ಮೊದಲಿನಂತಿರಲಿಲ್ಲ. ತಾನು ಎಲ್ಲೋ ಕಳೆದು ಹೋಗಿದ್ದೇನೆ ಅನಿಸಿತು. ಆಪೀಸು, ಸಂಬಳ, ಅಪ್ರೈಸಲ್, ಪ್ರೊಜೆಕ್ಟ, ಕ್ಲೈಂಟ್, ರಿಲೀಸಗಳ ಮಧ್ಯೆ ತಾನೆಲ್ಲೋ ಕಳೆದು ಹೋಗಿದ್ದೇನೆ ಅನಿಸಿತು. ತಾನು ಸಂಪೂರ್ಣ ಕಳೆದು ಹೋಗುವವರೆಗೆ ಎಚ್ಚೆತ್ತು ಕೊಳ್ಳಬೇಕು ಎನಿಸಿ, ಆಪೀಸಿನತ್ತ ಹೋಗುತ್ತಿದ್ದ ಕಾರನ್ನು ಲಾಲ್ ಬಾಗ್ ನತ್ತ ತಿರುಗಿಸಿದ. ಲಾಲ್ ಬಾಗನ ಒಳ ಪ್ರವೇಶಿಸಿ, ಮುಂದೆ ಹೋಗಿ ಕಲ್ಲು ಬಂಡೆಯ ಮೇಲೆ ಕುಳಿತ. ಮನಸ್ಸಿಗೆ ಅದೇಕೋ ನೆಮ್ಮದಿ ಅನಿಸತೊಡಗಿತು. ಅದೆಷ್ಟು ವರ್ಷವಾಯಿತು ಈ ಲಾಲ್ ಬಾಗಗೆ ಬಂದು, ನೆನಪಾಗಲಿಲ್ಲ. ಬೆಂಗಳೂರಿಗೆ ಬಂದ ಹೊಸತರಲ್ಲಿ ಲಾಲ್ ಬಾಗ್ ಎನ್ನುವ ಹೂದೋಟದ ಸ್ವರ್ಗಕ್ಕೆ ಮನಸೋತು ಮೂರ್ನಾಲ್ಕು ಬಾರಿ ಬಂದಿದ್ದ. ಅದರೆ ಇತ್ತೀಚೆಗೆ ಕೆಲಸದ ನಡುವಲ್ಲಿ ಕಳೆದು ಹೋದ ಅವನಿಗೆ ಲಾಲ್ ಬಾಗ್ ನೆನಪಾಗಿರಲಿಲ್ಲ.
ಕಂಪನಿಯಲ್ಲಿನ ತನ್ನ ಸಹೋದ್ಯೋಗಿಗೆ ಕರೆ ಮಾಡಿ, "ನನಗೆ ಹುಷಾರು ಇಲ್ಲಾ, ಆಪೀಸಿಗೆ ಬರಲ್ಲಾ, ಒಂದು ವಾರದ ಮೇಲೆ ಬರುತ್ತೇನೆ, ಮ್ಯಾನೇಜರಗೆ ತಿಳಿಸು" ಎಂದು ಹೇಳಿ ಕರೆ ಕಟ್ ಮಾಡಿದ. ಮೊಬೈಲ್ ಆಪ್ ಮಾಡಿ ಆ ದಿನವನ್ನೆಲ್ಲಾ ಲಾಲ್ ಬಾಗನಲ್ಲೇ ಕಳೆದ. ಯಾಕೋ ಮನಸ್ಸು ಹಿಡಿತಕ್ಕೆ ಬಂದಂತೆ ಅನಿಸಲಿಲ್ಲ. ಮನೆ, ಊರಿನ ನೆನಪಾಯಿತು, ಊರಿಗೆ ಹೋಗಿ ಅದಾಗಲೇ ಏಳೆಂಟು ತಿಂಗಳುಗಳು ಕಳೆದು ಹೋಗಿದ್ದವು. ಕೆಲಸದ ನಡುವೆ ಮನೆಯ ನೆನಪಾಗಿರಲಿಲ್ಲ. ಲಾಲ್ ಬಾಗನಿಂದ ನೇರವಾಗಿ ಮನೆಗೆ ಬಂದು, ಬಟ್ಟೆಯನ್ನೆಲ್ಲಾ ಸ್ಯೂಟ್ ಕೆಸಗೆ ತುಂಬಿ. ಆ ಸ್ಯೂಟ್ ಕೆಸನ್ನು ಕಾರಿನ ಡಿಕ್ಕಿಗೆ ಹಾಕಿ, ಕಾರನ್ನು ತೆಗೆದು ಕೊಂಡು ಶಿರ್ಶಿಯತ್ತ ನಡೆದ. ಒಂದು ವಾರದ ಮಟ್ಟಿಗಾದರೂ ನೆಮ್ಮದಿಯಾಗಿರೋಣವೆಂದು.
--ಮಂಜು ಹಿಚ್ಕಡ್