ಕಳೆದು ಹೋದ ಬೀಗದ ಕೀ

ಕಳೆದು ಹೋದ ಬೀಗದ ಕೀ

ಚಿತ್ರ

ನಮ್ಮ ಪಿಜಿಯ ಮೂರನೇ ಮಹಡಿಯಲ್ಲಿದ್ದ ನನ್ನ ರೂಮಿನಿಂದ 6 ನೇ ಮಹಡಿಗೆ ಹೋಗುತ್ತಿದ್ದೆ, ಬಟ್ಟೆ ಒಗೆಯೋಕೆ. ಬಟ್ಟೆ ತುಂಬಿದ ಬಕೆಟ್ ಹಿಡ್ಕೊಂಡು ಒಂದೊಂದೇ ಮೆಟ್ಟಿಲು ಹತ್ತುತ್ತಿರಬೇಕಾದರೆ 5ನೇ ಮಹಡಿಯಲ್ಲಿ ನೀಲಿ ಡಸ್ಟ್ ಬಿನ್ ಪಕ್ಕ ಒಂದು ಪುಟ್ಟ ಬೀಗದ ಕೀ ಬಿದ್ದಿತ್ತು. ಅಂಥದ್ದೇ ಕೀ ನನ್ನಲ್ಲಿಯೂ ಇತ್ತು. ಆದರೆ ನನ್ನ ಕೀ ಯಾವತ್ತೂ ಪರ್ಸ್‌ನಲ್ಲೇ ಇರುತ್ತೆ. ಅದು ಬಿದ್ದರೂ ನನ್ನ ರೂಂನಲ್ಲೇ ಬೀಳಬೇಕು. ಐದನೇ ಮಹಡಿಯಲ್ಲಿ ಬೀಳೋಕೆ ಹೇಗೆ ಸಾಧ್ಯ? ಎಂದು ನನ್ನನ್ನ ನಾನೇ ಸಮಧಾನಿಸುತ್ತಾ ಬಟ್ಟೆ ಒಗೆಯಲು ಹೋದೆ. ಬಟ್ಟೆ ಒಗೆಯುವಾಗಲೂ ಆ ಕೀ ತುಂಬಾನೇ ಕಾಡುತ್ತಿತ್ತು. ಯಾರ ಕೀ ಆಗಿರಬಹುದು? ಯಾವ ಹುಡುಗಿಯ ಕೈಯಿಂದ ಬಿತ್ತೇನೋ...ಕೀ ಕಳೆದುಕೊಂಡ ಹುಡುಗಿಯ ಸ್ಥಿತಿ ಹೇಗಿರುತ್ತದೋ ಏನೋ? ಮನಸ್ಸಲ್ಲಿ ಸಾಲು ಸಾಲು ಪ್ರಶ್ನೆಗಳು.

 

ಬೀಗದ ಕೀ ಅಂದರೆ ಸುಮ್ನೇನಾ? ಅದನ್ನೊಮ್ಮೆ ಕಳೆದುಕೊಂಡು ನೋಡಿ, ಆ ಚಡಪಡಿಕೆಯ ತೀವ್ರತೆ ಎಷ್ಟಿರುತ್ತದೆ ಎಂಬುದು ಕಳೆದುಕೊಂಡವರಿಗಷ್ಟೇ ಗೊತ್ತು. ನಾನೆಲ್ಲೂ ಬೀಗದ ಕೀ ಕಳೆದುಕೊಂಡಿಲ್ಲ, ಆದರೆ ಅದು ಕಳೆದುಕೊಂಡರೆ ಅನ್ನೋ ಭಯ ಸಿಕ್ಕಾಪಟ್ಟೆ ಇದೆ. ಒಂದು ಕ್ಷಣ ಬೀಗದ ಕೀ ಕೈಗೆ ಸಿಗದೇ ಹೋದರೆ ಎದೆ ಬಡಿತವೇ ನಿಂತು ಹೋದಂತ ಅನುಭವ!. ಬೀಗದ ಕೀ ಬಗ್ಗೆ ಹೇಳುವಾಗ ಹಲವಾರು ಘಟನೆಗಳು ನೆನಪಿಗೆ ಬರುತ್ತವೆ. ಹಳೇ ಹಿಂದಿ ಸಿನಿಮಾವೊಂದರಲ್ಲಿ  (ಸಿನಿಮಾದ ಹೆಸರು ನೆನಪಿಗೆ ಬರ್ತಾ ಇಲ್ಲ ) ಇಬ್ಬರು  ಸಹೋದರರು. ಚಿಕ್ಕವರಿರುವಾಗ ಅವರ ಅಪ್ಪ ಒಬ್ಬನ ಕೈಯಲ್ಲಿ ಬೀಗ, ಇನ್ನೊಬ್ಬನ ಕೈಯಲ್ಲಿ ಕೀ ಕೊಟ್ಟಿರುತ್ತಾರೆ. ನೀವು ಜತೆಗಿದ್ದರೆ ಮಾತ್ರ ಈ ಕೀ ಬಳಸಿ ಲಾಕ್ ಓಪನ್ ಮಾಡಬಹುದು ಅಂತ ಅಪ್ಪ ಹೇಳಿರುತ್ತಾನೆ. ಏನೋ ಘಟನೆ ನಡೆದು ಅವರಿಬ್ಬರೂ ದೂರವಾಗುತ್ತಾರೆ, ಕೊನೆಗೆ ದೊಡ್ಡವರಾದ ಮೇಲೆ ಆ ಬೀಗ-ಕೀ ಮೂಲಕ ಅವರು ಅಣ್ಣ- ತಮ್ಮ ಎಂದು ಗುರುತಿಸಿ ಒಂದಾಗುತ್ತಾರೆ. ಇದೇ ತರ ವ್ಯಾಲೆಂಟೈನ್ಸ್, ಫ್ರೆಂಡ್‌ಶಿಪ್ ಡೇಗೆ ಕೂಡಾ ಲಾಕ್ ಆ್ಯಂಡ್ ಕೀ ಗಿಫ್ಟ್ ಕೊಡುವುದೂ ಉಂಟು. ಕಾಲೇಜಲ್ಲಿದ್ದಾಗ ಗೆಳತಿಯೊಬ್ಬಳು ಅವಳ ಪ್ರೇಮಿಗೆ ಸ್ಟೈಲಿಷ್ ಆಗಿರುವ ಪುಟ್ಟ ಲಾಕ್ ಗಿಫ್ಟ್  ಕೊಟ್ಟು ಕೀ ತನ್ನ ಬಳಿ ಇಟ್ಟುಕೊಂಡಿದ್ದಳು. ಲವ್ ಬ್ರೇಕ್ ಅಪ್ ಆದಾಗ ಆ ಕೀಯನ್ನು ನೋಡಿಕೊಂಡೇ ಅಳುತ್ತಾ ಕೂರುತ್ತಿದ್ದಳು. ಪ್ರೀತಿಸಿದ ಹುಡುಗ ಲಾಕ್ ಎಲ್ಲೋ ಕಳೆದುಕೊಂಡಿದ್ದ ಎಂಬುದೇ ಬ್ರೇಕ್ ಅಪ್‌ಗೆ ಕಾರಣವಾಗಿತ್ತು!! ಆ ಟೈಮಲ್ಲಿ ಹುಡುಗ ಮಾಡಿದ್ದು ಮಹಾ ಅಪರಾಧ ಎಂಬಂತೆ ಅನಿಸಿತ್ತು, ಈಗ ಅದನ್ನು ನೆನಪಿಸಿಕೊಂಡರೆ ನಗು ಬರುತ್ತದೆ.

 

ನನಗೊಬ್ಬರು ಆಂಟಿ ಇದ್ದರು, ಅಪ್ಪನ ಅಕ್ಕ. ನಮ್ಮ ಕುಟುಂಬದಲ್ಲಿದ್ದ ಏಕೈಕ ಆಂಟಿ ಅವರು, ಬಾಕಿ ಉಳಿದವರನ್ನೆಲ್ಲಾ ನಾವು ಮಾಮಿ ಅಂತನೇ ಕರೆಯುತ್ತಿದ್ದದ್ದು. ಆ ಆಂಟಿ ಜತೆ ಎಕ್ಸ್‌ಟ್ರಾ ಅಂಗದಂತೆ ಬೀಗದ ಕೀ ಇರುತ್ತಿತ್ತು. ಬಂಗಾಳಿ ಮಹಿಳೆಯರು ಸೆರಗಿನಲ್ಲಿ ಬೀಗದ ಕೀ ಕಟ್ಟಿಕೊಳ್ತಾರಲ್ಲಾ ಹಾಗೆ, ಆಂಟಿ ಸೆರಗಿನಲ್ಲಿ ಬೀಗದ ಕೀ ನೇತಾಡುತ್ತಿರತ್ತಿತ್ತು. ನಿದ್ದೆ ಮಾಡುವಾಗ ದಿಂಬಿನ ಅಡಿಯಲ್ಲೇ ಇಟ್ಟು ಮಲಗುತ್ತಿದ್ದರು. ಮನೆಯಲ್ಲಿನ ಪ್ರತೀ ಕೋಣೆಗೂ ಬೀಗ, ಅದೆಲ್ಲದರ ಕೀ ಅವರ ಕೈಯಲ್ಲೇ ಇರುತ್ತಿತ್ತು. ಆಂಟಿ ಮನೆಗೆ ಹೋದ್ರೆ ನಮಗೆ ಇದೆಲ್ಲಾ ವಿಚಿತ್ರ ಅನಿಸುತ್ತಿತ್ತು. ಯಾಕೆಂದರೆ ನಮ್ಮ ಮನೆಯಲ್ಲಿ ಒಂದೆರಡು ಪೆಟ್ಟಿಗೆಗಳಿಗೆ ಲಾಕ್ ಹಾಕಿ ಇಟ್ಟಿರುತ್ತಿದ್ದರೇ ಹೊರತು ಬಾಕಿ ಯಾವುದಕ್ಕೂ ಲಾಕ್ ಹಾಕುತ್ತಿರಲಿಲ್ಲ. ನಾವು ಚಿಕ್ಕವರಿರುವಾಗ ಮನೆಗೆ ಬೀಗ ಹಾಕಿ ಹೊರಗೆ ಹೋದದ್ದೇ ಅಪರೂಪ. ಕುಟುಂಬದ ಎಲ್ಲ ಸದಸ್ಯರು ಹೊರಗೆ ಹೋಗುವುದಾದರೂ ಮನೆಯಲ್ಲಿ ಸಂಬಂಧಿಕರರೊಬ್ಬರನ್ನು ಕರೆಸಿ ಅವರಿಗೆ ಮನೆಯನ್ನು ನೋಡಿಕೊಳ್ಳುವಂತೆ ಹೇಳುತ್ತಿದ್ದೆವು. ಮನೆಯಲ್ಲಿ ಹಸು, ಕೋಳಿ, ನಾಯಿ, ಬೆಕ್ಕು ಇದನ್ನೆಲ್ಲಾ ಬಿಟ್ಟು ಮನೆಗೆ ಬೀಗ ಹಾಕಿ ಹೋಗುವುದು ಅಮ್ಮನಿಗೆ ಇಷ್ಟವಿಲ್ಲದ ಸಂಗತಿ. ಹಾಗಾಗಿ ಅನಿವಾರ್ಯವಾಗಿ ಮನೆಯವರೆಲ್ಲರೂ ಹೊರಗೆ ಹೋಗಬೇಕಾಗಿ ಬಂದಾಗ ಮಾತ್ರ ಮನೆಗೆ ಬೀಗ ಹಾಕುತ್ತಿದ್ದೆವು. ಅದೂ ವರುಷದಲ್ಲಿ ಎರಡೋ ಮೂರು ಬಾರಿ!! ಮನೆಯಲ್ಲಿರುವ ಒಂದೆರಡು ಪೆಟ್ಟಿಗೆಗೆ ಲಾಕ್ ಹಾಕಿಯೇ ಇರುತ್ತಿತ್ತು. ಅದರ ಕೀಯನ್ನು ಅಮ್ಮ ಜೋಪಾನವಾಗಿರಿಸಿದ್ದರು.

 

ಆದರೆ ಆಂಟಿ ಮನೆಯಲ್ಲಿ ಪ್ರತಿಯೊಂದು ಪೆಟ್ಟಿಗೆ, ಕಪಾಟಿಗೂ ಲಾಕ್ !!ಅದರ ಕೀ ಗೊಂಚಲು ಆಂಟಿ ಕೈಯಲ್ಲೇ ಇರುತ್ತಿತ್ತು. ಅದನ್ಯಾರೂ ಮುಟ್ಟುವ ಸಾಹಸ ಕೂಡಾ ಮಾಡುತ್ತಿರಲಿಲ್ಲ. ಆಂಟಿ ಅನಾರೋಗ್ಯದಿಂದ ಹಾಸಿಗೆ ಹಿಡಿದಾಗಲೂ ಆ ಕೀಗೊಂಚಲನ್ನು ಮಾತ್ರ ಯಾರಲ್ಲೂ ಮುಟ್ಟಲು ಬಿಡುತ್ತಿರಲಿಲ್ಲ. ಅವರು ಮರಣಹೊಂದಿದಾಗಲೇ ಅವರ ಮಕ್ಕಳಿಗೆ ಗೊತ್ತಾಗಿದ್ದು, ಯಾವ್ಯಾವ ಕೀಯಿಂದ ಯಾವ ಲಾಕ್‌ಓಪನ್ ಆಗುತ್ತದೆ ಎಂದು.

 

ಚಿಕ್ಕಂದಿನಿಂದಲೇ ನನ್ನ ಕಾಡಿದ್ದು ನಮ್ಮ ಶಾಲೆಯ ಕೀ. ನನ್ನ ಕ್ಲಾಸಿನಲ್ಲಿ ಬಾಚನೆಂದು ಕರೆಯಲ್ಪಡುವ ಭಾಸ್ಕರನೆಂಬ ಹುಡುಗ ಇದ್ದ. ಅವನಿಗೆ ಅಪಸ್ಮಾರವಿತ್ತು. ಪದೇ ಪದೇ ಕ್ಲಾಸಿನಲ್ಲಿ ತಲೆ ಸುತ್ತಿ ಬಿದ್ದು, ನೊರೆ ಕಾರುವಾಗ ಕ್ಲಾಸ್ ಲೀಡರ್ ಆಗಿದ್ದ ನಾನು  ಹೆಡ್ ಮಾಸ್ಟರ್ ರೂಂಗೆ ಓಡಿ ಹೋಗಿ ಕೀಗೊಂಚಲು ತರುತ್ತಿದ್ದೆ. ಕೀಗೊಂಚಲು ಕೈಯಲ್ಲಿಟ್ಟಕೂಡಲೇ ಅವ ಶಾಂತನಾಗುತ್ತಿದ್ದ. ಮೊದಮೊದಲಿಗೆ ಹೆಡ್ ಮಾಸ್ಟರ್ ರೂಂನಿಂದ ತಂದ ಕೀ ಅನ್ನುವ ಭಯಕ್ಕೆ ಅವ ಶಾಂತನಾಗುತ್ತಿದ್ದಾನೆ ಅಂದುಕೊಂಡಿದ್ದೆ. ಆಮೇಲೆ ಗೊತ್ತಾಯ್ತು, ಯಾವ ಕೀ ಗೊಂಚಲು ಕೊಟ್ಟರೂ ಅವ  ಸರಿಹೋಗುತ್ತಾನೆಂದು. 5ನೇ ಕ್ಲಾಸಿಗೆ ಬರುವ ಹೊತ್ತಿಗೆ ಅಪಸ್ಮಾರಕ್ಕೂ ಆ ಕೀ ಗೊಂಚಲಿಗೂ ಏನೇನೂ ಸಂಬಂಧವಿಲ್ಲ ಎಂಬುದನ್ನು ತಿಳಿದುಕೊಂಡಿದ್ದೆ.

 

ಇನ್ನು ನಮ್ಮ ಅಂಗಡಿಯದ್ದು ದೊಡ್ಡದೊಂದು ಕೀ ಇತ್ತು. ಅಪ್ಪನ ಬ್ಯಾಗ್‌ನಲ್ಲಿ  ಆ ಕೀ ಇರುತ್ತಿತ್ತು. ಹೈಸ್ಕೂಲ್ ನಲ್ಲಿರುವಾಗ ವಿದ್ಯಾನಗರದ ಸ್ಟೇಡಿಯಂನಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯದಿನಾಚರಣೆ ಕಾರ್ಯಕ್ರಮ ನೋಡಲು ಹೋದಾಗ, ಅಪ್ಪನ ಬ್ಯಾಗ್ ಚೆಕ್ ಮಾಡಿದಾಗ ಮೆಟಲ್ ಡಿಟೆಕ್ಟರ್ ಸೌಂಡ್ ಮಾಡಿತ್ತು. ಅಲ್ಲಿ ನಿಂತಿದ್ದ ಪೊಲೀಸರೆಲ್ಲರ ಗಮನ ನಮ್ಮತ್ತ ತಿರುಗಿತು. ನಾವೇನೋ ಬಾಂಬ್ ತಂದಿದ್ದೇವೆ ಅನ್ನೋ ರೀತಿಯಲ್ಲಿ ಎಲ್ಲರೂ ನಮ್ಮ ಸುತ್ತುವರಿದಿದ್ದರು. ಅಪ್ಪ ಬ್ಯಾಗ್ ನಿಂದ ದೊಡ್ಡ ಕೀ ತೆಗೆದು ತೋರಿಸಿದರು. ಇದನ್ನು ಇಲ್ಲೇ ಇಡಿ, ಆಮೇಲೆ ತೆಗೆದುಕೊಂಡು ಹೋಗಿ ಅಂದ್ರು ಒಬ್ಬ ಪೊಲೀಸ್. ಆವಾಗಲೇ ಪರಿಚಯದ ಪೊಲೀಸರೊಬ್ಬರು ಸಿಕ್ಕಿದ್ರು...ಅವರು ಇದು ನಮ್ಮ ಪರಿಚಯದವ್ರು, ಪರ್ವಾಗಿಲ್ಲ ನೀವು ಹೋಗಿ ಎಂದು ನಮ್ಮನ್ನು ಸ್ಟೇಡಿಯಂಗೆ ಹೋಗಲು ಅನುಮತಿ ನೀಡಿದರು. ಒಂದು ಕೀ ಅಲ್ಲಿ ಅಷ್ಟೊಂದು ಸೀನ್ ಕ್ರಿಯೇಟ್ ಮಾಡಿತ್ತು.

 

ಕೀ ಅಂದ್ರೆ ಅಷ್ಟೇ ಜಾಗರೂಕತೆಯಿಂದ ಇರಬೇಕು ಎಂಬುದರ ಬಗ್ಗೆ ಮನೆಯಲ್ಲಿ ಕ್ಲಾಸ್ ತೆಗೆದುಕೊಂಡಿದ್ದನ್ನು ಕೇಳಿದ್ದು ನಾನು ಮೂರನೇ ಕ್ಲಾಸಿನಲ್ಲಿದ್ದಾಗ. ಅಕ್ಕನಿಗೆ ನವೋದಯ ಸೀಟು ಸಿಕ್ಕಿತ್ತು. ಅವಳಿಗಾಗಿ ಅಪ್ಪ ಟ್ರಂಕ್ ತಂದಿದ್ದರು. ಅದಕ್ಕೊಂದು ಪುಟ್ಟ ಬೀಗ, ಎರಡು ಕೀಗಳು ಜತೆಯಲ್ಲಿತ್ತು. ಟ್ರಂಕ್ ಗೆ ಬೀಗ ಹಾಕುವುದು ಹೇಗೆ ಎಂಬುದರ ಪ್ರಾತ್ಯಕ್ಷಿಕೆ ಮನೆಯಲ್ಲಿ ನಡೆಯುತ್ತಿತ್ತು. ಅಷ್ಟೆಲ್ಲಾ ಆದ್ಮೇಲೆ ಕೀಯನ್ನು ಜೋಪಾನವಾಗಿರಿಸುವುದು ಹೇಗೆ ಎಂಬ ಪ್ರಶ್ನೆ ಬಂತು. ಕೀ ಚೈನ್ ನಲ್ಲಿ ಹಾಕಿ ಇದನ್ನು ದಿನಾ ಜತೆಯಲ್ಲಿರಿಸು. ಮಲಗುವಾಗ ದಿಂಬಿನಡಿಯಲ್ಲಿಟ್ಟುಕೋ ಎಂದು ಅಪ್ಪ ಹೇಳಿದ್ರೆ, ಅಮ್ಮನಿಗೆ ಮಗಳು ಎಲ್ಲಿ ಕೀ ಕಳೆದು ಹಾಕಿ ಬಿಡ್ತಾಳೋ ಅನ್ನೋ ಭಯ. ಕೊನೆಗೆ ಎರಡು ಪುಟ್ಟ ಕೀಗಳನ್ನು ಒಂದು ಕಪ್ಪು ದಾರಕ್ಕೆ ಪೋಣಿಸಿ ಅವಳ ಕುತ್ತಿಗೆಗೆ ಹಾಕಿ ಬಿಡುವುದು ಎಂದಾಯಿತು. ಧರ್ಮಸ್ಥಳದ ಲಾಕೆಟ್ ಇರುವ ಕಪ್ಪು ದಾರದೊಂದಿಗೆ ಕೀ ಇರುವ ಹೊಸ ದಾರ ಅಕ್ಕನ ಕತ್ತಲ್ಲಿ ನೇತಾಡುವಂತಾಯಿತು. ಹಾಸ್ಟೆಲ್‌ಗೆ ಸೇರಿಸಿ ಬಂದು ಆಮೇಲೆ ವಾರ ವಾರ ಅವಳನ್ನು ಭೇಟಿ ಮಾಡಲು ಹೋದಾಗಲೆಲ್ಲಾ, ಅಮ್ಮ ಅವಳ ಕತ್ತಲ್ಲಿ ಕೀ ದಾರವಿದೆ ಎಂಬುದನ್ನು ಕಾತರಿ ಪಡಿಸಿಕೊಳ್ಳುತ್ತಿದ್ದರು. ಹೊರಟು ಬರುವ ಹೊತ್ತಲ್ಲಿ, ಕೀ ಜಾಗ್ರತೆ ಎಂದು ಹೇಳುವುದನ್ನು ಮರೆಯುತ್ತಿರಲಿಲ್ಲ. ಕ್ರಮೇಣ ದಾರದಿಂದ ಕೀ ತೆಗೆದು ಕೀ ಚೈನ್ ಬಳಸೋಕೆ ಶುರು ಮಾಡಿದ್ಳು ಅಕ್ಕ.

 

ಕೀ ಸಂಭಾಳಿಸುವ ಬಗ್ಗೆ ಕೇಳಿ, ನೋಡಿ ಅನುಭವವಿದ್ದರೂ ಪಿಜಿಗೆ ಬಂದಾಗ ನಮ್ಮ ರೂಂ ಕೀ ಬಗ್ಗೆ ಅತೀವ ಜಾಗರೂಕತೆ ವಹಿಸುತ್ತಿದ್ದೆ. ರೂಂ ಬಿಟ್ಟು ಹೊರಗೆ ಒಂದು ಹೆಜ್ಜೆ ಇಡುತ್ತಿದ್ದರೂ, ಕೀ ಗೊಂಚಲು ಕೈಯಲ್ಲಿರಬೇಕು. ಇಲ್ಲದೇ ಇದ್ದರೆ ಯಾರು ನಮ್ಮ ವಸ್ತುಗಳನ್ನು ಕದಿಯುತ್ತಾರೋ, ಹಾಳು ಮಾಡುತ್ತಾರೋ ಎಂಬ ಭಯ. ಎಲ್ಲಿಯಾದರೂ ಕೀ ಬಿದ್ದದ್ದನ್ನು ನೋಡಿದರೆ ನನ್ನ ಕೈಯಲ್ಲಿರುವ ಕೀ ಎಲ್ಲ ಇದೆ ತಾನೇ ಚೆಕ್ ಮಾಡಿ ನೋಡುತ್ತೇನೆ. ಕೀ ಕಳೆದುಕೊಂಡರೆ ಏನೆಲ್ಲಾ ಆಗುತ್ತದೆ ಎಂಬುದಕ್ಕೆ ಸಾಕಷ್ಟು ಉದಾಹರಣೆಗಳು ಇವೆ. ಕೆಲವೊಮ್ಮೆ ಪುಪ್ಪಕ ವಿಮಾನ ಸಿನಿಮಾದ ಕಥೆಯಂತೆ ಬಿದ್ದು ಸಿಕ್ಕ ಕೀಯಿಂದ ಲೈಫ್ ಬದಲಾಗಬಹುದು, ಇನ್ನೇನೋ ಆಗಬಹುದು. ಆದ್ದರಿಂದ ಕೀ ಜಾಗ್ರತೆ...

 

ಚಿತ್ರಕೃಪೆ- www.artfire.com

Rating
No votes yet

Comments

Submitted by kavinagaraj Tue, 06/30/2015 - 09:10

'ಕೀ' ಪುರಾಣ ಸ್ವಾರಸ್ಯಕರವಾಗಿದೆ. ನನಗೆ ಸಂಬಂಧಿಸಿದ ಒಂದು ಕಹಿ ಅನುಭವವೂ ಇದರಿಂದ ನೆನಪಿಗೆ ಬಂದಿತು.

Submitted by santhosha shastry Thu, 07/16/2015 - 13:16

ರಶ್ಮಿಯವರೇ, ಲೇಖನ‌ ತುಂಬಾ ಚೆನ್ನಾಗಿದೆ. Key ಕೀ ಕಹಾನೀ ನಮ್ಮನ್ನೆಚ್ಚರದಿಂದಿರುವ‌ ಹಾಗೆ ಮಾಡಿತು.