ಕವನ : ರಾಧೆ ಏತಕೆ ನಕ್ಕೆ ಕರಿಮುಗಿಲ ಕಂಡು?
ಕವನ : ರಾಧೆ ಏತಕೆ ನಕ್ಕೆ ಕರಿಮುಗಿಲ ಕಂಡು?
ಮುಂಜಾವಿನೊಳು ರವಿಯ ಬಿಸಿಲ ತಾಪವ ತಣಿಸಿ,
ಭುವಿಕಾಯ್ದು ಹೊಗೆ ಹೊಮ್ಮಿತೆನೆ ಕಾಣ್ವ ಮೋಡಗಳ
ಮರೆಯಲ್ಲಿ ಕಂಡಿತೇ ಮೇಘ ಶ್ಯಾಮನ ರೂಪು ?
ರಾಧೆ ಏತಕೆ ನಕ್ಕೆ ಕರಿಮುಗಿಲ ಕಂಡು?
ಮಳೆಬಿಲ್ಲ ಬಣ್ಣದೊಳು ನವಿಲುಗರಿ ಕಂಡು.
ನೀಲದೇಹಿಯ ತನುವ ಆಗಸದಿ ಅಣಿಗೊಳಿಸಿ
ನೀರವತೆ ಕದಡುವಾ ಗೋಪಿಯರ ಕಣ್ಮರೆಸಿ
ತಾನಾಗಸದಳೊಂದು ಎಂಬ ಭಾವವ ಧರಿಸಿ
ಮೈಮರೆತು ನಸುನಗುವ ಹುಚ್ಚಿಯೆನ್ನಲೆ ನಿನ್ನ
ರಾಧೆಯೇತಕೆ ನಕ್ಕೆ ಕರಿಮುಗಿಲ ಕಂಡು?
ಮಳೆಬಿಲ್ಲ ಬಣ್ಣದೊಳು ನವಿಲುಗರಿ ಕಂಡು.
ಮಂಜು ಹರಡಿದ ಹುಲ್ಲ ಸವಿನೋಡುತೋಡುತಿಹ
ತುರುವಿನೆಳೆಗರುಗಳನು ಮನಸೆಳೆಯಲೆನೆ ಗೊಲ್ಲ
ಬಿದಿರಕೊಳಲನು ನುಡಿಸಿ ಅಡವಿಯೊಳು ನಲಿದಿಹನು.
ರಾಧೆ ಏತಕೆ ನಕ್ಕೆ ಕೊಳಲಿಂಪು ಕೇಳೆ?
ಗೋಗಳಾ ಕೊರಳೊರಲು ಮನತುಂಬಿ ಕೇಳೆ.
ಕಪ್ಪು ಮೋಡದ ಬಣ್ಣ ತನ್ನ ಹಿಂದಿರಲಿಂದು
ಕಂಗೊಳಿಸಿದವೆ ಬಿದಿರು ಹಳದಿ ಬಣ್ಣವ ಹೊತ್ತು.
ನೀಳ ಬಿದಿರಿನ ನಡುವೆ ಮಾಧವನ ಕರವಿರಿಸಿ
ಬಿದಿರಿನೊಂದೆಡೆಯಲ್ಲಿ ತುಟಿಯ ಕಲ್ಪಿಸಿ ಮನದಿ
ಮೈಮರೆತು ನಸುನಗುವ ಹುಚ್ಚಿಯೆನ್ನಲೆ ನಿನ್ನ
ರಾಧೆ ಏತಕೆ ನಕ್ಕೆ ಕೊಳಲಿಂಪು ಕೇಳೆ?
ಗೋಗಳಾ ಕೊರಳೊರಲು ಮನತುಂಬಿ ಕೇಳೆ.
ನಂದಗೋಕುಲ ಸೀಮೆ ಕಾನನದ ಅಂಚಿನಲಿ,
ಬಳುಕುತಾಡುವ ದೈವ ಯಮುನೆಯಾದಳೆ ಇಲ್ಲಿ?
ಜುಳುಜುಳನೆ ದನಿ ಹೊತ್ತು ಮಂದಗಮನದಿ ನದಿಯು
ಹರಿಯುತಿದೆ ಬಿಂಬಿಸುತ ವನರಾಶಿಯನು ಒಳಗೆ.
ರಾಧೆಯೇತಕೆ ನಕ್ಕೆ ವನತರಂಗಿಣಿ ಕಾಣೆ?
ಯಮುನೆಯಾ ತಟದಲಿನ ಗೊಲ್ಲಜನ ಕಾಣೆ.
Comments
ಉ: ಕವನ : ರಾಧೆ ಏತಕೆ ನಕ್ಕೆ ಕರಿಮುಗಿಲ ಕಂಡು?
ಏತಕ್ಕಾದರೂ ನಕ್ಕಿರಲಿ, ಅದರ ಹಿಂದೆ ಸುಂದರ ಆನಂದಾನುಭೂತಿ ಇರುತ್ತದೆ. ಅದೇನೆಂದು ತಿಳಿಯುವ ಕೃಷ್ಣನ ಕುತೂಹಲ ಚೆನ್ನಾಗಿ ಮೂಡಿಸಿರುವಿರಿ. ಅಭಿನಂದನೆಗಳು.
In reply to ಉ: ಕವನ : ರಾಧೆ ಏತಕೆ ನಕ್ಕೆ ಕರಿಮುಗಿಲ ಕಂಡು? by kavinagaraj
ಉ: ಕವನ : ರಾಧೆ ಏತಕೆ ನಕ್ಕೆ ಕರಿಮುಗಿಲ ಕಂಡು?
ಧನ್ಯವಾದ ನಾಗರಾಜ್, ಇದು 'ಗೋಪಿಕೆಯೊಬ್ಬಳ ಕುತೂಹಲ' ಎಂದು ಭಾವಿಸಿ ಇದನ್ನು ಬರೆದಿದ್ದೇನೆ...