ಕವಿರತ್ನ ಕಾಳಿದಾಸನಿಗೊಂದು ಭಾಮಿನಿ

ಕವಿರತ್ನ ಕಾಳಿದಾಸನಿಗೊಂದು ಭಾಮಿನಿ

 ವಿಚಿತ್ರವಾದ ತಲೆಬರಹ ಅಂತ ಅಂದ್ಕೂಂಡೇ ಇರ್ತೀರ ಗೊತ್ತು ಬಿಡಿ. ಅದಿರಲಿ. ಮೊದಲು ವಿಷಯಕ್ಕೇ ಬರ್ತೀನಿ.

 

ಕಾಳಿದಾಸ ಬರೆದಿದ್ದು ಏಳು ಕೃತಿಗಳು - ರಘು ವಂಶ ಮತ್ತೆ ಕುಮಾರ ಸಂಭವ ಅನ್ನೋ ಎರಡು ಮಹಾಕಾವ್ಯಗಳು. ಇದರಲ್ಲೂ ಕುಮಾರ ಸಂಭವವನ್ನು ಅವನು ಪೂರ್ತಿ ಮುಗಿಸಲೇ ಇಲ್ಲವಂತೆ. ಋತು ಸಂಹಾರ ಮತ್ತೆ ಮೇಘದೂತ ಎಂಬ ಎರಡು ಖಂಡಕಾವ್ಯಗಳು. ಮತ್ತೆ ಮಾಲವಿಕಾಗ್ನಿಮಿತ್ರ, ವಿಕ್ರಮೋರ್ವಶೀಯ, ಮತ್ತು ಅಭಿಜ್ಞಾನ ಶಾಕುಂತಲ ಎಂಬ ಮೂರು ನಾಟಕಗಳು. ಕಾಳಿದಾಸನ ಅತ್ಯುತ್ತಮ ಕೃತಿಯೆಂದೇ ಪರಿಗಣಿಸಿರುವ ಶಾಕುಂತಲ ನಾಟಕದಿಂದ, ವ್ಯಾಸರ ಮಹಾಭಾರತದಲ್ಲೊಂದು ಸಣ್ಣ ಕಥೆಯಾಗಿದ್ದ ದುಷ್ಯಂತ ಶಕುಂತಲೆಯ ಕಥೆ ಜನಜನಿತವಾಗಿಹೋಯಿತು!

 

೧೯೮೦ರ ಶತಕದಲ್ಲಿ ಬಂದ ಕನ್ನಡ ಚಲನಚಿತ್ರ ಕವಿರತ್ನ ಕಾಳಿದಾಸದಿಂದ ಕನ್ನಡಿಗರೆಲ್ಲ ಕವಿರತ್ನ ಕಾಳಿದಾಸ ಯಾರು ಅಂದರೆ, ಡಾ.ರಾಜ್ ಕುಮಾರ್ ಅಂತಲೇ ಉತ್ತರಿಸುವ ಹಾಗಾಯಿತು. ಅಷ್ಟು ಸೊಗಸಾಗಿ, ಕವಿ ಕಾಳಿದಾಸನ, ಮತ್ತೆ ಅವನ ನಾಟಕದ ನಾಯಕ ದುಷ್ಯಂತನಾಗಿ ಕನ್ನಡಿಗರ ಮನದಲ್ಲಿ ಅವರು ನಿಂತುಬಿಟ್ಟಿದ್ದಾರೆ ಅಂದರೆ ತಪ್ಪೇನಿಲ್ಲ; ಮೊದಮೊದಲು ಕಣ್ವಾಶ್ರಮಕ್ಕೆ ಬಂದ ದುಷ್ಯಂತ ಅಲ್ಲಿ ಸಖಿಯರಾದ  ಪ್ರಿಯಂವದೆ, ಮತ್ತು ಅನಸೂಯೆಯರ ಜೊತೆ ಸುಳಿದಾಡುತ್ತಿದ್ದ ಶಕುಂತಲೆಯನ್ನು ಕಾಣುತ್ತಾನೆ. ಅವಳ ಚೆಲುವಿಗೆ ಮಾರುಹೋಗಿ ಮರೆಯಲ್ಲೇ ನೋಡುತ್ತ ನಿಂತಿರುತ್ತಾನೆ.  ಆ ವೇಳೆಗೆ, ಜೇನುದುಂಬಿಯೊಂದು ಶಕುಂತಲೆಯ ಬೆನ್ನು ಹತ್ತಬೇಕೇ? ಕಾಪಾಡಿ, ಕಾಪಾಡಿ ಎಂದು ಶಕುಂತಲೆ ಕೂಗಲು, ಪ್ರಜೆಗಳನ್ನೆಲ್ಲ ರಕ್ಷಿಸಬೇಕಾದವನು ತಾನೇ ಅಲ್ಲವೇ ಎಂದು ದುಷ್ಯಂತ ಮುನ್ನುಗ್ಗುತ್ತಾನೆ. ಇನ್ನು ಮುಂದೆ ಆದದ್ದು ಸರ್ವವಿದಿತ.

 

ಸರಿ, ಇವೆಲ್ಲ ನಮಗೆ ಗೊತ್ತಿರುವ ಕಥೆಯೇ - ಮತ್ತೆ ಮತ್ತೆ ಯಾಕೆ ತಲೆ ಕೊರೀತಿದೀಯಾ ಅಂದಿರಾ? ಈ ಬಾರಿಯ ಪದ್ಯಪಾನದಲ್ಲಿ ಒಂದು ಕುತೂಹಲಕಾರಿಯಾದ ಪ್ರಶ್ನೆ ಇತ್ತು - ಏನಪ್ಪಾ ಅಂದರೆ - ಶಕುಂತಲೆ ದುಷ್ಯಂತರ ಮೊದಲ ಭೇಟಿಯ ಬಗ್ಗೆ ಒಂದು ಪದ್ಯ ಬರೆಯಿರಿ ಅಂತ - ಆದರೆ  ಈ ನಾಲ್ಕು ಪದಗಳನ್ನು ಬಳಸಲೇ ಬೇಕಂತೆ - ವಿಷ, ಶೂಲ, ಗಲ್ಲು, ಗನ್ನು! ಎಲ್ಲಾವೂ ಸಾವಿನ ದಾರಿಗಳೇ!

 

ಇದಕ್ಕೆ ಉತ್ತರವಾಗಿ,  ಸಾವಿನಿಂದ ಪ್ರೇಮದ ಕಡೆಗೆ ಬದಲಾಯಿಸುವಂತಹ ಒಂದು ಭಾಮಿನಿ, ನಾನು ಬರೆದದ್ದು ಹೀಗೆ:

 

ಗಲ್ಲು ಗೆಲ್ಲೆನುತಿರುವ ಹೆಜ್ಜೆಯ

ಹುಲ್ಲೆ ನಡಿಗೆಯ ಚೆಲುವೆ ತುರುಬಿನ

ಮಲ್ಲೆ ಹೂವಲೆ ಹುಡುಕಿ ಸವಿ ಷಟ್ಪದಿಯು ಬೆಂಬತ್ತೆ

ಬಲ್ಲಿದನು ದುಷ್ಯಂತ  ತಾ ಭರ-

ದಲ್ಲಿ ನುಗ್ಗುತ ಹಿರಿದು ಶೂಲವ

“ನಿಲ್ಲು ನೀ, ಹಿಗ್ಗನ್ನು ಕಳೆವರ ನಾನುಳಿಸೆ”ನೆಂದ !

 

-ಹಂಸಾನಂದಿ

 

ಕೊ: ಷಟ್ಪದಿ - ಆರುಕಾಲಿನ ಯಾವ ಕೀಟವಾದರೂ ಆಗಬಹುದಾದರೂ, ಸಾಧಾರಣವಾಗಿ ಜೇನುನೊಣವನ್ನೇ ಸೂಚಿಸುತ್ತೆ.

 

ಚಿತ್ರ ಕೃಪೆ: ರಾಜಾ ರವಿ ವರ್ಮ ಬರೆದ ಚಿತ್ರ, ದುಷ್ಯಂತನನ್ನು ಮತ್ತೆ ಮತ್ತೆ ಹಿಂದೆ ತಿರುಗೆ ನೋಡುತ್ತಿರುವ ಶಕುಂತಲೆ, ವಿಕಿಪಿಡಿಯಾದಿಂದ.

Rating
No votes yet

Comments