ಕಾಂಚೀಪುರದ ರಾಜಸಿಂಹೇಶ್ವರ, ಪಟ್ಟದಕಲ್ಲಿನ ವಿರೂಪಾಕ್ಷ ಮತ್ತು ಎಲ್ಲೋರದ ಕೈಲಾಸ
ಈ ಮೂರು ದೇವಾಲಯಗಳನ್ನು ಒಟ್ಟಿಗೆ ಹೇಳಿದ ಕಾರಣವೇನು ಎನ್ನುವಿರಾ? ಕಾಂಚಿಯ ಪಲ್ಲವರು, ಪಟ್ಟದಕಲ್ಲಿನ ಚಾಲುಕ್ಯರು, ಮತ್ತು ಎಲ್ಲೋರದ ರಾಷ್ಟ್ರಕೂಟರು ಪರಸ್ಪರ ಬದ್ಧವೈರಿಗಳಲ್ಲವೇ? ಹಾಗಾದರೆ ಈ ಮೂವರ ನಡುವಿನ ತಂತು ಏನು?
ಇಲ್ಲೇ ಇರುವುದು ಸ್ವಾರಸ್ಯ. ಬ್ರಿಟಿಶರು ಬರುವವರೆಗೆ ಭಾರತದಲ್ಲಿ ಒಂದುದೇಶವೆಂಬ ಭಾವನೆಯೇ ಇರಲಿಲ್ಲ ಎನ್ನುವವರಿದ್ದಾರೆ. ಆರ್ಯ-ದ್ರಾವಿಡ ಎಂಬ ವಿಂಗಡಣೆ ಮಾಡಿ, ಅಲ್ಲಿಗೂ ಇಲ್ಲಿಗೂ ಕೊಟ್ಟುಕೊಳ್ಳುವುದಿರಲಿಲ್ಲ, ಇದ್ದರೂ, ಅದು ಬೇಡ ಎನ್ನುವವರಿದ್ದಾರೆ. ನಿಜಸ್ಥಿತಿ ಏನೆಂದರೆ ರಾಜಕೀಯವಾಗಿ ನಮ್ಮ ದೇಶ ಹಲವಾರು ’ದೇಶ’ಗಳಾಗಿ ಭಾಗವಾಗಿದ್ದಿರಬಹುದು. ಹಲವು ದೇಶಭಾಷೆಗಳ ನಡುವೆಯೂ, ಬೇರೆ ಬೇರೆ ರಾಜರ ಆಳ್ವಿಕೆಗಳ ನಡುವೆಯೂ ಭಾರತ ಸಾಂಸ್ಕೃತಿಕವಾಗಿ ಅದು ಒಂದೇ ಆಗಿತ್ತು ಎನ್ನುವುದನ್ನು ಮನವರಿಕೆ ಮಾಡಲಿಕ್ಕೆ ನಮ್ಮ ಕಲಾಪ್ರಕಾರಗಳು, ಸಂಪ್ರದಾಯಗಳು ಒಳ್ಳೆ ಉದಾಹರಣೆ. ಅದಿಲ್ಲದೆ ಹೋದರೆ, ಕನ್ನಡಿಗ ಪುರಂದರ ದಾಸರು ಕರ್ನಾಟಕ (ದಾಕ್ಷಿಣಾತ್ಯ) ಸಂಗೀತದ ಪಿತಾಮಹರೆನ್ನಿಸಿಕೊಳ್ಳುತ್ತಿರಲಿಲ್ಲ. ಇನ್ನೊಬ್ಬ ಕನ್ನಡಿಗ ಗೋಪಾಲನಾಯಕ ಹಿಂದೂಸ್ತಾನಿ (ಉತ್ತರಾದಿ) ಸಂಗೀತದ ಮೂಲಪುರುಷರಲ್ಲೊಬ್ಬನೆನಿಸಿಕೊಳ್ಳುತ್ತಿರಲಿಲ್ಲ. ಒರಿಸ್ಸಾದ ಪುರಿ ದೇವಾಲಯದಲ್ಲಿ ಜಯದೇವನ ಅಷ್ಟಪದಿಗಳನ್ನು ಹಾಡಿ, ನರ್ತಿಸುವ ನರ್ತಕಿಯರು ಕರ್ನಾಟಕ ಸಂಗೀತದ ರಾಗಗಳನ್ನು ಉಪಯೋಗಿಸುತ್ತಿರಲಿಲ್ಲ. ಕೇರಳದ ಕೂಡಿಯಾಟ್ಟಂ ನಲ್ಲಿ ಸಂಸ್ಕೃತ ನಾಟಕಗಳ ಪ್ರದರ್ಶನವಾಗುತ್ತಿರಲಿಲ್ಲ! ಗಂಗೇ ಚ ಯಮುನೇ ಚೈವ ಗೋದಾವರೀ ಸರಸ್ವತೀ ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು ಅನ್ನುವ ಅರ್ಚಕರನ್ನು ಕಾಣಲಾಗುತ್ತಿರಲಿಲ್ಲ... ಇರಲಿ. ವಿಷಯ ಎಲ್ಲೆಲ್ಲಿಗೋ ಹೋಗುತ್ತಿದೆ ಎನ್ನುವಮೊದಲೆ ಇದಕ್ಕೆ ತಡೆ ಹಾಕುತ್ತೇನೆ!
ಈಗ ನಾನು ಹೇಳಿದ ಮೂರು ದೇವಾಲಯಗಳಿಗೂ, ಈಗ ಹೇಳಿದ ವಿಷಯಗಳಿಗಿಂತ ಹೆಚ್ಚಿನ, ಒಂದು ಮೂಲ ಎಳೆ ಇದೆ. ಅದರ ವಿಷಯ ಹೇಳೋಣವೆನ್ನಿಸಿತು. ಅದಕ್ಕೇ ಈ ಬರಹ.
ಪಲ್ಲವರ ಎರಡನೆಯ ನರಸಿಂಹವರ್ಮ (ಕ್ರಿ.ಶ. ೭೦೦- ೭೨೮) ಕಾಂಚೀಪುರದಲ್ಲಿ ಕೈಲಾಸನಾಥನಿಗೊಂದು ದೇವಾಲಯ ಕಟ್ಟಿಸಿದ. ಈ ರಾಜನಿಗೆ ರಾಜಸಿಂಹ ಎಂಬ ಬಿರುದೂ ಇತ್ತು. ಹಾಗಾಗಿ ಇದಕ್ಕೆ ರಾಜಸಿಂಹೇಶ್ವರ ಎಂದೂ ಕರೆಯಲಾಗುವ ವಾಡಿಕೆ ಇತ್ತು. ಇಲ್ಲಿ ಕೆಳಗಿದೆ ನೋಡಿ ಈ ದೇವಾಲಯ.
(ಚಿತ್ರ ಕೃಪೆ: www.tamilnation.org)
ಪಲ್ಲವರಿಗೂ ಚಾಲುಕ್ಯರಿಗೂ ಜಟಾಪಟಿ ಇದ್ದಿದ್ದೇ. ಇಮ್ಮಡಿ ಪುಲಿಕೇಶಿ ಕಾಂಚಿಯವರೆಗೆ ಹೋಗಿ, ಪಲ್ಲವರನ್ನು ಸೋಲಿಸಿದ್ದ. ಅದಕ್ಕೆ ಮಾರುತ್ತರವಾಗಿ, ಪಲ್ಲವ ನರಸಿಂಹ ವರ್ಮ ಪುಲಿಕೇಶಿಯ ಕಡೆ ದಿನಗಳಲ್ಲಿ (ಕ್ರಿ.ಶ.೬೪೩-ಕ್ರಿ.ಶ.೬೪೬ ) ಬಾದಾಮಿಯವರೆಗೂ ಹೋಗಿ, ಚಾಲುಕ್ಯರನ್ನು ಸೋಲಿಸಿ, ಅಲ್ಲಿನ ಕೋಟೆಯಲ್ಲಿ ಬಂಡೆಯ ಮೇಲೆ ತಾನು ವಾತಾಪಿಕೊಂಡನಾದೆನೆಂಬ ಹೆಮ್ಮೆಯ ತಮಿಳಿನಲ್ಲಿರುವ ಶಾಸನವನ್ನೂ ಬರೆಸಿದ. ನಂತರ ಚಾಲುಕ್ಯರು ಸ್ವಲ್ಪಕಾಲದ ನಂತರ ತಮ್ಮ ರಾಜ್ಯವನ್ನು ಮರಳಿ ಪಡೆದರು. ಅದು ಬೇರೆ ವಿಷಯ.
ಆದರೆ, ಚಾಲುಕ್ಯರ ರಾಜ್ಯದಲ್ಲಿ ಹಾಸು ಹೊಕ್ಕಾಗಿದ್ದ ಭಿತ್ತಿಚಿತ್ರಗಳು (mural, fresco) ಪಲ್ಲವರ ಮನದ ಭಿತ್ತಿಯಮೇಲೆ ಅಚ್ಚೊತ್ತಿರಬೇಕು. ಬಾದಾಮಿಯ ಗುಹೆಗಳಲ್ಲಿ ಇಂದಿಗೂ ಕೆಲವು ಭಿತ್ತಿಚಿತ್ರಗಳು ಕಂಡುಬರುತ್ತವೆ. ಇನ್ನು ಅಜಿಂಠಾದ (ಕಾಗುಣಿತ ತಪ್ಪಿಲ್ಲ - ಯಾವುದು ಅಜಂತಾ ಎಂದು ಪ್ರಖ್ಯಾತವಾಗಿದೆಯೋ, ಆ ಊರನ್ನು ಅಲ್ಲಿಯವರು ಕರೆಯುವುವು ಅಜಿಂಠಾ ಎಂದೇ!) ಗುಹೆಗಳಲ್ಲೂ ಕಾಣುವ ಪ್ರಸಿದ್ಧ ಚಿತ್ರಗಳಲ್ಲಿ ಹಲವು ಚಾಲುಕ್ಯ ರಾಜರು ಬರೆಯಿಸಿದ್ದೇ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.
ಈಗ ಇಲ್ಲಿ ಬಾದಾಮಿಯ ಗೋಡೆಯೊಂದರ ಮೇಲಿರುವ ಚಿತ್ರ ನೋಡಿ.
ಚಿತ್ರ ಕೃಪೆ: ಹಿಂದೂ ಪತ್ರಿಕೆಯೊಂದರ ಲೇಖನ - ಬಿನಯ ಕೆ. ಬೆಹಲ್ ಅವರು ತೆಗೆದಿರುವ ಛಾಯಾಚಿತ್ರ http://www.hinduonnet.com/fline/fl2121/stories/20041022000406400.htm
ಎರಡು ತಲೆಮಾರಿನ ನಂತರದ ರಾಜಸಿಂಹನ ಕಾಲದಲ್ಲೂ ಚಾಲುಕ್ಯರ ಕಲೆಯ ನೆನಪು ಹಸಿಯಾಗಿದ್ದಿರಬೇಕು. ಈಗ ಕೈಲಾಸನಾಥ ದೇವಾಲಯದ ಗೋಡೆಯ ಮೇಲಿನ ಚಿತ್ರವೊಂದನ್ನು ನೋಡಿ; ಬಣ್ಣಗಳ ಉಪಯೋಗ ಮತ್ತೆ ಶೈಲಿಯ ಹೋಲಿಕೆಗಳನ್ನು ಗಮನಿಸಿ:
ಚಿತ್ರ ಕೃಪೆ: ಹಿಂದೂ ಪತ್ರಿಕೆಯೊಂದರ ಲೇಖನ - ಬಿನಯ ಕೆ. ಬೆಹಲ್ ಅವರು ತೆಗೆದಿರುವ ಛಾಯಾಚಿತ್ರ http://www.hinduonnet.com/fline/fl2121/stories/20041022000406400.htm
ಇತಿಹಾಸ ಮರುಕಳಿಸುತ್ತೆ ಅನ್ನುವ ಮಾತಿದೆ. ಹಾಗೇ, ಇಲ್ಲೂ ಆಯಿತು. ಇಮ್ಮಡಿ ಪುಲಿಕೇಶಿಯ ನಂತರ ೨-೩ ತಲೆಮಾರಿನ ನಂತರದ ರಾಜ ಇಮ್ಮಡಿ ವಿಕ್ರಮಾದಿತ್ಯ. ಅವನು ಪಲ್ಲವರನ್ನು ಮತ್ತೆ ಸೋಲಿಸಿ, ಅವರ ರಾಜಧಾನಿ ಕಾಂಚಿಯನ್ನೂ ವಶ ಪಡಿಸಿಕೊಂಡು, ಅಲ್ಲಿನ ರಾಜಸಿಂಹೇಶ್ವರ ದೇವಾಲಯದಲ್ಲಿ ಕನ್ನಡ ಶಾಸನವೊಂದನ್ನು ಬರೆಯಿಸಿದ. ತಾವು ಗೆಲುವು ಪಡೆದಾಗಲೂ, ಕಾಂಚಿಯ ಸ್ಮಾರಕಗಳಿಗೆ, ಕಟ್ಟಡಗಳಿಗೆ ಯಾವರೀತಿಯ ಹಾನಿಯನ್ನೂ ಮಾಡಲಿಲ್ಲವೆಂದು ಅದರಲ್ಲಿ ಹೇಳಿದ್ದಾನೆ. ಕಾಂಚಿಯ ವಿಜಯದ ಸ್ಮಾರಕವಾಗಿ ತನ್ನ ರಾಜಧಾನಿಯ ಬಳಿಯ ಪಟ್ಟದ ಕಲ್ಲಿನಲ್ಲಿ, ತನ್ನ ಎರಡು ರಾಣಿಯರಾದ ಲೋಕಮಹಾದೇವಿ ಮತ್ತು ತ್ರಿಲೋಕಮಹಾದೇವಿಯರ ಹೆಸರಿನಲ್ಲಿ ದೇವಾಲಯಗಳನ್ನು ಕಟ್ಟಿಸಿದ. ಆ ವೇಳೆಗಾಗಲೆ, ಪಟ್ಟದಕಲ್ಲಿನಲ್ಲಿ ಹಲವು ಸಣ್ಣ ಪುಟ್ಟ ಗುಡಿಗಳಿದ್ದವು. ಎಲ್ಲಾ ರೀತಿಯ ಶಿಲ್ಪ ಶೈಲಿಗಳ ಪ್ರಯೋಗವೂ ಅಲ್ಲಿ ನಡೆದಿತ್ತು. ಈಗ ವಿಕ್ರಮಾದಿತ್ಯ ಕಟ್ಟಿಸಹೊರಟ ಗುಡಿಗಳನ್ನು ಲೋಕೇಶ್ವರ ಮತ್ತು ತ್ರೈಲೋಕೇಶ್ವರ ಎಂದು ಕರೆಯಲಾಯಿತು. ನಂತರದ ಕಾಲದಲ್ಲಿ ಇವೆರಡು ದೇವಸ್ಥಾನಗಳಿಗೆ ವಿರೂಪಾಕ್ಷ ಮತ್ತು ಸಂಗಮೇಶ್ವರ ಎಂಬ ಹೆಸರು ನೆಲೆಯಾಗಿದೆ.
(ಚಿತ್ರ ಕೃಪೆ: ವಿಕಿಪಿಡಿಯ , ಸುದರ್ಶನ್ ಭಟ್ ಖಂಡಿಗೆ ಅವರು ತೆಗೆದ ಚಿತ್ರ)
ಕಾಂಚಿಯ ಕೈಲಾಸನಾಥ ದೇವಾಲಯದಿಂದ ಪ್ರಭಾವಿತನಾದ ವಿಕ್ರಮಾದಿತ್ಯ ಅದೇ ಮಾದರಿಯಲ್ಲೇ ವಿರೂಪಾಕ್ಷ ದೇವಾಲಯವನ್ನು ನಿರ್ಮಿಸಿದ್ದಾನೆ. ಎರಡೂ ಚಿತ್ರಗಳನ್ನೂ, ವಿಮಾನಗಳನ್ನು (ಗರ್ಭಗುಡಿಯಮೇಲಿರುವ ಗೋಪುರ) ಗಮನಿಸಿ ನೋಡಿದರೆ ಇದು ಸುಲಭವಾಗಿ ಮನದಟ್ಟಾಗುತ್ತದೆ. ಪಟ್ಟದಕಲ್ಲಿನ ಗುಡಿಗಳ ಗುಂಪಿನಲ್ಲಿ ವಿರೂಪಾಕ್ಷ ಎಲ್ಲಕ್ಕಿಂತ ದೊಡ್ಡ ಗುಡಿ. ದೇವಾಲಯದ ಮುಂದೆ ನಂದಿ ಮಂಟಪವೂ ಇದೆ. ಇದೇ ಕರ್ನಾಟಕದ ಅತಿ ಹಳೆಯ ನಂದಿ ಇರಬಹುದು ಎಂದು ನನ್ನ ಊಹೆ - ಕ್ರಿ.ಶ. ೭೪೦ ರಲ್ಲಿ ಕಟ್ಟಲಾಗಿರುವ ಇದಕ್ಕಿಂತಲೂ ಹಳೆಯ ದೇವಾಲಯಗಳೇ ಕಡಿಮೆ ಇರುವಾಗ ಇದು ಸರಿ ಇರಲೂ ಬಹುದು. ಬನವಾಸಿಯ ಮಧುಕೇಶ್ವರನಲ್ಲಿ ನಂದಿ ಮಂಟಪ ಇಲ್ಲ ಎಂದು ನನ್ನ ನೆನಪು. ಸರಿಯಾಗಿ ತಿಳಿದಿದ್ದವರು ಬರೆಯಿರಿ.
ರಾಜರು, ರಾಜವಂಶಗಳು ಬರಬಹುದು ಹೋಗಬಹುದು. ಮುಂದಿನ ಪೀಳಿಗೆಗೆ ಅವರು ಕೊಟ್ಟಿರುವ ಇಂತಹ ಸ್ಮಾರಕಗಳಿಂದಲೇ ಅವರ ಹೆಸರು ಎಂದೆಂದಿಗೂ ನಿಲ್ಲುತ್ತದೆ. ಮುಕ್ಕಾಲುಪಾಲು ದಕ್ಷಿಣಭಾರತವನ್ನೆಲ್ಲ ತಮ್ಮಡಿಯಲ್ಲಿ ಆಳಿದ ಚಾಲುಕ್ಯರೂ ಕೊನೆಯಾದರು. ಅವರ ಜಾಗದಲ್ಲಿ ರಾಷ್ಟ್ರಕೂಟರು ನೆಲೆಯಾದರು. ಈ ವಂಶದ ಮೊದಲನೆ ಕೃಷ್ಣ, (ಶುಭತುಂಗ ಕೃಷ್ಣ, ಅಕಾಲವರ್ಷ, ಕನ್ನರ ಎಂಬ ಹೆಸರುಗಳೂ ಇದ್ದವು ಇವನಿಗೆ) ಏಲಾಪುರದಲ್ಲಿ, ಅಲ್ಲಿಯವರೆಗೆ ಯಾರೂ ಯೋಚಿಸಿಯೂ ಇಲ್ಲದಂತಹ ಏಕಶಿಲಾ ದೇವಾಲಯವನ್ನು ಯೋಜಿಸಿದ. ಆ ವೇಳೆಗಾಗಲೇ ಏಲಾಪುರಿಯಲ್ಲಿ (ಎಲ್ಲ್ಲೋರ ಎಂದು ಪ್ರಸಿಧ್ಹವಾಗಿರುವ ಈ ಊರಿಗೆ ಸ್ಥಳೀಯರು ವೇರೂಳ್ ಎಂದು ಕರೆಯುತ್ತಾರೆ) ಹಲವಾರು ಕಲ್ಲಿನಿಂದ ಕಟೆದು ಮಾಡಿದ ಗುಹಾದೇವಾಲಯಗಳಿದ್ದವು. ಕೃಷ್ಣನ ಯೋಜನೆ ಇವಕ್ಕಿಂತಲೂ ಮಹತ್ತಾಗಿತ್ತು. ಬೆಟ್ಟವೊಂದನ್ನು ಕಡಿದು, ಮೇಲಿನಿಂದ ಕಡೆಯುತ್ತಾ ಬಂದು ನಿರ್ಮಿಸುವ ಈ ಅಮೋಘ ಕಾರ್ಯು ಸುಮಾರು ಕ್ರಿ.ಶ.೭೭೦ರಲ್ಲಿ ಪ್ರಾರಂಭವಾಯಿತು. ಇದು ಪೂರ್ತಿಯಾದಾಗ ಇದರ ಸೊಬಗನ್ನು ಕಂಡ ಶಿವನೇ ಹಿಮಾಲಯದ ಕೈಲಾಸವನ್ನು ತೊರೆದು ಇಲ್ಲಿ ಬಂದು ನೆಲೆಯಾಗಿಬಿಟ್ಟ - ಅದಕ್ಕೇ ಇದಕ್ಕೆ ಕೈಲಾಸ ದೇವಾಲಯವೆಂದು ಹೆಸರೆಂದು ಶಾಸನವೊಂದು ವರ್ಣಿಸುತ್ತದೆ. ಇಂತಹ ಮಹಾನ್ ಕಲಾಕೃತಿಗೆ ಮಾತೃಕೆಯಾಗಿ ಕೃಷ್ಣ ಆಯ್ದದ್ದು, ಪಟ್ಟದಕಲ್ಲಿನ ವಿರೂಪಾಕ್ಷ ದೇವಾಲಯವನ್ನು. ಅದರ ಮೂಲ ನಕಾಶೆಯನ್ನೂ ಉಪಯೋಗಿಸಿ,ಹಿಗ್ಗಿಸಿ, ಎರಡಂತಸ್ತಿನ ದೇವಾಲಯವನ್ನಾಗಿಸಿ, ಮೇಲಿನ ತುದಿಯಿಂದ ಕೆತ್ತುತ್ತಾ ಕೆಳವರೆಗೆ ತಂದ ಆ ಶಿಲ್ಪಿಗಳ ಕಾರ್ಯಕ್ಷಮತೆಗೆ ಏನು ಹೇಳಿದರೂ ಸಾಲದು.
ಕೈಲಾಸ: ಮೇಲಿನಿಂದ ಕಂಡಂತೆ (ಚಿತ್ರ ಕೃಪೆ:http://www.cousinsmigrateurs.com/galeries/displayimage.php?album=40&pos=198&lang=english)
ಈ ದೇವಾಲಯದ ಗೋಡೆಗೋಡೆಗಳ ಮೇಲೆ ನೂರಾರು ಭಿತ್ತಿ ಚಿತ್ರಗಳಿದ್ದುದ್ದರಅ ಅವಶೇಷಗಳು ಈಗಲೂ ಕಾಣುತ್ತಿವೆ. ನಮ್ಮ ದುರಾದೃಷ್ಟಕ್ಕೆ ಯಾವುದೂ ಒಳ್ಳೆಯ ರಕ್ಷಿತ ಸ್ಥಿತಿಯಲ್ಲಿಲ್ಲ. ಈ ದೇವಾಲಯಕ್ಕೆ ಯಾವ ಚಿತ್ರವೂ ನ್ಯಾಯ ಒದಗಿಸವು ಎಂದು ನನ್ನ ಭಾವನೆ. ಆದರೂ, ಕಟ್ಟಡವನ್ನುಬೆಟ್ಟದ ಬದಿಯನ್ನು ಕಡಿದು, ಮಾಡಿರುವುದನ್ನು ಈ ಕೆಳಗಿನ ಚಿತ್ರ ತೋರಿಸುತ್ತದೆ.
(ಕೃಪೆ:http://www.cousinsmigrateurs.com/galeries/displayimage.php?album=40&pos=198&lang=english)
ಈ ಚಿತ್ರಗಳು ವಿರೂಪಾಕ್ಷ ಮತ್ತು ಕೈಲಾಸ ದೇವಾಲಯಗಳ ಹೋಲಿಕೆಯನ್ನು ತೋರಿಸುತ್ತವೆ ಎಂದುಕೊಂಡಿದ್ದೇನೆ. ನಾನು ಕಾಂಚೀಪುರಕ್ಕೆ ಹೋದಾಗ, ರಾಜಸಿಂಹೇಶ್ವರ ದೇವಾಲಯವನ್ನು ನೋಡದೇ ಬಂದದ್ದಕ್ಕಾಗಿ, ಈಗಲೂ ನನಗೆ ಬೇಸರವಿದೆ. ಆದರೆ, ಇನ್ನೆರಡನ್ನಾದರೂ ನೋಡಿದ್ದೀನಲ್ಲ ಎಂದು ಸಮಾಧಾನ ಪಟ್ಟುಕೊಳ್ಳುತ್ತೇನೆ.
-ಹಂಸಾನಂದಿ
Comments
ಉ: ಕಾಂಚೀಪುರದ ರಾಜಸಿಂಹೇಶ್ವರ, ಪಟ್ಟದಕಲ್ಲಿನ ವಿರೂಪಾಕ್ಷ ಮತ್ತು ಎಲ್ಲೋರದ ಕೈಲಾಸ
In reply to ಉ: ಕಾಂಚೀಪುರದ ರಾಜಸಿಂಹೇಶ್ವರ, ಪಟ್ಟದಕಲ್ಲಿನ ವಿರೂಪಾಕ್ಷ ಮತ್ತು ಎಲ್ಲೋರದ ಕೈಲಾಸ by shreekant.mishrikoti
ಉ: ಕಾಂಚೀಪುರದ ರಾಜಸಿಂಹೇಶ್ವರ, ಪಟ್ಟದಕಲ್ಲಿನ ವಿರೂಪಾಕ್ಷ ಮತ್ತು ಎಲ್ಲೋರದ ಕೈಲಾಸ
In reply to ಉ: ಕಾಂಚೀಪುರದ ರಾಜಸಿಂಹೇಶ್ವರ, ಪಟ್ಟದಕಲ್ಲಿನ ವಿರೂಪಾಕ್ಷ ಮತ್ತು ಎಲ್ಲೋರದ ಕೈಲಾಸ by hamsanandi
ಉ: ಕಾಂಚೀಪುರದ ರಾಜಸಿಂಹೇಶ್ವರ, ಪಟ್ಟದಕಲ್ಲಿನ ವಿರೂಪಾಕ್ಷ ಮತ್ತು ಎಲ್ಲೋರದ ಕೈಲಾಸ