ಕಾಡುಹಾದಿಯ ಕತೆಗಳು- ಇನ್ನೊಂದು ಜೋಗಿ ಪುಸ್ತಕ

ಕಾಡುಹಾದಿಯ ಕತೆಗಳು- ಇನ್ನೊಂದು ಜೋಗಿ ಪುಸ್ತಕ

ಜೋಗಿ ಅದ್ಭುತ ಕತೆಗಾರರು . ಜೋಗಿ ಕತೆಗಳನ್ನು ಓದಿ ಬಹಳ ಮೆಚ್ಚಿಕೊಂಡಿದ್ದೆ . ಈಗಿನ ಕಾಲಕ್ಕೆ ತಕ್ಕ ಹಾಗೆ ಒಂದೆರಡೇ ಪುಟಗಳ ಕತೆಗಳು ಅಲ್ಲಿ ಇದ್ದವು ( ಅಂದ ಹಾಗೆ ಮಯೂರದಲ್ಲೆಲ್ಲೋ -'ಕಾದಂಬರಿ ಯುಗದ ಕೊನೆಯಲ್ಲಿರುವ ನಮಗೆ ...' ಅಂತ ಏನೋ ಇತ್ತು . ಈಗ ಎಸೆಮ್ಮೆಸ್ ಯುಗದಲ್ಲಿ ಯಾರ್ಗೂ ಪುರ್ಸೊತ್ತೇ ಇಲ್ಲ . ಈಗ ಕಿರಿದರಲ್ಲೇ ಎಲ್ಲ ಹೇಳಬೇಕು . ಅಂದ ಹಾಗೆ 'ನಿಮ್ಮ ಮಕ್ಕಳು ಎಸ್ಸೆಮ್ಮೆಸ್ಸಿನಲ್ಲೇ ಆಳ್ತಾರಾ ? ಅಂತ ಎಲ್ಲೋ ಒಂದು ಬರಹ ನೋಡಿದ್ದೆ. ನಿಮಗೆ ಲಿಂಕ್ ಕೊಡೋಣಾಂದ್ರೆ ಸಿಗ್ತಿಲ್ಲ )

ಇತ್ತೀಚೆಗೆ ' ಕಾಡುಹಾದಿಯ ಕತೆಗಳು' ಓದಿದೆ. ಎಸ್ಸೆಮ್ಮೆಸ್ ಯುಗಕ್ಕೆ ತಕ್ಕ ಹಾಗೆ ಅವಸರದಲ್ಲಿ ಈ ಪುಸ್ತಕದ ಬಗ್ಗೆ ತಪ್ಪು ಅನಿಸಿಕೆ ತಿಳಿಸಿದ್ದೆ . ಈಗ ತಿದ್ಕೋತಿದೀನಿ ಈ ಬರಹದ ಮೂಲಕ.

ಇಲ್ಲಿರೋ ಒಂದು ಕತೆ ನೋಡಿ ...

ಸಂಜಯನಿಗೆ ಆತ್ಮಹತ್ಯೆ ಮಾಡಿಕೋಬೇಕಿತ್ತೋ ಇಲ್ಲವೋ ಆದರೆ ನಾವೆಲ್ಲ ಅವನ ಆಪ್ತ ಗೆಳೆಯರು ಅವನು ಸೂಸೈಡ್ ಮಾಡ್ಕೋಬೇಕೆಂದು ನಿರ್ಧರಿಸಿ ಆಗಿತ್ತು ... ನಮ್ಮಲ್ಲಿ ಒಬ್ಬರು ಅದಕ್ಕೊಂದು ವಿವರ ಯೋಜನೆಯನ್ನು ಮಾಡಿದರು .. ಆ ಪ್ರಕಾರ ಅವನ ಹೆಂಡತಿಯ ಒಪ್ಪಿಗೆ ಪಡಕೊಂಡೆವು . .... ಸಂಜಯನನ್ನೂ ಒಪ್ಪಿಸಿದೆವು .... ಸಣ್ಣ ಸಣ್ಣ ವಿವರವನ್ನೂ ಚಾಚೂ ತಪ್ಪದ ಹಾಗೆ ಅನುಷ್ಠಾನ ಮಾಡೀ .............
...............
,,,,,,
......
ಯಾವುದೇ ವಿಘ್ನಗಳಿಲ್ಲದೆ ಸಂಜಯ ಆತ್ಮಹತ್ಯೆ ಮಾಡಿಕೊಂಡ . ಎಲ್ಲವು ಎಷ್ಟು ಸುಖವಾಗಿ ನಡೆಯಿತೆಂದರೆ ಯಾವುದೇ ತೊಂದರೆಗಳು ಆಗಲಿಲ್ಲ .. ಡಾಕ್ಟರ್ ಪೋಲಿಸರು ಬಂದು ಹೋದರು.. ಪತ್ರಿಕೆಗಳಲ್ಲಿ ಶೃದ್ಧಾಂಜಲಿಯ ಜಾಹೀರಾತಿಗೆ ನಾವು ಐದು ಸಾವಿರ ಕೊಡಬೇಕಾಯಿತು. ಈ ವೆಚ್ಚದಿಂದಾಗಿ ಪತ್ರಿಕೆಗಳ ಜಾಹೀರಾತು ದರ ಎಷ್ಟು ದುಬಾರಿ ಆಗಿದೆ ಅನ್ನುವುದು ಅರಿವಾಗಿ ನಿಜಕ್ಕೂ ಅಚ್ಚರಿ ಆಯಿತು...

ಮಗದೊಂದು ಕತೆಯ ಭಾಗ - ಇದು ಪೂರ್ತಿ ಕತೆ ಅಂದ್ಕೊಂಡು ಓದಿ ..

"ಕಾಲಿಂಗ್ ಬೆಲ್ ಸದ್ದಾಗಿ ಶಂಕರ ಕಣ್ತೆರೆದ . ಅವನ ಎದೆಗೊರಗಿ ಮಲಗಿದ್ದ ಶಾರದೆ ಎದ್ದು ನೈಟಿ ಕೊಡವಿಕೊಂಡು ಹೋಗಿ ಬಾಗಿಲು ತೆರೆದಳು . ಶಂಕರನಿಗೆ ಎದೆ ನಡುಗತೊಡಗಿತು . ಮೈಯೆಲ್ಲ ಕಿವಿಯಾಗಿ ಕಾದ.
ಶಾರದೆ ಮಾತಾಡಿದ್ದು ಕೇಳಿಸಿತು..ಯಾವುದೇ ನಡುಕವಾಗಲೀ ಕಂಪನವಾಗಲೀ ಇಲ್ಲದ ಸಹಜ ಧ್ವನಿಯಲ್ಲಿ .
'ಯಾಕಮ್ಮ ಇಷ್ಟು ತಡ , ಯಾರ್ ಬಂದಿದ್ದಾರೆ ಗೊತ್ತೇನು?'
'ಯಾರೇ ?'
'ಶಂಕರಣ್ಣ'

ಇನ್ನೊಂದು ಕತೆಯಲ್ಲಿ ಒಬ್ಬರು ತಮ್ಮ ಮಗನ ಮನೆಗೆ ಇರಹೋದವರು ವಾಪಸ್ ಬಂದರೆ ಯಾಕೆ ಅವರು ಬಂದದ್ದು ಅಂತ ಒಬ್ಬೊಬ್ರು ಒಂದೊಂದ್ ಕತೆ ಹೇಳ್ತಾರೆ . ಕೊನೆಗೆ ಅವರಲ್ಲೊಬ್ರು ಈ ಬಗ್ಗೆ ಒಂದು ಕಿರುಗತೆ ಹೇಳ್ತಾರೆ. ಯಾವನೋ ಒಬ್ಬ ಬೆಟ್ಟದ ತುದಿಯಲ್ಲಿ ನಿಂತ್ಕೊಂಡದ್ದನ್ನ ನೋಡಿ ಒಬ್ಬ ' ಅವನು ಆತ್ಮಹತ್ಯೆ ಮಾಡ್ಕೊಳ್ಳೋಕೆ ಅಲ್ಲಿ ನಿಂತಿದ್ದಾನೆ ' ಅಂದ್ರೆ ಇನ್ನೊಬ್ಬ - 'ಇಲ್ರೀ , ಸೃಷ್ಟಿ ಸೌಂದರ್ಯ ಸವೀತಾ ಇದ್ದಾನೆ ' ಅಂತ್ಲೂ , ಮತ್ತೊಬ್ಬ 'ಅಲ್ಲವೇ ಅಲ್ಲ , ತನ್ನ ಲವರ್ಗಾಗಿ ಕಾಯ್ತಿದಾನೆ ' ಅಂತ್ಲೂ ಅಂದ್ಕೊಂಡು ಕೊನೆಗೆ ಅವನನ್ನೇ ಕೇಳೀದ್ರಾಯ್ತು ಅಂತ ಅವನ ಹತ್ತಿರ ಹೋಗಿ ಕೇಳಿದರೆ ಅವನು ಎಲ್ಲದಕ್ಕೂ 'ಇಲ್ವಲ್ಲ ?' ಅಂತಾನೆ . ಹಾಗಾದ್ರೆ ಇಲ್ಲಿ ನಿಂತ್ಕೊಂಡ್ ಏನಯ್ಯ ಮಾಡ್ತಿದೀ' ಅಂತ ಕೇಳಿದರೆ ಆತ ಹೇಳುತ್ತಾನೆ - ನಾನಿಲ್ಲಿ ನಿಂತಿದೀನಿ ಅಷ್ಟೇ.

ಇನ್ನೊಂದರಲ್ಲಿ- ಓ ಗಾಳಿ ಕಥೆಯನೊರೆದು ಮುಂದಕೆ ಸಾಗು- ಜೋಗಿ ಹೀಗೆ ಹೇಳುತ್ತಾರೆ ...
ಗಾಳಿ ಹೇಳುವ ಕತೆ ನಿಜ ಇದ್ರೂ ಇದ್ದೀತು, ಸುಳ್ಳಿದ್ದರೂ ಇದ್ದೀತು . ಗಾಳಿಗೆ ನಮ್ಮ ನಿಮ್ಮ ಹಾಗೆ ಮಾನವೀಯ ಮೌಲ್ಯಗಳು , ತಪ್ಪುಸರಿಯ ಕಲ್ಪನೆ ಇಲ್ಲದಿರುವುದರಿಂದ ಅದು ಬರೀ ಕತೆಯನ್ನಷ್ಟೇ ಹೇಳುತ್ತದೆ, ತನ್ನ ಅನುಭವ ಹೇಳಿ , ಅದನ್ನೂ ಸೇರಿಸಿ ಕತೆಯನ್ನು ಶ್ರೇಷ್ಠವಾಗಿಯೋ , ಹೃದಯವಿದ್ರಾವಕವಾಗಿಯೋ ರಂಜನೀಯವೋ ಆಗಿಸಲು ಪ್ರಯತ್ನಿಸುವುದಿಲ್ಲ ...
ನೀವೂ ಹಾಗೇ ಕೇಳಿ , ಕಿವಿಗೊಡಿ .. ಗಾಳಿ ಕತೆ ಹೇಳಿದರೆ ಅದನ್ನು ಹಾಗೇ ನಮಗೆಲ್ಲ ತಿಳಿಸಿ , ಗಾಳಿಯ ಹಾಗೆ ನಿರಮ್ಮಳವಾಗಿ ... ನಿರಾವಲಂಬಿಯಾಗಿ ....
ಕತೆ ಹೇಳಿ ತೆರಳಿ, ಕಾಯದೇ ... ಪ್ರತಿಕ್ರಿಯೆಗೆ , ಮೆಚ್ಚುಗೆಗೆ , ಅನುಕಂಪಕ್ಕೆ ...........

ಈ ಪುಸ್ತಕದ ಬಗ್ಗೆ ಇನ್ನೊಂದೆರಡು ಮಾತು ಹೇಳುವದಿದೆ ... ಮುಂದಿನ ಬ್ಲಾಗಲ್ಲಿ ಹೇಳುವೆ....

Rating
No votes yet

Comments