ಕಾಣದ ಕನಸು
ಕನಸಿನಲು ಇನಿಯನನೆ ಕಾಂಬ ಪೆಣ್ಗಳೆ ನಿಜದ
ಪುಣ್ಯವನುಗೈದವರು! ಸಂದೇಹವೇಕೆ?
ಅವನನ್ನು ನೋಡದೆಯೆ ನಿದ್ದೆಯೇ ಬರದಿರುವ
ನನ್ನ ಕಂಗಳಿಗಿನ್ನು ಕನಸು ಕಾಣುವುದುಂಟೆ?
ಮಹಾರಾಷ್ಟ್ರೀ (ಪ್ರಾಕೃತ) ಮೂಲ: ಹಾಲನ ಗಾಹಾಸತ್ತಸಇ, ೪- ೯೭):
ಧಣ್ಣಾ ತಾ ಮಹಿಲಾಓ ಜಾ ದಇಅಂ ಸಿವಿಣಏ ಪೇಚ್ಛಂತಿ
ಣಿದ್ದವ್ವಿವ ತೇಣ ವಿಣಾ ಣಏತಿ ಕಾ ಪೇಚ್ಛಏ ಸಿವಿಣಂ
ಸಂಸ್ಕೃತಾನುವಾದ: ನಿರ್ಣಯ ಸಾಗರ ಮುದ್ರಣಾಲಯದ ಟೀಕೆಯಿಂದ:
ಧನ್ಯಾಸ್ತಾ ಮಹಿಲಾ ಯಾ ದಯಿತಂ ಸ್ವಪ್ನೇಪಿ ಪ್ರೇಕ್ಷ್ಯಂತೇ |
ನಿದ್ರೈವ ತೇನ ವಿನಾ ನೈತಿ ಕಾ ಪ್ರೇಕ್ಷತೇ ಸ್ವಪ್ನಂ ||
-ಹಂಸಾನಂದಿ
ಕೊ: ಚೌಪದಿಯಾಗಿ ಹೊಂದಿಸಲು ಮೂಲದಲ್ಲಿ ಇಲ್ಲದ ಕೆಲವು ಪದಗಳನ್ನು ( ಸಂದೇಹವೇಕೆ, ಎಂಬ ಮಾತು ಮೂಲದಲ್ಲಿಲ್ಲ) - ಬಳಸಿದ್ದೇನೆ. ಅದರಿಂದ ಪದ್ಯದ ಒಟ್ಟಾರೆ ಭಾವಕ್ಕೆ ಕುಂದಾಗಿಲ್ಲವೆಂದು ಭಾವಿಸಿರುವೆ.
ಕೊ.ಕೊ: ಸಂಸ್ಕೃತದ ಹಲವು ಪದಗಳು ಸ್ವಲ್ಪ ಬದಲಾವಣೆ ಹೊಂದಿ ಕನ್ನಡದಲ್ಲಿ ದಿನಬಳಕೆಯಲ್ಲಿರುವುದು ಸರಿಯಷ್ಟೆ. ಹಲವು ಬಾರಿ ಅವು ನೇರವಾಗಿ ಬರದೇ, ಪ್ರಾಕೃತದಿಂದ ಬಂದಿರುತ್ತವೆ. ಉದಾಗರಣೆಗೆ , ನಿದ್ರಾ ಎಂಬ ಪದವು, ಕನ್ನಡದಲ್ಲಿ ನಿದ್ರೆ, ನಿದ್ದೆ ಎಂಬ ಎರಡೂ ರೀತಿಯಲ್ಲಿ ಬಳಕೆಯಲ್ಲಿದೆ. ಆಕಾರ ದಿಂದ ಮುಗಿಯುವ ಸಂಸ್ಕೃತ ಪದಗಳು ಎ ಕಾರದಿಂದ ಕನ್ನಡದಲ್ಲಿ ಬದಲಾಗುವುದು ಸಾಮಾನ್ಯ ರೀತಿ ( ಸೀತಾ -> ಸೀತೆ, ಕವಿತಾ -> ಕವಿತೆ, ಲತಾ -> ಲತೆ, ವನಿತಾ -> ವನಿತೆ), ಆದರೆ ನಿದ್ರಾ ಎಂಬುದು ನಿದ್ರೆ ಆಗಿರುವುದು ಸರಿಯೇ. ಹಾಗಿದ್ದಲ್ಲಿ ನಿದ್ದೆ ಯಾಕಾಯ್ತು? ಅದಕ್ಕೆ ನಾವಿಲ್ಲಿ ನೋಡುವ "ಣಿದ್ದ" ಎಂದ ಪ್ರಾಕೃತ ಪದವು ಮೂಲವಾಗಿರುವ ಸಾಧ್ಯತೆ ಹೆಚ್ಚು.
ಚಿತ್ರ ಕೃಪೆ: ವಿರಹೋತ್ಕಂಠಿತೆ ನಾಯಕಿ, ಕಿಶನ್ ಗಂಜ್ ಶೈಲಿಯ ಸಾಂಪ್ರದಾಯಿಕ ವರ್ಣಚಿತ್ರ ; ಈ ಕೆಳಗಿನ ಜಾಲತಾಣದಿಂದ ತೆಗೆದುಕೊಂಡದ್ದು - http://triveda.in/event-gallery-details.php?event_id=1