ಕಾಮಣ್ಣನ ಮಕ್ಕಳು...

ಕಾಮಣ್ಣನ ಮಕ್ಕಳು...

ಕಾಮಣ್ಣನ ಮಕ್ಕಳು, ಕಳ್ಳ ಸುಳ್ಳ(/ಸೂ..) ಮಕ್ಕಳು… ಹೋಳಿ ಹುಣ್ಣಿಮೆ ಬಂದರೆ ಸಾಕು ಇದೇ ಸ್ಲೋಗನ್ ಅಲ್ಲವೆ ಮೊದಲೆಲ್ಲ? ಹೋಳಿ ಹುಣ್ಣಿಮೆ, ಕಾಮ ದಹನ, ಅದಕ್ಕಾಗಿ ಕುಳ್ಳು ಕಟ್ಟಿಗೆ ಕಳವು ಮಾಡುವದು. ಅದರ ಜೊತೆಗೆ ಅವತ್ತು ಬಾಯಿಗೆ ಬಂದ ಬಯ್ಗಳೆಲ್ಲ ಯಥೇಚ್ಛೆ ಹೇಳಿ ಬಾಯಿ ಶುದ್ಧಿ ಮಾಡಿಕೊಳ್ಳುವದೂ ಒಂದು ಸಂಪ್ರದಾಯ!! ಹಿಂದೆ ಹುಡುಗುತನದಲ್ಲಿ ಹೇಗೋ ಇವತ್ತೂ ನನಗೆ ಆ ಬಯ್ಗಳುಗಳನ್ನು ಬಾಯಲ್ಲಿ ಹೇಳಲಾಗುವದಿಲ್ಲ. ಹಾಗೆ ಹೇಳುತ್ತಿದ್ದವರನ್ನು ನೋಡಿದರೆ ಆಶ್ಚರ್ಯ ಆಘಾತಗಳು ಒಟ್ಟೊಟ್ಟಿಗೆ ಆಗಿದ್ದಿದೆ ಮೊದಲು. ಕಾಮ ದಹನದ್ದೊಂದು ಕತೆ ಆದರೆ ಓಕುಳಿ ಕತೆ ಇನ್ನೊಂದು. ಮನೆ ಮನೆಗೆ ಹೋಗಿ ಒಳಗೆಲ್ಲ ಅವಿತುಕೊಂಡವರನ್ನ ಹೊರಗೆ ಎಳೆದು ಅಡಿಯಿಂದ ಮುಡಿ ತನಕ ಬಣ್ಣದ ನೀರಿನ ಅಭಿಷೇಕ ಮಾಡ್ತಿದ್ದರು. ಅದಾದ ಮೇಲೆ ಮತ್ತೊಂದು ರೌಂಡ್ ಹೊಯ್ಕೊಳ್ಳೋದು, ಕೇಕೆ ಹಾಕೋದು, ಎಲ್ಲ! ಅದಾದ ಮೇಲೆ ಎರಡು ಮೂರು ದಿನಾ ಆದರೂ ಬಣ್ಣ ಹೋಗದೇ ಇರೋದಕ್ಕೋ ಅಥವಾ ಕೆಲವರು ಸಾಮಾನ್ಯ ಬಣ್ಣ ಹಚ್ಚದೆ ವಾರ್ನಿಸ್ ಹಚ್ಚಲು ಶುರು ಮಾಡಿದ್ದಕ್ಕೋ ಒಟ್ಟಿನಲ್ಲಿ ನನಗೆ ಬಣ್ಣ ಆಡುವದು ಅಷ್ಟು ಹಿಡಿಸುತ್ತಿರಲಿಲ್ಲ. ಆದರೂ ಇಂಜಿನಿಯರಿಂಗಿನಲ್ಲಿದ್ದಾಗ ಮೊದಲ ವರ್ಷ ಹಾಸ್ಟೇಲ್ ಮುಂದಿನ ಕಾರಂಜಿ ರಂಗಾಗುವ ತನಕ ಬಣ್ಣ ಆಡಿದ್ದೆ. ಅದಾದ ಮೇಲೆ ಮುಂದಿನ ಮೂರು ವರ್ಷ ಬಣ್ಣ ಹಾಕೋವ್ರಿಂದ ತಪ್ಪಿಸಿಕೊಳ್ಲಿಕ್ಕೆ ಲೈಬ್ರರಿಯಲ್ಲಿ ಇಡೀ ದಿನ ಕಳೆದದ್ದೂ ಹೌದು!  ಎಷ್ಟೋ ವರ್ಷಗಳ ಮೇಲೆ ಈ ಬಾರಿ ಮತ್ತೆ ನೆನಪಾಯ್ತು ಎಲ್ಲ.

ಹೋಳಿ ಹುಣ್ಣಿಮೆ  ಕುರಿತು ೩ ಕತೆಗಳಿವೆ. ನೀವೂ ಕೇಳಿದ್ದೀರಾ ?

ಮೊದಲನೇದ್ದು ಶಿವ ಅನಲಾಕ್ಷನಾಗಿ ಕಾಮನನ್ನು ಸುಟ್ಟು ಹಾಕಿದ ಕತೆ. ತಾನು ಸುಟ್ಟು ಹೋದರೂ ತನ್ನ ಕೆಲಸ ಮಾಡಿದ್ದ ಕಾಮ. ಶಿವ ಪಾರ್ವತಿಯಲ್ಲಿ ಅನುರಕ್ತನಾದ. ಅದೇ ಶಿವ-ಶಿವೆಯರಲ್ಲಿ ಮತ್ತೆ ಹುಟ್ಟಿ ಬರುತ್ತಾನೆ ಕಾಮ ಸ್ಕಂದನಾಗಿ. ಅಷ್ಟೇ ಅಲ್ಲದೆ ಅದೇ ಶಿವನ ಕುರಿತು ತಪಸ್ಸು ಮಾಡಿದ ಕೃಷ್ಣನ ಮಗನಾಗಿಯೂ ಹುಟ್ಟಿ ಬರುತ್ತಾನೆ. ಮೊದಲು ಸುಡುವದು ಮತ್ತೆ ಹುಟ್ಟಿಸುವದು ಏನು ಕತೆಯೋ :) .

ಎರಡನೆ ಕತೆ ಹೋಲಿಕಾ ದಹನದ್ದು. ಹಿರಣ್ಯ ಕಶಿಪುವಿನ ತಂಗಿಯಂತೆ ಹೋಲಿಕಾ ಎನ್ನುವವಳು. ಬಾಲಕ ಪ್ರಹ್ಲಾದನ ಹರಿ ಭಕ್ತಿಯಿಂದ ಸಿಟ್ಟಿಗೆದ್ದ ಹಿರಣ್ಯಕಶಿಪು ಅವನನ್ನು ಕೊಲ್ಲಿಸಿಬಿಡುವ ಪ್ರಯತ್ನಿಸುತ್ತಿದ್ದನಲ್ಲವೆ? ಆಗ ಈ ಹೋಲಿಕಾ ತನ್ನ ತೊಡೆಯ ಮೇಲೆ ಪ್ರಹ್ಲಾದನನ್ನು ಕೂಡಿಸಿಕೊಂಡು ಅವನನ್ನು ಸುಡಲು ಹೋಗಿ ತಾನೇ ಸುಟ್ಟು ಹೋಗುತ್ತಾಳಂತೆ. ಹೋಲಿಕಾ ದಹನದ ಬಗ್ಗೆ ಕೇಳಿದ್ದೆ ಆದರೆ ಕತೆ ಗೊತ್ತಿರಲಿಲ್ಲ. ಇತ್ತೀಚೆಗೆ ಮೇಲಿಂಗ್ ಲಿಸ್ಟ್ ಒಂದರಲ್ಲಿ ನೋಡಿದೆ ಈ ಕತೆಯನ್ನ.

ಅದೇ ಇ-ಮೇಲ್ ಲಿಸ್ಟಲ್ಲಿ ಬಂದದ್ದು ಮೂರನೇ ಕತೆ, ಅದು ದುಂಡಾ ಎನ್ನುವ ರಾಕ್ಷಸಿಯದ್ದು. ದುಂಡಾ ಎನ್ನುವ ರಾಕ್ಷಸಿ ಮಕ್ಕಳನ್ನು ಪೀಡಿಸುತ್ತಿರುತ್ತಾಳಂತೆ. ಅವಳ ವಧೆಗೆ ನಾರದರು ಹಾಕಿದ ಪ್ಲಾನನ್ನ ಎಕ್ಸಿಕ್ಯೂಟ್ ಮಾಡಿದ್ದು ರಘು ಮಹರಾಜ.  ಅವನು ಮಕ್ಕಳನ್ನು ಮುಂದಿಟ್ಟುಕೊಂಡು ಆ ರಾಕ್ಷಸಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲ್ಲುತ್ತಾನಂತೆ.  ಹೋಳಿ ಹುಣ್ಣಿಮೆಗೂ ಬಾಯ್ತುಂಬಾ ಬಯ್ಗಳು ಹೇಳಿ ಹೊಯ್ಕೊಳ್ಳೋದಕ್ಕು ಸಂಬಂಧ ಈ ಕತೆಯಿಂದ ಬಂದಿರಬೇಕು ಅನಿಸುತ್ತದೆ. ಇದರ ಪೂರ್ತಿ ಕತೆ ಯಾರಿಗಾದರೂ ಗೊತ್ತಿದ್ದರೆ ತಿಳಿಸಿ.

ಕಡೆಯದಾಗಿ ಆನಂದಕಂದರ ‘ಕಾಮದಹನ’ ಎನ್ನುವ ಕವಿತೆಯ (ಉತ್ಸಾಹಗಾಥಾ ಸಂಕಲನದಿಂದ) ಸಾಲುಗಳೊಡನೆ,

        ಕಾಮದಹನ

    ‘ಕಾಮನ ಜಯಿಸಿದೆ, ಕಾಮನ ದಹಿಸಿದೆ!’
          ಎಂದುಗ್ಗಡಿಸಿದ ಮುಕ್ಕಣ್ಣ,
    ‘ಮುಂದೆ ನನ್ನ ಗತಿಯೇನು ?’ ಎನುತಲೊಂ-
         ದಿದಳು ಸೃಷ್ಟಿ ಭೀತಿಯ ಬಣ್ಣ!

    ಕಾಮನನ್ನು ಸುಟ್ಟುರಿದ ಯೋಗಿವರ
         ಮುಚ್ಚಿದ ಕಣ್ಣುಗಳ ಬಿಚ್ಚಿದನು–
    ಮುಂಗಡೆಯೊಳೆ ನಿಂದಿರುವಾ ಗೌರಿಯ
         ಹರಯದ ಚೆಲುವನು ನೋಡಿದನು!

    ಕಾಮನ ದಹಿಸಿದ ತಪ್ಪೆಂತಹುದದು —
        ಯೋಗೀಶ್ವರನಿಗೆ ಗೊತ್ತಾಯ್ತು….
    ಕಾಮನಿರದ ಹೆಣ್ಗಂಡಿನ ಬಾಳಲಿ
        ಹುರುಳೇನಿದೆ - ಎಂಬರಿವಾಯ್ತು!

    ‘ಬಾರೈ ಕಾಮಾ, ಪ್ರೇಮಸುಧಾಮಾ—
        ಎಂದು ಕೂಗಿದನು ಹೃದಯದಲಿ….
    ಕುಸುಮ ಬಾಣಗಳನೆಸೆಯುತ ಕಾಮನು
        ಮೈದೋರಿದನಲ್ಲಿಯೆ ಮರಳಿ!

    ಸೃಷ್ಟಿ ದೇವತೆಯ ಭೀತಿಯು ಬೀತುದು
         ಮುಖದೊಳಗಾಡಿತು ಮುಗುಳು ನಗೆ;
    ಮಲ್ಲಿಗೆ ಅರಳಿತು, ಮಾಮರ ಕೆರಳಿತು,
         ಉಲ್ಲಸ ಮೆರೆಯಿತು ಜಗದೊಳಗೆ.

 ಎಲ್ಲರಿಗೂ ಹೋಳಿ ಹುಣ್ಣಿಮೆಯ ಶುಭಾಶಯಗಳು (ಸ್ವಲ್ಪ ತಡವಾಗಿ ಆದರೂ). ಓಕುಳಿ ರಂಗಿನ ಬದಲು ಸೂರ್ಯಾಸ್ತದ ರಂಗಿನ ಚಿತ್ರವೊಂದು (ಇತ್ತೀಚೆಗೆ ಸಾಲ್ವಾಂಗಿಗೆ ಹೋದಾಗ ತೆಗೆದದ್ದು).

Rating
No votes yet

Comments