ಕಾಯುವ ಕಾಯಕ

ಕಾಯುವ ಕಾಯಕ

ಆಶೀರ್ವಾದಂ ಎನ್ನುವವರು ತಮಿಳಿನಲ್ಲಿ ಹಲವಾರು ವರ್ಷಗಳ ಕೆಳಗೆ (1974-75ರ ನಡುವಿನ ಸಮಯ ಇರಬಹುದು) ಬರೆದ ಒಂದು ಕವನ ಈಗ ನನಗೆ ಸಿಕ್ಕಿತು. ಓದಿದಾಗ ನನಗೆ ಚೆನ್ನಾಗಿದೆ ಎನ್ನಿಸಿತು. ಅದರ ಭಾವಾನುವಾದವನ್ನು ಇಲ್ಲಿ ಕಳಿಸಿದ್ದೇನೆ. ತಮಗೆಲ್ಲಾ ಏನನ್ನಿಸುವುದೋ ತಿಳಿಸಿ.
ಕಾಯುವ ಕಾಯಕ
ಹಲವಾರು ಹಲವಾರು ಹಲವಾರು
ಹಲಕೋಟಿ ವರುಷಗಳು
ಕಾದಾಗ ಕಡಲಡಿಯ ಕಲ್ಲು ತೇದು
ದಡದ ಮಣ್ಣಿನ ಜನನವಾಯಿತು.
ಹಲವಾರು ಹಲವಾರು ಹಲವಾರು
ಹಲಕೋಟಿ ವರುಷಗಳು
ಕಾದಾಗ ಏಕಾಣು ಜೀವಿಗಳು ಜನಿಸಿ
ಪಾಚಿಗಳ ಜನನವಾಯಿತು
ಹಲವಾರು ಹಲವಾರು ಹಲವಾರು
ಹಲಕೋಟಿ ವರುಷಗಳು
ಕಾದಾಗ ನೆಲ ಜೀವಿಗಳು
ಅಂಬೆಗಾಲಿಕ್ಕಿ ನಿಂತು ನಡೆದು
ಮಾನವ ಕುಲದ ಜನನವಾಯಿತು
ಈಗ ಇನ್ನೂ..........
ಮಾನವನ ಅಂತರಂಗದಲಿ
ಮಾನವೀಯತೆಯ ಜನನಕಾಗಿ
ಮರುಭೂಮಿಯಾಗಿಹ ಹೃದಯದಲ್ಲಿ
ಹಸಿತನದ ಜನನಕಾಗಿ
ಕ್ರೌರ್ಯ ತುಂಬಿಹ ಮನದಲ್ಲಿ
ಕರುಣೆಯ ಜನನಕಾಗಿ
ದ್ವೇಷಾಸೂಯೆಗಳೆಡೆಯಲ್ಲಿ
ಪ್ರೀತಿಸೆಲೆಯ ಜನನಕಾಗಿ
ಹಲವಾರು ಹಲವಾರು ಹಲವಾರು
ಹಲಕೋಟಿ ವರುಷಗಳೇ
ಕಾಯಬೇಕೇನೋ
ಕಾದರೂ ಸಿಗುವ ಭರವಸೆಯುಂಟೆ?

Rating
No votes yet

Comments