ಕಾರ್ಗತ್ತಲು = ಭಾಗ 1
ಎಲ್ಲೆಡೆ ಘೋರವಾದ ಕತ್ತಲು ತುಂಬಿದೆ. ಎದುರಿಗಿದ್ದ ವ್ಯಕ್ತಿ ಕಾಣಿಸದಷ್ಟು ಕತ್ತಲು ಆವರಿಸಿದೆ..
ಒಂದೆಡೆ ಕತ್ತಲು...ಮತ್ತೊಂದೆಡೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆ...ನಿಂತರೆ ಹಾರಿ ಹೋಗುವಷ್ಟು ಬಿರುಗಾಳಿ ಬೀಸುತ್ತಿದೆ...
ಆ ಸಮಯದಲ್ಲಿ ಪಾಳು ಬಿದ್ದಿರುವ ಲೀಲಾ ಮಹಲ್ ನಿಂದ ರಾಜೇಶ್ ಹೆದರಿಕೊಂಡು ಓಡೋಡಿ ಬರುತ್ತಿದ್ದಾನೆ...ಏದುಸಿರು ಬಿಟ್ಟುಕೊಂಡು ಓಡುತ್ತಿದ್ದಾನೆ.ಹಿಂದೆಯೇ ಅಸ್ಪಷ್ಟವಾದ ಆಕೃತಿಯೊಂದು ರಾಜೇಶ್ ನನ್ನು ಅಟ್ಟಿಸಿಕೊಂಡು ಬರುತ್ತಿದೆ. ರಾಜೇಶ್ ಓಡಿ ಓಡಿ ಮೈಯೆಲ್ಲಾ ಬೆವರಿನಿಂದ ಒದ್ದೆ ಆಗಿದೆ..ಅಷ್ಟರಲ್ಲಿ ಜೋರಾಗಿ ಸಿಡಿಲೊಂದು ಬಡಿದು ರಾಜೇಶ್ ಓದುತ್ತಿದ್ದ ದಾರಿಯಲ್ಲಿ ಅವನಿಗೆ ಸರಿಯಾಗಿ ಎದುರಿಗಿದ್ದ ಮರ ಬೆಂಕಿ ಹೊತ್ತಿಕೊಂಡು ರಸ್ತೆಗೆ ಅಡ್ಡಲಾಗಿ ಬಿದ್ದು ಬಿಟ್ಟಿದೆ.
ವೇಗವಾಗಿ ಓಡುತ್ತಿದ್ದ ರಾಜೇಶ್ ದಿಡೀರನೆ ಮರ ಬಿದ್ದಿದ್ದರಿಂದ ಗಕ್ಕನೆ ನಿಂತು ಹಿಂತಿರುಗಿದ. ಅಷ್ಟರಲ್ಲಿ ಆ ಅಸ್ಪಷ್ಟ ಆಕೃತಿ ರಾಜೇಶ್ ಗೆ ಇನ್ನಷ್ಟು ಹತ್ತಿರವಾಗಿತ್ತು. ಹತ್ತಿರವಾದಂತೆ ಆ ಅಸ್ಪಷ್ಟ ಆಕೃತಿ ಸ್ಪಷ್ಟವಾಗಿ ಕಾಣುತ್ತಿದೆ. ಕೆಂಡದಂತೆ ಹೊಳೆಯುತ್ತಿರುವ ಕಣ್ಣುಗಳು, ಬಾಯಲ್ಲಿ ಎರಡು ಕೋರೆ ಹಲ್ಲುಗಳು, ಉದ್ದನೆಯ ಕೂದಲು ವಿಕಾರವಾದ ಮುಖತನ್ನ ಎರಡೂ ಕೈಗಳನ್ನು ರಾಜೇಶ್ ನ ಕುತ್ತಿಗೆಯ ಬಳಿ ತರುತ್ತಿದೆ.ಅಷ್ಟರಲ್ಲಿ...
ಕಟ್...ಕಟ್....ಶಾಟ್ ಓಕೆ...ವೆರಿ ಗುಡ್ ಮದನ್....ಸೂಪರ್ ಎಕ್ಷ್ಪ್ರೆಶನ್.... ಎಂದು ನಿರ್ದೇಶಕ ರಾಜೀವ್ ಮದನ್ ನ ಅಭಿನಯವನ್ನು ಕೊಂಡಾಡುತ್ತಿದ್ದನು. ನಾಳೆ ಮುಂದಿನ ಶಾಟ್ ಗೆ ರೆಡಿ ಆಗಿ ಮದನ್....ಪ್ಯಾಕಪ್....
--------------------------------------------------------------------------------------------------------------------------------------------ರಾಜೀವ್ ಸಿನೆಮಾ ರಂಗದಲ್ಲಿ ಈಗಷ್ಟೇ ಬೆಳೆಯುತ್ತಿರುವ ಉದಯೋನ್ಮುಖ ನಿರ್ದೇಶಕ...ಎರಡು ಸಿನೆಮಾಗಳನ್ನು ನಿರ್ದೇಶಿಸಿ ಅದ್ಭುತ ಯಶಸ್ಸನ್ನುಸಾಧಿಸಿದ್ದ. ಮೊದಲೆರಡು ಸಿನೆಮಾಗಳು ಆಕ್ಷನ್ ಸಿನೆಮಾಗಳು ಆಗಿದ್ದು ಮೂರನೇ ಸಿನೆಮಾ ಹಾರರ್ ಸಿನೆಮಾ ಮಾಡಬೇಕು ಎಂದು ನಿರ್ಧರಿಸಿ ಅದಕ್ಕೆ ಬೇಕಾದ ಕಥೆಯ ಅನ್ವೇಷಣೆಯಲ್ಲಿ ತೊಡಗಿದ್ದ.
ಮೊದಲೆರಡು ಸಿನೆಮಾಗಳ ಅಭೂತಪೂರ್ವ ಯಶಸ್ಸಿನಿಂದ ನಿರ್ಮಾಪಕರು ರಾಜೀವ್ ನನ್ನು ಹುಡುಕಿ ಬರುತ್ತಿದ್ದರು. ಆದರೆ ರಾಜೇಶ್ ಅವರೆಲ್ಲರಿಗೂ ಕಥೆ ಸಿದ್ಧವಾಗುವ ತನಕ ನಾನು ಯಾವುದೇ ಆಫರ್ ಒಪ್ಪಿಕೊಳ್ಳುವುದಿಲ್ಲ ಎಂದು ನಯವಾಗಿ ನಿರಾಕರಿಸಿದ್ದ.
ಇದುವರೆಗೂ ಬಂದಿರಬಾರದು ಇನ್ನು ಮುಂದೆ ಬರಬಾರದು ಅಂಥಹ ಸಿನೆಮಾ ಮಾಡಬೇಕು, ರೀಮೇಕ್ ಇರಬಾರದು, ಯಾವುದಾದರೂ ಸತ್ಯ ಘಟನೆ ಆಧರಿಸಿದ ಹಾರರ್ ಸಿನೆಮಾ ಮಾಡಬೇಕು ಎಂದು ಕಥೆಗೆ ಹುಡುಕುತ್ತಿದ್ದವನಿಗೆ ವರ್ಷದ ಹಿಂದೆ ರಾಮಾಪುರದ ಲೀಲಾ ಮಹಲ್ ನಲ್ಲಿ ನಡೆದ ಘಟನೆ ಸಿಕ್ಕಿತು. ಯಾವುದೋ ಒಂದು ಪೇಪರ್ ನಲ್ಲಿ ಅದರ ಬಗ್ಗೆ ಬಂದಿದ್ದ ವರದಿಯನ್ನು ಆಧರಿಸಿ ಇದೆ ಸೂಕ್ತವಾದ ಕಥೆ ಎಂದು ನಿರ್ಧರಿಸಿ ಅದರ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲು ರಾಮಾಪುರಕ್ಕೆ ಬಂದ.
--------------------------------------------------------------------------------------------------------------------------------------------ರಾಮಾಪುರ ಹಳ್ಳಿಗೆ ಹಳ್ಳಿಯೂ ಅಲ್ಲದೆ ಪಟ್ಟಣಕ್ಕೆ ಪಟ್ಟಣವೂ ಅಲ್ಲದ ಒಂದು ಊರು. ರಾಮಾಪುರ ಒಂದು ಕಾಲದಲ್ಲಿ ಅರಸರ ಆಳ್ವಿಕೆಗೆ ಒಳಪಟ್ಟಿತ್ತು. ಕಾಲಾಂತರದಲ್ಲಿ ಅದು ಬದಲಾಗಿ ಈಗ ಅರಸರ ವಂಶಸ್ತರು ಉಳಿದಿದ್ದರೂ ಅವರೂ ಸಾಮಾನ್ಯ ಪ್ರಜೆಗಳಾಗಿ ಉಳಿದಿದ್ದರು. ಆದರೂ ಊರಿನ ಜನರು ಯಾವುದೇ ಸಮಸ್ಯೆ ಇದ್ದರು ಮೊದಲು ರಾಜ ವಿಜಯಸಿಂಹ ಅವರ ಬಳಿಗೆ ಹೋಗಿ ಅವರಲ್ಲಿ ಬಗೆಹರಿಯದಿದ್ದರೆ ನಂತರ ಪೋಲಿಸು ಕೋರ್ಟು ಎಂದು ಹೋಗುತ್ತಿದ್ದರು. ರಾಜ ವಿಜಯಸಿಂಹ ಎಂದೂ ತಾನು ಅರಸರ ವಂಶಸ್ಥನೆಂದು ಗರ್ವ ತೋರುತ್ತಿರಲಿಲ್ಲ. ಕಷ್ಟಕಾಲದಲ್ಲಿ ಬಡವರಿಗೆ ಅಪಾರ ದಾನ ಧರ್ಮ ಮಾಡಿ ಇಡೀ ಊರ ಜನರ ಪಾಲಿಗೆ ದೇವರಂತಿದ್ದ.
ವಿಜಯಸಿಂಹನಿಗೆ ಎಲ್ಲ ಇದ್ದರೂ ಮಕ್ಕಳಿಲ್ಲ ಎಂಬ ಒಂದೇ ಒಂದು ಕೊರಗು ಕಾಡುತ್ತಿತ್ತು. ವಿಜಯಸಿಂಹನ ಹೆಂಡತಿ ಲೀಲಾ ದೇವಿ ಮಕ್ಕಳಿಗಾಗಿ ಮಾಡದ ವ್ರತವಿರಲಿಲ್ಲ, ಬೇಡದ ದೇವರಿರಲಿಲ್ಲ. ಅಂತೂ ಕೊನೆಗೂ ಅವರಿಗೊಂದು ಗಂಡು ಸಂತಾನವಾಯಿತು. ವಿಜಯಸಿಂಹನ ಸಂತೋಷಕ್ಕೆ ಪಾರವೇ ಇರಲಿಲ್ಲ. ಆ ಖುಷಿಯಲ್ಲಿ ಮತ್ತಷ್ಟು ದಾನ ಧರ್ಮಗಳನ್ನು ಮಾಡುತ್ತಿದ್ದ.
ಆದರೆ ವಿಜಯಸಿಂಹನ ಸಂತೋಷ ಜಾಸ್ತಿ ದಿವಸ ಇರಲಿಲ್ಲ. ಏಕೆಂದರೆ ಹುಟ್ಟಿದ ಮಗ ಬೆಳೆಯುತ್ತ ಬೆಳೆಯುತ್ತ ಬುದ್ಧಿಮಾಂದ್ಯನಂತೆ ವರ್ತಿಸಲು ಶುರುಮಾಡಿದ. ಇದರಿಂದ ರಾಜನಿಗೆ ಆದ ಆಘಾತ ಅಷ್ಟಿಷ್ಟಲ್ಲ. ಮಗನಿಲ್ಲದೆ ಕೊರಗುತ್ತಿದ್ದ ನಮಗೆ ಈಗ ಮಗ ಹುಟ್ಟಿದ್ದರೂ ಕೊರಗು ತಪ್ಪಲಿಲ್ಲವಲ್ಲ ಎಂದು ಅದೇ ಕೊರಗಿನಲ್ಲಿ ದೇವರ ಮೇಲೆ ಕೋಪ ಮಾಡಿಕೊಂಡು ತಾನು ಮಾಡುತ್ತಿದ್ದ ದಾನ ಧರ್ಮಗಳನ್ನು ನಿಲ್ಲಿಸಿದ. ಜನರನ್ನು ದ್ವೇಷಿಸಲು ಶುರು ಮಾಡಿದ. ಬರ ಬರುತ್ತಾ ಕಟೋರನಾದ. ಅವನ ಬದಲಾದ ವರ್ತನೆಯಿಂದ ಜನರೂ ಅವನನ್ನು ದ್ವೇಷಿಸಲು ಶುರುಮಾಡಿದರು.
ಜನ ವಿಜಯಸಿಂಹನನ್ನು ಅವನ ಮಗನನ್ನು ಅವಹೇಳನ ಮಾಡಲು ಶುರುಮಾಡಿದರು. ಇದರಿಂದ ಕುಪಿತನಾದ ವಿಜಯಸಿಂಹ ಹುಚ್ಚನಂತೆ ಸಿಕ್ಕ ಸಿಕ್ಕವರನ್ನು ಹೊಡೆಯಲು ಶುರು ಮಾಡಿದ. ಇದೆಲ್ಲದರ ಮಧ್ಯೆ ಲೀಲಾ ದೇವಿ ಮೃತಳಾದಳು. ಇದರಿಂದ ಮತ್ತಷ್ಟು ವ್ಯಾಕುಲತೆಗೆ ಒಳಗಾದ ವಿಜಯಸಿಂಹ ಒಂದು ದಿವಸ ರಾತ್ರಿ ತನ್ನ ಮಗನಿಗೆ ಊಟದಲ್ಲಿ ವಿಷ ಹಾಕಿ ತಾನೂ ಸೇವಿಸಿ ಸತ್ತು ಹೋದ. ಮರುದಿವಸ ಬೆಳಿಗ್ಗೆ ಅವರ ಮನೆ ಕೆಲಸಕ್ಕೆಂದು ಹೋದ ಸಿದ್ದಯ್ಯ ಈ ದೃಶ್ಯ ಕಂಡು ಹೆದರಿಪೊಲೀಸರಿಗೆ ಸುದ್ದಿ ಮುಟ್ಟಿಸಿದ.
ಇಡೀ ಊರಿಗೆ ಸುದ್ದಿ ತಿಳಿದು ಜನರು ಸಧ್ಯ ಇನ್ನು ನಮಗೆ ಅವನ ಕಾಟ ತಪ್ಪಿತಲ್ಲ ಎಂದು ಸಂತಸ ಪಟ್ಟರು. ಕಾಲಾಂತರದಲ್ಲಿ ಅವನ ಆಸ್ತಿಗೆ ಯಾರೂ ವಾರಸುದಾರರು ಇಲ್ಲದ್ದರಿಂದ ಲೀಲಾ ಮಹಲ್ ನಲ್ಲಿ ಇದ್ದ ಎಲ್ಲವನ್ನೂ ಸರ್ಕಾರ ತನ್ನ ವಶಕ್ಕೆ ತೆಗೆದುಕೊಂಡಿತು.ನಂತರದಲ್ಲಿ ಒಂದು ದಿವಸ ಗೊತ್ತು ಮಾಡಿ ಲೀಲಾ ಮಹಲ್ ಹರಾಜಿಗೆ ಘೋಷಿಸಿದರು. ದೂರದ ಊರಿನಿಂದ ಬಂದಿದ್ದ ಒಬ್ಬ ಸಿರಿವಂತ ಆ ಮಹಲನ್ನು ಕೊಂಡುಕೊಂಡ. ಆದರೆ ಅವನು ವಾಸಕ್ಕೆ ಬಂದ ಒಂದೇ ವಾರದಲ್ಲಿ ವಿಚಿತ್ರವಾಗಿ ಅವನ ಇಡೀ ಕುಟುಂಬ ಬರ್ಭರವಾಗಿ ಸತ್ತು ಹೋದರು. ಎಷ್ಟೇ ತನಿಖೆಗಳು ಮಾಡಿದರೂ ಅವರ ಸಾವಿಗೆ ಕಾರಣ ತಿಳಿಯಲಿಲ್ಲ. ನಂತರದಲ್ಲಿ ಆ ಮಹಲಿನಲ್ಲಿ ರಾಜನ ಆತ್ಮ ಪ್ರೇತವಾಗಿ ಇದೆ ಎಂದು ಎಲ್ಲೆಡೆ ಸುದ್ದಿ ಹಬ್ಬಿತು. ಅಂದಿನಿಂದ ಯಾರೂ ಆ ಮಹಲಿನ ಕಡೆ ಹೋಗದೆ ಪಾಳು ಬಿದ್ದಿತು.
ಅಷ್ಟೇ ಅಲ್ಲದೆ ಕೆಲವು ದಿನಗಳಲ್ಲಿ ರಾಮಾಪುರದಲ್ಲಿ ವಿಚಿತ್ರವಾದ ಘಟನೆಗಳು ನಡೆಯಲು ಶುರುವಾದವು. ಇದ್ದಕ್ಕಿದ್ದಂತೆ ಜನರು ಕಾಣೆಯಾಗಿ ಬಿಡುತ್ತಿದ್ದರು, ಕೆಲವರು ಯಾವುದೇ ಖಾಯಿಲೆ ಇಲ್ಲದೆ ಚೆನ್ನಾಗಿದ್ದವರು ಇದ್ದಕ್ಕಿದ್ದಂತೆ ಸತ್ತು ಹೋಗುತ್ತಿದ್ದರು. ಯಾವುದಕ್ಕೂ ಕಾರಣ ತಿಳಿಯುತ್ತಿರಲಿಲ್ಲ. ಕೆಲವರ ಪ್ರಕಾರ ಯಾರು ರಾಜನ ವಿರುದ್ಧ ಅವನ ಮಗನ ವಿರುದ್ಧ ಕೆಟ್ಟದಾಗಿ ಮಾತಾಡುತ್ತಾರೋ ಅವರನ್ನು ರಾಜನ ಪ್ರೇತಾತ್ಮವೇ ಕೊಲ್ಲುತ್ತಿತ್ತು ಎಂದು ಹೇಳುತ್ತಿದ್ದರು. ಇದರಿಂದ ಭಯಗೊಂಡ ಜನ ರಾಜನ ಬಗ್ಗೆಯಾಗಲಿ ಅವನ ಮಗನ ಬಗ್ಗೆಯಾಗಲಿ ಕೆಟ್ಟದಾಗಿ ಮಾತಾಡುವುದನ್ನು ನಿಲ್ಲಿಸಿದ್ದರು.
Comments
ಉ: ಕಾರ್ಗತ್ತಲು = ಭಾಗ 1
In reply to ಉ: ಕಾರ್ಗತ್ತಲು = ಭಾಗ 1 by pkumar
ಉ: ಕಾರ್ಗತ್ತಲು = ಭಾಗ 1
ಉ: ಕಾರ್ಗತ್ತಲು = ಭಾಗ 1
In reply to ಉ: ಕಾರ್ಗತ್ತಲು = ಭಾಗ 1 by makara
ಉ: ಕಾರ್ಗತ್ತಲು = ಭಾಗ 1
ಉ: ಕಾರ್ಗತ್ತಲು = ಭಾಗ 1 : ಕಟ್ ಕಟ್-ಪ್ಯಾಕಪ್... :(((( ...:()))
In reply to ಉ: ಕಾರ್ಗತ್ತಲು = ಭಾಗ 1 : ಕಟ್ ಕಟ್-ಪ್ಯಾಕಪ್... :(((( ...:())) by venkatb83
ಉ: ಕಾರ್ಗತ್ತಲು = ಭಾಗ 1 : ಕಟ್ ಕಟ್-ಪ್ಯಾಕಪ್... :(((( ...:()))