ಕಾರ್ಮೋಡ
ಅವರಿಬ್ಬರೂ ಹೇಳಿಮಾಡಿಸಿದ ಜೋಡಿ,ಎಷ್ಟು ಅನ್ಯೋನ್ಯತೆ!,ಅವರ ಪ್ರೀತಿ ಅನನ್ಯ. ಇನ್ನೂ ಕಾಲೇಜು ಮುಗಿಯದ ಆ ದಿನಗಳು ಯಾವ ವಿಷಯಗಳೇ ಆಗಲಿ ಅದು ಓದಿನ ವಿಷಯವೇ ಇರಲಿ ಇಲ್ಲ ಅದು ಸಾಂಸ್ಕೃತಿಕ ಚಟುವಟಿಕೆಯೇ ಇರಬಹುದು, ಅದು ಆಟದ ವಿಷಯವೇ ಇರಬಹುದು. ಅವರಿಬ್ಬರೂ ಯಾವಾಗಲೂ ಮೊದಲಿಗರು. ಆಕೆ ಮೌನಿ ಆದರೆ ವಿಷಯಗಳ ಚರ್ಚೆಯಲ್ಲಿ ಮಹಾವಾಗ್ಮಿ. ಅವನೋ ತುಂಬಾ ವಾಗ್ಮಿ ಎಲ್ಲಾ ವಿಷಯಗಳಲ್ಲೂ.
ಕಾಲೇಜಿನ ಮೊದಲ ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಚರ್ಚಾಸ್ಪರ್ಧೆಯಲ್ಲಿ ಅವರಿಬ್ಬರ ವಾಗ್ಝರಿ ನಿರ್ಣಾಯಕರ ತೀರ್ಪಿಗೆ ಸವಾಲಾಗಿತ್ತು. ಇಬ್ಬರಿಗೂ ಪ್ರಥಮ ಬಹುಮಾನ ಘೋಷಿಸಿ ನಿರ್ಣಾಯಕರು ಕೈ ತೊಳೆದುಕೊಂಡಿದ್ದರು. ಅಂತರ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ತನ್ನ ಕಾಲೇಜಿಗೆ ಪಾರಿತೋಷಕ ತಂದಿತ್ತರು. ಹೀಗೆ ಮೊರು ವರ್ಷಗಳೂ ಸಾಂಸ್ಕೃತಿಕ ಸ್ಪರ್ಧೆಗಳೇ ಅಲ್ಲದೇ, ಪರೀಕ್ಷೆಗಳಲ್ಲೂ ಸಮಾನವಾಗಿ ಅಂಕಗಳನ್ನು ಗಳಿಸಿ ಕಾಲೇಜಿಗೆ ಹಾಗು ಊರಿಗೆ ಹೆಸರು ತಂದವರು.ಹದಿಹರೆಯದ ಯೌವನದ ಮಧುರ ತಂಗಾಳಿಗೆ ಸೋತು ಪ್ರೇಮಿಗಳಾದವರು. ಯಾರಿಗೆ ಯಾರು ಸೋತರೋ? ಅದೊಂದು ಯಕ್ಷ ಪ್ರಶ್ನೆಯೇ ಸರಿ.
ಅವನೋ ನನ್ನ ಪ್ರಾಣ ಸ್ನೇಹಿತ. ಎಲ್ಲಾ ವಿಚಾರಗಳನ್ನು ನಾವು ವಿನಿಮಯ ಮಾಡಿಕೊಳ್ಳುತ್ತಿದ್ದೆವು. ಅಕೆಯ ವಿಷಯವೂ ಅಷ್ಟೇ ಅವನೇ ಬೇಕಾದಷ್ಟು ಸಲ ಹೇಳುತ್ತಿದ್ದ " ಅಕೆ ನನ್ನ ಪ್ರಾಣ. ಯಾವ ಜನುಮದ ಸುಕೃತವೋ, ಏನೋ ತಿಳಿಯದು. ನಾನು ತುಂಬಾ ಭಾಗ್ಯಶಾಲಿ. ನಿನ್ನಂತಹ ಪ್ರಾಣ ಸ್ನೇಹಿತ, ಅವಳಂತಹ ಪ್ರಾಣ ಪ್ರಿಯೆಯನ್ನು ,ದೇವರಂತಹ ತಂದೆ-ತಾಯಿ ಈ ಜಗದಲ್ಲಿ ಕರುಣಿಸಿದ ಆ ಭಗವಂತ".ನನಗಂತೂ ತುಂಬಾ ಸಂತೋಷವೆನಿಸುತ್ತಿತ್ತು ಅವರನ್ನು ನೋಡಿದಾಗಲೆಲ್ಲಾ.
ಕಾಲೇಜು ಜೀವನ ಮುಗಿದ ಮೇಲೆ ನಾನು ಅವನು ಇಬ್ಬರೂ ಕೇಂದ್ರ ಸರ್ಕಾದ ಉದ್ಯಮದಲ್ಲಿ ಕೆಲಸ ಗಿಟ್ಟಿಸಿದೆವು ಹಾಗು ಅಕೆಯೊ ಕೇಂದ್ರ ಸರ್ಕಾರದ ಉದ್ಯಮದಲ್ಲೇ ಕೆಲಸಕ್ಕೆ ಸೇರಿದಳು. ಕೆಲಸಕ್ಕೆ ಸೇರಿದ ಮೇಲೆಯೇ ಎಲ್ಲವೂ ಬದಲಾಗಿತ್ತು. ಅವರಿಬ್ಬರೂ ಭೇಟಿಯಾಗುತ್ತಿದುದು ತುಂಬಾ ಅಪರೂಪವೇ ಆಗಿತ್ತು. ಆದರೆ ಅವನ ಭಾವನೆಗಳಲ್ಲಿ, ಆ ನೋವಿನ ಛಾಯೆ ಅಪರೂಪವಾಗಿಯೇ ಕಾಣಿಸುತ್ತಿತ್ತು. ನಾನೇ ಅವನ್ನು ಬಲವಂತವಾಗಿ ವಿಷಯಗಳನ್ನು ಕೆದಕಿದಾಗಲೂ ಅವನು ಎಂದೂ ಬಾಯಿಬಿಡಲಿಲ್ಲ. ನನಗಂತೂ ಅವನ ನಡೆ ಕಗ್ಗಂಟಾಗೆ ಉಳಿಯಿತು.
ಅಂದು ಶನಿವಾರ ಶ್ರಾವಣ ಹುಣ್ಣಿಮೆ, ನಾನು ಹಾಗು ಅವನು ಊರಿಗೆ ಹೊರೆಟೆವು ರೈಲಿನಲ್ಲಿ. ಸುಂದರ ಆಕಾಶದಲ್ಲಿ ಮೊಡಿದ ಚಂದ್ರಮ ನಗುನಗುತ್ತಾ ತಂಗಾಳಿಯನ್ನು ಬೀಸುತ್ತಿದ್ದ. ಹಾಗೆಯೇ ನನ್ನ ಮುಂದೆ ಕುಳಿತ ’ಶಶಾಂಕ’ ಆ ಚಂದ್ರಮನಿಗೆ ಸವಾಲೆಂಬಂತೆ ನಗುನಗುತ್ತಾ ವಾಕ್ಸುಧೆಯನ್ನು ಹರಿಬಿಟ್ಟು ನಗುವನ್ನು ಪಸರಿಸುತ್ತಿದ್ದ. ಆಕಸ್ಮಿಕವಾಗಿ ಆಕೆಯೊ ರೈಲಿನಲ್ಲಿ ಕಾಣಿಸಿಕೊಂಡಳು ದಿಡೀರನೆ. ಅವಳು ವ್ಯಾನಿಟಿ ಬ್ಯಾಗ್ ನಿಂದ ಸುಂದರವಾದ ರಕ್ಷೆಯೊಂದನ್ನು ತೆಗೆದು ನನ್ನ ಕೈಗೊಂದು ಕಟ್ಟಿ ನನ್ನಿಂದ ನೂರು ರೂ ವಸೂಲಿ ಮಾಡಿದಳು. ಹಾಗೆಯೇ ಮತ್ತೊಂದನ್ನು ತೆಗೆದು ಅವನ ಕೈಗೆ ಕಟ್ಟಿ ಅವನ ಜೋಬಿನಿಂದ ನೂರು ರೂ ಹಾರಿಸಿಕೊಂಡು ಹೊರಟೇ ಹೋದಳು. ಬರಸಿಡಿಲಂತೆ ಬಂದ ಅವಳು ಅವನ ಮುಖದಲ್ಲಿ ನಗುವನ್ನೇ ಹಾರಿಸಿಕೊಂಡು ಹೋದಳು. ನೋವಿನ ಛಾಯೆ ’ಶಶಾಂಕ’ನನ್ನು ಆವರಿಸಿತ್ತು. ಅವನ ಮುಖದಲ್ಲಿ ಆದ ಬದಲಾವಣೆ ನನ್ನಲ್ಲಿ ಅಪಾರವಾದ ನೋವು ತಂದು ಅವನ ಮುಖನೋಡಲಾಗದೆ ಕಿಟಕಿಯ ಆಕಾಶದತ್ತ ನೋಡತೊಡಗಿದೆ. ನೋಡನೋಡುತ್ತಿದ್ದಂತೆ ಚಂದ್ರಮನನ್ನು ಆಕಾಶದ ಎಲ್ಲಿಂದಲೋ ಹಾರಿಬಂದ ಕಾರ್ಮೋಡಗಳು ಮುತ್ತಿದವು. ಬಿರುಗಾಳಿ ಬೀಸತೊಡಗಿತು. ಆ ಬಿರುಗಾಳಿಯನ್ನೂ ಲೆಕ್ಕಿಸದೆ ರೈಲು ವೇಗವಾಗಿ ಬೆಟ್ಟಗಳ ನಡುವೆ ಸಾಗತೊಡಗಿತು. ಅರಳಿದ ಹೃದಯವೊಂದು ನೋವಿನ ಬಿರುಗಾಳಿಗೆ ಸಿಕ್ಕು ಬಾಡುತ್ತಿತ್ತು.