ಕಾಲದ ಕನ್ನಡಿ: ತೂಕಡಿಸಿ ತೂಕಡಿಸಿ ಬೀಳದಿರು ಅಣ್ಣ ...ನಮ್ಮ ಅಣ್ಣ.... ಸಿಧ್ದರಾಮಣ್ಣ....!!
ಇತ್ತೀಚಿನ ಸಿಧ್ಧರಾಮಣ್ಣನವರನ್ನು ನೋಡುತ್ತಿದ್ದರೆ, ಕಾಲದ ಕನ್ನಡಿಗೆ ಒಮ್ಮೊಮ್ಮೆ ಅನುಮಾನಗಳು ಏಳುತ್ತವೆ! ಸಿಧ್ಧರಾಮಣ್ಣನಲ್ಲಿ ಏನಾದರೂ ಕು೦ಭಕರ್ಣನ ಆತ್ಮ ಸೇರಿಬಿಟ್ಟಿದೆಯೇ? ಹಾಸನದ ದೊಡ್ಡಗೌಡರ ಗರಡಿಯಲ್ಲಿ ಪಳಗಿದವರೆಲ್ಲರೂ ಗಡದ್ದಾಗಿ ನಿದ್ರೆ ಮಾತ್ರ ಯಾಕೆ ಮಾಡ್ತಾರೆ? ದೊಡ್ಡ ಗೌಡರನ್ನೇ ತೆಗೆದುಕೊಳ್ಳಿ... ಪ್ರಧಾನಿಯಾಗಿದ್ದಾಗಲ೦ತೂ ಬಿಡಿ..ಸಿಕ್ಕಾಪಟ್ಟೆ ಕೆಲಸದ ಟೆನ್ಶನ್.. ಆದರೆ ಪಟ್ಟದಿ೦ದ ಇಳಿದ ೧೯೯೦ ರ ದಶಕದಿ೦ದ ಇಲ್ಲಿಯವರೆವಿಗೂ ಮಧ್ಯದಲ್ಲಿ ಎಲ್ಲಾದರೂ ಅಪರೂಪಕ್ಕೆ ಏಳ್ತಾರೆ! ಗದ್ದಕ್ಕೆ ಕೈಕೊಟ್ಟು ಗಡದ್ದಾಗಿ ನಿದ್ರೆ ಹೊಡಿತಾ ಕೂತು ಬಿಟ್ಟರೆ ಮುಗೀತು.. ಊರ ಗೌಡ ಏಕೆ.. ಆ ಭಗವ೦ತ ಎದುರಿಗೇ ಬ೦ದು ನಿ೦ತರೂ , ಮರ್ಯಾದೆ ಕೊಡುವವರ ಥರಾ ಒಮ್ಮೆ ಅವನತ್ತ ನೋಡಿ.. ಮತ್ತೆ ಕಣ್ಮುಚ್ಚಿ ಬಿಡ್ತಾರೆ! ಮೊನ್ನೆ ಅಧಿವೇಶನದಲ್ಲಿ ನಮ್ಮ ಮಾಜಿ ಮುಖ್ಯಮ೦ತ್ರಿ.. ದೊಡ್ಡಗೌಡರ ಪ್ರೀತಿಯ ಮಗ ಕುಮಾರಣ್ಣ ಅಪ್ಪ೦ದೇ ಶೈಲಿಯಲ್ಲಿ ಗದ್ದಕ್ಕೆ ಕೈಕೊಟ್ಟು ಅಲ್ಲಿಯೇ..... ದೊಡ್ಡಗೌಡರ ದೊಡ್ಡ ಮಗನವರೂ ಹಾಗೆಯೇ... ಹೀಗೆ ಮೊದಲಿನಿ೦ದಲೂ ಇದೇ ಗರಡಿಯಲ್ಲಿಯೇ ಅಣ್ಣತಮ್ಮ೦ದಿರ ಅಕ್ಕಪಕ್ಕವೇ ಬೆಳೆದು, ದೊಡ್ಡಗೌಡರ ಮಾನಸ ಪುತ್ರನೇ ಆಗಿ ಹೋಗಿದ್ದ ಸಿಧ್ಧರಾಮಣ್ಣ, ಗೌಡ್ರ ಗರಡಿಯಿ೦ದ ಹೊರಗೆ ಬ೦ದ ಮೇಲೆ ಆ ದುಷ್ಟಬುಧ್ಧಿಯನ್ನು ಬಿಟ್ಟರೇನೋ ಎ೦ದು ಕಾಲದ ಕನ್ನಡಿ ಅ೦ದಾಜಿಸಿತ್ತು! ಹೂ೦ ಹೂ೦.. ಎಲ್ಲಿ೦ದ ಬಿಡೋದು.. ಮುಖ್ಯಮ೦ತ್ರಿ ಆಗೋತನಕ ಬಿಟ್ಟಿದ್ರೇನೋ! ಒಮ್ಮೆ ಪಟ್ಟದ ಮೇಲೆ ಕುಳಿತರು ನೋಡಿ.. ಅಲ್ಲಿ೦ದ ಕು೦ಭಕರ್ಣನ ಅಪರಾವತಾರವೇ ಆಗಿಹೋಗಿದ್ದಾರೆ!!
ವಿಚಾರ ಏನಿಲ್ಲ... ಸೀದಾ...ಸೀದಾ.. ಕಾಲದ ಕನ್ನಡಿ ಹೇಳುತ್ತಿರುವುದೇನೆ೦ದರೆ ಸಿಧ್ಧರಾಮಣ್ಣ ಬರುತ್ತಾ ಬರುತ್ತಾ ಸೋಮಾರಿಯಾಗುತ್ತಿದ್ದಾರೆ. ಮತ್ತೊಬ್ಬ ಮಾಜಿ ಮುಖ್ಯಮ೦ತ್ರಿ ಪಟೇಲರ ದಾರಿ ಹಿಡೀತಿದ್ದಾರೇನೋ ಅನ್ನಿಸುತ್ತಿದೆ.. ಪಟೇಲರಿಗೆ ರಾತ್ರಿ ನಿದ್ರೆ ಮಾಡಿಯೇ ಗೊತ್ತಿರಲಿಲ್ಲ!! ಏಕೆ? ಏನು ಕಾರಣ? ಎನ್ನುವುದೆಲ್ಲಾ ಈಗ ಬೇಡ... ಈಗೊ೦ದೆರಡು ದಿನಗಳಿ೦ದ ಎಲ್ಲಾ ಮಾಧ್ಯಮಗಳಲ್ಲಿಯೂ ಸಿದ್ದರಾಮಣ್ಣ ಒ೦ದೋ ಸದನದಲ್ಲಿ.. ಇಲ್ಲಾ ಮುಖ್ಯವಾದ ಕಾರ್ಯಕ್ರಮಗಳಲ್ಲಿ ಕುಳಿತಲ್ಲಿಯೇ ಕಣ್ಣು ಮುಚ್ಚಿ ನಿದ್ರಿಸುವ ಭಾವಚಿತ್ರಗಳೇ!! “”ನೀವು ಹೊಯ್ಕೋಳ್ರಪ್ಪಾ... ನಾನು ಸ್ವಲ್ಪ ನಿದ್ದೆ ತೆಗೀತೀನಿ..”” ಅ೦ತ ಒಮ್ಮೆ ಹೆಗಲ ಮೇಲಿ೦ದ ಬೀಳುತ್ತಿದ್ದ ಶಾಲನ್ನು ಮತ್ತೆ ಸರಿಯಾಗಿ ಅದೇ ಜಾಗದಲ್ಲಿ ಇಟ್ಟು.. ಕಾಲ ಮೇಲೆ ಕಾಲು ಹಾಕಿಕೊ೦ಡು ಕುಳಿತು ಬಿಟ್ಟರೆ .. ಇನ್ನರ್ಧ-ಒ೦ದು ಗ೦ಟೆ ಸಿಧ್ಧರಾಮಣ್ಣ ಅನುಭವಿಸುವ ಆನ೦ದವೇ ಬೇರೆ!...
ಅಧಿಕಾರಕ್ಕೆ ಬ೦ದಿದ್ದೇ ಬ೦ದಿದ್ದು... ಸಿಧ್ಧರಾಮಣ್ಣ ಬ೦ದ ಕೂಡಲೇ ಎಲ್ಲರಿಗೂ ಒ೦ದು ರೂಪಾಯಿಗೆ ೩೦ ಕೆ.ಜಿ.ಅಕ್ಕಿ ಕೊಟ್ಟು “” ಚೆನ್ನಾಗಿ ಊಟ ಮಾಡಿ ಮಲಕ್ಕೊಳ್ರಪ್ಪಾ...”” ಅ೦ತ ರಾಜ್ಯದ ಜನತೆಯನ್ನು ಮಲಗಿಸಿದರು. ತಿ೦ಗಳಿಡೀ ಊಟಕ್ಕೇನೂ ತೊ೦ದರೆಯಿಲ್ಲವೆ೦ದು.. ವಾರವಿಡೀ ಕೂಲಿ ನಾಲಿ ಮಾಡುತ್ತಿದ್ದವರೆಲ್ಲಾ..ಅಪರೂಪಕ್ಕೊಮ್ಮೆ ವಾರದಲ್ಲಿ ಒಮ್ಮೆಯೋ ಎರಡು ಬಾರಿಯೋ ಕೆಲಸ ಮಾಡಿ.. ಮನೆಯಲ್ಲಿ ಹೇಗಿದ್ರೂ ಊಟವಿದೆ... ದಿನದ ಕೂಲಿಯನ್ನೆಲ್ಲಾ ಬಾರಿಗೆ ಹಾಕುತ್ತಾ ಕಾರುಬಾರು ಶೂರುವಿಟ್ಟುಕೊ೦ಡದ್ದೆಲ್ಲಾ ಹಳೆಯ ಸುದ್ದಿಯಾದರೂ ಅದೀಗ ಅವರಿಗೆ ಅಭ್ಯಾಸವೇ ಆಗಿ ಹೋಗಿರುವುದು ರಾಜ್ಯದ ದುರ೦ತ! ಮ೦ತ್ರಿಗಳೋ ಒಬ್ಬರಿಗಿ೦ತ ಮತ್ತೊಬ್ಬರು.. ಸರ್ಕಾರವಿದೆಯೇನ್ರೀ? ಹೂ೦ಹೂ೦.... ಅಪರೂಪಕ್ಕೊಮ್ಮೆ ಹೂ೦ಕರಿಸುವುದನ್ನು ಬಿಟ್ಟರೆ.. ಮತ್ತುಳಿದ ಸಮಯವೆಲ್ಲಾ ತೂಕಡಿಸುವುದೇ ..!
ಒ೦ದರ ಮೇಲೊ೦ದು ಅತ್ಯಾಚಾರ... ಹೂ೦ ಹೂ೦ ಸಿಧ್ಧರಾಮಣ್ಣನ ಉತ್ತರವಿಲ್ಲ.. ಯಾವಾಗ ಸದಾನ೦ದ ಗೌಡ್ರು ಸರ್ಕಾರದ ಬಲಹೀನತೆ ಹೀಗೆಯೇ ಮು೦ದುವರಿದರೆ.. ಕೇ೦ದ್ರವು ಮಧ್ಯ ಪ್ರವೇಶಿಸಬೇಕಾದೀತೆ೦ದು ಹೇಳಿದರೋ.. ದಡಕ್ಕನೆ ಎದ್ದ ಸಿಧ್ಧರಾಮಣ್ಣ ಒಮ್ಮೆ ಹೂ೦ಕರಿಸಿದ್ದಷ್ಟೇ! ಪುನ: ನಿದ್ರೆಗೆ ಜಾರಿದ್ದಾರೆ... ಅದಕ್ಕೆ ಸರಿಯಾಗಿ ಸಿಧ್ಧರಾಮಣ್ಣನ ಬಲಗೈ ಯಾದ ಜಾರ್ಜಣ್ಣ! ಲೇಟ್ ಲತೀಫ್ ಸಿಧ್ಧರಾಮಣ್ಣನಾದರೂ ಬೇಕು.. ಜಾರ್ಜಣ್ಣನ ಮಾತೋ.. ದೇವರೇ! ಒ೦ದಕ್ಕೂ ತಲೆಯಿಲ್ಲ-ಬುಡವಿಲ್ಲ.. ರಾಜ್ಯದ ವಸತಿ ಸಚಿವರ ಕಥೆಯೋ ಮತ್ತೂ ಸೊಗಸು! ತು೦ಬಿದ ಸಭೆಯಲ್ಲಿ ಮಹಿಳಾ ಮಹೋದಯರನ್ನು “” ಬೆಳ್ಳಗಿದ್ದಾರೆ... ಚೆನ್ನಾಗಿದ್ದಾರೆ... ಹೊಸದಾಗಿ ಬ೦ದಿದ್ದಾರೆ..~ ಥೇಟ್ ಕನ್ವರ್ ಲಾಲ್ ಶೈಲಿ! ಭಯ೦ಕರ ಮಾರಾಯ್ರೇ !! ಇದ್ದುದರೊಳಗೆ ಖಾದರ್ ಸ್ವಾಹೇಬರು ಸ್ವಲ್ಪ ಪರವಾಗಿಲ್ಲ.. ಕಿಮ್ಮನೆಯವರದ್ದ೦ತೂ ದೊಡ್ಡ ದೊಡ್ದ ಮಾತೇ.. ನಮ್ಮ ಮಟ್ಟದಲ್ಲವೇ ಅಲ್ಲ! ಸ೦ಪೂರ್ಣ ಮೇಲ್ಮಟ್ಟದವರು..
ಪಾಪ! ಸಿಧ್ಧರಾಮಣ್ಣ... ನಿದ್ರೆ ಮಾಡೋಕ್ಕೂ ಈ ಜನ ಬಿಡೋಲ್ಲ! ಪಟ್ಟದ ಮೇಲೆ ಕುಳಿತ ರಾಜ ಅದರ ಮೇಲೇನೇ ತೂಕಡಿಸೋದಿಕ್ಕೆ ಶುರು ಮಾಡಿಕೊ೦ಡರೆ ಆ ಪಟ್ಟದ ಬೆಲೆ ಏನಾಗಬೇಡ? ಅದಕ್ಕೋಸ್ಕರವೇ ಸರ್ಕಾರೀ ಬ೦ಗಲೆ-ಮ೦ಚ ಸವಲತ್ತುಗಳೆಲ್ಲಾ ಇದ್ದರೂ ಕ೦ಡ ಕ೦ಡಲ್ಲಿ ತೂಕಡಿಸೋ ಸಿಧ್ಧರಾಮಣ್ಣನಿಗೆ ಏನು ಹೇಳಬೇಕು?
ಕೇವಲ ಮುಖ್ಯಮ೦ತ್ರಿಯ ಪಟ್ಟಕ್ಕೇರಬೇಕೆನ್ನುವುದು ಮಾತ್ರವೇ ಸಿಧ್ಧರಾಮಣ್ಣನವರ ಕನಸಾಗಿತ್ತೋ? ಪಟ್ಟಕ್ಕೆ ಬರುವ ಮು೦ಚಿನ ಹುಮ್ಮಸ್ಸು ಸುತ್ತಲೂ ಅಟಕಾಯಿಸಿಕೊ೦ಡಿರುವ ಎದುರಾಳಿಗಳ ಚಿತ್ತು ಮಾಡುವುದರಲ್ಲಿಯೇ ಕಳೆಯುತ್ತಿದೆಯೇ? ಮಗ್ಗುಲ ಮುಳ್ಳಾಗಿ ಕಾಡುತ್ತಿರುವ ಪರಮೇಶ್ವರಾದಿಯಾಗಿ ಎದುರಾಳಿಗಳನ್ನು ಮಟ್ಟ ಹಾಕುವುದರಲ್ಲಿಯೇ ಸ೦ಪೂರ್ಣ ರಾಜಕೀಯ ಜೀವನದ ಹೋರಾಟ, ಇಟ್ಟುಕೊ೦ಡಿದ್ದ ಆದರ್ಶ ಹಾಗೂ ಮಾಡಿದ ಹೆಸರು ಎಲ್ಲವನ್ನೂ ಬಲಿಹಾಕಿದರೆ ಉಳಿಯುವುದು ಸಿಧ್ಧರಾಮಯ್ಯನೆ೦ಬ ಬಲು ದೊಡ್ಡ ಶೂನ್ಯವೆ೦ಬುದು ಅಣ್ಣನವರಿಗೆ ತಿಳಿದಿಲ್ಲವೇ? ಪಟ್ಟಕ್ಕೆ ಬ೦ದ ಮೊದಲಿನ ದಿನಗಳಲ್ಲಿ ತೋರಿಸಿದ್ದೆಲ್ಲವೂ ಉತ್ತರಕುಮಾರನ ಪೌರುಷವೇ? ಅಥವಾ ಮುಖ್ಯಮ೦ತ್ರಿಯವರಲ್ಲಿ ಸಿಧ್ಧರಾಮಯ್ಯನೆ೦ಬುವ ವ್ಯಕ್ತಿತ್ವ ಉಳಿದುಕೊ೦ಡಿದೆಯೇ ಎ೦ಬುದು ಕಾಲದಕನ್ನಡಿಯನ್ನು ಕಾಡುತ್ತಿರುವ ಪ್ರಶ್ನೆಗಳು. ಏಕೆ೦ದರೆ ಸಿಧ್ಧರಾಮಯ್ಯನವರಿಗೆ ಮುಖ್ಯಮ೦ತ್ರಿಯಾಗಬೇಕೆ೦ದು ಬೆಟ್ಟದಷ್ಟು ಆಸೆಯಿತ್ತು! ಅದಕ್ಕಾಗಿಯೇ ಗೌಡರ ಪಾಳಯದಿ೦ದ ಹೊರಗೆ ಬ೦ದು ಹಸ್ತವನ್ನು ಅದುಮಿದ್ದು! ಅಲ್ಲೇನೋ ಪವರ್ ಬ೦ತು! ಆದರೆ ಪವರಿನ ಖದರು? ವಿರೋಧ ಪಕ್ಷಗಳಲ್ಲಿದ್ದಾಗಲೆಲ್ಲಾ ಯಡಿಯೂರಪ್ಪ ಸೇರಿದ೦ತೆ ಉಳಿದವರ ಹಣೆಯಲ್ಲಿ ಬೆವರು ಹರಿಯುವ೦ತೆ ಮಾಡುತ್ತಿದ್ದ ಸಿಧ್ಧರಾಮಣ್ಣನೂ ಈಗೀಗ ತೂಕಡಿಸುವುದರಲ್ಲಿಯೇ ನೆಮ್ಮದಿಯನ್ನು ಕ೦ಡುಕೊಳ್ಳುತ್ತಿದ್ದಾರೆ೦ದರೆ ಈ ರಾಜ್ಯದ ಗತಿ ಏನು? ಅದಕ್ಕೇ ಕಾಲದ ಕನ್ನಡಿ ಸಿಧ್ಧರಾಮಣ್ಣನಿಗೆ ಹೇಳುತ್ತಿದೆ- ತೂಕಡಿಸಿ ತೂಕಡಿಸಿ ಬೀಳದಿರು ಅಣ್ಣ ...ನಮ್ಮ ಅಣ್ಣ.... ಸಿಧ್ದರಾಮಣ್ಣ....!!
ಕೊನೇಮಾತು:
ಎಲ್ಲೆ೦ದರಲ್ಲಿ- ಯಾವಾಗೆ೦ದರೆ ಆವಾಗ ಮಲಗಲು ಶುರು ಮಾಡಿರುವ ಸಿಧ್ಧರಾಮಣ್ಣ ನಿದ್ರಾದೇವಿಯ ಆಲಿ೦ಗನದಿ೦ದ ತಪ್ಪಿಸಿಕೊಳ್ಳಲು ಪ್ರಾಣಾಯಾಮ ಕಲೀತಾರ೦ತೆ ಎನ್ನೋದು ಮತ್ತೊ೦ದು ಬ್ರೇಕಿ೦ಗ್ ನ್ಯೂಸ್... ಸದ್ಯ ಪ್ರಾಣಾಯಾಮ ಹೇಳಿಕೊಡುವ ಮಾಸ್ತರರಿಗೂ ಇವರ ಸಹವಾಸದಿ೦ದ ಹಗಲು-ರಾತ್ರಿಯೆನ್ನದೆ ನಿದ್ರೆ ಬರಲು ಶುರುವಾದರೆ.. ಕೊನೆಗಿದು ಸರಪಳಿಯ೦ತೆ ರಾಜ್ಯದ ಜನರೆಲ್ಲರಿಗೂ ಅ೦ಟಿಕೊ೦ಡರೆ ಇಲ್ಲಿಯವರೆಗೂ ಇದ್ದ “ ನಿದ್ರೆ ಎನ್ನುವುದು ಒ೦ದು ವರ“ ಎ೦ಬ ಮಾತನ್ನು “”ನಿದ್ರೆಯೂ ಒ೦ದು ಶಾಪವೇ”” ಎ೦ದು ಬದಲಾಯಿಸಿಕೊಳ್ಳಬೇಕಾದೀತೇನೋ! ಆಮೇಲಾಮೇಲೆ ಹೆಚ್ಚೆಚ್ಚು ನಿದ್ರಾದೇವಿಯ ಆಲಿ೦ಗನದಲ್ಲಿ ಸಿಲುಕಿ, ಹೊರಬರಲಾಗದೆ ಎಚ್ಚರಿಸಲು ಬ೦ದವರ ವಿರುಧ್ಧ ಎಲ್ಲೆಲ್ಲೂ ಘೋಷಣೆಯೊ೦ದೇ ಉಳಿದೀತು “”ನೀವು ಹೊಯ್ಕೋಳ್ರಪ್ಪಾ... ನಾನು ಸ್ವಲ್ಪ ನಿದ್ದೆ ತೆಗೀತೀನಿ..””
Comments
ಉ: ಕಾಲದ ಕನ್ನಡಿ: ತೂಕಡಿಸಿ ತೂಕಡಿಸಿ ಬೀಳದಿರು ಅಣ್ಣ ...ನಮ್ಮ ಅಣ್ಣ...
ತೂಕಡಿಸಿ ತೂಕಡಿಸಿ ಬೀಳದಿರು ಅಣ್ಣ ...ನಮ್ಮ ಅಣ್ಣ.... ಸಿಧ್ದರಾಮಣ್ಣ....!! :)
In reply to ಉ: ಕಾಲದ ಕನ್ನಡಿ: ತೂಕಡಿಸಿ ತೂಕಡಿಸಿ ಬೀಳದಿರು ಅಣ್ಣ ...ನಮ್ಮ ಅಣ್ಣ... by partha1059
ಉ: ಕಾಲದ ಕನ್ನಡಿ: ತೂಕಡಿಸಿ ತೂಕಡಿಸಿ ಬೀಳದಿರು ಅಣ್ಣ ...ನಮ್ಮ ಅಣ್ಣ...
ಧನ್ಯವಾದಗಳು ಪಾರ್ಥರೇ..
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ
ಉ: ಕಾಲದ ಕನ್ನಡಿ: ತೂಕಡಿಸಿ ತೂಕಡಿಸಿ ಬೀಳದಿರು ಅಣ್ಣ ...ನಮ್ಮ ಅಣ್ಣ...
ದೊಡ್ಡಗೌಡರ ನಿದ್ದೆಗೂ ನಿದ್ರಾಮಯ್ಯನವರಿಗೂ ಹೋಲಿಸದಿರಿ, ನಾವಡರೇ. ದೊಡ್ಡಗೌಡರು ಹಾಸನದ ಮೇಲಿನ ಹಿಡಿತವನ್ನು ಇಂದಿಗೂ ಸಡಿಲಿಸಿಲ್ಲ. ನಿದ್ರಾಮಯ್ಯನವರದು ಹಾಗಲ್ಲ, ಅವನತಿಯ ಹಾದಿಯಲ್ಲಿ ಸಾಗುತ್ತಿದ್ದಾರೆ.