ಕಾಲಾತೀತ ಕಾಲ

ಕಾಲಾತೀತ ಕಾಲ

ಕಾಲ ಗರ್ಭದಲಿ ಉಹೆಗೆ
ನಿಲುಕದ ಅನೇಕ ರಹಸ್ಯಗಳಿವೆ
ಅದರ ನಿಗೂಢತೆ ಅಪಾರ
ಉಪ್ಪರಿಗೆ ತಿಪ್ಪೆಯಾಗುವುದು
ತಿಪ್ಪೆ ಉಪ್ಪರಿಗೆಯಾಗುವುದು
ಇವೆಲ್ಲ ಜಗನ್ನಿಯಾಮಕನ
ಕಾಲದ ಆಟಗಳು

ಕಾಲ ಬರಿ ಹಸನ್ಮುಖಿ ಮಾತ್ರವಲ್ಲ
ಹಲವು ಸಲ ಕೆರಳುತ್ತದೆ ಕೂಡ
ಬಡವ ಬಲ್ಲಿದ ತತ್ವಜ್ಞಾನಿ ಸಾಧಕ
ಸಾಹಿತಿ ಕಲಾವಿದ ಜನನಾಯಕ
ಜನಸಾಮಾನ್ಯ ಯಾರೇ ಇರಲಿ
ಅದಕೆ ಎಲ್ಲರೂ ಒಂದೇ
ಮುನಿಕಸು ಬಂದರೆ ಎಲ್ಲವನು
ನುಂಗಿ ನೊಣೆದು ಬಿಡುತ್ತದೆ
ಒಲಿದರೆ ಶಿಖರದ ತುತ್ತ ತುದಿಗೆ
ಒಯ್ದು ಕೂರಿಸಿ ಬಿಡುತ್ತೆ

ಆದರೆ ನಾವು ಕಾಲದ ಬಂದಿ
ಅದರ ಹಂಗಿನಲ್ಲಿದ್ದೇವೆ ನಮಗೆ
ನಾಳೆಗಳ ಕನಸುಗಳಿರಬೇಕು
ಅವನು ನನಸಾಗಿಸುವ ಯತ್ನ
ಇಂದೇ ಆಗಬೇಕು ಅದನು ನಾಳೆಗೆ
ಮುಂದೂಡುವುದು ಕಾಲವನು
ಸ್ಥಗಿತಗೊಳಿಸಿದಂತೆ ಅದು
ನಮ್ಮ ಬದುಕಿನ ಸ್ಥಗಿತತೆಕೂಡ

ಬದುಕು ಕಾಲಗಳ ನಡುವಿನ
ಸಂಬಂಧಗಳೇನು ನಾವು ಪ್ರತಿ
ದಿನವನ್ನೂ ಕಟ್ಟ ಕಡೆಯ
ದಿನದಂತೆ ಬದುಕಿ ಬಿಡಬೇಕು
ಇದು ನಾವು ಕಾಲದೊಂದಿಗೆ
ವ್ಯವಹರಿಸ ಬೇಕಾದ ರೀತಿ
ಮತ್ತು ಅನಿವಾರ್ಯತೆ ಕೂಡ
ಯಾಕೆಂದರೆ ಕಾಲ ಕಾಲಾತೀತ

Rating
No votes yet

Comments

Submitted by nageshamysore Tue, 12/10/2013 - 21:30

ಪಾಟೀಲರೆ ನಮಸ್ಕಾರ. ಕಾಲದ ಕಾಲಾತೀತತೆ ಬರೆದೂ ಮುಗಿಯದ ಅಗಾಧ ಅನಂತ. ಕಾಲದ ಕಲ್ಪನೆಯ ಅದ್ಭುತ. ಇಡಿ ಜೀವಿಗಳ ಬದುಕೆ ಕಾಲದೆರಡು ಬಿಂದುಗಳ ನಡುವಿನ ಸುಖ ದುಃಖ ಸಂಕಲಿತ ಯಾನ. ಆ ಕಾಲದ ಕುರಿತ ಲಹರಿ ಚೆನ್ನಾಗಿದೆ. ಈ ಕೆಳಗಿನ ಸಾಲುಗಳು ಎಂದೆಂದಿಗೂ ಪ್ರಸ್ತುತ:
.......ನಾವು ಪ್ರತಿ
ದಿನವನ್ನೂ ಕಟ್ಟ ಕಡೆಯ
ದಿನದಂತೆ ಬದುಕಿ ಬಿಡಬೇಕು
ಇದು ನಾವು ಕಾಲದೊಂದಿಗೆ
ವ್ಯವಹರಿಸ ಬೇಕಾದ ರೀತಿ
ಮತ್ತು ಅನಿವಾರ್ಯತೆ ಕೂಡ
ಯಾಕೆಂದರೆ ಕಾಲ ಕಾಲಾತೀತ

Submitted by H A Patil Wed, 12/11/2013 - 19:16

In reply to by nageshamysore

ನಾಗೇಶ ಮೈಸೂರು ರವರಿಗೆ ವಂದನೆಗಳು
ಈ ಕವನಕ್ಕೆ ತಾವು ಬರೆದ ಪ್ರತಿಕ್ರಿಯೆ ಓದಿದೆ, ತಾವು ಯಾರದೆ ಬರವಣಿಗೆಯನ್ನು ಗ್ರಹಸುವ ಅರ್ಥೈಸುವ ಮತ್ತು ಪ್ರತಿಕ್ರಿಯಿಸುವ ರೀತಿ ವಿವರಿಸಲು ಸಾಧ್ಯವಾಗದುದು, ಮೆಚ್ಚುಗೆಗೆ ಧನ್ಯವಾದಗಳು ಎಂದು ಮಾತ್ರ ಹೇಳಬಲ್ಲೆ.

Submitted by ravindra n angadi Wed, 12/11/2013 - 16:01

ನಮಸ್ಕಾರಗಳು ಸರ್
ಯಾರ ಮಾತನು ಕೆಳದ ತನ್ನಷ್ತಕ್ಕೆ ತಾನು ನಡೆದು ಹೊಗುವ ಕಾಲ ಯಾರಿಗು ಸಿಗುವುದಲ್ಲ ಕಾಲದ ಕವನ ಚನ್ನಾಗಿದೆ.