' ಕಾಳ ನರ್ತನ '

' ಕಾಳ ನರ್ತನ '

    
ವರಕವಿ ಬೇಂದ್ರೆ ಹೇಳಿದ್ದಾರೆ 
‘ಕುರುಡು ಕಾಂಚಾಣ ಕುಣಿಯುತಲಿತ್ತ’
ಅದೊಂದು ಸಾರ್ವಕಾಲಿಕ ಅಣಿಮುತ್ತು
ಅದು ಇಂದಿಗೂ ಕುಣಿಯುತ್ತಿದೆ
‘ಕಾಳ ನರ್ತನ’ ಅಟ್ಟಹಾಸ ನಿಂತಿಲ್ಲ
ಕುಣಿತಕ್ಕೆ ವೇಗ ಬಂದಿದೆ
ದುರಹಂಕಾರ ಮಡುಗಟ್ಟಿದೆ 
ಮಾನವೀಯ ಸೆಲೆಗಳು ಬತ್ತಿ ಹೋಗಿವೆ
 
ಹಣದ ಮಹತ್ವ ಅಂತಹುದು 
ಯಾರ ಯಾರನ್ನೋ ಔನ್ನತ್ಯಕ್ಕೇರಿಸುತ್ತದೆ
ಇನ್ನಾರನ್ನೋ ಪಾತಾಳದ ಕಣಿವೆಗೆ
ನೂಕಿ ಬಿಡುತ್ತದೆ ದುರ್ಬಲ 
ಮನುಷ್ಯರನ್ನು ಆಂತರಿಕವಾಗಿ ದಾಹವಾಗಿ 
ಆವರಿಸಿ ಬಿಡುತ್ತದೆ ಇಂಥಲ್ಲಿ 
ಮಾನವೀಯ ಮೌಲ್ಯಗಳು ಸೋತಿವೆ 
 
ಎಲ್ಲರನು ಎಲ್ಲವನು ಎಲ್ಲ ಕಾಲಕೂ 
ದುರ್ಬಲಗೊಳಿಸುವ ಹಣದ ‘ರುದ್ರ ತಾಂಡವ’
ನಿಲ್ಲುವ ಲಕ್ಷಣಗಳಿಲ್ಲ ರಕ್ತ ಬೀಜಾಸುರನಂತೆ 
ವ್ಯಾಪಿಸಿ ಕಬಂಧ ಬಾಹುಗಳನ್ನು ಚಾಚಿ 
ದಶ ಶಿರಗಳ ಮೇಲೆತ್ತಿ ಏರು ದನಿಯಲಿ
ಕೂಗುತ್ತ ನಾಲಿಗೆ ಹಿರಿದು ಕೋರೆ ಹಲ್ಲುಗಳ
ತೆರೆದು ಮಾನವೀಯ ಗುಣ 
ಜೀವನದ ಸತ್ವಗಳ ತಿಂದು ತೇಗಿ 
ಠೇಂಕಾರದಲಿ ಅಟ್ಟಹಾಸ ಮೆರೆಯುತಿದೆ 
 
ಇಂದು ಮಾನವೀಯ ಸದ್ಗುಣ 
ಸದಾಚಾರಗಳು ಜೀವನದ ಮಿಡಿತಗಳು 
ಜಾರು ದಾರಿಯಲಿವೆ 
ಎಲ್ಲಿಯ ವರೆಗೆ ಈ ಅಧಃಪತನ!
ಪಾತಾಳವನು ದಾಟಿ ಅಧೋ ಲೋಕದೆಡೆಗೆ
ಸಾಗಿದೆ ಗುರಿ ಆದರ್ಶಗಳಿಲ್ಲದ ಪಯಣ 
ಕಾದಿರುವನೆ ಶ್ರೀ ಸಾಮಾನ್ಯ? ದುಷ್ಟ ಶಿಕ್ಷಕಿ 
ಶಿಷ್ಟ ರಕ್ಷಕಿ ದುರ್ಗಿ ಅವತರಿಸಿ ಬರುವಳೆಂದು 
 
ಇಂದಿನವು ನಂಬಿಕೆಯ ದಿನಗಳಲ್ಲ
ಇದು ವೈಜ್ಞಾನಿಕ ಯುಗ 
ಮನುಷ್ಯ ಸರ್ವ ಶ್ರೇಷ್ಟ ಆತನಿಂದ ಎಲ್ಲವೂ 
ಸಾಧ್ಯ ಎಂಬ ಮರಳಿನ ನೆಲಗಟ್ಟಿನ ಮೇಲೆ
ಮನು ಕುಲೋದ್ಧಾರದ ‘ಸ್ವಪ್ನ ಸೌಧ’ 
ಕಟ್ಟುತ್ತಿದ್ದೇವೆ ಆ ಸೌಧ ತಲೆ ಎತ್ತಿ ನಿಲ್ಲುವುದೆ?
ನಿರ್ಮಿತಿ ಸಾಕಾರವಾಗುವುದೆ?
ಬಿಡಿಸಲಾಗದ ಪ್ರಮೇಯ ನಾವಿಂದು 
ಅಧಃಪತನದ ದಾರಿಯಲ್ಲಿದ್ದೇವೆ 
ಇದಕೆ ಕೊನೆ ಇದೆಯೆ? ಖಂಡಿತ ಇಲ್ಲ
 
‘ಕಾಳ ನರ್ತನದ’ ದಿಬ್ಬಣ ಹೊರಟಿದೆ
ವಂದಿ ಮಾಗಧರ ಬಹು ಪರಾಕಿನಲಿ 
ತಮ್ಮದೆ ಕಲ್ಪನೆಯ ರಾಜ್ಯ ಕಟ್ಟುವ ಆಳುವ 
ಅನುಭವಿಸುವ ಲೊಲುಪ್ತ ಬಯಕೆ 
ಲಾಲಸೆಗಳ ಹೊತ್ತು 
ಜಯಕಾರ ಹಾಕಿ ಬಿಡುವುದೆ? ಮನ 
ಒಪ್ಪುತ್ತಿಲ್ಲ ಖಂಡಿಸುವುದೆ? ದಮನ 
ಚಾರಿತ್ರ್ಯ ಹನನದ ಭೀತಿ
ದಿಕ್ಕೆಟ್ಟು ನಿಂತಿರುವ ಶ್ರೀ ಸಾಮಾನ್ಯ 
ಜನ ಜೀವನದ ಭವಣೆಗಳಿಗೆ ಕೊನೆಯೆಂದು? 
ಬಾಳೊಂದು ನಿರಂತರ ಪಯಣ
ಮಾನವ ನಿಜ ಅರ್ಥದಲಿ 
ಮಾನವನಾಗುವ ದಣಿವರಿಯದ ಪಯಣ 
 
ನಾವೆಲ್ಲ ಬರಿ ಪಾತ್ರಧಾರಿಗಳು 
ಬಣ್ಣ ಹಚ್ಚಿ ವೇಷ ಕಟ್ಟಿ ನಮ್ಮ ಪಾತ್ರಗಳಲಿ 
ತಲ್ಲಿನರಾಗಿದ್ದೇವೆ ನಾಟಕ ಮುಗಿಯಿತೋ 
ಅಂಕ ಪರದೆ ಸರಿದು 
ನೇಪಧ್ಯಕ್ಕೆ ಸರಿದು ಹೋಗಬೇಕು 
ಜೀವನದ ನಾಟಕ ಅನವರತ ಕಾಲಕ್ಕೆ 
ತಕ್ಕಂತೆ ಪಾತ್ರಗಳು ಪಾತ್ರಧಾರಿಗಳು ಬೇರೆ
ಕಾಲ ಚಲನಶೀಲ ನಿರಂತರ ಅದು
ಹಿಂದೆಯೂ ಇತ್ತು ಇಂದೂ ಇದೆ 
ಮುಂದೆಯೂ ಇರುತ್ತದೆ ನಾವು ಬಿಟ್ಟು ಹೋಗುವ
ಕಾಲ ಎಂತಹುದು ಅದು ನಮ್ಮ ನಮ್ಮ 
ಅಂತರಾತ್ಮಗಳಿಗೆ ವೇದ್ಯವಾಗುವಂತಹುದು!
 
                        *
 

Rating
No votes yet

Comments

Submitted by kavinagaraj Sun, 07/03/2016 - 07:33

ವಾಸ್ತವತೆಯ ಚಿತ್ರಣ, ಪಾಟೀಲರೇ. ಮೂಢನಿಗೆ ಅವನದೇ ಮಾತು ನೆನಪಾಯಿತು:
ಗತಿಯು ತಿರುಗುವುದು ಮತಿಯು ಅಳಿಯುವುದು
ಬಂಧುತ್ವ ಮರೆಸುವುದು ಸ್ನೇಹಿತರು ಕಾಣಿಸರು|
ನಾನತ್ವ ಮೆರೆಯುವುದು ಪೊರೆಯು ಮುಸುಕುವುದು
ಹಣವು ಗುಣವ ಹಿಂದಿಕ್ಕುವುದು ಮೂಢ||