ಕಾವೇರಿಯಿಂದಮಾ ಗೋದಾವರಿ.....

ಕಾವೇರಿಯಿಂದಮಾ ಗೋದಾವರಿ.....

ಕೇಳಿದ್ದೆ , ಓದಿದ್ದೆ . ಕಾವೇರಿಯಿಂದ ಗೋದಾವರಿವರೆಗೆ ಕನ್ನಡನಾಡು ವ್ಯಾಪಿಸಿತ್ತು ಮತ್ತು ಇದು 'ಕವಿರಾಜಮಾರ್ಗ'ದಲ್ಲಿದೆ ಎಂದಷ್ಟೇ ಗೊತ್ತಿತ್ತು. ಇದರಲ್ಲಿ 'ಮಾ' ಎಂದರೇನು ಗೊತ್ತಿರಲಿಲ್ಲ . ವಸುಧಾ-ವಲಯ-ವಿಲೀನ, ವಿಶದ-ವಿಷಯ-ವಿಶೇಷಂ ಎಂದೇನೋ ನಂತರದ ಸಾಲು ಇದೆ ಎಂದು ಗೊತ್ತಿತ್ತು ಅದರರ್ಥ ಗೊತ್ತಿರಲಿಲ್ಲ . ಈಗ ನನಗೆ ಈ ಬಗ್ಗೆ ಶ್ರೀ ಕೆ.ವಿ.ಸುಬ್ಬಣ್ಣ ಅವರ ಲೇಖನವೊಂದರಲ್ಲಿ ಮಾಹಿತಿ ಸಿಕ್ಕಿತು. ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಯಸುವೆ.

`ಕವಿರಾಜಮಾರ್ಗ' ವೆಂಬ ಗ್ರಂಥ ಕವಿ ಶ್ರೀವಿಜಯ ಮತ್ತು ರಾಜಾ ನೃಪತುಂಗರಿಬ್ಬರೂ ಕೂಡಿ
ರಚಿಸಿದ್ದು. ಈ ಗ್ರಂಥವು, ತನ್ನ ಕಿರುಭಾಷೆಯ ಅಂಗೈನೆಲದಲ್ಲಿ ಪ್ರಪಂಚಜಗತ್ತನ್ನು ಆವಾಹಿಸಿ ಅರಗಿಸಿಕೊಂಡು ಕನ್ನಡವೆಂಬ ನಿಸ್ಸೀಮೆಯ ಪ್ರತಿಜಗತ್ತನ್ನು ಹೇಗೆ ಸೃಷ್ಟಿಸಿಕೊಳ್ಳಬೇಕೆಂಬುದನ್ನು ಕುರಿತು ಚಿಂತಿಸುತ್ತದೆ. `ಕವಿರಾಜಮಾರ್ಗ' ದಲ್ಲಿನ ಒಂದು ಕಿರು ಕಂದಪದ್ಯವು ಅದನ್ನು ಮನೋಜ್ಞವಾಗಿ ಬಣ್ಣಿಸುತ್ತದೆ.

`ಕಾವೇರಿಯಿಂದಂ-ಆ-ಗೋದಾವರಿವರಂ-ಇರ್ದ-ನಾಡು-ಅದು ಆ ಕನ್ನಡದೊಳ್ ಭಾವಿಸಿದ ಜನಪದಂ'. ಈ ನಾಡು ಮತ್ತು ಜನಪದವು ತತ್ಕಾಲದಲ್ಲಿ ಕಾಣಿಸುತ್ತಿದ್ದ ಭೌಗೋಲಿಕ ಘಟಕವಷ್ಟೇ ಅಲ್ಲ; ಅದು `ಭಾವಿತ' ವಾದದ್ದು; `ಕನ್ನಡ' ವೆಂಬುದರ ಒಳಗಡೆ-ಆ ಚಿಪ್ಪಿನ ಒಳಗೆ ಎನ್ನಿ-`ಭಾವಿತ' ವಾದದ್ದು. ಅಂದರೆ, `ಕನ್ನಡ' ವೆಂಬುದು ಒಂದು ಚಿತ್-ಜಗತ್ತು, ಒಂದು ಕಣಸು, ದರ್ಶನ; ಮೊದಲು ಚಿತ್-ಜಗತ್ತಿನೊಳಗೆ ಮೈದಾಳಿದ್ದಾಗಿ ಅನಂತರ ನಿರ್ಮಿತಗೊಂಡಿದೆ. ಮತ್ತು ಇದು, `ವಸುಧಾ-ವಲಯ-ವಿಲೀನ, ವಿಶದ-ವಿಷಯ-ವಿಶೇಷಂ'. ವಸುಧಾ (ಭೂಮಿ) ಎನ್ನುವುದು ಅನಂತ ಬ್ರಹ್ಮಾಂಡದೊಳಗಿನ ಒಂದು `ವಲಯ' ಅಷ್ಟೇ; ಮತ್ತು `ಕನ್ನಡ' ವೆಂಬ `ವಿಷಯ' (ನಾಡು) ವು ಆ ವಸುಧಾಲಯದಲ್ಲಿ `ವಿಲೀನ' ವಾಗಿದೆ, ಸಮರಸವಾಗಿ ಬೆರೆತುಕೊಂಡಿದೆ. ಹಾಗೆಂದ ಮಾತ್ರಕ್ಕೆ ಇದು ಸ್ವಂತಿಕೆಯ ಚಹರೆಯಿಲ್ಲದೆ ವಸುಧೆಯಲ್ಲಿ ಗುರುತು ಸಿಗದಂತೆ ಮುಳುಗಿಹೋದದ್ದಲ್ಲ; ತನ್ನದೇ `ವಿಶೇಷ' (ವೈಶಿಷ್ಟ್ಯ) ಇರುವ ನಾಡು. ಅಷ್ಟೇ ಅಲ್ಲ-ಇದು `ವಿಶದ' ವಾದದ್ದು; ವಸುಧೆ ಅಥವಾ ಬ್ರಹ್ಮಾಂಡದಷ್ಟೇ ವ್ಯಾಪಕವಾದದ್ದು. ಯಾಕೆಂದರೆ ಇದು, `ವಸುಧಾಲಯ ವಿಲೀನ' ಎಂಬುದರ ಇನ್ನೊಂದು ಅರ್ಥವನ್ನು(ವಸುಧಾಲಯವನ್ನು ತನ್ನೊಳಗೆ ಅರಗಿಸಿಕೊಂಡಿರುವಂಥದು ಎಂಬ ಅರ್ಥವನ್ನು) ಪರಿಭಾವಿಸಿಕೊಳ್ಳಬೇಕು. ವಸುಧೆಯ ಒಳಗಿನ ಒಂದು ಕಿರಣಬಿಂದುವಾಗಿದ್ದೂ ತನ್ನೊಳಗೆ ಆ ವಸುಧೆಯನ್ನೇ ಅರಗಿಸಿಕೊಂಡಿರುವ `ಕನ್ನಡ' ದ ಇಂಥ ಪ್ರತಿಮೆಯನ್ನು `ಕವಿರಾಜಮಾರ್ಗ' ವು ಕಂಡಿರಿಸಿಟ್ಟಿದೆ. ಕನ್ನಡವು ವಸುಧಾಲಯವನ್ನು ತನ್ನಲ್ಲಿ ವಿಲೀನಗೊಳಿಸಿಕೊಂಡಿರುವ ಪರಿಯನ್ನು `ಕವಿರಾಜಮಾರ್ಗ'ವು ಹೀಗೆ ಬಣ್ಣಿಸಿದೆ .

Rating
Average: 3.1 (9 votes)

Comments