ಕಾಶ್ಮೀರದ ನಾಡ್ಗಿಚ್ಚು ನಂದೀತು ಎಂದು?

ಕಾಶ್ಮೀರದ ನಾಡ್ಗಿಚ್ಚು ನಂದೀತು ಎಂದು?

ಪ್ರಸ್ತುತ ಕಾಶ್ಮೀರದಲ್ಲಿ ಉಂಟಾಗಿರುವ ಅಮರ್‌ನಾಥ್ ಭೂವಿವಾದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ನಿನ್ನೆ "ಕಾಶ್ಮೀರ ಯಾರಿಗೆ ಸೇರಿದ್ದು" ಎನ್ನುವ ಲೇಖನವನ್ನು ನನ್ನ ಬ್ಲಾಗ್‌ನಲ್ಲಿ ಪ್ರಕಟಿಸಿದ್ದೆ. ಕಾಕತಾಳೀಯವೆಂಬಂತೆ ಕನ್ನಡ ಪತ್ರಿಕೋದ್ಯಮದ ಪ್ರಮುಖ ರಾಜಕೀಯ ವಿಶ್ಲೇಷಕರಾಗಿರುವ ಶ್ರೀ ದಿನೇಶ್ ಅಮೀನ್‌ಮಟ್ಟುರವರು ಪ್ರಜಾವಾಣಿಯಲ್ಲಿ 'ನಡೆಯಲಿ ಜನಮತಗಣನೆ, ಒಂದು ಕೈನೋಡಿಯೋ ಬಿಡೋಣ' ಎಂಬ ತಲೆಬರಹವುಳ್ಳ ಅತ್ಯಂತ ಮೌಲಿಕವಾದ ಲೇಖನವೊಂದನ್ನು 25ನೇ ಆಗಸ್ಟ್ ರಂದು 'ದೆಹಲಿ ನೋಟ' ಅಂಕಣದಲ್ಲಿ ಪ್ರಕಟಿಸಿದ್ದಾರೆ. ಅದನ್ನು ಓದಿರದ ಓದುಗರಿಗಾಗಿ ಕೆಲವು ಮುಖ್ಯಾಂಶಗಳನ್ನು ನನ್ನ ವಿಶ್ಲೇಷಣೆಯೊಂದಿಗೆ ಇಲ್ಲಿ ಹಾಕುವುದರೊಂದಿಗೆ ನಿನ್ನೆ ನಾ ಬರೆದಿದ್ದ ಲೇಖನವನ್ನು ಮುಂದುವರಿಸಿದ್ದೇನೆ.

ಲೇಖನದ ಆರಂಭದಲ್ಲಿಯೇ ಕಾಶ್ಮೀರವನ್ನು ಕಾಶ್ಮೀರೇತರರು ನೋಡುವ ಕಣ್ಣಿನಲ್ಲಿಯೇ ದೋಷವಿದೆ ಎಂದು ಹೇಳುವ ದಿನೇಶ್, ಕಾಶ್ಮೀರವನ್ನು ಅರ್ಥಮಾಡಿಕೊಳ್ಳಲು ಅದರ ಇತಿಹಾಸವನ್ನು ಅರಿತಿರಬೇಕಾದ ಅಗತ್ಯವನ್ನು ಒತ್ತಿ ಹೇಳುತ್ತ, "ಕಾಶ್ಮೀರ ಎನ್ನುವುದು ಕರ್ನಾಟಕ, ಬಿಹಾರ, ಪಂಜಾಬ್‌ಗಳಂತೆ ಮತ್ತೊಂದು ರಾಜ್ಯವಲ್ಲ, ಅದಕ್ಕೊಂದು ಭಿನ್ನ ಇತಿಹಾಸ ಇದೆ" ಎಂದು ಇತಿಹಾಸದ ಪುಟಗಳನ್ನು ತಿರುವಿ ಹಾಕುತ್ತಾರೆ.

ಸ್ವಾತಂತ್ರ್ಯಪೂರ್ವ ಭಾರತ 1947ರಲ್ಲಿ ಸ್ವಾತಂತ್ರ್ಯ ಗಳಿಸುವುದರೊಂದಿಗೆ ಭಾರತ ಮತ್ತು ಪಾಕಿಸ್ತಾನ ಎಂದು ಎರಡು ಪ್ರತ್ಯೇಕ ರಾಷ್ಟ್ರಗಳಾಗಿ ರೂಪುಗೊಂಡಾಗ, "ಉಳಿದೆಲ್ಲ ಮುಸ್ಲಿಂ ಬಾಹುಳ್ಯದ ರಾಜ್ಯಗಳು ಪಾಕಿಸ್ತಾನದ ಜತೆ ಸೇರಿಕೊಂಡಾಗ ಶೇ.98ರಷ್ಟು ಮುಸ್ಲಿಮರಿರುವ ಕಾಶ್ಮೀರ ಭಾರತದಲ್ಲಿಯೇ ಉಳಿಯಿತು. ಇದಕ್ಕೆ ಕಾರಣ ಆಗಿನ ಹಿಂದೂ ದೊರೆ ಹರಿಸಿಂಗ್ ಕಾರಣ ಎಂದು ಹೇಳಿಬಿಡಬಹುದು. ಆದರೆ ದೊರೆಯ ಕಡುವಿರೋಧಿ ಶೇಖ್ ಅಬ್ದುಲ್ಲಾ ಕೂಡ ಪಾಕಿಸ್ತಾನದ ಜತೆ ಸೇರಿಕೊಳ್ಳಲು ನಿರಾಕರಿಸುತ್ತಲೇ ಬಂದಿದ್ದರು ಎನ್ನುವುದನ್ನು ಮರೆಯಬಾರದು.

ಈ ವಿಶಿಷ್ಟ ಹಿನ್ನೆಲೆಯಿಂದಾಗಿಯೇ ಭಾರತ ಗಣರಾಜ್ಯವಾದಾಗ ಕಾಶ್ಮೀರಕ್ಕೇ ವಿಶೇಷ ಸ್ಥಾನಮಾನ ನೀಡಲು ಸಂವಿಧಾನದಲ್ಲಿ 370ನೇ ವಿಧಿಯನ್ನು ಸೃಷ್ಟಿಸಲಾಯಿತು. ಅದಕ್ಕೊಂದು ಪ್ರತ್ಯೇಕವಾದ ಸ್ಥಾನಮಾನ ಇದೆ, ಪ್ರತ್ಯೇಕ ಧ್ವಜವೂ ಇದೆ. ರಕ್ಷಣೆ, ವಿದೇಶಾಂಗ ವ್ಯವಹಾರ ಮತ್ತು ಸಂಪರ್ಕ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದೆಲ್ಲ ಕ್ಷೇತ್ರಗಳಿಗೆ ಸಂಬಂಧಿಸಿದ ಕಾನೂನುಗಳು ಕಾಶ್ಮೀರ ವಿಧಾನಸಭೆ ಅಂಗೀಕಾರ ನೀಡದೆ ಅಲ್ಲಿ ಜಾರಿಗೆ ಬರುವುದಿಲ್ಲ. ಕಾಶ್ಮೀರಿಗಳೆಲ್ಲ ಭಾರತೀಯರು. ಆದರೆ ಭಾರತೀಯರೆಲ್ಲ ಕಾಶ್ಮೀರಿಗಳಲ್ಲ. ಕಾಶ್ಮೀರೇತರರಿಗೆ ಅಲ್ಲಿ ಆಸ್ತಿ ಹಕ್ಕು ಇಲ್ಲ. ಕಾಶ್ಮೀರಿಗಳು ತಮ್ಮ ಆಸ್ತಿ ಮಾರುವುದಿದ್ದರೆ ತಮ್ಮೊಳಗೆ ಮಾರಾಟ ನಡೆಸಬೇಕು. ಹಾಗಿದ್ದರೆ ಕಾಶ್ಮೀರ ಭಾರತದಲ್ಲಿ ಯಾಕೆ ಇರಬೇಕು?" ಎಂದು ಒಬ್ಬ ಸಾಮಾನ್ಯ ಭಾರತೀಯ ಪ್ರಜೆ ಕೇಳಬಹುದಾದ ಪ್ರಶ್ನೆಯನ್ನು ದಿನೇಶ್ ಎತ್ತುತ್ತಾರೆ.

ಕಾಶ್ಮೀರದ ವಸ್ತುಸ್ಥಿತಿ ಹೀಗಿರುವಾಗ ಆ ರಾಜ್ಯದ ಪ್ರತ್ಯೇಕತಾವಾದಿಗಳ ಹೋರಾಟಕ್ಕೆ ಅರ್ಥವಿದೆಯಲ್ಲವೇ? ಅವರ ಬೇಡಿಕೆ ನ್ಯಾಯಯುತವಾದದ್ದೇ? ಅವರು ಬಯಸುತ್ತಿರುವುದಾದರು ಏನು? ಈಗ ಕಾಶ್ಮೀರದಲ್ಲಿ ನಡೆಯುತ್ತಿರುವುದೇ ಅಂತಿಮ ಸತ್ಯವೇ?

ಪ್ರತ್ಯೇಕತಾವಾದಿಗಳು ನಿಜವಾಗಿಯೂ ಕಾಶ್ಮೀರದ ಜನಮನವನ್ನು ಪ್ರತಿನಿಧಿಸುತ್ತಿದ್ದಾರಾ? ಎನ್ನುವ ಪ್ರಶ್ನೆಗಳಿಗೆ ದಿನೇಶ್ ಅವರ ಜನಮನವನ್ನು ತಿಳಿದುಕೊಳ್ಳುವುದಕ್ಕೆ ಇದ್ದ ಎರಡು ಅವಕಾಶಗಳ ಬಗ್ಗೆ ವಿವರಿಸುತ್ತಾರೆ.

"ಮೊದಲನೆಯದ್ದು ವಿಶ್ವಮಾನ್ಯತೆ ಹೊಂದಿರುವ ಬ್ರಿಟನ್‌ನ 'ಮೋರಿ' ಸಂಸ್ಥೆ 2002ರಲ್ಲಿ ಕಾಶ್ಮೀರದಲ್ಲಿ ನಡೆಸಿದ್ದ ಸಮೀಕ್ಷೆ. ಎರಡನೆಯದ್ದು ಆ ಸಮೀಕ್ಷೆಯ ಬೆನ್ನಲ್ಲೇ ಅಂತರರಾಷ್ಟ್ರೀಯ ವೀಕ್ಷಕರ ಕಾವಲು ಕಣ್ಣಿನಲ್ಲಿ ನಡೆದ ವಿಧಾನಸಭಾ ಚುನಾವಣೆ.

'ಮೋರಿ' ಸಮೀಕ್ಷೆಯ ಪ್ರಕಾರ ಕಾಶ್ಮೀರದ ಶೇಕಜಡಾ 60ರಷ್ಟು ಮಂದಿ ಕಾಶ್ಮೀರ ಭಾರತದಲ್ಲಿಯೇ ಇರಬೇಕು ಎಂದು ಹೇಳಿದ್ದರು. ಪಾಕಿಸ್ತಾನಕ್ಕೆ ಸೇರಬೇಕೆಂದು ಬಯಸಿದ್ದವರು ಕೇವಲ ಶೇಕಡಾ ಆರು ಮಂದಿ ಮಾತ್ರ. ನ್ಯಾಯಬದ್ಧ ಚುನಾವಣೆ ನಡೆಸಿದರೆ ತಾವು ಭಾಗವಹಿಸುವುದಾಗಿ ಶೇ.86 ರಷ್ಟು ಜನ ತಿಳಿಸಿದ್ದರು. ರಾಜ್ಯ ಬಿಟ್ಟುಹೋಗಿರುವ ಹಿಂದೂಗಳು ವಾಪಸು ಬರಬೇಕೆಂದು ಕಾಶ್ಮೀರ ಕಣಿವೆಯ ಶೇ.87 ಜನತೆ ಬಯಸಿದ್ದರು.

ಎರಡನೆಯದ್ದು ಕಳೆದ ವಿಧಾನಸಭಾ ಚುನಾವಣೆ. ಕೇವಲ ಶೇ.43ರಷ್ಟು ಮತದಾರರಷ್ಟೇ ಭಾಗವಹಿಸಿದ್ದ ಮಾತ್ರಕ್ಕೆ ಉಳಿದ ಶೇ.57ರಷ್ಟು ಮತದಾರರು ಪ್ರಜಾಪ್ರಭುತ್ವ ವಿರೋಧಿಗಳೆಂಬ ತೀರ್ಮಾನಕ್ಕೆ ಬರುವುದು ಸರಿಯಾಗಲಾರದು.

ಹಿಂದೂ ಮತದಾರರನ್ನು ನಂಬಿಕೊಂಡಿದ್ದ ಬಿಜೆಪಿಯನ್ನು ಜಮ್ಮು ಮತದಾರರೇ ತಿರಸ್ಕರಿಸಿದ್ದರು. ಬಿಜೆಪಿ ಗೆದ್ದದ್ದು ಒಂದೇ ಒಂದು ಸ್ಥಾನ. ಜಮ್ಮುವಿನ 37 ಸ್ಥಾನಗಳಲ್ಲಿ ಕಾಂಗ್ರೆಸ್ ಹದಿನೈದನ್ನು ಗೆದ್ದಿತ್ತು.

ಈ ಸಮೀಕ್ಷೆ, ಚುನಾವಣೆಗಳು ಯಾವುದೂ ಕಾಶ್ಮೀರಿಗಳ ಒಳಮನಸ್ಸಿಗೆ ಹಿಡಿದ ಕನ್ನಡಿ ಅಲ್ಲ ಎಂದಾದರೆ ಉಳಿದಿರುವುದು ಒಂದೇ ದಾರಿ. ಅದು ಅರವತ್ತು ವರ್ಷಗಳ ಹಿಂದೆ ವಿಶ್ವಸಂಸ್ಥೆಯೇ ಸೂಚಿಸಿದ್ದ ಜನಮತಗಣನೆ.

ಭಾರತವನ್ನು ಸುತ್ತಿಕೊಂಡಿರುವ ಕಾಶ್ಮೀರದ ಸಮಸ್ಯೆಗಳ ಸರಮಾಲೆಯಿಂದ ಬಿಡುಗಡೆಗೆ ಇರುವ ಏಕೈಕ ಪರಿಹಾರ ಮಾರ್ಗ - ಜನಮತಗಣನೆ. ಇದು ಜಮ್ಮು ಮತ್ತು ಕಾಶ್ಮೀರದಲ್ಲಿ ಮಾತ್ರವಲ್ಲ ಪಾಕ್ ಆಕ್ರಮಿತ ಕಾಶ್ಮೀರದಲ್ಲಿಯೂ ನಡೆಯಬೇಕಾಗಿರುವುದರಿಂದ ಅಲ್ಲಿನ ಕತ್ತಲ ಲೋಕವನ್ನು ಜಗತ್ತಿನ ಮುಂದೆ ತೆರೆದಿಡಲು ಒಂದು ಅವಕಾಶ ಕೂಡ ಸಿಗಲಿದೆ.

ಸದ್ಯ 'ಆಜಾದಿ ಕಾಶ್ಮೀರ'ದ ಕೂಗು ಕೇಳಿಬರುತ್ತಿರುವಾಗ ಭಾರತ ಇಲ್ಲವೇ ಪಾಕಿಸ್ತಾನ ಎಂಬ ಎರಡು ಆಯ್ಕೆಗಳನ್ನಷ್ಟೇ ಕಾಶ್ಮೀರಿಗಳ ಮುಂದಿಟ್ಟು ಜನಮತಗಣನೆ ನಡೆಸುವುದು ನ್ಯಾಯಸಮ್ಮತವೂ ಆಗಲಾರದು. ಭಾರತ, ಪಾಕಿಸ್ತಾನ, ಆಜಾದಿ ಕಾಶ್ಮೀರ ಮತ್ತು ಯಥಾಸ್ಥಿತಿ ಎಂಬ ನಾಲ್ಕು ಆಯ್ಕೆಗಳನ್ನು ಕಾಶ್ಮೀರಿಗಳಿಗೆ ನೀಡಬೇಕಾಗುತ್ತದೆ.

'ಆಜಾದಿ ಕಾಶ್ಮೀರ' ಎಂಬ ಆಯ್ಕೆ ಕೊಟ್ಟ ಮೇಲೆ ಅದರ ಸ್ವರೂಪವನ್ನು ಕೂಡ ಸ್ಪಷ್ಟಪಡಿಸಬೇಕಾಗುತ್ತದೆ. ಅದು ಭಾರತದಂತೆ ಪ್ರಜಾಪ್ರಭುತ್ವ ಜಾತ್ಯತೀತ ದೇಶವೆಂದಾದರೆ ಅಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಸ್ಥಾನಮಾನವನ್ನು ವ್ಯಾಖ್ಯಾನಿಸಬೇಕಾಗುತ್ತದೆ.

ಕಾಶ್ಮೀರಿ ಪಂಡಿತರ ಗತಿ ಏನು?

ಜಮ್ಮು ಪ್ರದೇಶದಲ್ಲಿ ಶೇ.70ರಷ್ಟಿರುವ ಹಿಂದೂ ಮತ್ತು ಸಿಖ್ಖರು ಹಾಗೂ ಕಾಶ್ಮೀರ ಕಣಿವೆಯ ಮುಸ್ಲಿಮರ ಜತೆ ಗುರುತಿಸಿಕೊಳ್ಳದ ಗುಜ್ಜರ್, ಪಂಜಾಬಿ ಮೊದಲಾದ ಗುಡ್ಡಗಾಡು ಜನಾಂಗದಲ್ಲಿರುವ ಮುಸ್ಲಿಮರ ಸ್ಥಾನಮಾನ ಏನು?

ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಬೇಕೆಂದು ಒತ್ತಾಯಿಸುತ್ತಿರುವ ಲಡಾಕ್‌ನಲ್ಲಿನ ಶೇ.52ರಷ್ಟಿರುವ ಬೌದ್ಧರ ಬೇಡಿಕೆಯನ್ನೇನು ಮಾಡಬೇಕು?

ಇತ್ಯಾದಿ ಪ್ರಶ್ನೆಗಳಿಗೆ ಮೊದಲು ಉತ್ತರ ಕಂಡುಕೊಳ್ಳಬೇಕಾಗುತ್ತದೆ ಎನ್ನುತ್ತಾರೆ ದಿನೇಶ್.

ಕಡೆಯದಾಗಿ, ಅಂಕಿ ಅಂಶಗಳ ಸಹಿತ ಕಾಶ್ಮೀರ ಕುರಿತ ತಮ್ಮ ಖಚಿತ ನಿಲುವನ್ನು ವ್ಯಕ್ತಪಡಿಸಿರುವ ದಿನೇಶ್, ಇಂದು ಕೇಂದ್ರ ಸರಕಾರ ಉಳಿದೆಲ್ಲಾ ರಾಜ್ಯಗಳಿಗೆ ನೀಡುತ್ತಿರುವ ತಲಾವಾರು ನೆರವಿನ ಮೊತ್ತ ರೂ.1,300 ಎಂದಾದರೆ, ಕಾಶ್ಮೀರಕ್ಕೆ ಸಿಗುತ್ತಿರುವ ಕೇಂದ್ರದ ತಲಾವಾರು ನೆರವು ರೂ.9250. ರೈಲು, ರಸ್ತೆ, ಇಂಧನ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಸುಮಾರು 25,000 ಕೋಟಿ ರೂ. ಕೇಂದ್ರ ನೆರವಿನ ಯೋಜನೆಗಳು ಅಲ್ಲಿ ಅನುಷ್ಟಾನದಲ್ಲಿವೆ. ಈ ನೆರವಿನ ಶೇ.90 ರಷ್ಟು ಭಾಗ ಅನುದಾನ, ಅಲ್ಲಿ ಜಾರಿಯಲ್ಲಿರುವ ಪಂಚವಾರ್ಷಿಕ ಯೋಜನೆಯ 11 ಸಾವಿರ ಕೋಟಿ ರೂಗಳನ್ನು ಕೇಂದ್ರವೇ ನೀಡಿದೆ. ಕಾಶ್ಮೀರವನ್ನು ಭಾರತದಲ್ಲಿಯೇ ಉಳಿಸಿಕೊಳ್ಳಲು ಪ್ರತಿಯೊಬ್ಬ ಭಾರತೀಯ ನೀಡುತ್ತಿರುವ ಕೊಡುಗೆ ಇದು. ಉಣ್ಣುವ ಬಟ್ಟಲಿಗೆ ಉಗುಳಿದರೆ ಉಪವಾಸ ಕೂರಬೇಕಾಗುವವರು ಯಾರು? ನಂಬಿ, ಕಾಶ್ಮೀರಿಗಳು ಖಂಡಿತ ಮೂರ್ಖರಲ್ಲ ಎಂಬ ಭರವಸೆಯನ್ನು ನೀಡುತ್ತಾರೆ.

ಈ ನಡುವೆ ಸರಕಾರ ಮತ್ತೊಮ್ಮೆ ತನ್ನ ಮೂರ್ಖತನವನ್ನು ಪ್ರದರ್ಶಿಸಿದೆ. ಜಮ್ಮು ಮತ್ತು ಕಾಶ್ಮೀರದ ಭಯೋತ್ಪಾದಕ ಕುಟುಂಬಗಳಿಗೆ ಪಿಂಚಣಿ ನೀಡುವ ಯೋಜನೆಯೊಂದನ್ನು ಪ್ರಕಟಿಸಿದೆ. ಅದಕ್ಕೆ ಸರಕಾರ ನೀಡುವ ಕಾರಣ, ಅವರ ಮಕ್ಕಳು ಭಯೋತ್ಪಾದಕರಾದರೆ, ಅದು ಅವರ ತಪ್ಪಲ್ಲ ಎನ್ನುವುದು. ಆದರೆ, ಪಂಜಾಬ್, ಛತ್ತೀಸ್ಘಡ್, ಅಸ್ಸಾಂ ಮತ್ತಿತರ ಭಯೋತ್ಪಾದನಾ ಪೀಡಿತ ರಾಜ್ಯಗಳಿಗೆ ಇಂತಹ ಸೌಲಭ್ಯ ಒದಗಿಸದೆ, ಕಾಶ್ಮೀರಕ್ಕೇ ಯಾಕೆ ಇಂತಹ ಸವಲತ್ತು ಎನ್ನುವುದು ಪ್ರಶ್ನೆ. ಇನ್ನಾದರೂ ಸರಕಾರ ಇಂತಹ ಓಲೈಸುವ ಕೆಲಸಗಳಿಗೆ ಕೈ ಹಾಕದೆ ಸಮಾನತಾ ಭಾವದಿ ತನ್ನ ಜವಾಬ್ದಾರಿಯನ್ನು ಮೆರೆಯಬೇಕಿದೆ.

ಈಗ ನಿರ್ಮಾಣವಾಗಿರುವ ಇಂತಹ ಬಿಕ್ಕಟ್ಟಿಗೆ ಕೇವಲ ಅಮರ್‌ನಾಥ್ ಪೀಠ ಮಂಡಳಿಗೆ 39.88 ಎಕ್ಟೇರ್‌ ಅರಣ್ಯ ಭೂಮಿಯನ್ನು ವರ್ಗಾಯಿಸುವುದು ಮಾತ್ರ ಕಾರಣವಾಗಿಲ್ಲ ಎನ್ನುವುದು ಸ್ಪಷ್ಟವಾಗಿಯೇ ಇದೆ. ಸರಕಾರ ತನ್ನ ಸೋ ಕಾಲ್ಡ್ ಸೆಕ್ಯುಲರ್ ನಿಲುವನ್ನು ಮುಂದಿಟ್ಟುಕೊಂಡು ಆತಂಕವಾದಿಗಳು, ಭಯೋತ್ಪಾದಕರ ವಿರುದ್ಧ ಕ್ರಮ ಜರುಗಿಸುವುದರಿಂದ ಹಿಂದೆ ಸರಿಯದೆ, ವ್ಯವಸ್ಥಿತ ಕ್ರಮಗಳನ್ನು ರೂಪಿಸಿಕೊಂಡು ಇಂತಹ ಪ್ರಮಾದಗಳನ್ನು ತಡೆಗಟ್ಟುವುದಕ್ಕೆ ಮುಂದಾಗಲೇಬೇಕಿದೆ. ಲಾಲೂ ಪ್ರಸಾದ್ ಯಾದವ್‌ರಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರು, ಭಯೋತ್ಪಾದಕ ಸಂಘಟನೆಗಳ ಬಗ್ಗೆ ಸಲ್ಲದ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಲೇಬೇಕಿದೆ. ಭಯೋತ್ಪಾದನಾ ಕೃತ್ಯಗಳನ್ನು ಬೆಂಬಲಿಸುವ, ಪ್ರೋತ್ಸಾಹಿಸುವ ಯಾವುದೇ ಸಂಸ್ಥೆ, ಸಮುದಾಯಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಾಗಿದೆ.

ಆಗಸ್ಟ್ 15ರಂದು ಪ್ರಧಾನಿ ಮನಮೋಹನ್ ಸಿಂಗ್ ಕೆಂಪುಕೋಟೆಯ ಮೇಲೆ ಧ್ವಜವೇರಿಸಿದ ನಂತರ ಮಾಡಲಾದ ಭಾಷಣದಲ್ಲಿ ನೀಡಿದ ಕೋಮುವಾದದ ವಿರುದ್ಧ ಕರೆ ಕೇವಲ ಶಾಬ್ದಿಕವಾಗದೆ, ಆಚರಣೆಗೂ ಕೂಡ ಬರಬೇಕಾಗಿದೆ. ಸರಕಾರ ಪಾಕಿಸ್ತಾನದ ಮುಂದಾಳುಗಳಂತೆ ಕಾಣುವ ಭಯೋತ್ಪಾದಕರ ಜತೆಗೆ ಶಾಂತಿ ಸಂವಾದ ನಡೆಸುವುದಕ್ಕೆ ಬದಲಾಗಿ ಕಠಿಣ ನಿಲುವನ್ನು ಪ್ರದರ್ಶಿಸುವುದರೊಂದಿಗೆ ಪಾಕಿಸ್ತಾನಕ್ಕೆ ಸರಿಯಾದ ತಿರುಗೇಟು ನೀಡಲೇಬೇಕಾಗಿದೆ. ಇಲ್ಲವಾದಲ್ಲಿ, ಅಕ್ಟೋಬರ್‌ನಲ್ಲಿ ನಡೆಯಬೇಕಿರುವ ಅಸೆಂಬ್ಲಿ ಚುನಾವಣೆಯನ್ನು ನಡೆಸುವುದು ಕಷ್ಟಸಾಧ್ಯವಾಗಬಹುದು. ಸಾದ್ಯವೇ ಆಗದಿದ್ದಲ್ಲಿ, ಮುಂದೂಡಲೂಬೇಕಾಗಬಹುದು. ಹಾಗಾದಲ್ಲಿ, ಅದು ಕಾಶ್ಮೀರ ರಾಜ್ಯಕ್ಕೆ ಮತ್ತಷ್ಟು ತೊಂದೆಗಳನ್ನು ಒಡ್ಡಬಹುದು. ಆದ್ದರಿಂದ, ಸರಕಾರ ಅತಿಸೂಕ್ಷ್ಮವಾದ ಈ ಸಮಸ್ಯೆಯನ್ನು ನ್ಯಾಯಯುತವಾಗಿ, ಜಾಣ್ಮೆಯಿಂದ ಬಗೆಹರಿಸುವುದಕ್ಕೆ ಮಾರ್ಗಗಳನ್ನು ಕಂಡುಕೊಳ್ಳಬೇಕಾಗಿದೆ.

Rating
No votes yet

Comments